ಹೀಗೊಂದು ಕತೆ ಬರೆದ ಅನುಭವ -ಸುನಂದಾ ಪ್ರಕಾಶ ಕಡಮೆ

ಹೀಗೊಂದು ಕತೆ ಬರೆದ ಅನುಭವ
-ಸುನಂದಾ ಪ್ರಕಾಶ ಕಡಮೆ

ನಾನು ‘ಜರಿಯಂಚಿನ ಫ್ರಾಕು’ ಎಂಬ ಕತೆ ಬರೆದದ್ದು 2007 ರಲ್ಲಿ. ಹುಬ್ಬಳ್ಳಿಯಲ್ಲಿ ಕ್ಲೀನ್ ಸಿಟಿ ಆಂದೋಲನ ನಡೆದ ವರ್ಷ ಅದು. ಸ್ವಚ್ಛ ಸುಂದರ ಪಟ್ಟಣ ಮಾಡ ಹೊರಟ ರಾಜಕಾರಣಿಗಳು ಹಾಗೂ ಅಧಿಕಾರಿ ವರ್ಗ, ಫೂಟ್ಪಾತಿನಲ್ಲಿ ಸಣ್ಣ ಪುಟ್ಟ ವ್ಯಾಪಾರ ಮಾಡಿ, ಹೊಟ್ಟೆ ಹೊರೆದುಕೊಳ್ಳುವ ದೀನರನ್ನು ಸಂಪೂರ್ಣ ರಸ್ತೆಗೇ ತಳ್ಳಿದ ದಾರುಣ ಸ್ಥಿತಿಯನ್ನು ನಾನು ಕಣ್ಣಾರೆ ಕಂಡಿದ್ದೇನೆ. ಏನೂ ಮಾಡಲಾರದ ಅಸಹಾಯಕ ಸ್ಥಿತಿಯಲ್ಲಿ ನಾನಿದ್ದೆ. ಆಗ ಈ ಕತೆ ಹುಟ್ಟಿದ್ದು. ಅದೇ ವೇಳೆಗೆ ಸುಧಾ ವಾರಪತ್ರಿಕೆಯ ಸಂಪಾದಕರಾಗಿದ್ದ ನಾಗೇಶ ಹೆಗಡೆಯವರು ಯುಗಾದಿ ವಿಶೇಷಾಂಕಕ್ಕಾಗಿ ಒಂದು ಕತೆ ಕೇಳಿ ಪತ್ರ ಬರೆದರು. ಈ ಒಂದು ದುರಂತದ ವಸ್ತು ನನ್ನ ತಲೆಯಲ್ಲಿತ್ತು. ಮನಸ್ಸಿನಲ್ಲೇ ಮಂಥನ ಶುರುವಿಟ್ಟುಕೊಂಡಿತು.

ಹುಬ್ಬಳ್ಳಿಯನ್ನು ಅಂದಗೊಳಿಸುವ ಕಾರ್ಯವನ್ನು ನಗರಪಾಲಿಕೆ ಕೈಗೊಂಡಿತ್ತು. ರಸ್ತೆಗೆ ಚಾಚಿಕೊಂಡ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ, ನಗರದ ಪ್ರಮುಖ ಬೀದಿಗಳಿಗೆ ಫೂಟ್ಪಾತಿನ ನಿರ್ಮಾಣಕ್ಕಾಗಿ ವರ್ಷಾನುಗಟ್ಟಲೇ ಚರ್ಚಿಸಿ ಕಾನೂನಿನ್ವಯ ಕ್ರಮ ಕೈಗೊಳ್ಳಲು ಉದ್ದೇಶಿಸಿತ್ತು. ಫೂಟ್ಪಾತಿನಲ್ಲಿ ಹರಿದ ಚಪ್ಪಲಿ ಹೊಲಿಯುವವರಿಂದ ಹಿಡಿದು ಹರಿದ ಛತ್ರಿ ರಿಪೇರಿಯವರವರೆಗೆ, ರಸ್ತೆಯಂಚಿಗೇ ಸ್ವಂತ ಹೊಲಿಗೆ ಮಷಿನ್ನನ್ನಿಟ್ಟುಕೊಂಡು ಸಾದಾ ರೆಡಿಮೇಡ್ ಬಟ್ಟೆ ಹೊಲಿಯುವವರಿಂದ ಹಿಡಿದು ಸ್ವೆಟರ್ ಮಾರುವವರವರೆಗೆ, ಇಡ್ಲಿ ವಡಾ ಆಮ್ಲೇಟ್ ತಯಾರಿಸುವವರಿಂದ ಹಿಡಿದು ಸ್ಟವ್ ರಿಪೇರಿಯವರವರೆಗೆ, ಹಳೆಯ ಪುಸ್ತಕ ದೇವರ ಪಟಗಳನ್ನು ಮಾರುವವರಿಂದ ಹಿಡಿದು ಹಿತ್ತಾಳೆ ಪಾತ್ರೆಗೆ ಕಲಾಯಿ ಹಾಕುವವರವರೆಗೆ, ಗಿಳಿ ಶಾಸ್ತ್ರದ ಹಸ್ತ ಸಾಮುದ್ರಿಕಾದವರಿಂದ ಹಿಡಿದು ಮಿರ್ಚಿ ಬಜಿ ಗಿರಮಿಟ್ಟು ಮಾರುವವರವರೆಗೆ ಎಲ್ಲರೂ ಎಲ್ಲರೂ ಮಾರ್ಕೆಟ್ಟಿನ ಮೇನ್ ರಸ್ತೆಯ ಫೂಟ್ಪಾತಿನಲ್ಲಿ ಸಾಲಾಗಿ ಸಂಜೆಯಾಯಿತೆಂದರೆ, ಗಿಜಿಗುಟ್ಟುವ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಬಂದು ಕೂತು, ಕಂಕುಳಲ್ಲಿ ಕಂದನನ್ನಿಟ್ಟುಕೊಂಡೇ ತಂತಮ್ಮ ದೈನಿಕದ ಅನ್ನ ಅರಸಲು ಅಣಿಯಾಗುತ್ತಾರೆ.

ಫೂಟ್ಪಾತನ್ನು ಸ್ವಚ್ಛಗೊಳಿಸುವದೆಂದರೆ, ಇಂಥ ಎಷ್ಟೋ ಬಡ ಜನರನ್ನು ಬೀದಿಪಾಲುಗೊಳಿಸುವದೆಂದೇ ಅರ್ಥ. ಹೀಗೆ ಈ ಕಾರ್ಯಾಚರಣೆಯಲ್ಲಿ ಬೀದಿ ಪಾಲಾಗುವ ಜನರ ಉದ್ಯೋಗಕ್ಕೆ ಬೇರೆಯದೇ ವ್ಯವಸ್ಥೆಯನ್ನು ನಗರಪಾಲಿಕೆ ಮಾಡಿಕೊಡುತ್ತದೆ ಎಂಬ ಭರವಸೆಯ ಮೇರೆಗೇ ಈ ಕಾರ್ಯ ಆರಂಭಗೊಂಡಿದ್ದರೂ ಕೂಡ, ನಂತರದ ದಿನಗಳಲ್ಲಿ ಅಂಥ ಉದಾಹರಣೆಗಳನ್ನು ನಾನು ಕಾಣಲಿಲ್ಲ. ಫೂಟ್ಪಾತ್ ತೆರವುಗೊಳಿಸಿದ ಮಾರನೇ ದಿನದಿಂದಲೇ ನಮ್ಮ ಹೊಸ ಹೊಸ ಲೇಔಟುಗಳು ಎದ್ದ ಪ್ರದೇಶಗಳಲ್ಲೆಲ್ಲ ರಸ್ತೆಯಲ್ಲಿ ಕಂಡ ಸಾಮಾನ್ಯ ದೃಶ್ಯಗಳೆಂದರೆ, ಫುಟ್ಪಾತಿನಲ್ಲಿ ವಸತಿ ಕಳಕೊಂಡ ಸಣ್ಣಪುಟ್ಟ ಉದ್ಯೋಗದ ಸಂತೃಸ್ತರೆಲ್ಲ ಬೀದಿ ಬೀದಿಗಳನ್ನು ಸುತ್ತಿ ಸುತ್ತಿ ವ್ಯಾಪಾರ ಮಾಡತೊಡಗಿದ್ದು. ಅವರಿಗೆ ಅಂದಿನಿಂದ ಒಂದೆಡೆ ನೆಲೆಯೇ ಇಲ್ಲದಂತಾಯಿತು.

ಇಷ್ಟೆಲ್ಲ ನಿರಾಶ್ರಿತರ ಕತೆಗಳನ್ನು ಒಟ್ಟಿಗೇ ಸೂಕ್ಷ್ಮವಾಗಿ ಒಂದೇ ಕತೆಯಲ್ಲಿ ಹಿಡಿದಿಡಲು ಶಕ್ಯವಿಲ್ಲವಾದ ಕಾರಣ ನಾನು ಇವರೆಲ್ಲರ ಪ್ರತಿನಿಧಿಯಂತೆ ಒಬ್ಬನೇ ಒಬ್ಬ ಸಂತೃಸ್ತನನ್ನು ಕತೆಗೆ ಪೂರಕವಾಗಿ ಆಯ್ಕೆ ಮಾಡಿಕೊಳ್ಳಬೇಕಾಯಿತು. ಸಮಾಜದಲ್ಲಿ ಎಷ್ಟೋ ಸಮಸ್ಯೆಗಳಿರುವಾಗ ಎಲ್ಲವನ್ನೂ ಎಳೆದುಕೊಂಡರೆ ಒಂದು ಸುದೀರ್ಘ ಕಾದಂಬರಿ ಮಾಡಬಹುದೇ ವಿನಃ ಏಳೆಂಟು ಪುಟದ ಕತೆಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಹೇಳಬೇಕಾಗಿರುವದರಿಂದ, ನನ್ನ ಅನುಭವಕ್ಕೆ ನಿಲುಕುವ ಒಂದೇ ವ್ಯಕ್ತಿಯನ್ನು, ಅವನ ಬದುಕನ್ನು ಕಟ್ಟಿಕೊಡಲು ಇಲ್ಲಿ ಯತ್ನಿಸಿದ್ದೇನೆ.

ಕತೆಗಳು ಈ ಲೋಕದಲ್ಲಿ ತನ್ನಿಂದ ತಾನೇ ನಡೆಯುತ್ತಿರುತ್ತದೆ. ಕತೆ ನಡೆಯಬೇಕು : ಅದನ್ನು ನಾವು ಹೇಳಕೂಡದು. ಕತೆ ಘಟಿಸಬೇಕು : ಅದನ್ನು ನಾವು ವಿವರಿಸಕೂಡದು. ಇಂತೆಲ್ಲ ಮಾತುಗಳನ್ನು ಹಿರಿಯ ಸಾಹಿತಿ ಯಶವಂತ ಚಿತ್ತಾಲರು ಆಗಾಗ ಹೇಳುತ್ತಿದ್ದರು. ಕತೆ ಹೇಳುವುದು ಮತ್ತು ನಡೆಯುವದರಲ್ಲಿ ತುಂಬ ವ್ಯತ್ಯಾಸವಿದೆ. ಎಷ್ಟೋ ಪಳಗಿದ ಕತೆಗಾರರೂ ಕೂಡ ಕೆಲವೊಮ್ಮೆ ಕತೆ ನಡೆಸಲು ಅಸಮರ್ಥರಾಗುತ್ತಾರೆ.

ಕತೆಗೆ ತನ್ನದೇ ಆದ ಒಂದು ಪರಿಸರದ ಅಗತ್ಯವಿರುತ್ತದೆ. ಅಂಥ ಪರಿಸರವೊಂದನ್ನು ನಾನು ಈ ಫೂಟ್ಪಾತಿನ ತೆರವುಗೊಳಿಸುವ ಕ್ರಿಯೆಯಲ್ಲಿ ಹುಡುಕಿಕೊಂಡೆ. ಅಲ್ಲಿಯ ಪಾತ್ರಗಳು ಹುಬ್ಬಳ್ಳಿಯ ಮಾರ್ಕೆಟ್ಟು ಪ್ರದೇಶದಲ್ಲೇ ಸಿಕ್ಕವು. ಪಾತ್ರಗಳ ಸಂಕಷ್ಟಗಳಿಗೆ ನಾವು ಕಣ್ಣಾಗಬೇಕಾಗುತ್ತದೆ. ಕಿವಿಯಾಗಬೇಕಾಗುತ್ತದೆ. ಮನಸ್ಸು ತೆರೆದು ಕೂತಿರಬೇಕಾಗುತ್ತದೆ. ಆಯಾ ಪರಿಸರದ ಪಾತ್ರಗಳು ಮಾತ್ರ ಅಲ್ಲಿ ಹೊಂದಿಕೊಳ್ಳುತ್ತವೆ. ಇಲ್ಲದಿದ್ದರೆ ಪಾತ್ರ ರಚನೆ ಕೃತಕವಾಗಿಬಿಡುತ್ತದೆ.

ವಸ್ತು ತಲೆಯಲ್ಲಿಟ್ಟುಕೊಂಡು ಕತೆ ಹೆಣೆಯುವ ಆವೇಶ ಅಂದಿನವರೆಗೆ ನನ್ನಲ್ಲಿರಲಿಲ್ಲ. ಅಲ್ಲಿಯತನಕ- ಅದು ಬರೆಯುತ್ತ ಬರೆಯುತ್ತ ತಾನೇ ಹೊಳೆಯುವದು ಅಂತಲೇ ನಾನಂದುಕೊಂಡಿದ್ದೆ. ಈಗ ಮಾತ್ರ ಈ ವಸ್ತುವಿನ ಕುರಿತಾಗಿ ಬರೆಯಲೇ ಬೇಕೆಂದು ಪಟ್ಟು ಹಿಡಿದು ಕೂತೆ. ನಿರೂಪಣೆ ಪರಿಣಾಮಕಾರಿಯಾಗಿದ್ದರೆ, ಹುರುಳಿಲ್ಲದ ಎಂಥ ವಸ್ತುವನ್ನೂ ಸಹ ಒಂದು ಒಳ್ಳೆಯ ಕತೆ ಮಾಡಬಹುದು ಎಂದು ಕನ್ನಡದ ವಿದ್ವಾಂಸ ಗೌರೀಶ ಕಾಯ್ಕಿಣಿಯವರು ಒಂದೆಡೆ ಹೇಳಿದ್ದರು. ಹೀಗೆ ಹುರುಳಿದ್ದ ವಸ್ತುವನ್ನು ಯಾಕೆ ಕತೆ ಮಾಡಬಾರದು ಅನ್ನಿಸಿತ್ತು.

ಅದೇ ಫೂಟ್ಪಾತಿನ ತೆರವು ಕಾರ್ಯಕ್ರಮದಲ್ಲಿ ಘಾಸಿ ಅನುಭವಿಸಿದ ಹೊಲಿಗೆ ಮಷಿನನ್ನಿಟ್ಟುಕೊಂಡು ಜೀವನ ಸಾಗಿಸುತ್ತಿದ್ದ, ಗುರ್ಯಾನನ್ನು ಫೋಕಸ್ ಮಾಡಿ ‘ಜರಿಯಂಚಿನ ಫ್ರಾಕು’ ಕತೆ ಬರೆದೆ. ಗುರ್ಯಾ ನನ್ನ ಅಪ್ಪಟ ಕಲ್ಪನೆಯಲ್ಲಿ ಹುಟ್ಟಿದ ಪಾತ್ರ.

ಆ ದಿನಗಳಲ್ಲಿ ನಮ್ಮ ಹುಬ್ಬಳ್ಳಿಯ ಮಾರ್ಕೆಟ್ಟು ರಸ್ತೆಯೆಲ್ಲವೂ ಒಂದು ರೀತಿಯಲ್ಲಿ ಯುದ್ಧ ನಡೆದ ಸ್ಥಳದಂತೆ ಭಯಾನಕ ನೋಟವನ್ನು ಪ್ರತಿಬಿಂಬಿಸುತ್ತಿದ್ದವು. ಈಗಷ್ಟೇ ಭೂಕಂಪವಾಗಿ ಕಟ್ಟಡಗಳೆಲ್ಲ ಅರ್ಧಂಬರ್ಧ ಉದುರಿ ಬಿದ್ದಿವೆಯೋ ಅನ್ನುವ ಹಾಗೆ. ಹಳದಿ ಬಣ್ಣ ಬಳಿದುಕೊಂಡ ಜೇಸಿಬಿ ಯಂತ್ರಗಳದೇ ಕಾರುಬಾರು. ಒಂದು ರೀತಿಯ ಅಮಾನವೀಯ ತಲ್ಲಣ. ಅಂದಿನ ದಿನಗಳಲ್ಲಿ ದಿನವೂ ಸಂಜೆ ನಾನು ಮಾರ್ಕೆಟ್ಟಿಗೆ ಹೋಗುತ್ತಿದ್ದುದೇ ಇಂಥ ಸೂಕ್ಷ್ಮ ಅವಲೋಕನಕ್ಕಾಗಿ. ಅಂದಗೆಟ್ಟ ಕಟ್ಟಡಗಳು ನಂತರದ ದಿನಗಳಲ್ಲಿ ಅದು ಹಾಗೆಯೇ ಇತ್ತೋ ಎನ್ನುವ ಹಾಗೆ ರಿಪೇರಿ ಮಾಡಿಸಿಕೊಂಡು ಸುಣ್ಣ ಬಣ್ಣ ಹಚ್ಚಿಕೊಂಡು ನಿಂತವು.

ರಸ್ತೆಯ ಒಳಚರಂಡಿಗಳ ಮೇಲೆಯೇ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬೆಳೆಸಿ ನಿಲ್ಲಿಸಿದ, ಪಟ್ಟಣದ ಸಾವುಕಾರ ಜನಕ್ಕೆ ಬುದ್ಧಿ ಕಲಿಸಲು ಹೋಗಿ ಫೂಟ್ಪಾತಿನಲ್ಲಿ ಹೊಟ್ಟೆ ಹೊರೆವ ಬಡವರು ಕಂಗಾಲಾಗುವಂತೆ ಮಾಡಿದ್ದು, ಕೆಲ ದಿನ ಸಾರ್ವಜನಿಕರ ಅನುಕಂಪಕ್ಕೂ ಕಾರಣವಾಯಿತು. ಆದರೆ ಮಧ್ಯಮ ವರ್ಗದ ನಮ್ಮಂಥವರು ಪಟ್ಟಣದ ಅಂದಚಂದದ ಕುರಿತೇ ಹೆಚ್ಚು ಆಸಕ್ತಿವಹಿಸಿದ್ದರಿಂದ ದೀನರಿಗೆ ಹೆಚ್ಚಿನ ಸಹಾನುಭೂತಿ ಸಿಗಲಿಲ್ಲ.

ನನ್ನ ಕತೆಗೊಂದು ಗುರ್ಯಾನ ಪಾತ್ರ ಇಲ್ಲಿಂದಲೇ ಸಿಕ್ಕಿತೆಂದ ಕೂಡಲೇ ಅವನು ಉಪಜೀವನ ಸಾಗಿಸುವ ಪರಿಸರದ ಚಿತ್ರ ಕಟ್ಟಿಕೊಡಬೇಕಾಯಿತು. ಅಂಥ ಒಬ್ಬ ವ್ಯಕ್ತಿಯ ವಾಸ ಸ್ಥಳ ಎಲ್ಲೋ ನಗರದ ಮೂಲೆಯ ಜನತಾ ಮನೆಗಳಲ್ಲೋ ಚಾಳಿನ ಆಸರೆಗಳಲ್ಲೋ ಇರುತ್ತದೆ. ದೈನಿಕದಲ್ಲಿ ಅವನು ಬದುಕುವ ರೀತಿಯನ್ನು ಯೋಚಿಸಬೇಕಾಗುತ್ತದೆ. ಅಂದಾಗ ಮಾತ್ರ ಪಾತ್ರಕ್ಕೊಂದು ಸಹಜತೆ ಬರುತ್ತದೆ. ಹಾಗೆ ಮನಗಂಡಾಗ ಮಾತ್ರ ಆ ಪಾತ್ರದ ಗುಣವಿಶೇಷಗಳು ತಾನಾಗೇ ಕಟ್ಟಿಕೊಳ್ಳುತ್ತವೆ. ಅವನ ಅಸಹಾಯಕತೆ ಅಮಾಯಕತೆ ಅವಲಂಬನೆ ಅಧೈರ್ಯ ಹೀಗೆಲ್ಲ ಬಗೆಯಲ್ಲಿ ಅವನು ತನ್ನಿಂದ ತಾನೇ ಅನಾವರಣಗೊಳ್ಳತೊಡಗಿದ.

ನಂತರ ಫೂಟ್ಪಾತಿನ ತೆರವಿನ ಸಂದರ್ಭದಲ್ಲಿ ಉಂಟಾಗುವ ಗುರ್ಯಾನ ಮನಸ್ಥಿತಿಯನ್ನು ಅಭ್ಯಸಿಸಬೇಕಾಯಿತು. ಅವನನ್ನು ನನ್ನ ಕತೆಯಲ್ಲಿ ಕಟ್ಟಿ ಹಾಕುವ ತೀವ್ರ ತುಡಿತ ಏರ್ಪಟ್ಟಿತು. ಆ ಸನ್ನಿವೇಶದಲ್ಲಿ ಸಮಾಜದೊಂದಿಗೆ ಕುಟುಂಬದೊಂದಿಗೆ ಗುರ್ಯಾನ ಸ್ಪಂದನೆಗಳು ಇಲ್ಲಿ ಮುಖ್ಯವೆನ್ನಿಸಿತು.. ಗುರ್ಯಾನಿಗೆ ಅವನದೇ ಆದ ವಯಕ್ತಿಕವಾದೊಂದು ಬದುಕಿರುತ್ತದೆ. ಹಾಗೂ ಅವನು ಒಂದು ದೊಡ್ಡ ಬಟ್ಟೆ ಅಂಗಡಿಯ ಎದುರು ತನ್ನ ಹೊಲಿಗೆ ಮಷಿನ್ನನ್ನು ಇಟ್ಟುಕೊಂಡು ದುಡಿಯುವವನಿಗೆ ಆ ಪರಿಸ್ಥಿತಿಯೇ ಅವನೊಳಗೆ ದೈನೇಸಿ ಸ್ಥಿತಿಯನ್ನು ಕಲಿಸಿಬಿಟ್ಟಿರುತ್ತದೆ.

ಕತೆ ಪರಿಣಾಮಕಾರಿಯಾಗಿ ಮೂಡಿ ಬರಬೇಕೆಂದರೆ, ವಸ್ತುವಿನ ನಿರೂಪಣೆಯ ಹಂತದಲ್ಲಿ ಕತೆಗಾರ ಹೆಚ್ಚು ಶ್ರಮವಹಿಸಬೇಕಾಗುತ್ತದೆ. ಕತೆಯ ಹದವನ್ನು ಸಹ ನಾವು ಮೊದಲೇ ಅರಿತಿರಬೇಕಾಗುತ್ತದೆ. ಯಾವುದನ್ನು ಎಷ್ಟು ಹೇಳಬೇಕು, ಯಾವುದನ್ನು ಹೇಳಬಾರದು, ಯಾವುದನ್ನು ಸಹೃದಯನ ವಿಚಾರಕ್ಕೆ ಬಿಡಬೇಕು ಎಂಬುದರ ವಿವೇಚನೆ ನಮಗಿರಬೇಕಾಗುತ್ತದೆ. ಹೀಗೆ ಒಂದು ಜನಾಂಗವನ್ನು ಒಂದು ಸಂಸ್ಥೆಯನ್ನು ಒಂದು ಸಂಘಟನೆಯನ್ನು ಕುರಿತು ಒಳಗೊಂಡು ಹೇಳಬೇಕಾಗಿರುವದರಿಂದ ಅದಕ್ಕೆ ಅವಹೇಳನಕರವೆಂಬಂತೆ ಕಟ್ಟಿಕೊಟ್ಟರೆ, ಮುಂದೆ ಅದರಿಂದ ಕೂಡ ತೊಂದರೆ ಅನುಭವಿಸುವ ನೆಲೆಯಲ್ಲಿ ನಾವು ಚಿಂತಿಸಬೇಕಾಗುತ್ತದೆ. ಇವಕ್ಕೆಲ್ಲ ನಿಖರ ಸಾಕ್ಷ್ಯಾಧಾರಗಳು ನಮ್ಮಲ್ಲಿದ್ದರೆ, ಅಂಥ ಸಂಗತಿಯನ್ನು ಧೈರ್ಯವಾಗಿ ಹೇಳಲಡ್ಡಿಯಿಲ್ಲ.

ಫೂಟ್ಪಾತ್ ತೆರವುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಹುಬ್ಬಳ್ಳಿ ಧಾರವಾಡದ ಮಹಾನಗರಪಾಲಿಕೆ. ಆ ದಿನಗಳಲ್ಲಿ ನನ್ನ ಗಂಡ ಪ್ರಕಾಶ್, ಅದೇ ಮಹಾನಗರಪಾಲಿಕೆಯಲ್ಲಿ ಲೆಕ್ಕಪತ್ರ ವಿಭಾಗದಲ್ಲಿ ಅಧಿಕಾರಿಯಾಗಿ ಸರಕಾರಿ ಕರ್ತವ್ಯದಲ್ಲಿದ್ದ. ನಾನು ಇಕ್ಕಟ್ಟಿಗೆ ಸಿಲುಕಿದ್ದು ಅಲ್ಲಿ. ಕತೆಯ ಮೊದಲ ಓದುಗನಾಗಿ ನನ್ನ ಗಂಡನೇ ಮಹಾ ನಗರ ಪಾಲಿಕೆಯ ಕೆಲವು ಶಿಸ್ತುಬದ್ಧ ಪರಿಹಾರೋಪಾಯಗಳ ಕಾರ್ಯಗಳನ್ನು ನನಗೆ ತಿಳಿಸಿಕೊಟ್ಟ. ಸಂತೃಸ್ತರಾದ ಕೆಲವು ನಿರ್ಗತಿಕರಿಗೆ ನಗರಪಾಲಿಕೆ ತನ್ನ ಆವರಣದಲ್ಲಿ ಅತಿ ಕಡಿಮೆ ಬಾಡಿಗೆಗೆ ಪುಟ್ಟ ಪೆಟ್ಟಿಗೆ ಅಂಗಡಿಗಳನ್ನು ಕಟ್ಟಿಸಿಕೊಟ್ಟದ್ದನ್ನು ನನಗೆ ತೋರಿಸಿದ. ಮತ್ತು ತನ್ನ ಮಿತಿಯಲ್ಲಿ ಮಹಾನಗರಪಾಲಿಕೆ ಅವರವರ ಸಾಮಥ್ಯಕ್ಕೆ ಹೊಂದುವಂಥ ಕೆಲಸವನ್ನು ನೀಡದ್ದನ್ನು ನನಗೆ ಅರುಹಿದ. ಆಗ ನನ್ನ ಕತೆಯ ಕೊನೆಯನ್ನು ಹೇಗೆ ಮುಕ್ತಾಯಗೊಳಿಸಬೇಕೆಂಬ ಹೊಳಹು ನನ್ನಲ್ಲಿ ತನ್ನಿಂದ ತಾನೇ ರೂಪುಗೊಂಡಿತು.

ಎಷ್ಟೋ ಜನ ತಮ್ಮ ದೈನಂದಿನ ಬದುಕನ್ನು ತಾವೇ ಹುಡುಕಿಕೊಂಡರು. ಆದರೆ ನನ್ನ ಪಾತ್ರವಾದ ಗುರ್ಯಾನಿಗೆ ಮಹಾನಗರ ಪಾಲಿಕೆಯೇ ಅವನನ್ನು ಆಪ್ತವಾಗಿ ಕಾಣುತ್ತಿದ್ದ ಸಾವುಕಾರ ಮೆಹರವಾಡೆ ಸೇಟ್ಜೀಯವರೇ, ಪಾಲಿಕೆಯ ಅದೇ ರಸ್ತೆ ತೆರವಿನ ಕಾರ್ಯದಲ್ಲೇ ತೊಡಗಿಕೊಳ್ಳಲು ಕಾರಣರಾದರು. ಅದೇ ವಿಪರ್ಯಾಸ. ಬೀದಿಯಲ್ಲೇ ನೆಲೆ ಕಳಕೊಂಡ ಗುರ್ಯಾ, ಮುಂದೆ ಇನ್ನೊಂದು ಬೀದಿಯ ತೆರವು ಕಾರ್ಯದಲ್ಲಿ ಪಾಲ್ಗೊಂಡ. ಆದರೆ ಅವನಿಗೆ ಫೂಟ್ಪಾತಿನ ಜನರ ಕಷ್ಟ ಸುಖ ನೋವು ದುಃಖಗಳ ಅರಿವಿತ್ತು. ಹಾಗಾಗಿಯೇ ಕತೆಯ ಕೊನೆಯಲ್ಲಿ ಅವನು ತನ್ನ ಕಣ್ಣೆದುರು ಅಪ್ಪಚ್ಚಿಯಾಗಿ ಬೀಳಲಿದ್ದ ಇನ್ನೊಬ್ಬ ಶ್ರಮಿಕನ ಕಬ್ಬಿನ ಹಾಲು ತೆಗೆಯುವ ಮಷಿನ್ನನ್ನು ಅದೇ ಜೇಸೀಬಿಯಿಂದ ನಿರ್ನಾಮವಾಗುವ ಹಂತದಲ್ಲಿ ಕಾಪಾಡಲು ಮುಂದಾದ.

ನೋವು ಸಂಕಟಗಳ ಅರಿವು ನಮ್ಮ ಕರ್ತವ್ಯ ಪರತೆಯನ್ನು ಹೆಚ್ಚು ಪ್ರಾಮಾಣಿಕವಾಗಿಸುತ್ತದೆ. ಇವೆಲ್ಲ ನಾನು ನನಗರಿವಿಲ್ಲದೇ ಬರೆದ ಚಿತ್ರಗಳು. ಅದು ಹಾಗೆ ಆ ನಿಟ್ಟಿನಲ್ಲಿ ತಾನೇ ತಾನಾಗಿ ಬರೆಸಿಕೊಂಡಿತು. ಕತೆಗಳಲ್ಲಿ ಕೆಲವು ಹಾಗೆಯೇ, ತಾನೇ ತಾನಾಗಿ ಹೊಳೆದು ಬಿಡುತ್ತದೆ. ನಮ್ಮ ಉತ್ತರ ಕರ್ನಾಟಕದ ಕಡೆಗಳಲ್ಲಿ ವಧು ತನ್ನ ಸೋದರ ಮಾವನನ್ನೇ ಮದುವೆಯಾಗುವ ಪದ್ದತಿಯಿದೆ. ಎತ್ತಿ ಆಡಿಸಿದ ಸೋದರ ಮಾವನೇ ಅಕ್ಕನ ಮಗಳನ್ನು ಮದುವೆಯಾಗಬೇಕಾಗಿ ಬಂದಾಗ, ಅವಳನ್ನು ಮಡದಿಯ ಸ್ಥಾನದಲ್ಲಿ ಕಂಡು ಹೇಗೇಗೋ ಮುಟ್ಟಬೇಕಾದ ಅನಿವಾರ್ಯತೆ ಅವನನ್ನು ಮುತ್ತಿಕೊಂಡಾಗ ಎಂಥದೋ ಮುಜುಗರವಾಗದೇ ಇರದೆಂಬ ನನ್ನ ಬಹು ದಿನದ ಸಂಶಯವನ್ನು ಈ ಕತೆಯಲ್ಲಿ ಒಂದೆರಡೇ ಸಾಲಿನಲ್ಲಿ ಹೇಳಲು ಪ್ರಯತ್ನಿಸಿರುವೆ. ಈ ಅಂಶ ನನ್ನನ್ನು ಕಾಡಿದ್ದು. ಅದು ಈ ಕತೆಯಲ್ಲಲ್ಲದಿದ್ದರೆ ಇನ್ನಾವುದೋ ಕತೆಗಳಲ್ಲಿ ಅಭಿವ್ಯಕ್ತಿಯಾಗೇ ಆಗುತ್ತಿತ್ತು. ಹೀಗೆ ತುಂಬ ದಿನಗಳಿಂದ ಮನಸ್ಸಿನ ಒಳಗೆಲ್ಲೋ ಕಾಡಿದ ತಟ್ಟಿದ ಹಲವಾರು ಸಂಗತಿಗಳು ಬರೆಯುವಾಗ ಒಟ್ಟಾಗುತ್ತವೆ.

ನನ್ನ ದೊಡ್ಡ ಮಗಳ ಮೊದಲ ಹುಟ್ಟು ಹಬ್ಬಕ್ಕೆ ನಾನು ಕೈ ಹೊಲಿಗೆಯಿಂದಲೇ ಒಂದು ಜರಿಯಂಚಿನ ಫ್ರಾಕು ಹೊಲಿದಿದ್ದೆ. ನನ್ನ ಹೊಲಿಗೆಯ ಚಾತುರ್ಯ ಮೆಚ್ಚಿ ನನ್ನ ಗಂಡ ಪ್ರಕಾಶ್, ನಂತರ ಕಂತಿನಲ್ಲಿ ನನಗೊಂದು ಸಿಂಗಾರ್ ಹೊಲಿಗೆ ಮಷಿನ್ನು ಕೊಡಿಸಿದ. ಅದು ಹೊಲಿಯುವಾಗ ಮಾಡುವ ಸದ್ದು, ಅದರ ಎಲ್ಲ ಅವಯವಗಳು, ಅದರ ಕಾರ್ಯ ವೈಖರಿ ಇವೆಲ್ಲ ಕತೆಯಲ್ಲಿ ನನಗೆ ಗುರ್ಯಾನ ಹೊಲಿಗೆ ಮಷಿನ್ನನ್ನು ವಿವರಿಸುವಲ್ಲಿ ಸಹಕಾರಿಯಾಗಿ ಒದಗಿ ಬಂತು. ಗುರ್ಯಾನ ಹೆಂಡತಿ ಚಿನ್ನಮ್ಮ ತನ್ನ ಮಗುವಿಗಾಗಿ ಕೇಳಿದ ಜರಿಯಂಚಿನ ಫ್ರಾಕೇ (ಅದು ನಾನು ನನ್ನ ಮಗಳಿಗೆ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಹೊಲಿದ ಫ್ರಾಕು) ಈ ಕತೆಗೆ ಒಂದು ಸೂಕ್ತ ಹೆಸರಾಗಿ ಹೊಳೆಯಿತು. ಒಂದೆಡೆ ಕಥಾಗೋಷ್ಟಿಯಲ್ಲಿ ಇದೇ ‘ಜರಿಯಂಚಿನ ಫ್ರಾಕು’ ಕತೆಯನ್ನು ವಾಚಿಸಿದಾಗ, ಕನ್ನಡದ ಶ್ರೇಷ್ಠ ವಿಮರ್ಶಕ ಟಿ.ಪಿ ಅಶೋಕ ಅವರು ‘ಜರಿಯಂಚಿನ ಫ್ರಾಕು’ ಇದು ನಮ್ಮ ಹಳೆಯ ಸಂಸ್ಕøತಿಯ ಅವನತಿಯ ಸಂಕೇತವೆಂದು ವಿಶ್ಲೇಷಿಸಿದರು.

ಒಂದು ಕತೆಯನ್ನು ಹೇಗೆ ಬರೆದೆನು ? ಎಂಬುದನ್ನು ಬರೆದು ಮುಗಿದ ಎಷ್ಟೋ ದಿನಗಳ ನಂತರ ಕೇಳಿದರೆ, ಸಂಪೂರ್ಣವಾಗಿ ಹೇಳುವುದೇ ಕಷ್ಟ. ಆಗ ಬರೆದಿಟ್ಟ ಕಚ್ಚಾ ಸಾಗ್ರಿಗಳು ಕಣ್ಣೆದುರು ಇದ್ದರೆ, ಹೀಗೀಗೆ ಬರೆದಿದ್ದೆ ಅಂತ ನಿಖರವಾಗಿ ಹೇಳಬಹುದು. ಅದು ಹೇಗೋ ಹೊಳೆದಿರುತ್ತದೆ. ತಾನೇ ರೂಪುಗೊಂಡಿರುತ್ತದೆ. ಕತೆಯೊಂದು ಮೂಡಿನಿಂತ ನಂತರ ನಮಗೇ ಅಚ್ಚರಿಯೆನಿಸುತ್ತದೆ. ಮೊದಲು ಅಂದುಕೊಂಡದ್ದೇ ಬೇರೆ, ಈಗ ಬರೆದುಬಿಟ್ಟದ್ದೇ ಬೇರೆ ಅನಿಸುತ್ತದೆ. ಮೊತ್ತ ಮೊದಲು ಅಂದುಕೊಂಡ ಘಟನೆಯೊಂದು ಇಡೀ ಕತೆಯಲ್ಲಿ ಒಂದೇ ವಾಕ್ಯದಲ್ಲಿ ಹೇಳಲು ಶಕ್ಯವಾಗಿರಲೂಬಹುದು, ನನ್ನ ಅನೇಕ ಕತೆಗಳಲ್ಲಿ ಹಾಗಾಗಿದೆ. ಆದರೆ ಈ ಕತೆಯಲ್ಲಿ ಹುಬ್ಬಳ್ಳಿಯ ಮುಖ್ಯ ರಸ್ತೆಗಳ ಫುಟ್ಪಾತ್ ತೆರವುಗೊಳಿಸಿದ ತಲ್ಲಣಗಳನ್ನು ಇಡಿಯಾಗಿ ಹಿಡಿದಿಡಬೇಕೆಂದೇ ಹಟತೊಟ್ಟು ಬರೆಯಲು ಕೂತಿದ್ದೆ.

ಹತ್ತು ಪುಟದ ಕತೆಯೊಂದು ಬೇಕಿದ್ದರೆ, ಅದಕ್ಕೆ ಕಚ್ಚಾ ಸಾಮಗ್ರಿಯಾಗಿಯೇ ಒಂದೆಡೆ ಕೂತು ಸುಮಾರು ಇಪ್ಪತ್ತು ಪುಟಗಳಷ್ಟು ಬರೆದು ಬಿಡುತ್ತೇನೆ. ಎಷ್ಟೋ ಸಲ ಆ ಇಪ್ಪತ್ತು ಪುಟಗಳಲ್ಲಿ ಹೊಸದೊಂದೇ ಕತೆ ಹುಟ್ಟಿದ್ದಿದೆ. ಬರೆದ ಇಪ್ಪತ್ತು ಪುಟಗಳೂ ವ್ಯರ್ಥವಾಗಿದ್ದೂ ಇದೆ. ಆದರೆ ಈ ಕತೆಯಲ್ಲಿ ಹಾಗಾಗಲಿಲ್ಲ. ಹುಬ್ಬಳ್ಳಿಯ ರಸ್ತೆ ಅಗಲೀಕರಣದ ವಿವರಗಳೇ ಅಲ್ಲಿದ್ದವು. ಕಡೆಯಲ್ಲಿ ಗುರ್ಯಾನ ಪಾತ್ರ ಹೊಳೆದ ನಂತರ, ಕತೆ ಅವನ ಸುತ್ತಲೇ ಸುತ್ತ ಬೇಕಾಗಿರುವದರಿಂದ, ಅದಕ್ಕೆ ಬೇಕಾದ ವಿವರಗಳನ್ನಷ್ಟೇ ತೆಗೆದುಕೊಂಡೆ. ಅನಗತ್ಯ ವಿವರಗಳನ್ನು ಹೊಡೆದು ಹಾಕುತ್ತ ಹೋದೆ. ಎರಡನೇ ಪ್ರತಿಯಲ್ಲಿ ಕತೆ ತಯಾರಾಯಿತು. ಆದರೆ ಘಟನೆಗಳಿಗೂ ಸನ್ನಿವೇಶಗಳಿಗೂ ಸಂದರ್ಭಗಳಿಗೂ ಪರಸ್ಪರ ಕೊಂಡಿಯೇ ಇರಲಿಲ್ಲ. ಮೂರನೇ ಪ್ರತಿ ಬರೆಯುವಾಗ ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಬರೆಯತೊಡಗಿದೆ.

ಕತೆಯ ಆತ್ಮ ನಿರ್ಮಾಣಗೊಂಡ ನಂತರ ಕತೆಯ ಶರೀರವೂ ಇಲ್ಲಿ ಮಹತ್ವದ್ದು. ಇದು ನನ್ನ ಆರನೇ ಪ್ರತಿಯಲ್ಲಿ ನಿರ್ಮಾಣವಾದ ಕತೆ. ಇದು ಬರಿ ಕತೆಯಲ್ಲ. ವಾಸ್ತವ ಸತ್ಯದ ಶೋಧದೊಂದಿಗೆ ಕಲ್ಪನೆಯ ಎಳೆಗಳು ಸೇರಿಕೊಂಡು ಮೂಡಿ ಬಂದ ದೃಶ್ಯರೂಪಕವೆಂದು ಕನ್ನಡದ ವಿಮರ್ಶಕರನೇಕರು ಮೆಚ್ಚಿಕೊಂಡಿದ್ದು ನನಗೆ ಕತೆಗಾರ್ತಿಯಾಗಿ ಸಾರ್ಥಕವೆನ್ನಿಸಿದೆ.

——————————————-

My KVS
About the Author

Leave a Reply

*