ಹಸಿವಿಲ್ಲದವರ ಹಸಿರು ದೇಶದಲ್ಲಿ ನಿಂತು – ಕಾವ್ಯಾ ಸಂತೋಷ ನಾಗರಕಟ್ಟೆ

ಹೊರರಾಜ್ಯಗಳಲ್ಲಿ ಸುತ್ತಾಡುವಾಗ ಕನ್ನಡ ಭಾಷೆ ಕೇಳಿದರೆ ಮತ್ತು ಪರದೇಶದಲ್ಲಿ ಪ್ರಯಾಣಿಸುವಾಗ ಸೀರೆಯುಟ್ಟವರು ಕಣ್ಣಿಗೆ ಬಿದ್ದರೆ ಎಂಥದೋ ಆತ್ಮೀಯತೆ ಅದೇ ಕ್ಷಣ ಬೆಳೆದುಬಿಡುವುದು. ನೆವಾರ್ಕ್ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಇಮಿಗ್ರೇಶನ್ ಸರತಿಯಲ್ಲಿ ನಿಂತಾಗ “ಬಂದ್ ಮುಟ್ಟೀದೆ ಆಯಿ. ಇಲ್ಲಾ, ಮಳೀ ಏನ್ ಇಲ್ಲಿಲ್ಲೆ. ಅಲ್ ಹ್ಯಾಂಗ?” ಎಂದು ಫೋನಿನಲ್ಲಿ ಪಿಸುಗುಟ್ಟಿದ್ದ ತಿಳಿಹಸಿರು ಕುರ್ತಾ ತೊಟ್ಟ ಹುಡುಗಿ ನನಗೆ ಸಾಕ್ಷಾತ್ ಕನ್ನಡಮ್ಮನಂತೆ ಕಂಡಿದ್ದು ಸುಳ್ಳಲ್ಲ.
ಸಹಜ ಉಸಿರಿನಷ್ಟೇ ಸರಾಗವಾಗಿ ಕನ್ನಡದಲ್ಲಿ ಯೋಚಿಸುವುದನ್ನು ಕನಸು ಕಾಣುವುದನ್ನೂ ಸುತ್ತಲ ಪರಿಸರದಿಂದಲೇ ಕಲಿತ ನನಗೆ ಕನ್ನಡ ಭಾಷೆ ಖಾಸಗೀ ದೋಸ್ತನೊಟ್ಟಿಗಿನ ಆಪ್ತ ಸಂವಾದದ ಹಾಗೆ. ನನಗೆ ಹೊಟ್ಟೆನೋವು ಎಂದು ನಾನು ಕನ್ನಡದಲ್ಲಲ್ಲದೇ ಬೇರಾವ ಭಾಷೆಯಲ್ಲೂ ಹೇಳಲಾರೆ.
ಕುವೆಂಪು- ಅನಂತಮೂರ್ತಿ- ಬೈರಪ್ಪ- ಮಾಸ್ತಿ- ತೇಜಸ್ವಿ ಅಂತ ಭೇದ ಮಾಡದೇ ಓದಿಕೊಂಡ ಸಂತೋಷನನ್ನು ಮದುವೆಯಾಗಿ ನ್ಯೂಜೆರ್ಸಿಯ ಹೈಲ್ಯಾಂಡ್‌ಪಾರ್ಕಿಗೆ ಬಂದಾಗ ಕನ್ನಡವೆನ್ನುವುದು ಇವನ ಜತೆ ಸಂಭಾಷಣೆಗೆ ಬಿಟ್ಟರೆ ಅಮ್ಮನ ಒಂದು ದೂರವಾಣಿ ಕರೆಯ ಅನತಿ ದೂರದಲ್ಲಿದೆ ಅಂತನ್ನಿಸಿತ್ತು. ಕನ್ನಡ ಯತೇಚ್ಛವಾಗಿ ದೊರೆಯುವ ಜಾಲತಾಣಗಳು, ಕನ್ನಡ ಪತ್ರಿಕೆಗಳ ಅಂತರ್ಜಾಲ ಆವೃತ್ತಿಗಳು, ಅವಧಿ- ಕೆಂಡಸಂಪಿಗೆ- ಚುಕ್ಕುಬುಕ್ಕು ಮುಂತಾದ ಪೋರ್ಟಲ್‌ಗಳು, ಮನೆಯಿಂದ ಹೊತ್ತುತಂದ ಹತ್ತಾರು ಪುಸ್ತಕಗಳು ನನ್ನ ಉಸಿರುಳಿಸಿದವು. ಹೀಗೆ ಜಗದ ಇನ್ನೊಂದು ಮೂಲೆಯಲ್ಲಿ ಕುಳಿತು ಆರಿಫ್‌ರ ’ಬೆಂಕಿಗೆ ತೊಡಿಸಿದ ಬಟ್ಟೆ’, ತೇಜಶ್ರೀ ಅವರ ’ಉಸ್ರುಬುಂಡೆ’ ಸಂಕಲನಗಳನ್ನು ಓದುವಾಗ, ಚುಕ್ಕುಬುಕ್ಕು ಪೋರ್ಟಲ್ಲಿನಲ್ಲಿ ವೆಂಕಟೇಶಮೂರ್ತಿಯವರು ವಿವರಿಸುವ ಕುಮಾರವ್ಯಾಸ ಭಾರತದ ಒಂದೊಂದೇ ಬಿಡಿಪದ್ಯಗಳ ಕುರಿತು ಗ್ರಹಿಸುವಾಗ ನನಗೆ ಕನ್ನಡವೆನ್ನುವುದು ನನ್ನೊಳಗಿನ ಖಾಸಗಿಯಾದುದೊಂದು ವೈಯಕ್ತಿಕ ನೆಲೆ ಎನ್ನುವ ಭಾವ ಮೂಡುತ್ತದೆ.
ಕಳೆದ ವಾರ ನಮ್ಮ ಮನೆಯ ಹತ್ತಿರವೇ ಇರುವ ರೇರಿಟನ್ ನದಿಯ ದಂಡೆಗುಂಟ ಹರಡಿರುವ ಜಾನ್ಸನ್ ಉದ್ಯಾನವನದ ಬೆಂಚಿನ ಮೇಲೆ ಕುಳಿತಿದ್ದೆ. ನದಿ ದಂಡೆಯಲ್ಲಿ ಬಣ್ಣ ಬಣ್ಣದ ಮಣ್ಣಿನ ಮುದ್ದೆಯೊಂದು ಕಣ್ಣಿಗೆ ಬಿತ್ತು. ಮೊದಲ ನೋಟದಲ್ಲಿ ಗುರುತು ಹತ್ತಿದರೂ ಅರ್ಥವಾಗಲು ತುಸು ಸಮಯವೇ ಹಿಡಿಯಿತು. ಅದೊಂದು ಪುಟ್ಟ ಗಣೇಶನ ಮೂರ್ತಿ. ಯಾರೋ ಭಾರತೀಯರು ಹಬ್ಬ ಆಚರಿಸಿ ಮೂರ್ತಿಯ ವಿಸರ್ಜನೆಗೆ ದಾರಿ ಕಾಣದೇ ಇದನ್ನಿಲ್ಲಿ ಇಟ್ಟು ಹೋಗಿರಬಹುದೆನ್ನಿಸಿತು. ಬಣ್ಣಗೆಟ್ಟ ಸೀಳು ಕುತ್ತಿಗೆಯ ಆ ಮಸುಕು ಮೂರ್ತಿ, ಸಿಹಿ-ಉಪ್ಪು ಮಿಶ್ರಿತ ರೇರಿಟನ್ ನದಿಯನ್ನು ಮುಗುಳ್ನಗುತ್ತ ದಿಟ್ಟಿಸುತ್ತಿದ್ದ ದೃಶ್ಯ ನನಗೆ ನಮ್ಮೂರು ಕಡಮೆಯಲ್ಲಿ ಶಂಖ- ಜಾಗಟೆಯ ಜೊತೆಗೆ ವಿಸರ್ಜನೆಗೊಳ್ಳುವ ಗಣೇಶನೇ ಕಣ್ಮುಂದೆ ನಿಂತಂತೆನ್ನಿಸಿತು. ಅದೂ ನನ್ನೊಳಗಿನ ಕನ್ನಡತನದ ಇನ್ನೊಂದು ಶಬ್ಧದಂತೆ ಕೇಳಿಸಿತು.
ಇಂಥದೇ ಸನ್ನಿವೇಶ ಎಡಿಸನ್ ಪಟ್ಟಣದ ’ಅಪನಾ ಬಜಾರ್’ ಎಂಬ ಭಾರತೀಯ ಸ್ಟೋರ್‌ನಲ್ಲಿ ಸುತ್ತಾಡುವಾಗಲೂ ಎದುರಾಗಿತ್ತು. ಆ ವಾರದ ದಿನಸಿ ತರಲು ಪ್ರತೀ ರ‍್ಯಾಕ್ ತಡಕಾಡುವಾಗ ಉಡುಪಿಯವರ ಅಪ್ಪೆಮಿಡಿ ಉಪ್ಪಿನಕಾಯಿ ಬಾಟಲ್ ನೋಡಿ ಕುಣಿದಾಡಿಬಿಡ್ಡಿದ್ದೆ. ನಿಜಹೇಳಬೇಕೆಂದರೆ ಹುಬ್ಬಳ್ಳಿಯಲ್ಲಿರುವಾಗಲೂ ನನಗೆ ಮಿಡಿ‌ಉಪ್ಪಿನಕಾಯಿ ಹೀಗೆ ಅಂಗಡಿಯಲ್ಲಿ ದೊರೆಯುವುದರ ಕಲ್ಪನೆಯೂ ಇರಲಿಲ್ಲ. ಅದು ಕೇವಲ ಊರಿನಲ್ಲಿ ಅಜ್ಜಿ ವರ್ಷಾನುಗಟ್ಟಲೆ ಕಾಯ್ದಿರಿಸುವ ಭರಣಿಯಲ್ಲಷ್ಟೇ ತುಂಬಿರುವುದು ಅಂದುಕೊಂಡಿದ್ದೆ.
ಹೀಗೆಯೇ ಕನ್ನಡತನವನ್ನು ನನಗೆ ದೈನಿಕದಿಂದ ಬೇರ್ಪಡಿಸಿ ನೋಡಲು ಸಾಧ್ಯವೇ ಇಲ್ಲ. ನನಗನಿಸಿದಂತೆ ಪ್ರತಿಯೊಬ್ಬರೊಳಗೂ ನಮಗರಿವಿಲ್ಲದೇ ಹರಿಯುತ್ತಿರುವ ಒಂದು ಭಾಷೆಯ ನೇಟಿವಿಟಿ ಇರುತ್ತದೆ, ಸಂಸ್ಕೃತಿ ಇರುತ್ತದೆ. ಅದು ಸಾರ್ವತ್ರಿಕವಾಗಿರದೇ ನಮ್ಮ ಸ್ವಂಥದ್ದೇ ಆಗಿರುತ್ತದೆ.
ಇಲ್ಲಿಗೆ ಬಂದ ಮೇಲೆ ಮನೆಯಲ್ಲಿ ಕುಳಿತಿರಲಾಗದೇ ನನ್ನ ಗಂಡ ಪಾಠ ಮಾಡುವ ರಡ್ಗರ‍್ಸ್ ವಿಶ್ವವಿದ್ಯಾಲಯದ ’ಇಂಟರ್‌ನ್ಯಾಷನಲ್ ವುಮೆನ್ಸ್ ಗ್ರೂಪ್’ ಎಂಬ ಪುಟ್ಟ ಗುಂಪು ಸೇರಿಕೊಂಡೆ. ಹೊಸ ಸಂಗತಿಗಳ ಬಗ್ಗೆ ಆಸಕ್ತಿಯಿರುವ ಒಂದಿಷ್ಟು ಜನ ಮಹಿಳೆಯರು ಸೇರಿಕೊಂಡು ಪ್ರತೀ ದಿನ ಒಂದೆರಡು ಘಂಟೆ ಅವರವರ ದೇಶದ ಬಗ್ಗೆ ಹರಟುವ, ಬೇರೆ ಬೇರೆ ದೇಶಗಳ ಕಲೆ, ಸಂಸ್ಕೃತಿ, ಸಂಗೀತ, ಸಾಹಿತ್ಯ, ಅಡುಗೆಯ ಕುರಿತು ತಿಳಿದುಕೊಳ್ಳುವುದು ಈ ಗುಂಪಿನ ಉದ್ದೇಶ. ಮೊದಲದಿನವೇ ಪರಿಚಯವಾದ ವೆನಝುವೆಲಾದ ಗೆಳತಿ ಮರಿಯಲ್, ನಾನು ನಿನಗೆ ಸ್ಪಾನಿಷ್ ಕಲಿಸುತ್ತೇನೆ ಅಂದಳು. “ಅದಕ್ಕೆ ಪ್ರತಿಯಾಗಿ ನಾನು ನಿನಗೆ ಕನ್ನಡ ಮಾತನಾಡಲು ಕಲಿಸಬಲ್ಲೆ” ಅಂತ ಹೇಳಿದೆ. ಹಾರ್ದಿಕವಾಗಿ ನಕ್ಕು “ಶೂರ್” ಅಂದಳು. ಈ ಬುಧವಾರ ಹಂಗೇರಿಯ ಗೆಳತಿ ಅಲಿಜ್ ’ಫ಼ಲಚಿಂಥಾ’ ಅನ್ನುವ ತಿನಿಸು ತಯಾರಿಸುವುದನ್ನು ಹೇಳಿಕೊಡುತ್ತಿದ್ದಳು. ಒಂದಿಷ್ಟು ಬೆಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಹಿಟ್ಟಿನಲ್ಲೇ ಜಾಸ್ತಿ ಸುರಿಯುತ್ತಾರೆಂಬುದನ್ನು ಬಿಟ್ಟರೆ ಫ಼ಲಚಿಂಥಾ ಥೇಟು ನಮ್ಮ ದೋಸೆಯಂತೆಯೇ ಕಂಡಿತು. “ನಮ್ಮ ಮನೆಯಲ್ಲಿ ಇದನ್ನು ವಾರದಲ್ಲಿ ಎರಡು ದಿವಸ ಮಾಡುತ್ತೇವೆ” ಅಂದೆ. ಅಲಿಜ್ ’ನಿಜವೇ?’ ಎಂದು ಹುಬ್ಬೇರಿಸಿದಳು. ಅಂದು ಮರಿಯಲ್ ’ದೋಸೆ’ ಎಂಬ ಮೊದಲ ಕನ್ನಡ ಪದ ಕಲಿತ ಸಂತಸದಲ್ಲಿದ್ದಳು.
ಇಲ್ಲಿಗೆ ಬಂದ ಹೊಸತರಲ್ಲಿ ಪರಿಚಯವಾದ ತುಂಬ ಜನ ಒಂದೇ ಪ್ರಶ್ನೆಯನ್ನು ಕೇಳುತ್ತಿದ್ದರು. “ಡೂ ಯೂ ಮಿಸ್ ಯುವರ್ ಹೋಮ್?” ಅಂತ. ಆ ಹೋಮ್ ಶಬ್ದ ಕೇಳಿದಾಗಲೆಲ್ಲ ನನಗೆ ವಿಚಿತ್ರ ಕಳವಳವಾಗುವುದು. ನಿಜಕ್ಕೂ ಆ ಹೋಮ್ ಎನ್ನುವುದು ಹುಬ್ಬಳ್ಳಿಯಲ್ಲಿ ಅಪ್ಪ- ಅಮ್ಮ- ತಂಗಿ ವಾಸವಾಗಿರುವ ’ನಾಗಸುಧೆ’ ಎನ್ನುವ ಮನೆ ಅಷ್ಟೆಯೇ? ಸದ್ದೇ ಇಲ್ಲದೇ ಸಾವಿರಾರು ಮೈಲಿ ಕಾರಿನಲ್ಲೇ ಚಲಿಸುವ ಹಸಿವಿಲ್ಲದವರ ಈ ಹಸಿರು ದೇಶದಲ್ಲಿ ನಿಂತಾಗ ಹುಬ್ಬಳ್ಳಿಯ ದುರ್ಗದಬೈಲಿನ ಶೇವುಪುರಿ, ನನ್ನ ತಂಗಿ ನವ್ಯಾ “ಏನ್‌ಲೇ ಅಕ್ಕಾ” ಅಂತನ್ನುವಾಗಿನ ತುಂಟ ದನಿ, ಕಡಮೆಯ ಮನೆಯ ಬಾವಿಯಲ್ಲಿ ಮೋರೆಯಾ ಮೋರೆಯಾ ಎಂದು ಗಣಪತಿ ವಿಸರ್ಜಿಸಿದ ತಕ್ಷಣವೇ ಮುಖಕ್ಕೆ ಸಿಡಿಯುತ್ತಿದ್ದ ತುಂಬಿದ ಬಾವಿಯ ನೀರಿನ ಸಿಹಿ, ಕೆಲಸಕ್ಕೆ ಸೇರಿದ ಮೊದಲದಿನವೇ ಬೆಚ್ಚಿಸಿದ್ದ ಬೆಂಗಳೂರಿನ ಚಾಮರಾಜಪೇಟೆಯ ಜನಜಂಗುಳಿ- ಎಲ್ಲಕ್ಕೂ ಈ ’ಮನೆ’ ಶಬ್ದದ ಜೊತೆಗೆ ನಂಟಿದೆ ಅಂತಲೇ ಅನ್ನಿಸುವುದು. ಜೊತೆಗೆ ಅಪನಾ ಬಜಾರ್‌ನಲ್ಲಿ ಸಿಕ್ಕ ಅಪ್ಪೆಮಿಡಿ ಉಪ್ಪಿನಕಾಯಿ, ಹಂಗೇರಿಯ ಫ಼ಲಚಿಂಥಾ ಮತ್ತು ರೇರಿಟನ್ ನದಿ ದಂಡೆಯಲ್ಲಿ ಮುಗುಳ್ನಗುತ್ತ ತನ್ನ ಮೋಟುಗೈಯಲ್ಲಿ ಅಭಯ ನೀಡುತ್ತಿದ್ದ ಬಣ್ಣದ ಮಣ್ಣಿನ ಮುದ್ದೆ ಕೂಡ ಈ ಹೊತ್ತು ನನ್ನೊಳಗಿನ ’ಮನೆ’ಯ, ಕನ್ನಡತನದ ಜೀವದಾಯಿನಿ ಮಿಂಚುಗಳಂತೆಯೇ ಕಾಣುವವು.

Related Articles

1 COMMENT

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles