ಶಿಕ್ಷಣದ ಮೌಲ್ಯ ಮತ್ತು ಮಾನವ ವಿಕಾಸ – ಸುನಂದಾ ಪ್ರಕಾಶ ಕಡಮೆ

ಶಿಕ್ಷಣ ಪಡೆಯುವದರಿಂದ ಸಿಗುವಂತಹ eನ, ಮತ್ತು ಆ eನದಿಂದ ಪ್ರೇರಕವಾಗುವಂತಹ ಮಾನವ ವಿಕಾಸ, ಇವೆರಡೂ ಒಂದೇ ನಾಣ್ಯದ ಎರಡು ಮುಖಗಳ ಹಾಗೆ ಒಂದಕ್ಕೊಂದು ಬೆಸೆದುಕೊಂಡಿರುವಂಥದ್ದು. ಮತ್ತು ಒಂದು ಗಡಿಯಾರ ಸರಿಯಾಗಿ ನಡಿಯಲು ಎರಡು ಮುಳ್ಳುಗಳ ಅಗತ್ಯ ಹೇಗೆ ಇದೆಯೋ ಹಾಗೆಯೇ eನ ಮತ್ತು ಮಾನವ ವಿಕಾಸ ಒಂದಕ್ಕೆ ಅನುಗುಣವಾಗಿ ಇನ್ನೊಂದು ತಿರುಗಲೇ ಬೇಕು, ಅಂದಾಗ ಮಾತ್ರ ವ್ಯಕ್ತಿಯೊಬ್ಬನ ಪರಿಪೂರ್ಣ ವ್ಯಕ್ತಿತ್ವ ಸಾಕರಗೊಳ್ಳಲು ಸಾಧ್ಯ. ಆಯಾ ವಿಷಯಕ್ಕೆ ಸಂಬಂಧಪಟ್ಟ eನ ಮತ್ತು ಮನಸ್ಸಿನ ವಿಕಾಸ ಇವೆರಡನ್ನೂ ನಾವು ದ್ವಿದಳ ಧಾನ್ಯವನ್ನ ಹೇಗೆ ಪರಸ್ಪರ ಸೀಳಿ ಬೇರ್ಪಡಿಸಿ ಇಡುತ್ತೇವೋ ಹಾಗೆ ಇಟ್ಟುಬಿಟ್ಟಿದ್ದೇವೆ. ಹೆಸರು ಕಾಳನ್ನು ನೆನೆ ಹಾಕಿ ಮೊಳಕೆ ಬಂದ ನಂತರ ಬಿತ್ತಿ ಬೆಳೆ ತೆಗೆಯಬಹುದು ಆದರೆ ಹೆಸರುಬೇಳೆಯನ್ನು ಬಿತ್ತಿ ಬೆಳೆ ತೆಗೆಯಲು ಅಸಾಧ್ಯ. ಇಂದಿನ ಶಿಕ್ಷಣ ಮೌಲ್ಯವು ಹೆಸರುಬೇಳೆ ಆಗಿಬಿಟ್ಟಿದೆ, ಅದು ಹೆಸರುಕಾಳಾಗಿ ಉಳಿದಿಲ್ಲ. ಮೈದುಂಬಿದ ಪರಿಪೂರ್ಣ ಪೌಷ್ಟಿಕತೆಯಾಗಲೀ, ಮಹತ್ತಾದ ಗುರಿಯಾಗಲೀ ಇಂದಿನ ಶಿಕ್ಷಣಕ್ಕೆ ಇಲ್ಲ. ದೊಡ್ಡ ಮೊತ್ತದ ಹಣ ಗಳಿಕೆಯೇ ಅದರ ಒಂದಂಶದ ಕಾರ್ಯಕ್ರಮವಾಗಿದೆ.
ಇಂದಿನ ಆಧುನಿಕ ಶಿಕ್ಷಣ ಅಂದರೆ ಅದು ಒಂದು ಅಮೃತ ತುಂಬಿದ ನಾಗರ ಹಾವಿದ್ದ ಹಾಗೆ. ಎಲ್ಲ ಮಕ್ಕಳಿಗೂ ಭೀತಿ ಹುಟ್ಟಿಸುವ ತೆರನಾಗಿ ಅದರ ಅಸ್ಥಿತ್ವ ಇದೆ. ಆಟ ಆಡಿದಷ್ಟು ಪ್ರೀತಿಯಿಂದ ಯಾವ ಮಗುವೂ ಇಂದು ಶಿಕ್ಷಣ ಕಲಿಯುತ್ತಿಲ್ಲ. ಅದು ಈಗ ಆಟದಷ್ಟು ಸಹಜವಾದ ಕ್ರಿಯೆ ಆಗಿ ಉಳಿದಿಲ್ಲ. ಕಚ್ಚಿಸಿಕೊಳ್ಳುವ ಭೀತಿ ಇಂದಿನ ಎಲ್ಲ ವಿದ್ಯಾರ್ಥಿಗಳ ಮುಖದಲ್ಲೂ ಮನೆ ಮಾಡಿದೆ. ಅಂಥದೊಂದು ಅಮೃತ ತುಂಬಿದ ಹಾವು ಇಂದು ನಮ್ಮ ಮಕ್ಕಳನ್ನು ಸುಮ್ಮನೇ ಮುಟ್ಟಿ ತಟ್ಟಿ ತಾಗಿ ಸವರಿ ಹೋಗ್ತಾ ಇದೆ. ದುರಂತ ಅಂದರೆ ಅದು ಅನಿವಾರ್ಯ ಅಂತಲೇ ನಾವೂ ಕೂಡ ನಂಬಿದ್ದೇವೆ. ಕೇವಲ ಅಂಕದ ಸಲುವಾಗಿ, ಒಂದೊಂದೇ ಒಂದೊಂದೇ ವರ್ಷ ದಾಟಿಸುತ್ತಾ, ಮುಂದೆ ಮುಂದೆ ಕಳಿಸುತ್ತಿದ್ದೇವೆ. ಶಿಕ್ಷಣ ಇಂದಿನ ಮಗುವಿಗೆ ಒಂದು ಹೆರೆಸ್‌ಮೆಂಟ್, ಒಂದು ಒತ್ತಡ, ಒಂದು ಹೊರೆ ಆಗಿದೆ.
ಶಿಕ್ಷಣದಲ್ಲಿ ಕೆಲವು ಸಾಮಾನ್ಯ eನಕ್ಕಾಗಿ, ಕೆಲವು ಮಾನವ ವಿಕಾಸಕ್ಕಾಗಿ ಇರುತ್ತದೆ. ಶಿಕ್ಷಣದಲ್ಲಿ ಶಿಕ್ಷಣ ತಜ್ಞರು ಅಳವಡಿಸಿದ ಮಾನವ ವಿಕಾಸಕ್ಕಾಗಿಯೇ ಇರುವ ಭಾಷಾ ವಿಷಯಗಳು ಅಂದರೆ, ಕನ್ನಡ ಇಂಗ್ಲೀಷ ಹಿಂದಿಯಂತಹ ವಿಷಯಗಳನ್ನು ಇಂದಿನ ಮಕ್ಕಳು, ಶಿಕ್ಷಕರು ಮತ್ತು ಪೋಷಕರು ಕಡೆಗಣಿಸುತ್ತಾ ಇರೋದೇ ಈ ವೈರುಧ್ಯಕ್ಕೆ ಕಾರಣ. ಇಂದು ಪಿ.ಸಿ.ಎಂ.ಬಿ ಬೇಕು. ಅದರ ಜೊತೆಯಾಗಿ ಇರುವ ಎರಡು ಭಾಷಾ ವಿಷಯಗಳು ಬೇಡ. ಪಿ.ಸಿ.ಎಂ.ಬಿ ಗೆ ನೂರಕ್ಕೆ ನೂರು ಅಂಕ ಬಂದು ಬಿಟ್ಟರೆ ಸೀಟೂ ಗ್ಯಾರಂಟಿ, ನೌಕರಿಯೂ ಗ್ಯಾರಂಟಿ. ಸಿ‌ಈಟಿ ರ‍್ಯಾಂಕಿಂಗಿಗೆ ಕನ್ನಡ ಇಂಗ್ಲೀಷುಗಳ ಅಂಕಗಳನ್ನು ಸೇರಿಸುವದಿಲ್ಲ ಅಂತ, ಪರೀಕ್ಷೆಯ ಮೊದಲ ದಿನ ಗೈಡ್ ತಂದು ಓದಿಕೊಂಡು ಪರೀಕ್ಷೆ ಬರೆದು ಮುಗಿಸುವದನ್ನು ಸಹಜ ಅನ್ನುವಂತೆಯೇ ನಮ್ಮ ಮಕ್ಕಳು ಭಾವಿಸಿದಂತಿದೆ. ಹಾಗಾಗಿ eನ ಮತ್ತು ಮಾನವ ವಿಕಾಸ ಇವೆರಡೂ ಎಂದಿಗೂ ಪರಸ್ಪರ ಸೇರದ ಎರಡು ರೈಲು ಕಂಬಿಗಳ ಹಾಗೆ ಒಂದಕ್ಕೊಂದು ಪ್ಯಾರಲಲ್ ಆಗಿ ಚಲಿಸುತ್ತಿದೆ.
ಒಂದು ಪರಿಪೂರ್ಣವಾದ ಮೀನು ಸಾರಿಗೆ, ಉಪ್ಪು ಹುಳಿ ಖಾರ ಮೂರೂ ಸಮ ಪ್ರಮಾಣದಲ್ಲಿ ಹೇಗೆ ಬೀಳಬೇಕೋ ಹಾಗೆಯೇ ನಮ್ಮ ಮಕ್ಕಳಿಗೆ ಬರೀ ಮೆಥೆಮೆಟಿಕ್ಸ್, ಸೈನ್ಸ್ ಅಷ್ಟೇ ಅಲ್ಲ, ಜೊತೆಯಲ್ಲಿರೋವಂಥ ಭಾಷಾ ವಿಷಯಗಳನ್ನೂ ಓದಿ ಒಳಗೆ ತೆಗೆದುಕೊಳ್ಳುವತ್ತ ನಮ್ಮ ಕಾಳಜಿ ಇರಬೇಕು. ಇಂಗ್ಲೀಷ್ ಕನ್ನಡ ಹಿಂದಿ ಇಂತಹ ವಿಷಯಗಳು ಬರಿ ಭಾಷೆಯಾಗಿ ಅಷ್ಟೇ ಅಲ್ಲ, ಇವು ಮಾನವ ವಿಕಾಸಕ್ಕೆ ಸಂಬಂಧಪಟ್ಟ ವಿಷಯಗಳು. ಇಂದು ವ್ಯವಹಾರಕ್ಕಾಗಿ ಮೆಥೆಮೆಟಿಕ್ಸ್ ಹೇಗೆ ಬೇಕೋ, ಉದ್ಯೋಗಕ್ಕಾಗಿ ವಿeನ ಹೇಗೆ ಬೇಕೋ. ಹಾಗೆಯೇ ಮಕ್ಕಳ ಮನಸ್ಸಿನ ವಿಕಾಸಕ್ಕಾಗಿ ಕನ್ನಡ ಇಂಗ್ಲೀಷ ಮತ್ತು ಹಿಂದಿಯಂತಹ ಸಬ್ಜೆಕ್ಟಗಳು ಬೇಕು.
ಪ್ರಾಥಮಿಕ ಶಾಲೆಯ ಪಠ್ಯದಲ್ಲಿ ಭಗತ್ ಸಿಂಗ್ ಅವರ ಕುರಿತು ಪಾಠ ಇರುತ್ತದೆ, ಎಷ್ಟು ಮಕ್ಕಳು ಅದನ್ನು ಆಳದಲ್ಲಿ ಇಳಿಸಿಕೊಂಡು ಕಲೀತಾರೆ? ಭಗತ್ ಸಿಂಗನ ದೇಶ ಪ್ರೇಮವನ್ನು ಮೈ ಝುಂ ಎನ್ನಿಸಿಕೊಂಡು ಓದಿಕೊಂಡ ಹುಡುಗ, ನಾಳೆ ದಿನ ಒಬ್ಬ ಉಗ್ರಗಾಮಿಯಾಗಲಿಕ್ಕೆ ಸಾಧ್ಯವಿಲ್ಲ, ಅಥವಾ ಆ ತರಹದ ಸಮಾಜ ವಿದ್ರೋಹದ ಯೋಚನೆ ಬಂದರೂ ಅದರ ಕುರಿತು ಸಾರಾಸಾರ ಯೋಚಿಸುವ ಶಕ್ತಿಯನ್ನು ಪಡೆದಿರುತ್ತಾನೆ. ಅಂತೆಯೇ ಗಾಂಧಿ ತತ್ವಗಳ ಕುರಿತು ಪಾಠಗಳು ಇರ‍್ತವೆ, ಚಿಕ್ಕವರ ಪಾಠಗಳಲ್ಲಿ ಜಾಣ ಕಾಗೆ, ದುರಾಶೆಯ ನರಿ ಮುಂತಾದ ನೀತಿ ಭೋದಕ ಪಾಠಗಳು ಇದ್ದ ಹಾಗೆಯೇ ದೊಡ್ಡ ತರಗತಿಗಳ ಪಾಠಗಳಲ್ಲಿ ಮಹಾನುಭಾವರ ಆತ್ಮ ಚರಿತ್ರೆಯ ಪುಟಗಳು, ಪ್ರವಾಸ ಕಥನಗಳು, ಲೇಖನಗಳು, ಕತೆಗಳು ಹೀಗೆ ಬೌದ್ಧಿಕ ಹಾಗೂ ಮಾನಸಿಕ ವಿಕಾಸದ ಮಟ್ಟವನ್ನು ಬೆಳೆಸುವ ನಿಟ್ಟಿನಲ್ಲಿ ಹಾಗೂ ಯೋಚನೆಗೆ ಹಚ್ಚುವಂಥ ಸ್ತರದಲ್ಲಿ ಮಕ್ಕಳಿಗೆ ಸ್ಪೂರ್ತಿಯಾಗುತ್ತವೆ. eನದಾಯಕ ಶಿಕ್ಷಣ ಬದುಕುವ ದಾರಿಯನ್ನು ಮಾಡಿಕೊಟ್ಟg, ಮಾನವ ವಿಕಾಸದ ಶಿಕ್ಷಣ ಆ ದಾರಿಯಲ್ಲಿ ಬಿದ್ದ ಕಲ್ಲು ಮುಳ್ಳುಗಳನ್ನು ಸುಲಭದಲ್ಲಿ ದಾಟಲು ಹೇಳಿಕೊಡುತ್ತದೆ.
ಇಂದಿನ ಶಿಕ್ಷಣ ಅನ್ನೋದು, ತಲೆದಿಂಬಿಗೆ ಹಾಕುವ ಕವರ್ ಇದ್ದ ಹಾಗೆ. ಬಣ್ಣ ಮಾಸಿದ ನಂತರ ವರ್ಷಾ ಒಂದೊಂದು ಕವರನ್ನು ಬದಲಿಸೋದು ಮತ್ತು ಒಂದು ಮಗು ಕ್ಲಾಸು ಬದಲಿಸೋದು ಎರಡೂ ಒಂದೇ ಆಗಿದೆ. ಮಾರನೇ ವರ್ಷ ಇನ್ನೊಂದೇ ಹೊಸಾ ಕವರು. ಕಳೆದ ವರ್ಷದ್ದು ಅಲ್ಲೇ ಬಿಟ್ಟು ಮುಂದೆ ಮುಂದೆ ಹೋಗುತ್ತಾ ಇರುತ್ತವೆ. ಈ ಕವರಿನ ಒಳಗಡೆ ನಮ್ಮ ಮಕ್ಕಳು ಸುರಕ್ಷಿತರು. ಯಾವ ಬಿಸಿಯೂ ತಟ್ಟದ ಹಾಗೆ ಒಂದು ಮಾಂಸದ ಮುದ್ದೆ. ಕರಗಲಿಕ್ಕೆ ಸ್ವಲ್ಪವಾದರೂ ಬಿಸಿ ಮುಟ್ಟಿಸಬೇಕು. ಕರಗಿದ ನಂತರ ಅದನ್ನು ಹೇಗೆ ಬೇಕೋ ಹಾಗೆ ತಿದ್ದಿ ತೀಡಿ ಮಾಡಬಹುದು. ಸುಂದರ ಮೂರ್ತಿ ತಯಾರಾಗಬೇಕು ಅಂದರೆ, ಚಾಣದ ಏಟು ಬೀಳಲೇಬೇಕು. ಮಕ್ಕಳಲ್ಲಿ ಹೊಸ ಹೊಸ ಸಂಗತಿಗಳನ್ನು ಮನದಟ್ಟು ಮಾಡಿಸಬೇಕು. ಅವರಲ್ಲಿ ಕುತೂಹಲ ಹುಟ್ಟಿಸಬೇಕು. ಕುತೂಹಲವೇ eನಾರ್ಜನೆಯ ಮೂಲ.
ಒಂದು ಮಗು ಅಕ್ಷರಸ್ಥ ಆದರಷ್ಟೇ ಸಾಲದು. ಅನಕ್ಷರಸ್ಥನಿಗಿಂತ ಓದು ಬರಹ ಬಲ್ಲವನು ಶ್ರೇಷ್ಠನೇ ನಿಜ ಆದರೆ, ಓದಿದ್ದನ್ನು ನೆನಪಿನಲ್ಲಿಟ್ಟುಕೊಳ್ಳುವವನು ಅವನಿಗಿಂತಲೂ ಮುಂದೆ ಇರುತ್ತಾನೆ, ಓದಿದ್ದನ್ನು ಅರ್ಥ ಮಾಡಿಕೊಂಡು ಅರಗಿಸಿಕೊಳ್ಳುವವನು ಇನ್ನೂ ಮುಂದೆ ಇರುತ್ತಾನೆ, ತಾನು ತಿಳಿದದ್ದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವನು ಎಲ್ಲರಿಗಿಂತ ಶ್ರೇಷ್ಠನಾಗುತ್ತಾನೆ. ಅನ್ನುವ ವಿಚಾರವನ್ನು ವಿವೇಕಾನಂದರು ಹೇಳಿದರು. ವಿದ್ಯೆ ಒಂದು ಆಯುಧ ಇದ್ದಂತೆ, ಅದನ್ನು ವಿನಾಶಕ್ಕೂ ಉಪಯೋಗಿಸಬಹುದು. ಅಥವಾ ರಕ್ಷಣೆಗೂ ಬಳಸಬಹುದು. ಕಂಪ್ಯೂಟರ್ ತಜ್ಞನೊಬ್ಬ ಹ್ಯಾಕಿಂಗ್ ಬಳಸಿ ಅನಾಹುತವನ್ನು ತಪ್ಪಿಸಲೂ ಬಹುದು ಅಥವಾ ತನ್ನ ವಿಕೃತಿಯಿಂದ ದೊಡ್ಡ ಅನಾಹುತವನ್ನೇ ತಂದೊಡ್ಡಬಹುದು. ಬಾಂಬು ತಯಾರಿಕೆ ತಜ್ಞನೊಬ್ಬ ಅದರಿಂದ ದೇಶವನ್ನು ರಕ್ಷಿಸಲೂಬಹುದು, ಮನಸ್ಸಿನ ವಿಕೃತಿಯಿಂದ ಒಂದು ದೇಶವನ್ನು ಸುಡಲೂ ಬಹುದು. ಹಾಗಾಗಿ ಯಾವುದೇ ವಿದ್ಯೆಯುಳ್ಳ ವ್ಯಕ್ತಿಗೆ ಸರಿಯಾದ ನೈತಿಕ ಪ್ರಜ್ಞೆ ಇರಬೇಕು. ಅಂತಹ ಒಂದು ನೈತಿಕ ಪ್ರಜ್ಞೆ ಬೆಳೆಯೋದೇ ಮಾನವ ವಿಕಾಸದಿಂದ. ಶಾಲೆ ಕಾಲೇಜುಗಳು ಮುಗಿದ ನಂತರ ಮುಂದೆ ನಾವು ಕಲಿಯುವ ಜೀವನ ಶಿಕ್ಷಣಕ್ಕೂ ಕೂಡ, ಮೊಟ್ಟ ಮೊದಲು ಕಲಿತ ಫೌಂಡೇಶನ್ ಶಿಕ್ಷಣವೇ ಪೂರಕವಾಗಿರುತ್ತದೆ. ಅಂದರೆ ಬೀಜ ಹೇಗಿರತ್ತೋ ಆ ರೀತಿ ಫಲ.
ಊರಲ್ಲಿಯ ನಮ್ಮ ಅಜ್ಜಿ, ತಾನು ಹೊದ್ದುಕೊಳ್ಳುವ ಚಾದರಕ್ಕೆ ಬಲಮೂಲೆಯಲ್ಲೊಂದು ಸದಾ ಸಣ್ಣ ಗಂಟು ಹಾಕಿಕೊಂಡು ಇಡುತ್ತಿದ್ದಳು. ಆ ಗಂಟನ್ನು ಒಮ್ಮೆ ಪರಾಂಬರಿಸಿಯೇ ಅವಳು ದಿನಾ ಆ ಚಾದರವನ್ನು ಹೊದ್ದುಕೊಳ್ಳುತ್ತಿದ್ದಳು. ಯಾಕೆಂದರೆ ಕಾಲಿನ ಕಡೆ ಬರೋ ಚಾದರದ ಬದಿ ಎಲ್ಲಿ ಮಾರನೇ ದಿನ ಮುಖದ ಮೇಲೆ ಬಂದು ಬಿಡುತ್ತೋ ಎಂಬ ಎಚ್ಚರಿಕೆಯ ಗಂಟು ಅದು, ಅವಳ ಅರಿವಿನ ಗಂಟು ಅದು. ಅಂಥದೊಂದು ನೈತಿಕ ಪ್ರಜ್ಞೆಯ ಅರಿವಿನ ಗಂಟು ಎಲ್ಲಿದೆ ಅಂತ ನಮಗೆ ಸದಾ ಗೊತ್ತಿರಬೇಕು. ಯಾವುದು ಉಚ್ಛ ಯೋಚನೆ? ಯಾವುದು ನೀಚ ಯೋಚನೆ? ಯಾವುದು ಕ್ಷಣಿಕ ನೆಮ್ಮದಿ ಕೊಡುವಂಥದು? ಯಾವುದು ಶಾಶ್ವತ ನೆಮ್ಮದಿ ಕೊಡುವಂಥದು? ಎಂಬ ಪ್ರಜ್ಞೆ ಸದಾ ಎಚ್ಚರಿಕೆಯ ಸ್ಥಿತಿಯಲ್ಲಿ ಇರಬೇಕು. ಅದರ ಪರಿeನ ನಮ್ಮಲ್ಲಿ ಜಾಗ್ರತ ಆಗಿರಬೇಕು. ಮುಟ್ಟಿ ನೋಡಿ ಕೊಳ್ಳುತ್ತಾ ಇರಬೇಕು ನಮ್ಮ ಅಜ್ಜಿ ಚಾದರದ ಗಂಟನ್ನು ನೋಡಿಕೊಂಡ ಹಾಗೆ. ಅಂದಾಗ ಮಾತ್ರ ಮಜ್ಜಿಗೆಯೊಳಗಿನ ಪೂರ್ಣ ಸತ್ವ ಹೀರಿಕೊಂಡು ಮೇಲೆ ಬೆಣ್ಣೆ ತೇಲೋ ಹಾಗೆ ಮನಸ್ಸಿನ ವಿಕಾಸ ಉಂಟಾಗಲು ಸಾಧ್ಯ. ಮಜ್ಜಿಗೆ ಗರಡುವ ಕೆಲಸ ಮಾತ್ರ ನಮ್ಮ ನಮ್ಮ ಅನುಭವ ಲೋಕವೇ ಮಾಡಬೇಕು.
ಯಾವಾಗಲೂ ಹಣ ಅನ್ನುವ ವಸ್ತು ನಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಣದಿಂದ ಹಾಸಿಗೆ ಸಿಗುತ್ತದೆ, ಆದರೆ ನಿದ್ರೆ ಸಿಗುವುದಿಲ್ಲ. ಹಣದಿಂದ ನಾಗರಿಕತೆ ದೊರೆಯುತ್ತದೆ, ಆದರೆ ಸಂಸ್ಕೃತಿ ದೊರೆಯುವದಿಲ್ಲ. ಐಶ್ವರ್ಯ ಉಪ್ಪು ನೀರಿನಂತೆ, ಕುಡಿದಷ್ಟೂ ಬಾಯಾರಿಕೆ ಜಾಸ್ತಿಯಾಗುತ್ತದೆ. ನೆಮ್ಮದಿಗಳಲ್ಲಿ ಅನೇಕ ಬಗೆಗಳಿವೆ. ಕೆಲವರು ಕೇವಲ ಹಣ ಮತ್ತು ಒಡವೆ ಇದ್ದುಬಿಟ್ಟರೆ ನೆಮ್ಮದಿಯಾಗಿರಬಲ್ಲರು. ತಾಟಿನಲ್ಲಿ ಅನ್ನ ಬಡಿಸಿಕೊಂಡಿದ್ದಕ್ಕೆ, ಕಲಸಿಕೊಳ್ಳಲು ಸಾರು ಬೇಕೇ ಬೇಕು. ಅನ್ನಕ್ಕೆ ಹದವಾಗಿ ಕಲಿಸಿಕೊಳ್ಳುವಷ್ಟು ಹಿತವಾದ ಸಾರಿನ ಅಗತ್ಯ ಎಲ್ಲರಿಗೂ ಇದೆ. ತುಂಬಾ ರುಚಿ ಇದೆ ಅಂತ ಅನ್ನಕ್ಕಿಂತ ಸಾರನ್ನೇ ಹೆಚ್ಚು ಸುರಿದುಕೊಂಡು ತಿಂದರೆ, ಶರೀರದ ಆರೋಗ್ಯಕ್ಕೆ ಹೇಗೆ ಒಳ್ಳೆದಲ್ಲವೋ ಹಾಗೇ ನಮ್ಮ ಮಾನಸಿಕ ಆರೋಗ್ಯಕ್ಕೆ ಅನವಶ್ಯಕ ಹಣ ಒಳ್ಳೇದಲ್ಲ. ಅಂಥ ಅನಗತ್ಯ ಸಾರಿನಿಂದ ನಾವು ಆದಷ್ಟು ಸುರಕ್ಷಿತ ಅಂತರದಲ್ಲಿ ಇರಬೇಕು. ಅನವಶ್ಯಕ ಹಣ ಒಟ್ಟಾಗಿದೆ ಅಂದರೆ, ಅದನ್ನು ಸಮಾಜ ಸೇವೆಯಂಥ ಕಾರ್ಯಗಳಲ್ಲಿ ಕೂಡ ಬಳಕೆ ಮಾಡಬಹುದು. ಸಾಮಾಜಿಕವಾಗಿ ತುಡಿಯೋದು ಅಂದರೆ, ನನಗಾಗಿ ಅಷ್ಟೆ ಅಲ್ಲದೇ, ನನ್ನ ಕುಟುಂಬಕ್ಕಾಗಿ ಅಷ್ಟೇ ಅಲ್ಲದೇ, ಇನ್ನೊಬ್ಬರ ಸೇವೆಗಾಗಿ ತುಡಿಯೋದೇ ಮಾನವ ವಿಕಾಸದ ಮೊದಲ ಮೆಟ್ಟಿಲು ಅದು.
ಇದಕ್ಕೆ ಮತ್ತೊಂದು ಊಟದ್ದೇ ಉದಾಹರಣೆ ಕೊಡಬೇಕೆಂದರೆ, ನಮ್ಮ ಅಮ್ಮ ವಾರಕ್ಕೊಂದು ದಿನ ಆರೋಗ್ಯದ ದೃಷ್ಠಿಯಿಂದ ಹಾಲನ್ನವನ್ನೋ ಮಜ್ಜಿಗೆ ಅನ್ನವನ್ನೋ ಊಟ ಮಾಡುತ್ತಾಳೆ. ಅವಳು ಫುಲ್ ಹೆಲ್ದೀ. ನಮಗೆ ಹಾಗಲ್ಲ, ನಮಗೆ ಇಂದು ಭರಪೂರ್ ಸಾರು ಬೇಕು, ಅದಕ್ಕೇ ವಾರಕ್ಕೆರಡು ದಿನ ಆರೋಗ್ಯ ಸರೀ ಇರೂದಿಲ್ಲ. ಅಂದರೆ ಇಲ್ಲಿ ನಾನು ಹೇಳಲು ಹೊರಟಿರೋದು ಏನೆಂದರೆ, ವಾರದಲ್ಲಿ ಆರೂ ದಿನ ನಮಗಾಗಿ ಸ್ವಂತದ ಅಭಿವೃದ್ಧಿಗಾಗಿ ದುಡಿದರೆ, ಒಂದೇ ಒಂದು ದಿನ ಆದರೂ, ನಮ್ಮ ಅಮ್ಮ ಹಿತವಾಗಿ ಹಾಲನ್ನ ಉಂಡ ಹಾಗೆ, ಅಟ್ಲೀಸ್ಟ್ ಉಳ್ಳವ ಆದ್ರೂನೂ ಸ್ವಾರ್ಥವನ್ನು ಒತ್ತಾಯದಿಂದ ಬದಿಗೊತ್ತಿ ನಿಸ್ವಾರ್ಥದಿಂದ, ಇನ್ನೊಬ್ಬರಿಗಾಗಿ, ಸಮಾಜಕ್ಕಾಗಿ, ನಿರ್ಗತಿಕರಿಗಾಗಿ, ಸಹಾಯ ಹಸ್ತ ನೀಡುವ ನಿಟ್ಟಿನಲ್ಲಿ ನಮ್ಮ ಮನಸ್ಸು ಹೆಚ್ಚು ಹೆಚ್ಚು ತುಡೀಬೇಕಿದೆ. ಹುಣಸೆ ಹಣ್ಣಿನ ಒಂದು ಬೀಜವನ್ನ ತಿನ್ನಲೂ ಬಳಸಬಹುದು. ಅಲಂಕಾರಕ್ಕೂ ಬಳಸಬಹುದು, ಆಟಕ್ಕೂ ಉಪಯೋಗಿಸಬಹುದು. ಆದರೆ ಅದರ ನಿಜವಾದ ಉದ್ದೇಶ ಸಫಲವಾಗುವುದು ಅದನ್ನು ಬಿತ್ತಿ ಮರವಾಗಿ ಬೆಳೆಯಲು ಅವಕಾಶ ಮಾಡಿ ಕೊಟ್ಟಾಗ ಮಾತ್ರ. ಜೀವನವೂ ಕೂಡ ಸಫಲತೆಯನ್ನು ಪಡೆಯುವದು ಅದರ ನೈಜ ಉದ್ದೇಶಕ್ಕಾಗಿ ಅದನ್ನು ಬಳಸಿದಾಗ ಮಾತ್ರ. ಈಗ ಗಾಂಧೀಜಿ- ತಮ್ಮ ಜೀವಿತಾವಧಿಯ ೭೯-೮೦ ವರ್ಷಗಳಲ್ಲಿ ತನಗಾಗಿ ತಾನು ಎಷ್ಟು ಕಾಲ ಬದುಕಿದರು, ಮತ್ತು ಇತರಿಗಾಗಿ -ದೇಶಕ್ಕಾಗಿ ಎಷ್ಟು ಕಾಲ ವ್ಯಯಿಸಿದರು, ಅನ್ನುವ ಲೆಕ್ಕಾಚಾರದ ಮೇಲೆ ಅವರ ಬದುಕಿನ ಯಶಸ್ಸು ನಮಗೆ ಕಾಣುತ್ತದೆ.
ಸಮಾಜದ ಮೇಲೆ ಪ್ರೀತಿ ಅಕ್ಕರೆ ಅನ್ನುವಂಥದ್ದು, ಶಿಕ್ಷಣದ ಜೊತೆ ಜೊತೆಯಾಗೇ ಕಲಿತ ಜೀವನದ ಮೌಲ್ಯಗಳಿಂದ ಬರುವಂಥದ್ದು. ಡಾ. ಶ್ರೀಧರ ಶೆಟ್ಟಿಯವರು ಹುಬ್ಬಳ್ಳಿಗೆ ಬಂದಾಗ ತಮ್ಮ ಭಾಷಣದಲ್ಲಿ ಒಂದು ಮಾತನ್ನು ಹೇಳಿದ್ದರು. ಮೌನವನ್ನ ಮುರೀ ಬೇಕು ಅಂತ. ಸೈಲೆನ್ಸ್ ಅನ್ನ ಬ್ರೇಕ್ ಮಾಡ್ಬೇಕು. ಪ್ರಜಾಪ್ರಭುತ್ವ ರಾಷ್ಟ್ರ ಇದು. ಇಲ್ಲಿ ಅನ್ಯಾಯವನ್ನ ಸಹಿಸಿಕೊಂಡು ಸುಮ್ಮನಿದ್ದೇವೆ ಅಂದ್ರೆ, ಅದು ಇನ್ನೂ ದೊಡ್ಡ ಅಪರಾಧ. ಸಮಾಜದ ಅಂಕುಡೊಂಕುಗಳನ್ನು ಎತ್ತಿ ಎತ್ತಿ ಹೇಳಬೇಕು, ಅಮಾಯಕರಿಗೆ ಅನ್ಯಾಯ ಆಗುತ್ತಾ ಇದ್ದರೆ, ನೋಡಿಕೊಂಡು ಸುಮ್ಮನಿರೋದು, ಇನ್ನೂ ದೊಡ್ಡ ಕ್ರೈಮ್. ಹೋರಾಡಬೇಕು, ಆಗಲಿಲ್ಲ ಅಂತಂದರೆ, ಆ ಕುರಿತು ಒಂದು ನಾಟಕವನ್ನಾದರೂ ಆಡಿ ಜನಜಾಗ್ರತಿ ಮೂಡಿಸಬಹುದು, ಒಂದು ಲೇಖನವನ್ನಾದರೂ ಬರೆದು ಪ್ರಕಟಿಸಬಹುದು. ಲೇಖನಿಯೂ ಒಂದು ಖಡ್ಗಕ್ಕೆ ಸಮಾನವೇ. ಪೆನ್ನಿನ ಮೂಲಕ ಜಾಗ್ರತಿ ಮೂಡಿಸುವುದೂ ಒಂದು ಅಕ್ಷರ ಕ್ರಾಂತಿಯೇ. ಅದೂ ಒಂದು ಹೋರಾಟವೇ.
ಒಬ್ಬ ವ್ಯಕ್ತಿಯ ಮನಸ್ಥಿತಿಯನ್ನು ಏಕಕಾಲಕ್ಕೆ ಒಳಗೆ ಅವನ ಕುಟುಂಬ ಹಾಗೂ ಹೊರಗೆ ಅವನ ಒಡನಾಟದ ಸ್ನೇಹಿತರ ಬಳಗ ರೂಪಿಸುತ್ತ ಇರುತ್ತದೆ. ಮಗುವನ್ನು ಒಬ್ಬ ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ಧಾರಿಯುಳ್ಳ ಕುಟುಂಬದ ಹಿರಿಯರು ಮೊದಲು ವಿಶಾಲ ಮನಸ್ಸಿನವರಾಗಿರಬೇಕು. ಇಲ್ಲದಿದ್ದರೆ, ನೂಲಿನಂತೆ ಸೀರೆ. ಮಗ್ಗದಲ್ಲಿ ಹೆಣೆಯುವ ನೂಲೇ ಲಡ್ಡಾಗಿದ್ದರೆ, ಅದರಿಂದ ತಯಾರಾದ ಸೀರೆ ಎಷ್ಟು ದಿನ ಬಾಳಿಕೆ ಬಂದೀತು?
ಪಾಪ, ಪುಣ್ಯ, ನರಕದ ಭೀತಿ ಇಂದು ನಮ್ಮನ್ನು ಪೊರೆಯುತ್ತಿಲ್ಲ. ಅದಕ್ಕೇ ಅತ್ಯಾಚಾರಗಳು ನಡೆಯೋದು. ಭ್ರಷ್ಟಾಚಾರಗಳು ತಾಂಡವವಾಡೋದು. ಅವಕ್ಕೆಲ್ಲ ಕಠಿಣ ಕಾನೂನುಗಳಿವೆ. ಆದರೆ ನಮ್ಮ ಮಾನಸಿಕ ಭೀತಿಗೆ, ಸಂಕುಚಿತ ಮನೋಭಾವನೆಗೆ ಯಾವ ಕಾನೂನುಗಳೂ ಇಲ್ಲ. ಶನಿವಾರ ಮಾಂಸಾಹಾರ ತಿಂದರೆ, ಏನಾಗುತ್ತದೆ? ಏನೂ ಆಗುವುದಿಲ್ಲ, ಅಂತ ಗೊತ್ತಿರಬೇಕು. ಆದರೆ- ತಿನ್ನಬಾರದು. ವಾರದಲ್ಲಿ ಏಳೂ ದಿನ ಮಾಂಸಾಹಾರ ಶರೀರದ ಪಚನ ಕ್ರಿಯೆಗೆ ಯೋಗ್ಯ ಅಲ್ಲ. ವಾರದಲ್ಲಿ ಎರಡೋ ಮೂರೋ ದಿನಗಳು ಮಾಂಸಾಹಾರ ತ್ಯಜಿಸೋಣ. ಅಷ್ಟೇ ಅಲ್ಲವೆ? ಹಿಂದೂ ಹುಡುಗನೊಬ್ಬ ಮುಸ್ಲಿಂ ಹುಡುಗಿಯನ್ನು ಮದುವೆಯಾದರೆ, ಏನಾಗುತ್ತದೆ? ಏನೂ ಆಗುವುದಿಲ್ಲ. ಮುಂದೆ ನಿರಂತರ ನಡೆಸಿಕೊಂಡು ಹೋಗುವ ಸಂಸಾರದಲ್ಲಿ ಹೊಂದಾಣಿಕೆ ಕಷ್ಟ ಆಗುತ್ತದೆ. ಪರಸ್ಪರ ಭಾಷೆ ಬೇರೆ ಇರತ್ತೆ, ಆಹಾರ ಪದ್ದತಿಗಳು ಬೇರೆ ಇರತ್ತೆ, ರೀತಿ ರಿವಾಜುಗಳು ಬೇರೆ ಇರತ್ತೆ, ಅಭಿರುಚಿಗಳು ಬೇರೆ ಇರತ್ತೆ, ಇಬ್ಬರೂ ಬೆಳೆದ ಕೌಟುಂಬಿಕ ಪರಿಸರ ಬೇರೆ ಇರತ್ತೆ. ಮುಂದೊಂದು ದಿನ ರೋಗ ಬರದಂತೆ ಮೊದಲೇ ಎಚ್ಚರಿಕೆ ತೆಗೆದುಕೊಳ್ಳುವ ಕ್ರಮ ಇದು. ಮತ್ತು ಆ ಕಾರಣಕ್ಕಾಗೇ ನಾವು ಅಂತರ್ಜಾತಿ ವಿವಾಹಗಳನ್ನು ನಮ್ಮ ಆಯ್ಕೆಯಾಗಿ ಇಟ್ಟುಕೊಳ್ಳದೇ ಇರುವುದು. ಹೀಗೆ ಯಾವುದೇ ನಂಬಿಕೆಗಳನ್ನ ಅರಿವಿನ ಆಳದಲ್ಲೇ ವಿಶ್ಲೇಷಿಸಬೇಕು ಅನಿಸುತ್ತದೆ.
ಮೂಢನಂಬಿಕೆಗಳನ್ನು ವೈeನಿಕ ದೃಷ್ಠಿಕೋನದಿಂದಲೇ ವಿಮರ್ಶಿಸುವ ರೂಢಿಯನ್ನು ನಾವು ನಮ್ಮ ಮಕ್ಕಳಿಗೆ ಇವತ್ತು ಬೆಳೆಸಬೇಕಾಗಿದೆ. ಅಜ್ಜ ಆಲದ ಮರ ನೆಟ್ಟು ಕೊಟ್ಟಿದ್ದ, ಹಾಗಾಗಿ ನಾನು ಅಲ್ಲೇ ತೂಗಾಡಬೇಕು ಅಂದರೆ, ಜಗತ್ತು ಮುಂದೆ ಮುಂದೆ ಹೋಗ್ತಾ ಇರ‍್ತದೆ. ನಾವಿಲ್ಲಿ ಇನ್ನೂ ಊರಿಂದ ಕುಚ್ಚಿಗೆ ಅಕ್ಕಿ ತಂದು ಗಂಜಿ ಮಾಡಿಸಿ, ಉಂಡೇ ಬೇರೆ ಕೆಲಸ ಅಂತ ಅದೇ ಮರಕ್ಕೆ ತೂಗಾಡ್ತಾನೇ ಇರ‍್ತೀವಿ. ವೈeನಿಕ ದೃಷ್ಠಿಕೋನಗಳು ತುಂಬಿದ ಸಂಸ್ಕೃತಿಯೊಂದರ ಅನಾವರಣ ಇಂದು ಆಗಬೇಕಾಗಿದೆ. ನೆಮ್ಮದಿ ಬೇಕು ಅಂದರೆ, ನಮ್ಮ ನಂಬಿಕೆಗಳು ವೈeನಿಕವಾಗಿ ಪರಿವರ್ತನೆಗೊಳ್ಳಬೇಕಿವೆ. ನಮ್ಮ ಬಗ್ಗೆ ನಮಗೆ ಉದಾತ್ತ ಕಲ್ಪನೆ ಇದ್ದರೆ ಮಾತ್ರ ನಮ್ಮ ಜೀವನವೂ ಉದಾತ್ತವಾಗುತ್ತದೆ. ಆಗ ನೈತಿಕತೆಯು ಸ್ವಾಭಾವಿಕವಾಗಿ ನಮ್ಮ ಜೀವನದೊಂದಿಗೆ ಒಂದಾಗಿಬಿಡುತ್ತದೆ. ಈ ರೀತಿ ಸ್ವಪ್ರೇರಣೆಯಿಂದ ನೀತಿವಂತರಾಗಿರಬೇಕಾದರೆ, ನಮ್ಮ ವ್ಯಕ್ತಿತ್ವದ ಪರಿವರ್ತನೆಯುಂಟಾಗಬೇಕು.
ಈ ನಿಟ್ಟಿನಲ್ಲಿ ನನಗನಿಸುವದೆಂದರೆ, ನಮಗೆಲ್ಲ ಆಂತರಿಕ ಸ್ವಾತಂತ್ರ್ಯ ಬೇಕು ಅಂತ. ಅಂದರೆ, ನಮ್ಮೊಳಗೆ ನಾವು ಯಜಮಾನರಾಗಬೇಕು. ನಮ್ಮ ಮನಸ್ಸನ್ನು ನಾವೇ ಆಳಬೇಕು. ಇನ್ನೊಬ್ಬ ಹೊರಗಿನ ವ್ಯಕ್ತಿಗೆ ನಮ್ಮ ಮನಸ್ಸನ್ನು ಆಳಲು ಬಿಡಬಾರದು. ಅದು ನಮ್ಮ ಮನಸ್ಸಿನ ನಿಜವಾದ ಮುಕ್ತಿ. ಇದನ್ನು ಒಂದು ಉದಾಹರಣೆಯಿಂದ ಹೇಳಬೇಕೆಂದರೆ, ಎಲ್ಲವೂ ಉಳ್ಳ ವ್ಯಕ್ತಿಯೊಬ್ಬ ನಾಟಕದಲ್ಲಿಯೋ ಸಿನೆಮಾದಲ್ಲಿಯೋ ಭಿಕ್ಷುಕನ ಪಾತ್ರದಲ್ಲಿ ನಟಿಸುವದಕ್ಕೂ, ದಾರಿಯಲ್ಲಿ ನಡೆಯುವ ನಿಜವಾದ ಭಿಕ್ಷುಕನೊಬ್ಬನ ಮನಸ್ಥಿತಿಗೂ ಎಷ್ಟು ವ್ಯತ್ಯಾಸ? ಎರಡು ಸಂದರ್ಭಗಳಲ್ಲೂ ದೃಶ್ಯ ಒಂದೇ, ಮಾತು ಒಂದೇ ಆಗಿದ್ದರೂ, ಒಬ್ಬನು ತನ್ನ ಭಿಕ್ಷುಕನ ಪಾತ್ರದಿಂದಲೇ ಆನಂದಿಸುವವನು, ಹೆಸರು ಹಣ ಗಳಿಸುವವನು. ಮತ್ತೊಬ್ಬನು ಅದರಿಂದಲೇ ದುಃಖಿತನಾದವನು. ಈ ಅಂತರಕ್ಕೆ ಕಾರಣ ಅಂದರೆ, ಇಲ್ಲಿ ಒಬ್ಬನು ಮುಕ್ತ, ಇನ್ನೊಬ್ಬನು ಅದಕ್ಕೆ ಬದ್ಧ. ಇಲ್ಲಿ ನಾನು ನಮ್ಮ ನಮ್ಮ ಮನಸ್ಸಿನ ಮುಕ್ತಿ ಮತ್ತು ಬದ್ಧ ಮನಸ್ಥಿತಿಯ ಕುರಿತು ಹೇಳುತ್ತಿದ್ದೇನೆ.
ಸಿನೆಮಾದಲ್ಲಿ ಪಾತ್ರ ಮಾಡುವವನಿಗೆ ಇದು ನಿಜ ಅಲ್ಲ, ಕೇವಲ ನಟನೆ ಅಂತ ಗೊತ್ತಿದೆ. ಆದರೆ ನಿಜವಾದ ಭಿಕ್ಷುಕನಿಗೆ ಇದು ತನ್ನ ನಿಜ ಸ್ವರೂಪ, ಇದು ಬೇಕಾಗಲೀ ಬೇಡವಾಗಲೀ ಅವನು ಸಹಿಸಲೇಬೇಕು. ಇದನ್ನ ಭೌತಿಕವಾಗಿ ಹೇಳುತ್ತಿಲ್ಲ. ಮಾನಸಿಕವಾಗಿ ಹೇಳುತ್ತಿದ್ದೇನೆ. ಅಂದರೆ, ನಾವು ಮಾನಸಿಕವಾಗಿ ನಿಜಭಿಕ್ಷುಕರಾಗಲು ಹೋಗದೇ, ಮಾನಸಿಕವಾಗಿ ಭಿಕ್ಷುಕನ ಪಾತ್ರವನ್ನಷ್ಟೇ ಮಾಡಿರಬೇಕು. ಇದನ್ನೇ ನಾನು ಅಂತರಂಗದ ಸ್ವಾತಂತ್ರ್ಯ ಅಂದಿದ್ದು. ಅಂತರಂಗದ ಸ್ವಾತಂತ್ರ್ಯ ಅಂದರೆ ಅಲ್ಲಿ ನಮಗೆ ನಾವೇ ಯಜಮಾನರು. ಯಾರ ಹಂಗಿನಲ್ಲೂ ನಮ್ಮ ಮನಸ್ಸು ಇರುವುದಿಲ್ಲ. ಶಾಶ್ವತ ನೆಮ್ಮದಿಯ ದಾರಿ ಇದು. ಮೂಢ ನಂಬಿಕೆಗಳನ್ನು ತೊರೆಯುವದೂ ಹೀಗೇ. ಯಾವುದೇ ಸಂಗತಿಗಳಲ್ಲೂ ನಮಗೆ ನಮ್ಮದೇ ಆದ ತರ್ಕಬದ್ಧವಾದ ಎಲ್ಲರಿಗೂ ಒಪ್ಪಿಗೆಯಾಗುವ ವೈeನಿಕವಾದ ಸ್ವತಂತ್ರ್ಯ ನಿಲುವು ಇರಬೇಕು. ನಮ್ಮ ಮನಸ್ಸು ಮುಕ್ತ ಇರಬೇಕು. ಯಾವ ಪಾತ್ರ ಬೇಕೋ ಆ ಪಾತ್ರ ನಿರ್ವಹಿಸೋ ತರಹ ಇರಬೇಕು, ಅದೇ ನಾವಾಗಿರಬಾರದು. ಇದು ಆಂತರಿಕ ಸ್ವಾತಂತ್ರ್ಯ. ಇದು ಕೂಡ ನಮ್ಮ ನಮ್ಮ ಮನಸ್ಸಿನ ವಿಕಾಸದಿಂದ ಮಾತ್ರ ಸಾಧ್ಯ. ಇದಕ್ಕೆ ಮೂಲ ಔಷಧಿಯೇ ಮಾನವ ವಿಕಾಸ. ಆ ಔಷಧಿ ದೊರಕುವುದೇ ನಾನು ಮೊದಲಿಗೆ ಹೇಳಿದ ಪರಿಪೂರ್ಣ ಶಿಕ್ಷಣದಿಂದ.
ಈ ಎಲ್ಲದರ ಹಿನ್ನೆಲೆಯಲ್ಲಿ, ನಾವು ನಮ್ಮ ನಮ್ಮ ಯೋಚನೆಯ ಶಕ್ತಿಯನ್ನು ಹೆಚ್ಚಿಸಿಕೊಳ್ಳೋಣ, ಬುದ್ಧಿಯನ್ನು ಹರಿತಗೊಳಿಸಿಕೊಳ್ಳೋಣ, ಸಂವೇದನೆಯನ್ನು ಚುರುಕುಗೊಳಿಸಿಕೊಳ್ಳೋಣ, ಮೌಲ್ಯಾಧಾರಿತ ಶಿಕ್ಷಣದೊಂದಿಗೆ ಮಾನವ ವಿಕಾಸವನ್ನೂ ಬೆಸೆಯೋಣ, ನೆಮ್ಮದಿಯ ಕ್ಷಿತಿಜಕ್ಕೆ ಹತ್ತಿರವಿದ್ದು, ಸಾರ್ಥಕ ಜೀವನಕ್ಕಾಗಿ ಹಂಬಲಿಸೋಣ ಎಂದು ಆಶಿಸುತ್ತೇನೆ.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles