ಶ್ರೀ ಮಹಾಲಸಾ ದೇವಿಯ ಮೂಲ ರೂಪವು ವಿಷ್ಣು ಪರಮಾತ್ಮನ ಸ್ತ್ರೀರೂಪವಾದ ಮೋಹಿನಿಯದ್ದಾಗಿರುತ್ತದೆ. ಹಿಂದೆ ದೇವಾಸುರರು ಸಮುದ್ರ ಮಥನವನ್ನು ಮಾಡಲಾಗಿ ಅಮೃತ ಕಲಶದ ಉದ್ಭವವಾಯಿತು.ಅಸುರರು ಅದನ್ನು ಅಪಹರಿಸಿಕೊಂಡು ಹೋಗಲಾಗಿ ದೇವತೆಗಳು ಚಿಂತಿತರಾಗಿ ವಿಷ್ಣುವಿನ ಮೊರೆಹೋದರು.ಆಗ ವಿಷ್ಣು ಪರಮಾತ್ಮನು ಮೋಹಿನಿಯ ರೂಪಧರಿಸಿ ತನ್ನ ರೂಪ-ಲಾವಣ್ಯಗಳಿಂದ ರಾಕ್ಷಸರನ್ನು ಮರುಳುಮಾಡಿ ಅಮೃತವನ್ನು ದೇವತೆಗಳಿಗೆ ಹಂಚಿದನು. ಸ್ವರ್ಬಾನು ಎಂಬ ರಾಕ್ಷಸನು ಉಪಾಯದಿಂದ ದೇವತೆಗಳ ಜೊತೆ ಅಮೃತವನ್ನು ಕುಡಿದನು. ಇದನ್ನು ನೋಡಿದ ಸೂರ್ಯಚಂದ್ರರು ಮೋಹಿನಿಗೆ ತಿಳಿಸಲಾಗಿ ಮೋಹಿನಿಯು ತನ್ನ ಚಕ್ರದಿಂದ ಸ್ವರ್ಬಾನುವಿನ ತಲೆಯನ್ನು ಕಡಿದಳು. ಅಮೃತವನ್ನು ಕುಡಿದಿದ್ದರಿಂದ ರುಂಡ ಮುಂಡಗಳು ಬೇರ್ಪಟ್ಟರೂ ರಾಹು ಕೇತುಗಳಾಗಿ ಗ್ರಹಗಳಾಗಿ ಬದುಕುಳಿದರು.
ಮೋಹಿನಿಯು ವಿರಾಜಿಸುತ್ತಿರುವ ಸ್ಥಳವು ಮಹಾಲಸಾ ಗುಡ್ಡದ ಮೇಲಿರುವುದರಿಂದ ಮೋಹಿನಿ ದೇವಿಗೆ ಮಹಾಲಸಾ ದೇವಿ ಎಂಬ ಹೆಸರು ಅಭಿದಾನವಾಯಿತು.ಅಲ್ಲಿಂದ ಮುಂದೆ ನೇವಾಸೆ ಎಂಬ ಊರಲ್ಲಿ ಸ್ವಲ್ಪಕಾಲ ನೆಲೆಸಿ ಗೋಮಾಂತಕದ ಬಿಚೋಲಿ ಎಂಬ ಊರಿನ ದೇಗುಲದಲ್ಲಿ ನೆಲೆಸಿದಳು.ಆದರೆ ಅಲ್ಲಿದ್ದ ಚಾಂಡಾಲರು ಹಾಗೂ ದುಷ್ಟ ಜನರು ಮಂದಿರವನ್ನು ಸುಟ್ಟು ವಿಗ್ರಹವನ್ನು ಧ್ವಂಸಗೊಳಿಸಿದರು.ಆಗ ದೇವಿಯು ವೆರ್ಣಾಪುರಿಯಲ್ಲಿರುವ ಬ್ರಾಹ್ಮಣರ ಸ್ವಪ್ನದಲ್ಲಿ ಬಂದು ತಾನು ಕುಂಡದ ನೀರಿನ ಮಧ್ಯಭಾಗದಲ್ಲಿರುವ ಸಾಲಿಗ್ರಾಮ ಶಿಲೆಯ ರೂಪದಲ್ಲಿ ವಾಸ ಮಾಡುತ್ತಿರುವುದಾಗಿಯೂ, ಅಲ್ಲಿಂದ ಎತ್ತಿ ಮೂರ್ತಿ ಕೆತ್ತಿಸುವಂತೆ ತಿಳಿಸಿದಳು. ಶಿಲ್ಪಿಯು ಶುಭಗಳಿಗೆಯಲ್ಲಿ ಮೂರ್ತಿ ಕೆತ್ತಲು ಪ್ರಾರಂಭಿಸಿ ಆರು ತಿಂಗಳಲ್ಲಿ ಕಂಠದ ಕೆಳಗಿನ ಭಾಗದ ತನಕ ಕೆತ್ತಿದನು. ಮೂರ್ತಿಯ ಕಂಠದ ಮೇಲ್ಭಾಗದಲ್ಲಿ ಕೆತ್ತಲು ಪ್ರಾರಂಭವಾದ ಕೂಡಲೇ ಅಲ್ಲಿಂದ ರಕ್ತವು ಧಾರಾಕಾರವಾಗಿ ಹರಿಯತೊಡಗಿತು.ತನ್ನಿಂದ ಘೋರ ಅಪರಾಧವೆಂದು ಬೊಬ್ಬಿಟ್ಟು ಸ್ಮೃತಿ ತಪ್ಪಿ ಬಿದ್ದನು.ಭಕ್ತರು ಒಂದಿಷ್ಟು ಮೃತ್ತಿಕೆಯನ್ನು ತಂದು ರಕ್ತ ಬರುತ್ತಿರುವ ಭಾಗಕ್ಕೆ ಲೇಪಿಸಿದಾಗ ರಕ್ತಸ್ರಾವವು ನಿಂತಿತು.ವಿಗ್ರಹ ರಚನೆಯ ಕಾರ್ಯವನ್ನು ಮುಂದುವರಿಸುವ ಅವಶ್ಯಕತೆ ಇಲ್ಲ ಎಂದು ದೇವಿಯು ಆದೇಶಿಸಿದಾಗ ಅದೇ ರೂಪದಲ್ಲಿ ಮಾರ್ಗಶಿರ ಚಂಪಾಷಷ್ಠಿಯ ದಿನ ರವಿವಾರದಂದು ಪ್ರತಿಷ್ಠಾಪಿಸಿದರು.ಹಲವು ವರ್ಷಗಳ ಕಾಲ ವೆರ್ಣೆಯಲ್ಲಿ ಪೂಜೆ ಪುನಸ್ಕಾರ ನಡೆಯಿತು.ಅಲ್ಲಿಯೇ ಸುಮಾರು 500 ವರ್ಷಗಳ ಕಾಲ ದೇವಿಯು ನೆಲೆಸಿದಳು.
ಹದಿನಾರನೇ ಶತಮಾನದಲ್ಲಿ ಪೋರ್ಚುಗೀಸರ ಆಗಮನದಿಂದ ಹಿಂದೂಗಳನ್ನು ಮತಾಂತರಿಸಿ ದೇವಾಲಯಗಳನ್ನು ಕೆಡವಿ ಚರ್ಚ್ ಸ್ಥಾಪಿಸಿದರು.1567 ರ ಒಂದೇ ವರ್ಷದಲ್ಲಿ ಸುಮಾರು 280 ದೇವಾಲಯಗಳನ್ನು ಕೆಡವಿ ಬೆಂಕಿ ಇಡಲಾಯಿತು.ದಿನಾಂಕ 7 ಮಾರ್ಚ್ 1567 ರಂದು ಪಾದ್ರಿಯ ನೇತೃತ್ವದಲ್ಲಿ ಸೈನಿಕರು ದೇವಿಯ ಪೂಜಾ ಸಮಯದಲ್ಲಿ ಆಭರಣ ಅಲಂಕರಿಸುವ ಸಮಯದಲ್ಲಿ ದಾಳಿಮಾಡಿ ಮೂರ್ತಿಯನ್ನು ಕಿತ್ತು ಶಿಲುಬೆಯನ್ನು ಇರಿಸಿ ದೇವಾಲಯವನ್ನು ಕೆಡವಿದರು. ಸಾವಿರಾರು ಜನರು ಇತರ ಪ್ರಾಂತಗಳಿಗೆ ಪ್ರಾಣಭಯದಿಂದ ಓಡಿಹೋದರು.
ಕೆಲವು ಕಾಲದ ನಂತರ ಹಿಂದೂ ರಾಜನ ಆಡಳಿತದಲ್ಲಿದ್ದ ಪೋಂಡಾದ ಮಾರ್ಡೋಳದಲ್ಲಿ ನೆಲೆಸಲು ಬಯಸಿ ಗ್ರಾಮದ ಅಧಿಕಾರಿಯಾದ ದೇಸಾಯಿಯವರ ಸ್ವಪ್ನದಲ್ಲಿ ಬಂದು ತನ್ನ ದೇವಸ್ಥಾನ ಕಟ್ಟುವಂತೆ ಹೇಳಿದಳು ಮತ್ತು ಗ್ರಾಮದೇವತೆಯಾದ ಕಾಮಾಕ್ಷಿ ಅಥವಾ ಸಾಂತೇರಿ ದೇವಿಯಲ್ಲಿ ನಿನ್ನ ಎಡಭಾಗದಲ್ಲಿ ತನಗೆ ಉಳಿಯಲು ಸ್ಥಳವನ್ನು ಕೊಡುವಂತೆ ಕೇಳಿದಳು.ಸ್ವಪ್ನ ದಾಖಲೆಯಂತೆ ಭಕ್ತರು ವೆರ್ಣೆಯಲ್ಲಿ ಕೊಳದ ಅಡಿಯಲ್ಲಿ ನಾಗದೇವತೆಗಳಿಂದ ರಕ್ಷಿಸಲ್ಪಟ್ಟ ಮೂರ್ತಿಯನ್ನು ಮಾರ್ಡೋಳಕ್ಕೆ ತಂದರು. ಆದರೆ ಕಂಠದಿಂದ ಮೇಲ್ಭಾಗವು ಅಪೂರ್ಣವಾದ್ದರಿಂದ ಅದನ್ನು ಪೂರ್ಣ ಮಾಡಲು ಶಿಲ್ಪಿಯನ್ನು ನೇಮಿಸಲಾಗಿ ಎಡಗಡೆಯ ಗಲ್ಲದ ಕಣ್ಣಿನ ಬಳಿ ಆಯುಧ ಪ್ರಹಾರ ಮಾಡಲು ಅಲ್ಲಿಂದ ರಕ್ತಸ್ರಾವವಾಯಿತು. ಕೆತ್ತನೆಯನ್ನು ಅಷ್ಟಕ್ಕೆ ನಿಲ್ಲಿಸಿ ಮಾಘ ಬಹುಳ ಪಂಚಮಿಯ ದಿನ ಪ್ರತಿಷ್ಠಾಪನೆ ಮಾಡಿದರು.
ಮಹಾಲಸಾ ದೇವಿಯ ಇನ್ನೊಂದು ವೈಶಿಷ್ಟ್ಯವೆಂದರೆ ಆಕೆಗೆ ಮೂರು ಕಳೆಗಳಿವೆ. ಮುಂಜಾನೆ ನಿರ್ಮಾಲ್ಯ ವಿಸರ್ಜಿಸಿದ ಬಳಿಕ ಆಕೆಗೆ ಪರಕಾರವನ್ನು ಉಡಿಸಲಾಗುವುದು.ಆಗ ಆಕೆಯು ಪುಟ್ಟ ಬಾಲಿಕೆಯ (ಕುಮಾರಿ) ಸ್ವರೂಪದಲ್ಲಿ ವಿರಾಜಿಸುತ್ತಾಳೆ.ಮಧ್ಯಾಹ್ನದಲ್ಲಿ ಅಭಿಷೇಕ,ಕುಂಕುಮಾರ್ಚನೆ, ಆರತಿಯ ಬಳಿಕ ನವಯವ್ವನಭರಿತ ತರುಣಿಯ ರೂಪದಲ್ಲಿಯೂ ಹಾಗೂ ಸೂರ್ಯಾಸ್ತ ಸಮಯದಲ್ಲಿ ಮುತ್ತೈದೆಯಾಗಿಯೂ ಕಂಗೊಳಿಸುತ್ತಾಳೆ.
ಭಕ್ತರು ಆಕೆಗೆ ಶರಣು ಹೋದಲ್ಲಿ ಅವರ ಆಪತ್ತು,ದುಃಖ, ಸಂಕಟಗಳನ್ನು ನಿವಾರಿಸುವ ಮಹಾನ್ ದೇವತೆಯು ಆಕೆ🙏🏼
ಶ್ರೀಪಾದ
29/03/2020
Terms & Condition || Privacy Policy || Sitemap || Contact Us
© 2023-24 MyKVS. All rights reserved. || Powered by Onestop Website Solution
Terms & Condition
Privacy Policy
Sitemap
Contact Us
© 2023-24 MyKVS. All rights reserved. || Powered by Onestop Website Solution