ಬರ್ಫಿನ ಚಾದರ – ಕಾವ್ಯಾ ಕಡಮೆ (ನಾಗರಕಟ್ಟೆ)

ಈ ಹಿಮ
ಇಹದ ನೆತ್ತರು ಮಾಯಿಸಿದ ತಂಪು ಹತ್ತಿ
ದಿನದ ಕಾಫಿಗೆ ಹದವಾಗಿ ಬೆರೆಸಿದ ಸಕ್ಕರೆ
ಜಗದ ಕೊಳೆಯ ತಿಕ್ಕಿ ತಿಕ್ಕಿ ತೊಳೆದ ಸಾಬೂನ ನೊರೆ
ನೆಲದ ಕಾವಿಗೆ ಎದೆಯುಬ್ಬಿಸಿ ನಿಂತ ಸೃಷ್ಟಿ
ಹಲ್ಲುನೋವೆಂದು ದವಡೆಗಿಟ್ಟುಕೊಂಡ ಬರ್ಫಿನ ಹೊರೆ
ನೊರೆ ನೊರೆ ನೊರೆ ಧಾರೆ
ಒಳಗೂ ಹೊರಗೂ
ಈ ಹಿಮ ಕರಗುವತನಕ
ಪ್ರಥ್ವಿಯ ಆಯಸ್ಸು ನಿಂತಿತು
ಪುರದ ಅವಧಿ ನಿಂತಿತು
ನೆತ್ತರ ಮಳೆ ಸುರಿಯುವ ಕೊನೆಯ ದಿನ
ಹೀಗೆ ಸುರಿಯಿತು ಅರಳೆಯ ಮಳೆ
ಭುವಿಯ ಪ್ರಾಣ ಕಾಯುವ ಹೊಣೆ ಈಗ
ಆಗಸ ಜಾರಿಸಿದ ಹತ್ತಿಯ ಮೇಲೆ
ಬರ್ಪಿನ ಚಾದರ ಹೊದ್ದ ವೃಕ್ಷವೇ ನದಿಯಾಗಿ ಹರಿದು
ಹಸೀ ನೆಲ ಹಸಿರಾದಾಗ
ತಂಪು ಹಿಮಮಣಿಯಂಥ ಹತ್ತಿಯ ತುಣುಕು
ನೆಲದ ಒಳಮೈ ಸವರಿ
ಹೊರಗಿನ ಗಾಯ ಮುಚ್ಚಿಹೋಯಿತು
ಈಗ ಊರು ನೆಲ ನದಿ ಎಲ್ಲ
ಇನ್ನೂ ಕರಗದ ಬರ್ಫಿನೊಳಗೆ.
-ಕಾವ್ಯಾ ಕಡಮೆ (ನಾಗರಕಟ್ಟೆ)

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles