ತುದಿ ಮಡಚಿಟ್ಟ ಪುಟ – -ಸುನಂದಾ ಪ್ರಕಾಶ ಕಡಮೆ

ಅತ್ತ ಲಲಿತಕ್ಕನ ಮುದ್ದಿನ ಮೊಮ್ಮಗಳು ಪಿಂಕಿಯ ಮದುವೆ, ಸಿದ್ದಿ ವಿನಾಯಕ ಛತ್ರದಲ್ಲಿ ವಿಜೃಂಭಣೆಯಿಂದ ನಡೆಯುತ್ತಿತ್ತು. ಇತ್ತ ಮನೆಯಲ್ಲಿ ಲಲಿತಕ್ಕನ ಗಂಡನೆನಿಸಿಕೊಂಡ ಜೀವವೊಂದು ಮಂಜಜ್ಜನೆಂಬ ಹೆಸರಿನಲ್ಲಿ ಸಾವು ಬದುಕುಗಳ ಮಧ್ಯೆ ಮೇಲ್ಮುಖದಲ್ಲಿ ಉಸಿರು ಎಳೆದುಕೊಳ್ಳುತ್ತ ಹೊರ ಕೋಣೆಯ ಮಂಚದ ಮೇಲೆ ಮಲಗಿತ್ತು. ಎಲ್ಲರ ಕಣ್ಣ ಹಿಂದಿನ ಗ್ರೀನ್ ರೂಮಿನಲ್ಲಿ ತನ್ನ ಹರೆಯ ಕಳೆದುಕೊಂಡ ಮಂಜುನಾಥ ಈಗ ಒಮ್ಮೆಲೇ ಮಂಜಜ್ಜನಾಗಿ ಪಾತ್ರ ಬದಲಾಯಿಸಿಕೊಂಡು ದುತ್ತನೆ ರಂಗ ಪ್ರವೇಶ ಮಾಡಿದಂತಿತ್ತು.
’ಕಳೆದ ಮೂರು ವರ್ಷಗಳಿಂದ ಅಮ್ಮನಿಗೂ ವಿಷಯ ತಿಳಿಸದೇ ಸತತ ಸಂಪರ್ಕದಲ್ಲಿದ್ದೇನೆ, ಖಂಡಿತ ತನ್ನ ಅಪ್ಪನೇ ಇವ’ ಎಂದು ಲಲಿತಕ್ಕನ ಮಗ ಲೋಕನಾಥ ಅದ್ಯಾವುದೋ ಅಲೌಕಿಕ ನಂಬಿಕೆಯ ಮೇಲೆ, ಎಂಟೇ ದಿನಗಳ ಹಿಂದೆ ಉತ್ತರ ಪ್ರದೇಶದ ಅರಿಹಂತಬಾಬಾ ಆಶ್ರಮದಿಂದ ಅಂಬುಲೆನ್ಸಿನಲ್ಲಿ ಕರೆ ತಂದು ಹೊರ ಕೋಣೆಯ ಮಂಚದಲ್ಲಿ ಮಲಗಿಸಿ ಮಗನ ಕರ್ತವ್ಯ ಮೆರೆದಿದ್ದ. ಅಂಥ ಮಂಜಜ್ಜನ ಮುಖವನ್ನು ಎರಡೇ ಅಡಿ ದೂರದಿಂದ ಒಂದೇ ಸಮನೆ ವೀಕ್ಷಿಸುತ್ತ ಕೂತ ಅವನ ಹೆಂಡತಿ ಲಲಿತಕ್ಕನ ಕಣ್ಣೆದುರು ನಲವತ್ತು ವರ್ಷಗಳ ಹಿಂದಿನ ಆ ಮೂವತ್ತೈದರ ತಾರುಣ್ಯದ ಮಂಜುನಾಥನ ಯೌವನದ ಮುಖವೇ ತೇಲಿ ತೇಲಿ ಬರಲಾರಂಭಿಸಿತ್ತು. ಆ ಚಿಗುರು ಮೀಸೆ, ಹಣೆಯಲ್ಲಿ ಒತ್ತಿಕೊಂಡಂತಿದ್ದ ಕಪ್ಪು ಕೂದಲು, ಅಲ್ಲಲ್ಲಿ ತೆಳುವಾದ ಕುರುಚಲು ಗಡ್ಡ ತುಂಬಿದ ಗಲ್ಲ, ನಾಸಿಕದ ಮಧ್ಯೆ ಸೇರುವ ಎರಡೂ ಹುಬ್ಬುಗಳು, ಯಾವುದೂ ಈಗ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಹೀಗೆ ಸಂಪೂರ್ಣ ಜೀರ್ಣಗೊಂಡ ಸ್ಥಿತಿಯಲ್ಲಿ ಹಾಸಿಗೆಯಲ್ಲಿರುವ ದೇಹ ಯಾವ ಗುಟ್ಟನ್ನೂ ಬಿಟ್ಟುಕೊಡದಂತಿತ್ತು. ಮೀಸೆಯೇ ಇಲ್ಲದ ಆ ಪೂರ್ತಿ ಬೋಳು ಮುಖ. ಹಣೆಯ ಬಳಿ ಉ ಆಕಾರದಲ್ಲಿ ಉದುರಿ ನಿಂತ ಕುಸುರೆಳ್ಳಿನ ಬಣ್ಣಕ್ಕೆ ತಿರುಗಿದ ಕೂದಲು, ತುಂಬ ದೊಡ್ಡದೇ ಅನ್ನಿಸುವ ಹಣೆ, ಮಂಡವಾಗಿದ್ದ ಆ ಮೂಗು ಮಾತ್ರ ಎಲ್ಲೋ ಕಂಡ ಹಾಗೆ. ಆದರೆ ಅದರ ಮೇಲೆಲ್ಲ ಕಂದು ಬಣ್ಣದ ಗುರೂಟ ಮಚ್ಚೆಗಳು ಎದ್ದ ಹಾಗಿವೆ.
ನಲವತ್ತು ವರ್ಷಗಳ ಹಿಂದೆ ಎಂಥದೋ ಪುಸ್ತಕ ಓದುತ್ತ ಕೂತ ಇದೇ ಮಂಜುನಾಥನ ಕೈಯಲ್ಲಿ ಮನೆ ಸಾಮಾನುಗಳ ಪಟ್ಟಿ ಬರೆದ ಚೀಟಿಯೊಂದನ್ನು ತುರುಕಿ, ’ಎಲ್ಲ ಗಂಡಸರಂತೆ ನೀವೂ ಆಗಿ ಮೊದಲು’ ಎಂಬ ಒಂದೇ ಮಾತು ಹೇಳಿದ್ದಕ್ಕೆ, ಇದ್ದಕ್ಕಿದ್ದಂತೆ ಸಾಮಾನು ಚೀಟಿಯ ಜೊತೆ ಇವನೂ ನಾಪತ್ತೆಯಾಗಿ ಈಗ ಈ ಅವಸ್ಥೆಯಲ್ಲಿ ಪ್ರತ್ಯಕ್ಷಗೊಂಡರೆ ಇಲ್ಲಿ ನನ್ನ ಗತಿ ಏನಾಗಿರಬೇಡ? ಅದರಲ್ಲೂ ಅವನೇ ಎಂದು ಗುರುತಿಸುವ ಏಕಮಾತ್ರ ಸುಳಿವೂ ಈ ಜೀವದಲ್ಲಿ ಕಾಣುತ್ತಿಲ್ಲ. ಎರಡೂ ಗಲ್ಲದ ಮೇಲೆ ಮಾಂಸಲ ಭಾಗವೇ ಕರಗಿ ಬರಿ ನಿರಿಗೆಗಳೇ ಮುಚ್ಚಿಕೂತಿವೆ. ಉದ್ದುದ್ದವಾಗಿ ತೋರುವ ಕೈ ಬೆರಳುಗಳು, ಅಪರಿಚಿತ ಕಲೆಗಳು, ಗಾಯಗಳು, ಈ ಬಾರಿ ಇನ್ನಷ್ಟು ಅವನ ಮುಖದ ಹತ್ತಿರ ಬಗ್ಗಿ ಗಮನಿಸಿದಳು ಲಲಿತಕ್ಕ. ಹೀಗೆ ಮುಖ ಚಹರೆ ಕೂಡ ಅಲ್ಲಲ್ಲಿ ಕೊಂಚ ಬದಲಾದಂತೆ ಅನಿಸುತ್ತ ಹೋಗಿ ನಿಟ್ಟುಸಿರು ಬಿಟ್ಟವಳೇ ಲಲಿತಕ್ಕ ತುಸು ಹೊತ್ತು ಅರ್ಥವೇ ಆಗದ ಗೊಂದಲದಲ್ಲಿ ಬಿದ್ದಳು. ಎಂಥದೋ ಅನುಮಾನ. ಏನೋ ಸಂಶಯಗಳು. ಮೊದಲಿನದೆಲ್ಲ ಬರಿ ಕನಸೇ ಎಂಬಂತೆ ಎಲ್ಲ ಮರೆತು ಹೋಗಿ ಲಲಿತಕ್ಕನಿಗೆ ತಾನೀಗ ಅಪರಿಚಿತವಾದೊಂದೇ ವ್ಯಕ್ತಿಯ ದೇಹವನ್ನು ಕಾಯುತ್ತ ಕೂತಂತೆ ಭಾಸವಾಯಿತು.
ಲಲಿತಕ್ಕ ಏನು ಮಾಡಬೇಕೆಂದೇ ತಿಳಿಯದೇ ಕೈ ಕೈ ಹೊಸಕಿಕೊಳ್ಳುತ್ತ ಕೂತೇ ಇದ್ದಳು. ಅರ್ಥವೇ ಆಗದ ದುಗುಡ, ಕಂಗಾಲುತನ. ಹೀಗೆ ಮಲಗಿದ್ದ ಗಂಡನ ಮುಖವನ್ನು ಇಷ್ಟು ಹತ್ತಿರದಿಂದ ನೋಡಲು ಅವಳಿಗೆ ಈಗಲೇ ಸಾಧ್ಯವಾಗಿದ್ದು. ನಿನ್ನೆಯಿಂದಂತೂ ಮನೆ ತುಂಬ ಜನ. ತೀರ ಹತ್ತಿರದ ಹದಿನೆಂಟಿಪ್ಪತ್ತು ಸಂಬಂಧಿಗಳು ಬೆಳಿಗ್ಗೆಯೇ ಆಗಮಿಸಿ ಇಲ್ಲಿಯೇ ಉಳಿದುಕೊಂಡಿದ್ದರು. ಹಿರೀ ಮಗಳ ಮದುವೆಯನ್ನು ಲೋಕನಾಥ ಭರ್ಜರಿಯಾಗೇ ಮಾಡುವ ಕನಸು ಕಂಡವ. ’ವಧುವಿನ ಅಜ್ಜಿ ನೀನು. ನೀನೇ ಬರದಿದ್ದರೆ ಹೇಗೆ?’ ಎನ್ನುತ್ತ ಲಲಿತಕ್ಕನ ತವರಿನ ಕಡೆಯ ಸಂಬಂಧಿಕಳ್ಯಾರೋ ಒತ್ತಾಯದಲ್ಲೇ ಲಲಿತಕ್ಕನಿಗೆ ದಿಬ್ಬಣ ಹೊರಡುವ ಹತ್ತು ಗಂಟೆಯ ವೇಳೆಯಲ್ಲಿ ಅದು ಹೇಗೋ ಹೊಸ ಸೀರೆಯೊಂದನ್ನು ಉಡಿಸಿಯೇ ಬಿಟ್ಟಿದ್ದಳು. ತಲೆ ಬಾಚಿಕೊಳ್ಳುವಾಗ ಲಲಿತಕ್ಕನಿಗೆ ಯಾಕೋ ತಾನು ಈ ಸ್ಥಿತಿಯಲ್ಲಿ ಮದುವೆ ಮನೆಯಲ್ಲಿ ಸುರುಳೀತವಾಗಿ ಓಡಾಡಲಾರೆ ಅಂತೆನಿಸಿಬಿಟ್ಟಿತು.
ಈತ ಹೀಗೆ ಜರ್ಜರಿತನಾದ ನಂತರ ಮಗನ ಮನೆಯಲ್ಲಿ ಬಂದು ಬಿದ್ದ ಈ ಪ್ರಕರಣ ಈಗಾಗಲೇ ಸಂಬಂಧಿಗಳಿಗೆಲ್ಲ ಗೊತ್ತಾಗಿದ್ದು ಎಲ್ಲರೂ ತನ್ನನ್ನು ಒಂದು ತರಹ ನೋಡಿ ಹಿಂದೆ ಗುಸುಗುಸು ಮಾತಾಡಿಕೊಳ್ಳಬಹುದೆಂಬ ಗುಮಾನಿಯಿಂದ ಲಲಿತಕ್ಕ ಆ ಯಾವ ರಗಳೆಯೂ ಬೇಡವೆಂದುಕೊಂಡು, ಹೀಗೆ ಮನೆಯಲ್ಲೇ ಇರಲು ತೀರ್ಮಾನ ಮಾಡಿಬಿಟ್ಟಳು. ಹನ್ನೊಂದರ ತನಕ ಗಂಡನ ಹಾಸಿಗೆಯನ್ನು ಸ್ವಚ್ಛಗೊಳಿಸುತ್ತ ಇಲ್ಲೇ ಅಲೆದಾಡುತ್ತಿದ್ದ ಕೆಲಸದ ನಿಂಗವ್ವನನ್ನು ’ನಿಂಗಿ, ಪಿಂಕಿಯ ಮದುವೆಯ ಛತ್ರದಲ್ಲಿ ಕಣ್ಣಿಗೆ ಕಂಡ ಕೆಲಸ ಮಾಡಲು ನಿನ್ನ ಅವಶ್ಯಕತೆ ಅಲ್ಲಿಯೇ ಉಂಟು, ಹೊಸ ಸೀರೆ ಉಟ್ಟುಕೊಂಡು ಹೊರಡು ನೀನು, ನಾನು ಅವರ ಬಳಿಯಲ್ಲೇ ಕೂತಿರುವೆ’ ಅಂತ ಒಪ್ಪಿಸಿ ಅವಳನ್ನು ಕೂಡ ಸಾಗಹಾಕಿದಳು. ನಿಂಗಿಗೂ ಅಷ್ಟೇ ಬೇಕಾಗಿತ್ತು ಎಂಬಂತೆ ಅವಳು ಮುಖ ಅರಳಿಸಿಕೊಂಡು ಹೊಸ ಸೀರೆ ಉಟ್ಟುಕೊಂಡು ಹೊರಟುಹೋಗಿದ್ದಳು. ಮೊದಲ ಬಾರಿ ಗಂಡ ಮಲಗಿದ್ದ ಕೋಣೆಯ ಬಾಗಿಲು ದೂಡಿ ಏಕಾಂತದಲ್ಲಿ ಅವನನ್ನು ಕಂಡಾಗ ಲಲಿತಕ್ಕನ ಕಣ್ಣೆದುರು ಒಂದೊಂದೇ ಚಿತ್ರ ಮೂಡಿ ಮೂಡಿ ಮಾಯವಾಗುತ್ತಿತ್ತು.
ಇದೇ ವ್ಯಕ್ತಿಯಲ್ಲವೇ ತನ್ನನ್ನೇ ನಂಬಿಕೊಂಡಿದ್ದ ಮೂವತ್ತರ ಹೆಂಡತಿ ಹಾಗೂ ಆರು ವರ್ಷದ ಮಗನನ್ನು ಯಾವುದೇ ಮಮಕಾರವಿಲ್ಲದೇ ಬಿಟ್ಟು ಓಡಿ ಹೋದದ್ದು? ನನ್ನ ಅಣ್ಣ ಎಲ್ಲೆಡೆ ಹುಡುಕುವಷ್ಟು ದಿನ ಹುಡುಕಿದ. ಆ ಐದಾರು ವರ್ಷಗಳಲ್ಲೇ ತನ್ನ ಕಣ್ಣೀರೆಲ್ಲ ಬತ್ತಿಹೋಗಿದೆ. ತನ್ನ ಅಣ್ಣ ಬಂದು ಅವನ ಮನೆಗೆ ಕರೆದೊಯ್ಯದೇ ಇದ್ದಿದ್ದರೆ, ಬದುಕೇ ನನ್ನ ವಿರುದ್ಧ ನಿಷ್ಠುರವಾಗಿ ನಿಲ್ಲುತ್ತಿತ್ತು. ಲೋಕಿಗೆ ವಿದ್ಯೆ ಹತ್ತಲಿಲ್ಲ, ವ್ಯಾಪಾರಕ್ಕೂ ಮಾವನದೇ ಸಹಾಯ, ನಂತರ ಅವನ ಮದುವೆವರೆಗೂ. ಕೆಲ ಕುಹಕಿಗಳು ನನ್ನನ್ನು ಹಿಂದುಗಡೆಯಲ್ಲಿ ನಿತ್ಯ ಮುತ್ತೈದೆ ಎಂದು ಅಪಹಾಸ್ಯ ಮಾಡಿಕೊಂಡು ನಕ್ಕದ್ದೂ ಆಗಿಹೋಯ್ತು. ಈ ಗಂಡನೆಂಬ ಒಂದು ಜೀವಕ್ಕಾಗಿ ಪರಿತಪಿಸುವದನ್ನು ಬಿಟ್ಟೇ ಈಗ ಬಹುಕಾಲ ಆಗಿ ಹೋಗಿದೆ.
ಎರಡು ಮೂರು ವರ್ಷಗಳ ಕೆಳಗೆ ಅರಿಹಂತ ಮಠಕ್ಕೆ ನಡೆದುಕೊಳ್ಳುವ ಯಾರೋ ಭಕ್ತರು ಹೀಗೇ ಪರಭಾರೆಯಾಗಿ ಒಂದು ಸಣ್ಣ ಸುದ್ದಿ ತಂದಿದ್ದು, ಮಗ ಲೋಕಿಯ ಕಿವಿಗೆ ಬಿತ್ತು. ಅಂದಿನಿಂದ ಆ ವಿಷಯವಾಗಿ ತಾಯಿಯಾದ ನನ್ನ ಬಳಿಯೂ ಪ್ರಸ್ತಾಪಿಸದೇ ತನ್ನಷ್ಟಕ್ಕೇ ತಾನು ಪತ್ತೆದಾರಿ ಕೆಲಸ ಆರಂಭಿಸಿದ್ದ. ಉತ್ತರದ ಬದಿಗೆಲ್ಲ ಪ್ರವಾಸಕ್ಕೆ ಹೋಗಿ ಬಂದ ಅದೇ ಸೋದರಮಾವನ ಮಗ ರಾಮಣ್ಣನ ಜೊತೆ ಅಲ್ಲಿಗೊಂದು ಭಾರಿ ಭೇಟಿ ಕೊಟ್ಟೂ ಬಂದಾಗಿತ್ತು. ತುಂಬ ಹೊತ್ತಿನ ನಂತರ ಸ್ವಲ್ಪ ಸ್ವಲ್ಪವೇ ಗುರುತು ಹಿಡಿದು ಊರು, ಸಂಬಂಧಿಗಳ ಹೆಸರುಗಳು ಎಲ್ಲ ಪರಸ್ಪರ ತಾಳೆಯಾದಾಗ ಇಬ್ಬರೊಳಗೂ ಒಂದು ತರಹದ ಪುಳಕ ಮೂಡಿತಂತೆ. ’ನಿನ್ನ ಹಾಗೂ ನಿನ್ನ ಅಮ್ಮನ ಕುರಿತು ವಿಚಾರಿಸುವ ಯೋಗ್ಯತೆಯನ್ನೂ ನಾನು ಉಳಿಸಿಕೊಳ್ಳಲಿಲ್ಲ’ ಎನ್ನುತ್ತ ಕಣ್ಣೀರು ಮಿಡಿದ ಅಪ್ಪನ ಹಿರಿಯ ಜೀವ ಕಂಡು ಈ ಲೋಕಿಯ ಕರುಳು ಕಸಿವಿಸಿಗೊಂಡಿತಂತೆ. ಮನೆಗೆ ಬಾ ಎಂದು ಕರೆದರೆ ಸಾಧ್ಯವೇ ಇಲ್ಲವೆನ್ನುವಂತೆ ಹಟ ಹಿಡಿದರಂತೆ ಇವರು.
ಅಂದು ಯಾವುದೋ ಆ ಗಳಿಗೆಯಲ್ಲಿ ರೈಲು ಏರಿ ಕೂತದ್ದಷ್ಟೇ ನೆನಪಂತೆ. ಅಲ್ಲೇ ನಿದ್ದೆ. ಆನಂತರ ಟೀಸಿ ಬಂದು ಟಿಕೇಟು ಪರೀಕ್ಷಿಸಿ ಮಧ್ಯೆ ಯಾವುದೋ ನಿಲ್ದಾಣದಲ್ಲಿ ಕೆಳದಬ್ಬಿದರಂತೆ. ಪುನಃ ಮತ್ಯಾವುದೋ ಹೊರಡುತ್ತಿರುವ ರೈಲು ಸೇರಿಕೊಂಡದ್ದಂತೆ. ನಂತರ ಮುಂದಿನ ಬೇರೊಂದು ನಿಲ್ದಾಣದಲ್ಲಿ ಹೊರದಬ್ಬಿದರಂತೆ. ಅಂತೂ ಹೋಗಿ ತಲುಪಿದ್ದು ಉತ್ತರಪ್ರದೇಶದ ಅರಿಹಂತಸ್ವಾಮಿ ಆಶ್ರಮಕ್ಕಂತೆ. ಹಾಗೆ ಪ್ರಾಯವಿದ್ದ ಸಂದರ್ಭದಲ್ಲಿ ಆ ಆಶ್ರಮದಲ್ಲಿ ಪುಕ್ಕಟೆಯಾಗಿ ಉಳಿದುಕೊಳ್ಳುವ ವ್ಯವಸ್ಥೆ ಇಲ್ಲದ್ದರಿಂದ ಅದೇ ಪಟ್ಟಣದ ಬೇರೆ ಬೇರೆ ಅಂಗಡಿಯಲ್ಲಿ ಟೇಬಲ್ಲು ಸ್ವಚ್ಛಗೊಳಿಸುವ ಕೆಲಸ ಮಾಡಿದ್ದಂತೆ, ಹೀಗೆ ಮನೆ ಹೆಂಡತಿ ಮಗನನ್ನು ಮರೆತು ಅಲ್ಲೇ ಬದುಕು ಕಟ್ಟಲು ಹೆಣಗಾಡಿದ್ದಂತೆ. ಹಾಗೇ ಭಾಷೆ ಕಲಿತದ್ದು. ಎಲ್ಲೋ ಊರಿನ ನೆನಪು ಕಾಡಿದರೂ ಹೆಂಡತಿಯ ಆ ಒಂದೇ ಮಾತಿಗೆ ಜಿದ್ದಿಗೆ ಬಿದ್ದವನಂತೆ ಅಲ್ಲೇ ಅದನ್ನು ಒತ್ತಾಯಪೂರ್ವಕ ಹೊಸಕಿಹಾಕಿದ್ದರಂತೆ. ಹೀಗೆ ಎಷ್ಟೋ ಅಂತೆ ಕಂತೆಗಳ ಪುರಾಣದಲ್ಲಿ ಇವಿಷ್ಟನ್ನು ಹೇಳಿದ್ದು ಸ್ವತಃ ಇವರೇ ಅಲ್ಲವಂತೆ. ಆಶ್ರಮದಲ್ಲಿ ಇವರ ಜೊತೆ ಹಲವು ಕಾಲದಿಂದ ಸಂಗಾತಿಯಾಗಿದ್ದ ಸ್ನೇಹಿತ ತಮಿಳಿನ ವೆಂಕಟರಮಣ ಅನ್ನುವವನಂತೆ, ಅದೂ ಹರಕು ಮುರುಕು ಹಿಂದಿಯಲ್ಲಿ. ಲಲಿತಕ್ಕನಿಗೆ ಯಾವುದು ನಂಬಬೇಕು ಯಾವುದನ್ನು ಬಿಡಬೇಕು ಅಂತಲೇ ತೋಚಿರಲಿಲ್ಲ.
ಆದರೂ ಲೋಕಿ ಆಗಲೇ ಅಲ್ಲಿಯ ಮುಖ್ಯಸ್ಥರಿಗೆ ತನ್ನ ವಿಳಾಸ ಹಾಗೂ ದೂರವಾಣಿ ಪತ್ತೆ ಕೊಟ್ಟು ಬಂದಿದ್ದನಂತೆ. ಹಿಂತಿರುಗಿ ಬಂದ ಲೋಕಿ ತನ್ನ ಹೆಂಡತಿಗಷ್ಟೇ ವಿಷಯ ತಿಳಿಸಿ, ನನಗೆ ಸ್ವಲ್ಪ ದಿನ ಏನೂ ಹೇಳದೇ ಉಳಿದಿದ್ದ. ನಂತರದಲ್ಲಿ ಒಂದು ದಿನ ನನ್ನ ಬಳಿ ಶಾಂತವಾಗಿ ಬಂದು ಕೂತು ಹೀಗೀಗೆ ಅಂತ ಹೇಳಲು ಬಾಯಿ ತೆರೆದದ್ದೇ ಎಲ್ಲಿತ್ತೋ ಎಂಬಂತೆ ನನಗೆ ಶೌರ್ಯ ಎದ್ದೆದ್ದು ಬಂದು ’ಅವರಿಗೇ ನಾವು ಬೇಡವಾದ ಮೇಲೆ, ಅವರನ್ನು ತೆಗೆದುಕೊಂಡು ನಾವೆಂಥ ಮಾಡುವುದು? ಇಷ್ಟು ದಿನ ಇಲ್ಲದ ಗಲೀಜು ಈಗ ತಂದು ಹಚ್ಚಬೇಡ’ ಎಂದೆಲ್ಲ ರೋಷಾವೇಷದಿಂದಲೇ ಕೂಗಾಡಿಬಿಟ್ಟಿದ್ದೆ. ಆದರೆ ಅಲ್ಲಿ ಆ ಆಶ್ರಮದ ನಿಯಮದಂತೆ ಯಾವುದೇ ವ್ಯಕ್ತಿಗೆ ಸ್ವಂತ ಮಕ್ಕಳಿದ್ದದ್ದೇ ಆದಲ್ಲಿ ಮತ್ತು ಅಂಥವರ ವಿಳಾಸದ ಪತ್ತೆಯಾದದ್ದೇ ಆದಲ್ಲಿ ಆಯಾ ವ್ಯಕ್ತಿಗಳು ತೀರ ಜರ್ಜರಿತರಾದಾಗ, ಅವರ ಮಕ್ಕಳ ವಿಳಾಸಕ್ಕೆ ಸಂಪರ್ಕಿಸಿ ಒಪ್ಪಿಗೆ ಪಡೆದೇ ಅವರವರ ಮೂಲ ಸ್ಥಾನಕ್ಕೆ ತಲುಪಿಸಲಾಗುತ್ತದಂತೆ. ಇತ್ತೀಚೆಗೆ ಅಂದರೆ ಮಗಳ ಮದುವೆಗೆ ಇನ್ನೂ ಹದಿನೈದು ದಿನಗಳಿವೆ ಎನ್ನುವಾಗ ಲೋಕಿಗೆ ಆಶ್ರಮದಿಂದ ದೂರವಾಣಿ ಕರೆ ಬಂದಿದ್ದು ನನಗೆ ತಿಳಿಯದೇ ಹೋಯಿತು. ಲೋಕಿ ಮತ್ತದೇ ರಾಮಣ್ಣನ ಮನವೊಲಿಸಿ ಜೊತೆ ಕರೆದೊಯ್ದು ಇತ್ತ ನನಗೂ ಸಂಶಯ ಸಹ ಬರದಂತೆ ದಿಢೀರನೆ ಮನೆಗೆ ಕರೆತಂದಿದ್ದ. ಲಲಿತಕ್ಕನಿಗೆ ಕೂತಲ್ಲೇ ಹೈರಾಣವಾದಂತಾಗಿ ಅಲ್ಲೇ ತೂಕಡಿಸಿದಳು.
ಹಾಗೆ ಮಂಜಜ್ಜ ಊರಿಗೆ ಬಂದು ಕೇವಲ ಎಂಟೇ ದಿನವಾಗಿತ್ತು. ನಲವತ್ತು ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಎದ್ದು ಹೋದ ಮೂವತ್ತೆಂಟರ ಹರೆಯದ ಈ ವ್ಯಕ್ತಿ ಹೀಗೆ ಒಮ್ಮೆಲೇ ಮುಖದಲ್ಲಿ ನಿರಿಗೆ ಬಿದ್ದ ಸ್ಥಿತಿಯಲ್ಲಿ ಪ್ರತ್ಯಕ್ಷವಾಗಿದ್ದ. ಮಾತು ಆಗಲೇ ಬಂದಾಗಿತ್ತು. ಏನನ್ನೂ ಕೇಳಿಸಿಕೊಳ್ಳುವ ಹಾಗೆಯೂ ಇರಲಿಲ್ಲ. ಆದರೆ ಕಣ್ಣು ಪಿಳುಕಿಸುತ್ತ ಎಲ್ಲರನ್ನೂ ವೀಕ್ಷಿಸಿದ ಹಾಗೆನಿಸುತ್ತಿತ್ತು. ಸುತ್ತ ಮಗ ಸೊಸೆ ಮೊಮ್ಮಕ್ಕಳನ್ನು ಕಂಡಾಗ ಮುಖ ತುಸು ಅರಳಿತೆಂದೂ, ಮತ್ತು ಕಣ್ಣು ಇನ್ನಾರನ್ನೋ ಹುಡುಕುವ ಹಾಗಿತ್ತು ಎಂದೂ ಆಗಲೇ ಬಂದು ನಿಂತ ಪಕ್ಕದ ಮನೆಯವರ‍್ಯಾರೋ ಪಿಸುಗುಟ್ಟಿದರು. ’ಒಮ್ಮೆ ಕಣ್ಣಾರೆ ನೋಡಿಯಾದರೂ ಹೋಗು, ಪಕ್ಕಾ ಗುರುತು ನೀನೊಬ್ಬಳೇ ಹಿಡಿಯಬೇಕಲ್ಲವೇ?’ ಎನ್ನುತ್ತ ಲಲಿತಕ್ಕನನ್ನು ದೂಡಿಕೊಂಡೇ ಎಳೆ ತಂದ ರಾಮಣ್ಣ ಮಂಜಜ್ಜನ ಎದುರು ಸರೀ ನಿಲ್ಲಿಸಿದ್ದ. ಎಲ್ಲಿಂದಲೋ ಒತ್ತರಿಸಿ ಬಂದ ದುಃಖದಲ್ಲಿ ಗೋಳೋ ಎಂದು ಅಳುತ್ತ ಲಲಿತಕ್ಕ ಒಮ್ಮೆ ನೋಡಿದ ಶಾಸ್ತ್ರ ಮಾಡಿ ಪುನಃ ಬಂದಷ್ಟೇ ವೇಗದಲ್ಲಿ ತನ್ನ ಕೋಣೆಗೆ ಹೋಗಿ ಮುಸುಕು ಹೊದ್ದು ಮಲಗಿಬಿಟ್ಟಳು.
ಹೊಟ್ಟೆಗೆ ಉಣಿಸುವ, ಸ್ನಾನ ಹಾಕುವ, ಬಟ್ಟೆ ತೊಡಿಸುವ, ಹಾಸಿಗೆ ಬದಲಾಯಿಸುವ ಕೆಲಸಗಳನ್ನೆಲ್ಲ ಮಗ ಲೋಕನಾಥನೇ ಅಕ್ಕರೆಯಿಂದ ಮಾಡಿದ. ಮಂಜಜ್ಜ ತನ್ನ ಅರ್ಧ ನಿಮೀಲಿತ ಕಣ್ಣಿಂದ ಸುಮ್ಮನೆ ಮಗನನ್ನು ನೋಡುತ್ತಿದ್ದ. ಸೊಸೆ ಮೊಮ್ಮಕ್ಕಳಂತೂ ದೂರದಲ್ಲೇ ನಿಂತು ತಮ್ಮ ಕುಟುಂಬದ ಈ ಹೊಸ ಹಿರಿಯ ಮನುಷ್ಯನನ್ನು ಅಚ್ಚರಿ ಹಾಗೂ ಕುತೂಹಲದ ಕಣ್ಣಿನಿಂದ ಸವಿಯುತ್ತಿದ್ದರು. ಆದರೆ ಪಿಂಕಿಯ ಮದುವೆಯ ನೆವ ಮಾಡಿಕೊಂಡು ಕೆಲ ಅಪರೂಪದ ಹಳೆಯ ಸಂಬಂಧಿಗಳು ಮುದ್ದಾಮಾಗಿ ಮಂಜಜ್ಜನನ್ನು ನೋಡಲೆಂದೇ ಬಂದಂತಿತ್ತು. ಅವರ ಏನೇನೋ ಪ್ರಶ್ನೆಗಳು, ಕುಹಕದ ನೋಟಗಳು ಅಥವಾ ಅಪಾರ್ಥದ ಊಹೆಗಳೆಲ್ಲ ಹಿಂದಿನ ಆ ಅವಮಾನದ ದಿನಗಳು ಒಮ್ಮೆಲೇ ಮರುಕಳಿಸಿದಂತೆ ಭಾಸವಾಗಿ, ತನ್ನ ಕೋಣೆ ಬಿಟ್ಟು ಹೊರಬರದೇ ಒಂದೂ ಮಾತಾಡದೇ ಲಲಿತಕ್ಕ ಅವನ್ನೆಲ್ಲ ಸಂಕಟದಿಂದಲೇ ಭರಿಸಿಕೊಂಡಳು. ಅಂತೂ ಇಂದು ಮದುವೆಯ ದಿಬ್ಬಣ ಹೊರಹೊರಟೊಡನೆ ಎಲ್ಲ ಶಾಂತವಾಗಿ ಕೊಂಚ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿತ್ತು.
* * *
ಅತ್ತ ಇದೀಗ ಆರಂಭಗೊಂಡ ಮುಖ್ಯರಸ್ತೆಯ ಸಿದ್ದಿ ವಿನಾಯಕ ಛತ್ರದಲ್ಲಿ ನಡೆವ ಮುದ್ದಿನ ಮೊಮ್ಮಗಳ ಮದುವೆಯ ಸಂಭ್ರಮವನ್ನು, ಸಂಬಂಧಿಕರ ಸರಬರ ಓಡಾಟವನ್ನು ಹೀಗೊಂದು ಬಾರಿ ಸುಮ್ಮನೇ ಊಹಿಸಿಕೊಳ್ಳುತ್ತ ಕೂತಾಗಲೇ ಮಂಜಣ್ಣನ ಕತ್ತು ಯಾಕೋ ಮೆಲ್ಲಗೆ ತನ್ನತ್ತ ತಿರುಗಿದ ಸಂದರ್ಭವನ್ನು ಲಲಿತಕ್ಕ ಗಾಬರಿಯಿಂದಲೇ ಆವಾಹಿಸಿಕೊಂಡಿದ್ದಳು. ಅವನ ನಿರಿಗೆ ಬಿದ್ದ ಉದ್ದ ಕೈ ಬೆರಳುಗಳು ಕುಡಿಯಲು ನೀರು ಬೇಕು ಅಂತ ಸನ್ನೆ ಮಾಡಿದಂತೆ ಅನ್ನಿಸಿದ ಕ್ಷಣದಲ್ಲಿ, ಅವಸರದಲ್ಲೇ ಪಕ್ಕದ ತಂಬಿಗೆಯಲ್ಲಿದ್ದ ನೀರನ್ನು ಲೋಟಕ್ಕೆ ಬಗ್ಗಿಸಿ, ಅವನ ಮುಖದ ಬಳಿಯಲ್ಲೇ ಬಗ್ಗಿ ನಿಂತು, ತುಸುವೇ ತೆರೆದಿದ್ದ ಮಂಜಣ್ಣನ ಬಾಯಲ್ಲಿ ಹನಿಹನಿಯೇ ಉಣಿಸಿದಳು. ಗಂಟಲಲ್ಲಿ ಗುಟುಕರಿಸುವ ಆ ಸಣ್ಣ ಸದ್ದನ್ನು ಆಲಿಸುತ್ತಲೇ ಲಲಿತಕ್ಕನಿಗೆ ಒಂದು ರೀತಿಯ ಅಕ್ಕರೆ ಉಕ್ಕಿ ಬಂದಂತೆನಿಸಿ ಕ್ಷಣ ಭಾವೋದ್ವೇಗಕ್ಕೂ ಒಳಗಾದಳು.
ಹಾಗೆ ನೀರು ಕುಡಿಸುತ್ತಿರುವ ಗಳಿಗೆಯಲ್ಲೇ ಹಲವಾರು ವರ್ಷಗಳ ರೋಷ ದ್ವೇಷಗಳೆಲ್ಲ ಕರಗಿ ನೀರಾಗಿ ಹೋದಂತೆ ಲಲಿತಕ್ಕ ಶುದ್ಧಳಾದಳು. ನೋಡು ನೋಡುತ್ತಿದ್ದಂತೆಯೇ ಕೊನೆಯ ಗುಟುಕನ್ನು ಮಂಜಣ್ಣ ನುಂಗಲೇ ಇಲ್ಲ. ಹಾಗೇ ಅವನ ಕಟಬಾಯಲ್ಲಿ ಇಳಿದ ನೀರನ್ನು ಪಕ್ಕವೇ ಬಿದ್ದ ಒಂದು ಬೆಳ್ಳನೆಯ ಕರವಸ್ತ್ರದಲ್ಲಿ ವರೆಸುತ್ತ ಲಲಿತಕ್ಕ ಗಾಬರಿಯಿಂದ ಎದ್ದುನಿಂತು ಅಲುಗಿಸಿ ಅಲುಗಿಸಿ ಗಂಡನ ಚಲನೆಯನ್ನು ವೀಕ್ಷಿಸಿದಳು. ಅರ್ಧ ಗಂಟೆಯಾದರೂ ಯಾವುದೇ ಅಲುಗಾಟ ಇಲ್ಲದೇ ಮರದ ಕೊರಡಿನಂತೆ ಮಲಗಿದ್ದ ಗಂಡನನ್ನು ಕಂಡು ಲಲಿತಕ್ಕನಿಗೆ ಎಲ್ಲವೂ ತಿಳಿದು ಹೋಯಿತು. ಒಮ್ಮೆಲೇ ಕೈಕಾಲೆಲ್ಲ ನಡುಗಿಹೋಯಿತು. ಬವಳಿ ಬಂದು ಬೀಳುವಷ್ಟು ಗಾಬರಿಗೆ ಬಿದ್ದಳು. ನಂಬಲಾಗದ ಸ್ಥಿತಿಯಲ್ಲಿ ಮತ್ತೊಮ್ಮೆ ಮೊಗದೊಮ್ಮೆ ಪರೀಕ್ಷಿಸಿದಳು. ಉಸಿರು ನಿಂತದ್ದು ನಿಜವೆನಿಸಿತೊಡಗಿದ್ದೇ ಅವಳು ಇದ್ದಲ್ಲೇ ಬೆವರತೊಡಗಿದಳು. ಏನು ಮಾಡಲೂ ತೋಚುತ್ತಿಲ್ಲ. ಯಾರೊಬ್ಬರಿಗೆ ತಿಳಿದರೂ ಅನಾಹುತವೇ. ಈ ಸುದ್ದಿ ಅಲ್ಲಿ ಮೊಮ್ಮಗಳ ಮದುವೆ ಮುಗಿಯುವವರೆಗೂ ತನ್ನೊಬ್ಬಳನ್ನು ಬಿಟ್ಟು ಮತ್ತೆ ಯಾರ ಕಿವಿಗೂ ಬೀಳದಂತೆ ಗುಟ್ಟಾಗಿ ಇಟ್ಟುಕೊಳ್ಳುವ ಎಚ್ಚರಿಕೆಯೊಂದು ಮನಸ್ಸಿನ ಮೂಲೆಯಲ್ಲೆಲ್ಲೋ ಜಾಗ್ರತಗೊಳ್ಳುತ್ತಿತ್ತು. ಆದರೂ ಸಾವಿನ ಸಂಗತಿ ಎಂದೊಡನೆ ಭರಿಸಲಾಗದ ಒಂದು ತರಹದ ಶೂನ್ಯದ ಭೀತಿ ಕೋಣೆಯ ತುಂಬ ಆವರಿಸಿತು. ಎಂಥದೋ ಆತಂಕ. ಕೂಡಲೂ ಆಗದೇ ನಿಲ್ಲಲೂ ಆಗದೇ ಚಡಪಡಿಸಿಹೋದಳು ಲಲಿತಕ್ಕ.
ಕೋಣೆಯಿಂದ ಹೊರಬಂದು ಹೊರ ಜಗಲಿಯಲ್ಲಿ ಮೇಲೆ ಗೋಡೆಗೆ ನೇತು ಹಾಕಿರುವ ಗಡಿಯಾರ ನೋಡಿದಳು. ಹನ್ನೆರಡು ಗಂಟೆ ದಾಟಿ ಹದಿನೈದು ನಿಮಿಷವಾಗಿತ್ತು. ಅಲ್ಲಿನ್ನೂ ಮುಹೂರ್ತವೂ ಮುಗಿದಿಲ್ಲ. ಈ ವಿಷಯ ಗೊತ್ತಾಗಿ ಎಲ್ಲಿ ಮದುವೆ ಅರ್ಧದಲ್ಲಿ ನಿಂತು ಹೋಗುತ್ತದೋ ಎಂಬ ಸಂಕಟದಲ್ಲಿ ಬಾಗಿಲಿನ ಮೂರೂ ಚಿಲಕ ಹಾಕಿ ಇನ್ನಷ್ಟು ಭದ್ರಪಡಿಸಿಕೊಂಡು ಅತ್ತಿಂದ ಇತ್ತ ಇತ್ತಿಂದ ಅತ್ತ ಸುಮ್ಮನೆ ಓಡಾಡಿದಳು. ಪುನಃ ಪುನಃ ಕೋಣೆಗೆ ಹೋಗಿ ಗಂಡನನ್ನು ನೋಡಿ ನೋಡಿ ಬಂದಳು. ದುಃಖಿಸುತ್ತ ಕೂಡುವ ಸಮಯವೂ ಇದಲ್ಲ. ಯಾವುದೋ ಅಪರಿಚಿತ ವ್ಯಕ್ತಿಯೊಬ್ಬನ ದೇಹ ಕೋಣೆಯಲ್ಲಿದ್ದಂತೆ. ಎಷ್ಟೋ ಸಂವತ್ಸರಗಳ ಹಿಂದೆ ಅವನ ಸಂಗಾತಿಯಾಗಿ ಜೊತೆ ಕಳೆದ ಆ ಐದಾರು ವರ್ಷಗಳು ಈಗ ಕೊಂಚವೂ ನೆನಪಿಲ್ಲದಂತೆ ಲಲಿತಕ್ಕನ ಸ್ಮೃತಿಪಟಲದಿಂದಲೇ ಅಳಿಸಿಹೋದಂತಿವೆ.
ನಿಧಾನ ಎದ್ದ ಲಲಿತಕ್ಕ ಕೋಣೆಯ ಮೂಲೆಗಿದ್ದ ಮಂಜಜ್ಜನ ಸಣ್ಣ ಕೈ ಚೀಲವನ್ನು ನೆಲಕ್ಕೆ ಸುರುವಿಕೊಂಡು ಎಲ್ಲ ವಸ್ತುವನ್ನು ಹಿಡಿಹಿಡಿದು ಒಂದೊಂದಾಗಿ ಗಮನಿಸಿದಳು. ಹಿಂದಿ ಅಕ್ಷರದಲ್ಲಿ ಓಂ ಅಂತ ಬರೆದುಕೊಂಡ ಮಸುಕಾದ ಎರಡು ಕೇಸರಿ ಪಂಚೆಗಳು, ಒಂದು ಬದಿಯ ಗಾಜು ಬಿದ್ದು ಹೋದ ಚಾಳೀಸು, ಮತ್ತೊಂದು ಹೊರ ಕವಚ ಕಳಚಿದ ಭಗವದ್ಗೀತೆಯ ಹಳೆಯದಪ್ಪ ಪುಸ್ತಕ, ಇವಿಷ್ಟೇ ಅವನ ಆಸ್ತಿಯಂತಿದ್ದವು. ಗೀತೆಯ ಪುಸ್ತಕದ ಮುಕ್ಕಾಲು ಭಾಗದ ಕಡೆಯಲ್ಲಿ ಒಂದು ತುದಿ ಮಡಚಿಟ್ಟ ಪುಟವಿದ್ದದ್ದನ್ನು ಲಲಿತಕ್ಕ ಸುಮ್ಮನೇ ಕುತೂಹಲದಿಂದ ತೆರೆದಳು. ಅದರಲ್ಲಿಂದ ಒಂದು ಹಳೆಯ ಸಣ್ಣ ಚೀಟಿ ಹಾರಿ ನೆಲಕ್ಕೆ ಬಿತ್ತು. ಅದನ್ನು ಬಗ್ಗಿ ಎತ್ತಿಕೊಂಡು ಕಿಟಕಿಯ ಬೆಳಕಿಗೆ ಬಂದು ಅಕ್ಷರಗಳನ್ನು ಓದಲು ಯತ್ನಿಸಿದಳು. ಎಲ್ಲ ಮಸುಕು ಮಸುಕಾಗಿ ಸಾರಿಸಿದ ಹಾಗಾಗಿತ್ತು. ತುದಿ ಮಡಚಿಟ್ಟ ಪುಟದ ಕಪ್ಪು ಅಕ್ಷರಗಳೆಲ್ಲ ಈ ಚೀಟಿಯ ಅಕ್ಷರಗಳಿಗೂ ಅಂಟಿಕೊಂಡು ಕಲಸುಮೇಲೋಗರವಾಗಿತ್ತು.
ಮತ್ತಷ್ಟು ಕುತೂಹಲ ಹೆಚ್ಚಿಸಿಕೊಂಡು ಒಳಕೋಣೆಯಿಂದ ತನ್ನ ಚಾಳೀಸು ಹುಡುಕಿ ತಂದು ಇನ್ನೊಮ್ಮೆ ಕಿಟಕಿಯ ಬೆಳಕಿಗೆ ಹಿಡಿದು ಓದಲು ಯತ್ನಿಸಿದಳು. ಒಂದರ ಕೆಳಗೆ ಒಂದು ಬರೆದುಕೊಂಡ ಪದಗಳು ಗೋಚರಿಸಿದವು. ಮೊದಲ ಪದ ಐದು ಕೇಜಿ ಅಕ್ಕಿ, ಎರಡನೆಯದು ಒಂದು ಕೇಜಿ ತೊಗರಿ ಬೇಳೆ, ಮೂರನೆಯದು ಪಾವು ಕೇಜಿ ಮೆಣಸಿನಕಾಯಿ, ನಾಲ್ಕನೆಯದು ಹರಳುಪ್ಪು, ಐದನೆಯದು ಹಾಲಿನ ಪೌಡರು, ಆರನೇಯದು ಎರಡು ತೆಂಗಿನ ಕಾಯಿ. ಅಷ್ಟೇ. ನಾನೇ ಕೈಯಾರೆ ಬರೆದ ಅಂದಿನದೇ ಅದೇ ಸಾಮಾನಿನ ಪುಟ್ಟ ಚೀಟಿ. ಅಂಥ ರೋಮಾಂಚನವಾಗಲೀ ಭಾವ ಪರವಶತೆಯಾಗಲೀ ಅವಳನ್ನು ಕಾಡಲೇ ಇಲ್ಲ. ಗೀತೆಯ ಪುಸ್ತಕವನ್ನು ಒಯ್ದು ತನ್ನ ಕೋಣೆಯಲ್ಲಿರಿಸಿ ಹೊರಬಂದಳು. ಅಳಬೇಕೆಂದರೂ ಲಲಿತಕ್ಕನ ಕಣ್ಣಲ್ಲಿ ನೀರು ಬರಲಿಲ್ಲ. ಒಂದು ಗಾಢ ಮೌನ ಮನೆ ಮನಸ್ಸಿನ ಬಿರುಕುಗಳಲ್ಲಿ ಸೇರಿಹೋಗಿತ್ತು.
ಗಂಡನ ಕೋಣೆಗೆ ಹೋಗುವ ಅವನನ್ನು ಈ ಸ್ಥಿತಿಯಲ್ಲಿ ನೋಡುವ ಮನಸ್ಸಿಲ್ಲದೇ, ಕಿಟಕಿಯ ಸಂದಿಯಲ್ಲೇ ರಸ್ತೆ ಬದಿ ಕಣ್ಣಿಟ್ಟು ಹೊರ ಜಗಲಿಯ ಕುರ್ಚಿಯಲ್ಲೇ ಕೂತಿದ್ದಳು ಲಲಿತಕ್ಕ. ಅಕ್ಕಪಕ್ಕದವರೆಲ್ಲ ಪಿಂಕಿಯ ಮದುವೆಯ ಊಟ ಮುಗಿಸಿ ತಾಂಬೂಲ ಮೆಲ್ಲುತ್ತ ಬಂದದ್ದನ್ನು ಲಲಿತಕ್ಕ ಕಿಟಕಿಯಲ್ಲೇ ಕಂಡಳು. ಅವರಲ್ಲಿ ಯಾರಾದರೂ ತಾನು ಹೋಗದೇ ಇದ್ದದ್ದು ತಿಳಿದು ತನ್ನನ್ನು ಮಾತಾಡಿಸಲು ಅಲ್ಲಿಯ ಸುದ್ದಿ ಹೇಳಲು ಬರುತ್ತಾರೋ ಅಂತ ತುಸು ಭಯವೂ ಆಯಿತು. ಅಥವಾ ತಾನೇ ಅವರಲ್ಲಿ ಒಬ್ಬನನ್ನು ಕರೆದು ತನ್ನೊಳಗೇ ಸುಡುತ್ತಿದ್ದ ಈ ಘೋರ ಸುದ್ದಿ ಹಂಚಿಕೊಳ್ಳುವ ತವಕ ಒಮ್ಮೆಲೇ ಕಾಡಿತಾದರೂ, ಅದನ್ನು ಅಲ್ಲೇ ತಡೆ ಹಿಡಿದು ಕೂತಳು. ಸಂಜೆ ಐದೂವರೆಯ ಸಮಯವಾಯಿತು. ಪಿಂಕಿಯ ದಿಬ್ಬಣ ಅವಳ ಅತ್ತೆಯ ಮನೆಗೆ ಕಳಿಸಿದ ನಂತರ ಮೊದಲ ಟೆಂಪೊ ಹಿಂತಿರುಗಿ ಬಂತು. ಲಲಿತಕ್ಕ ಅವಸರದಿಂದಲೇ ತಡಬಡಾಯಿಸುತ್ತ ಬಾಗಿಲು ತೆರೆದಳು. ಆ ಜನರಲ್ಲಿ ಮಗನಿಲ್ಲದೇ ಇದ್ದದ್ದು ಲಲಿತಕ್ಕನಿಗೆ ಇನ್ನಷ್ಟು ಕಳವಳ ತಂತು. ಆದರೆ ಆ ಗುಂಪಿನಲ್ಲಿ ಸಾಮಾನು ಸರಂಜಾಮು ಹಿಡಿದು ಬಂದ ತನ್ನ ಅಣ್ಣನ ಮಗ ರಾಮಣ್ಣನನ್ನು ಕಂಡು ಇದ್ದಲ್ಲೇ ಜೀವ ಬಂದಂತಾಯಿತು. ಅವನನ್ನೇ ಒಂದು ಬದಿಗೆ ಕರೆದು ಅನುಮಾನದ ಮುಖಭಾವ ಹೊತ್ತು ’ರಾಮಣ್ಣ, ನಿಮ್ಮ ಮಾವ ಯಾಕೋ ಅಷ್ಟು ಹೊತ್ತಿನಿಂದ ಒಂದು ಥರಾ ಮಾಡುತ್ತಿದ್ದಾರೆ ಸ್ವಲ್ಪ ನೋಡು’ ಎನ್ನುತ್ತ ನಡುಗುವ ಸ್ವರದಲ್ಲೇ ಹೇಳಿ ಅವನನ್ನು ಕೋಣೆಗೆ ಕಳಿಸುತ್ತ ತಾನೂ ಹಿಂದೆ ಹಿಂದೆಯೇ ಹೋದಳು.
ಆತ ಅವಸರದಲ್ಲೇ ಕೋಣೆಯೊಳಗೆ ನುಗ್ಗಿ ನಾಡಿ ಉಸಿರು ಎಲ್ಲ ಪರೀಕ್ಷಿಸಲು ಅನುವಾದ. ತಣ್ಣನೆಯ ಕೈಯನ್ನು ಸ್ಪರ್ಶಿಸಿದ ಕ್ಷಣದಲ್ಲೇ ಅವನಿಗೆ ನಿಜವೆಲ್ಲ ಅಧಿಕೃತವಾಗಿತ್ತು. ಆದರೂ ಡಾಕ್ಟರರನ್ನೊಮ್ಮೆ ಕರೆಸುವಾ ಅಂತೇನೋ ತೊದಲಿದ್ದು ಕೇಳಿ ಇನ್ನೂ ಗಾಬರಿಗೆ ಬಿದ್ದ ಲಲಿತಕ್ಕ ’ಬೇಡ ಬೇಡ ಬೇಗ ನಮ್ಮ ಲೋಕಿಯನ್ನು ಕರೆದು ತಾ, ಮುಂದಿನ ಕೆಲಸ ಆಗಲಿ’ ಎನ್ನುತ್ತ ಅಷ್ಟೇ ಶಾಂತಳಾಗಿ ಅಂದಿದ್ದೇ ಆ ರಾಮಣ್ಣನಿಗೂ ಅಚ್ಚರಿಯಾಯಿತು. ಅಷ್ಟರಲ್ಲೇ ಒಳ ಬಂದ ಲೋಕನಾಥನಿಗೆ ಇವರ ಮುಖಭಾವದಿಂದಲೇ ಏನೋ ಒಂದು ರೀತಿಯ ವಿಚಿತ್ರ ಕಾಡಿ, ಅವನೂ ಅಪ್ಪನ ಕೋಣೆಗೆ ಹೋಗಿ ಪರೀಕ್ಷಿಸಲಾಗಿ ಒಮ್ಮೆಲೇ ಬೆವರಿ ಹೋದ. ಕ್ಷಣದಲ್ಲೇ ಮನೆ ತುಂಬ ಸುದ್ದಿ ಹರಡಿ ಬಂದವರೆಲ್ಲರೂ ಒಂದೊಂದು ಬಗೆಯಲ್ಲಿ ಗುಸುಗುಸು ಆರಂಭಿಸಿದಾಗ, ಅಂಥ ಸಂದರ್ಭದಲ್ಲೂ ಲಲಿತಕ್ಕನಿಗೆ ದೊಡ್ಡ ಜವಾಬ್ಧಾರಿಯಿಂದ ಕಳಚಿಕೊಂಡ ನಿರಾಳತೆ ಆವರಿಸಿತು, ತಡಮಾಡದೇ ತನ್ನ ಕೋಣೆಗೆ ನುಗ್ಗಿ ಮಂಚವೇರಿ ಗೋಡೆಯ ಬದಿ ಮುಖ ಮಾಡಿ ಕಣ್ಣು ತೆರೆದೇ ಅಡ್ಡಾದ ಲಲಿತಕ್ಕ ಹೊರಗಿನ ಶಬ್ದಗಳನ್ನೆಲ್ಲ ತುಂಬ ಜಾಗರೂಕತೆಯಿಂದ ಆಲಿಸಿದಳು. ಇತ್ತ ಜರ್ಜರಿತಗೊಂಡ ಆ ಸಾಮಾನಿನ ಚೀಟಿ, ತುದಿ ಮಡಚಿಟ್ಟ ಗೀತೆಯ ಪುಟದಲ್ಲಿ ಬಂಧಿಯಾಗಿ ಒಂದು ಸುದೀರ್ಘ ಅವಧಿಯ ದಾಂಪತ್ಯದ ಕಪ್ಪು ಬಿಳುಪು ಅನುಭವಗಳ ಅವಸಾನದಂತೆ ಕೂತಿತ್ತು.
-ಸುನಂದಾ ಪ್ರಕಾಶ ಕಡಮೆ

Related Articles

2 COMMENTS

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles