ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ ಮಾರ್ಡೋಳ.

ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನ, ಮಾರ್ಡೋಳ .

Po: Mardol,
Ponda.
Pin: 403404
Ph: 0832 2343421

ಪಣಜಿ ಪೋಂಡಾ ರಾಜಮಾರ್ಗದಲ್ಲಿ ಪಣಜಿಯಿಂದ ಸುಮಾರು 21 ಕಿಲೋಮೀಟರ್ ಅಂತರದಲ್ಲಿ ಮಾರ್ಡೋಳ ಪುಣ್ಯಕ್ಷೇತ್ರವಿದೆ. ಅಲ್ಲಿಯ ಶ್ರೀ ಮಹಾಲಸಾ ನಾರಾಮಣೀ ಮಾತೆಯ ಭವ್ಯ ಮಂದಿರವು ರಾಜ್ಯ ಮಾರ್ಗದಿಂದ ಒಳಗೆ ಒಂದು ಫರ್ಲಾಂಗ್ ದೂರವಿದೆ. ಮಹಾಲಸಾ ಮಂದಿರ ಸ್ಥಾಪನೆಯಾಗಿ ಸುಮಾರು 450 ವರ್ಷಗಳಾಗಿವೆ. ಅಂದಿನಿಂದ ಇಂದಿನವರೆಗೆ ಹಲವು ಬಾರಿ ಜೀರ್ಣೋದ್ಧಾರ ಮಾಡಲಾಗಿದೆ. ಮೊದಲ ಬಾರಿಗೆ ಜೀರ್ಣೋದ್ಧಾರವು ತಾಮ್ರಪತ್ರ ಹೊದಿಸಿ ಶಾಲಿವಾಹನಶಕೆ 1789 ರಲ್ಲಿ ಮಾಡಲ್ಪಟ್ಟಿತು. ತಾಮ್ರಪತ್ರ ಹೊದಿಸಿ ಸುಮಾರು 150 ವರ್ಷಗಳು ಗತಿಸಿದರೂ ಕೂಡ ನೂತನವಾಗಿ ಇತ್ತೀಚಿಗೆ ಹೊದಿಸಿದಂತೆ ಕಾಣಬರುತ್ತದೆ.ಕ್ರಿಸ್ತಶಕ 1959 ವಿಕಾರಿನಾಮ ಸಂವತ್ಸರದ ವೈಶಾಖ ಶುದ್ಧ ತೃತೀಯಾ (ಅಕ್ಷಯ ತೃತೀಯಾ) ಶುಭ ಮುಹೂರ್ತದಲ್ಲಿ ಶ್ರೀಯ ಪಿಂಡಿಕಾ ಜೀರ್ಣೋದ್ದಾರ ಸಮಾರಂಭವನ್ನು ಮಾಡಲಾಯಿತು.ಗೋಮಂತಕದ ಪ್ರಥಮ ಮುಖ್ಯಮಂತ್ರಿಯಾದ ದಯಾನಂದ ಬಾಂದೋಡ್ಕರ ಅವರ ಸ್ವಪ್ನದಲ್ಲಿ ಕಾಣಿಸಿಕೊಂಡು ನೂತನ ಪಿಂಡಿಕೆಯನ್ನು ರಚಿಸಿ ಕೊಡುವಂತೆ ಆದೇಶ ನೀಡಿದಳು. ದೇವಿಯ ಆದೇಶದ ಮೇರೆಗೆ ಸರ್ವ ವೆಚ್ಚವನ್ನೂ ತಾವೇ ವಹಿಸಿಕೊಂಡು ಜೀರ್ಣೋದ್ದಾರ ವಿಧಿಯನ್ನು ನೆರವೇರಿಸಿದರು. ಶ್ರೀದೇವಿಗೆ ಸುಮಾರು 115 ತೊಲೆಯ ಸುವರ್ಣದ ಪ್ರಭಾವಳಿಯನ್ನು ಅರ್ಪಿಸಿದರು.
ದೇವಸ್ಥಾನದ ಮಹಾದ್ವಾರದ ಒಳಗೆ ಚೌಕಿನಲ್ಲಿ ಎರಡು ದೊಡ್ಡ ಘಂಟೆಗಳಿದ್ದು ಅದರ ಕೆಳಗಡೆ ನಿಂತು ನ್ಯಾಯಾಲಯದಲ್ಲಿ ಸಹ ಇತ್ಯರ್ಥವಾಗದ ಪ್ರಕರಣಗಳನ್ನು ದೇವಿಯ ಬಳಿಗೆ ತಂದು ಬಗೆಹರಿಸಕೊಳ್ಳಲಾಗುತ್ತಿತ್ತು.ಮಹಾದ್ವಾರದಲ್ಲಿ ನಿಂತು ಇಂದಿಗೂ ಕೂಡ ಹಿಂದೂಧರ್ಮ ತ್ಯಜಿಸಿ ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದರು ದೇವಿಯನ್ನು ‘ಸಾಯಬಿಣಿ’ ಎಂದು ಕರೆದು ಪ್ರಾರ್ಥಿಸುತ್ತಾರೆ.ದೇವಾಲಯದ ಒಳಗೆ ಬೃಹತ್ ಕಟ್ಟಿಗೆಯ ಕಂಬಗಳನ್ನು ಮತ್ತು ಕಟ್ಟಿಗೆಯಲ್ಲಿ ಕೊರೆದು ರಚಿಸಿದ ದೇವತೆಗಳ ವಿಗ್ರಹಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ. ಗರ್ಭಗುಡಿ ಕಡೆಗೆ ಹೋಗುವ ಮೊದಲು ಇನ್ನೊಂದು ದ್ವಾರದ ಮುಂದುಗಡೆ ಕಾಣಿಕೆ ಪೆಟ್ಟಿಗೆ ಇದ್ದು,ಆ ಸ್ಥಳದಲ್ಲಿಯೇ ದೇವರಿಗೆ ಅರ್ಪಿಸಿದ ಶ್ರೀಫಲ, ಉಡಿ,ಪುಷ್ಪಕಾಣಿಕೆ ಇತ್ಯಾದಿಗಳನ್ನು ಅರ್ಪಿಸಿ ಪ್ರಾರ್ಥಿಸಿಕೊಳ್ಳುತ್ತಾರೆ.ಕಾಣಿಕೆ ಪೆಟ್ಟಿಗೆಯ ಬದಿಯಲ್ಲಿಯೇ ಶ್ರೀಯ ಪವಿತ್ರತೀರ್ಥ ಹಾಗೂ ಪುಷ್ಪ,ಅಂಗಾರ,ಪ್ರಸಾದವನ್ನು ಇಡಲಾಗುತ್ತದೆ.ಮುಂದಿನ ದ್ವಾರದ ಎರಡೂ ಬದಿಯಲ್ಲಿ ಮಹಾವಿಷ್ಣುವಿನ ದ್ವಾರಪಾಲಕರಾದ ಜಯ-ವಿಜಯರು ಸ್ಥಿತರಾಗಿರುವರು.ಈ ದ್ವಾರವನ್ನು ದಾಟಿಹೋಗಲು ವೈದಿಕರ ಪರವಾನಿಗೆ ಪಡೆಯುವ ಅವಶ್ಯಕತೆ ಇದೆ.ಈ ದ್ವಾರವನ್ನು ದಾಟಿದ ಬಳಿಕ ಇನ್ನೊಂದು ಕೋಣೆ ಬರುವುದು. ಇದರ ಒಂದು ಬದಿಯಲ್ಲಿ (ಶ್ರೀಯ ಎಡಬದಿಗೆ) ಶ್ರೀಯ ಸುಖಾಸನವನ್ನು ಇರಿಸಲಾಗಿದೆ. ರಾತ್ರಿ ಸಮಯದಲ್ಲಿ ಶ್ರೀಯ ವಾಸ ಇಲ್ಲಿರುವುದು ಎಂಬುದು ಜನರ ನಂಬಿಕೆಯಾಗಿದೆ.ಸುಖಾಸನದ ಎದುರುಗಡೆ ಬಾಗಿಲಿದ್ದು ಕೆಳಗಿನ ಸ್ಥಳದಲ್ಲಿ ಬಾವಿ ಇದೆ. ಕೇವಲ ನಿತ್ಯ ಅಭಿಷೇಕಾದಿ ದೇವ ಕಾರ್ಯಗಳಿಗೆ ಮಾತ್ರ ಇಲ್ಲಿಯ ಜಲವನ್ನು ಉಪಯೋಗಿಸಲಾಗುತ್ತದೆ.ಈ ಕೋಣೆಯನ್ನು ದಾಟಿ ಮುಂದೆ ಹೋಗಲು ಇನ್ನೊಂದು ದೊಡ್ಡ ದ್ವಾರವು ಸಿಗುತ್ತದೆ. ಇದನ್ನು ದಾಟಿದ ನಂತರ ಗರ್ಭಗುಡಿಯನ್ನು ಪ್ರವೇಶಿಸುವ ದ್ವಾರವಿದೆ. ಇಲ್ಲಿ ಪ್ರವೇಶ ಕೇವಲ ಅರ್ಚಕರಿಗೆ ಮಾತ್ರ ಸೀಮಿತವಾಗಿದೆ. ಗರ್ಭಗುಡಿಯ ಬಲಭಾಗದಲ್ಲಿ ಗೋಡೆಯೊಳಗೆ ಶ್ರೀ ಗಣಪತಿ ದೇವರ ಶಿಲಾವಿಗ್ರಹ,ಎಡಭಾಗದಲ್ಲಿ ಗೋಡೆಯೊಳಗೆ ಶ್ರೀಯ ಮೋಹಿನೀ ಅವತಾರದ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.ಗಣಪತಿಯ ವಿಗ್ರಹದ ಎದುರುಗಡೆ ಗೋಡೆಯಲ್ಲಿ ಒಂದು ಲಿಂಗವಿದ್ದು ಅದಕ್ಕೆ ಸಹಸ್ರಪಾಲ ಎಂದು ಕರೆಯುತ್ತಾರೆ.ಗರ್ಭಗುಡಿಯ ಮಧ್ಯಭಾಗದಲ್ಲಿ ಸಾಲಿಗ್ರಾಮ ಶಿಲೆಯಲ್ಲಿ ರಚಿಸಿದ ಶ್ರೀ ಮಹಾಲಸಾ ನಾರಾಯಣಿ ದೇವಿಯ ರೂಪವನ್ನು ನೋಡುವುದೇ ಕಣ್ಣಿಗೆ ಹಬ್ಬ.
ಶ್ರೀದೇವಿಯ ಎದುರುಗಡೆ ಒಂದು ಕ್ಷಣ ನಿಂತರೂ ಕೂಡ ಸುಖ-ಶಾಂತಿ,ಸಮಾಧಾನವು ದೊರೆಯುತ್ತದೆ.
ಶ್ರೀ ದೇವಿಯ ವಿಗ್ರಹವು ಚಕ್ರಾಂಕಿತ ಸಾಲಿಗ್ರಾಮ ಶಿಲೆಯದಾಗಿದ್ದು ಸೂಕ್ಷ್ಮವಾಗಿ ಅವಲೋಕಿಸಿದರೆ ಹಿಂದಿನ ಭಾಗದಲ್ಲಿ ಶೇಷಶಾಯಿ ವಿಷ್ಣು, ಚತುರ್ಮುಖ ಬ್ರಹ್ಮ,ಲಕ್ಷ್ಮೀದೇವಿ, ಮಹಾಶೇಷನು ದೃಷ್ಟಿಗೋಚರವಾಗುತ್ತಾರೆ. ಈ ವಿಗ್ರಹವು ಸ್ತ್ರೀರೂಪದಲ್ಲಿದ್ದರೂ ಯಜ್ಞೋಪವೀತವನ್ನು ಧರಿಸಿದೆ.ಶ್ರೀ ಮಹಾಲಸಾ ದೇವಿಯು ಚತುರ್ಭಜಯುಕ್ತಳಿದ್ದು ಬಲಗಡೆಯ ಮೇಲಿನ ಕರದಲ್ಲಿ ತ್ರಿಶೂಲ ಹಾಗೂ ಕೆಳಗೈ ಮುಷ್ಟಿಯಲ್ಲಿ ಖಡ್ಗದೊಡನೆ ಮೊಳಕಾಲೂರಿ ಕುಳಿತ ಚಂಡಾಸುರ ದೈತ್ಯನ ಜುಟ್ಟು ಇದೆ.ಎಡಭಾಗದ ಮೇಲಿನ ಕರದಲ್ಲಿ ಅಮೃತಕಲಶ ಮತ್ತು ಕೆಳ ಮುಷ್ಟಿಯಲ್ಲಿ ರಾಹು ದೈತ್ಯನ ಶಿರವಿದೆ. ಅದರ ಕೆಳಗೆ ರಕ್ತವನ್ನು ಹೀರುತ್ತಿರುವ ತೋಳವಿದೆ. ಚರಣದ್ವಯಗಳು ಪೂರ್ಣ ದೇಹದಿಂದ ಖಡ್ಗಧಾರಿಯೂ ಆಗಿ ಹತನಾಗಿ ಮಲಗಿದ ಚಂಡಾಸುರನನ್ನು ಮೆಟ್ಟಿ ಹಿಡಿದಿವೆ.ಶ್ರೀ ದೇವಿಯ ವಿಗ್ರಹದ ಕೊರಳ ಮೇಲ್ಭಾಗದ ಪ್ರದೇಶದಲ್ಲಿ ಮುಖಕಮಲ ಸ್ಪಷ್ಟ (ಮೂಗು ,ನಯನ ,ಹುಬ್ಬು,ಹಣೆ,ಕಿವಿ,ಕಿರೀಟ ,ಕುಂಡಲಾದಿಗಳು) ಇರುವುದಿಲ್ಲ.
ಮಹಾಲಸಾ ಮಾತೆಯು ಪರ್ವಕಾಲಗಳ ಮುಖ್ಯ ಅಧಿದೇವತೆಗಳ‌ ರೂಪದಲ್ಲಿ, ಇತರ ವೇಳೆಯಲ್ಲಿ ಸ್ತ್ರೀ ರೂಪ ಅಥವಾ ಪುರುಷ ರೂಪ ಎರಡರಲ್ಲಿಯೂ ಅಲಂಕರಿಸಪಡುತ್ತಾಳೆ. ದೇವಿಯ ಇನ್ನೊಂದು ವೈಶಿಷ್ಟ್ಯ ಎಂದರೆ ಆಕೆಗೆ ಮೂರು ಕಳೆಗಳಿವೆ ಎಂದು ಪ್ರಸಿದ್ಧಿ ಇದೆ. ಮುಂಜಾನೆ ನಿರ್ಮಾಲ್ಯ ವಿಸರ್ಜಿಸಿದ ಬಳಿಕ ಆಕೆಗೆ ಪರಕಾರವನ್ನು ಉಡಿಸಲಾಗುವುದು. ಆಗ ಆಕೆಯು ಕುಮಾರಿಕಾ (ಪುಟ್ಟ ಬಾಲಿಕೆ) ಸ್ವರೂಪದಲ್ಲಿ ವಿರಾಜಿಸುತ್ತಾಳೆ.ಮಧ್ಯಾಹ್ನದಲ್ಲಿ ಅಭಿಷೇಕ,ಕುಂಕುಮಾರ್ಚನೆ, ಆರತಿ ಆದ ಬಳಿಕ ನವ ಯೌವ್ವನಭರಿತ ತರುಣಿಯ ರೂಪದಲ್ಲಿಯೂ ಹಾಗೂ ಸೂರ್ಯಾಸ್ತ ಸಮಯದಲ್ಲಿ ಮುತ್ತೈದೆಯಾಗಿಯೂ ಗೋಚರಿಸುತ್ತಾಳೆ.
ಮಹಾಲಸೆ ವಿಗ್ರಹದ ಹಿಂದುಗಡೆ ಕಲಾತ್ಮಕತೆಯಿಂದ ಕೂಡಿರುವ ಸುವರ್ಣದ ಪ್ರಭಾವಳಿ ಇದೆ. ಮುಂದುಗಡೆ ಸುಂದರ ನಕ್ಷೆಯ ಕೆಲಸದ ಬೆಳ್ಳಿಯ ಕಮಾನುಗಳು,ದೀಪಗಳು ಇವೆ. ಬೆಳ್ಳಿಯ ನಾಗ ದೇವತೆಯ ಎರಡು ವಿಗ್ರಹಗಳು ಮತ್ತು ಶಂಖ ಇದೆ.ಎಲ್ಲವೂ ಶ್ರೀಯ ವೈಭವವನ್ನು ವೃದ್ಧಿಗೊಳಿಸುತ್ತವೆ.ಹೆಣೆಯದೇ ಬಿಟ್ಟಿರುವ ತಲೆಗೂದಲುಗಳನ್ನು ಹಾಗೂ ಶಿರದ ಮೇಲೆ ರತ್ನ ಖಚಿತ ಕಿರೀಟವನ್ನು ಧಾರಣ ಮಾಡಿದ ಶ್ರೀ ಮಹಾಲಸೆಯ ಚತುರ್ಭುಜ ರೂಪವು ನಮಗೆ ಚಿತ್ರಪಟದ ಮೇಲೆ ಕಾಣಬರುತ್ತದೆ.
ಶ್ರೀಪಾದ.
03/04/2020.

ಜ್ಞಾನದೀಪ ಸ್ತಂಭ:
ಶ್ರೀ ಸಂಸ್ಥಾನದ ಮಹಾದ್ವಾರ ಪ್ರವೇಶಿಸಿದ ಕೂಡಲೇ ಮೊದಲು ಕಂಡುಬರುವುದೇ ಬೃಹತ್ ಆಕಾರದ ದೀಪಸ್ತಂಭ. ಇದಕ್ಕೆ ಜ್ಞಾನದೀಪ ಎನ್ನುವರು. ಸುಮಾರು 20 ಅಡಿಯಷ್ಟು ಎತ್ತರವಿರುವ ಇದು ಯಾರನ್ನಾದರೂ ಬೆರಗುಗೊಳಿಸುತ್ತದೆ.ಕೂರ್ಮದ ಮೇಲೆ ಆಧರಿಸಿ ರಚಿಸಿರುವ ಈ ಹಿತ್ತಾಳೆಯ ಸ್ತಂಭಕ್ಕೆ 21 ಪರಿಧಿಗಳಿವೆ (ಮಾಳಿಗಳಿವೆ).ಇದರ ಮೇಲ್ಭಾಗದಲ್ಲಿ ಗರುಡನು ಸ್ಥಿತವಾಗಿರುವನು‌. ಮಾರ್ಚ್ 19,1977 ರಲ್ಲಿ ಇದನ್ನು ಸ್ಥಾಪಿಸಲಾಯಿತು‌.ಗೋಮಂತಕದಲ್ಲಿ ಬೇರೆ ಯಾವ ಸ್ಥಳದಲ್ಲಿಯೂ ಇರದಂತಹ ಒಂದು ವೈಶಿಷ್ಠ್ಯಪೂರ್ಣ ಜ್ಞಾನದೀಪವಿದು‌. ಮಹತ್ವದ ಹಾಗೂ ಉತ್ಸವ ದಿನಗಳಲ್ಲಿ ಈ ಜ್ಞಾನದೀಪವನ್ನು ಪ್ರಜ್ವಲಿಸಲಾಗುವುದು.ಭಕ್ತರು ಇಷ್ಟಪಟ್ಟರೆ ಜ್ಞಾನದೀಪ ಪ್ರಜ್ವಲಿಸುವ ಸೇವೆಯನ್ನು ತಮಗೆ ಬೇಕಾದ ದಿನಗಳಲ್ಲಿ ಸಲ್ಲಿಸಬಹುದು.ಇದನ್ನು ಪ್ರಜ್ವಲಿಸಲು ಸುಮಾರು 75 ಕಿಲೊ ಎಣ್ಣೆ ತಗಲುವುದು.
ಗರುಡ ಸ್ತಂಭ:
ಜ್ಞಾನದೀಪ ಸ್ತಂಭದ ಬಳಿಕ, ಅಂದರೆ ದೇವಿಯ ಸಭಾಮಂಟಪದ ಎದುರಿಗೆ ಗರುಡ ಸ್ತಂಭವಿದೆ. ಮಹಾವಿಷ್ಣುವಿನ ವಾಹನವಾದ ಗರುಡನ ಹೆಸರಿನಲ್ಲಿ ಇದನ್ನು ಸ್ಥಾಪಿಸಲಾಗಿದೆ.ಮಹಾಲಸೆಯ ರಥೋತ್ಸವದ ವೇಳೆಯಲ್ಲಿ ಗರುಡನು ಸ್ತಂಭದ ಮೇಲೆ ವಿರಾಜಿಸುವನು.ಆಗ ಗರುಡನು ಇದರ ಮೇಲೆ 3 ದಿನಗಳವರೆಗೆ (ಮಾಘವದ್ಯ ಚತುರ್ಥಿಯಿಂದ ಷಷ್ಠಿಯವರೆಗೆ) ಸ್ಥಿತನಾಗುವನು.ನಂತರ ಷಷ್ಠಿಯಂದು ಹೋಮ ಪೂರ್ಣಾಹುತಿಯ ಬಳಿಕ ಅವನ ಸ್ಥಾನ ಪಲ್ಲಟವಾಗುತ್ತದೆ. ಶ್ರೀ ಮಹಾಲಸಾ ನಾರಾಯಣೀಯು ಸಾಕ್ಷಾತ್ ಮಹಾವಿಷ್ಣುವಿನ ಅವತಾರವಿರುವುದರಿಂದ ವಿಷ್ಣುವಿನ ವಾಹನವಾದ ಗರುಡನಿಗೆ ಮಂದಿರದಲ್ಲಿ ಸ್ಥಾನ ಕಲ್ಪಿಸಿಕೊಟ್ಟಿದ್ದು ಉಚಿತವಾಗಿದೆ.ಈ ಮೊದಲು ತಾಮ್ರದ ಪಟದಿಂದ ಹೊದಿಸಿದ್ದ ಈ ಕಂಬಕ್ಕೆ ಕ್ರಿ‌.ಶ 1916 ಶ್ರಾವಣ ಮಾಸದಲ್ಲಿ ಮೊದಲಿನ ಕಂಬ ತೆಗೆದು ಬೇರೊಂದು ಕಂಬವನ್ನು ಇಟ್ಟು ಅದಕ್ಕೆ ಹಿತ್ತಾಳೆಯ ತಗಡನ್ನು ಹೊದಿಸಲಾಗಿದೆ.ನೋಡಲು ಅದು ಬಹಳ ಆಕರ್ಷಕವಾಗಿದೆ.
ದೀಪ ಸ್ತಂಭ:
ಸಭಾಮಂಟಪದ ಮುಂದೆ ಎಡಭಾಗದಲ್ಲಿ (ಜ್ಙಾನದೀಪ ಸ್ತಂಭದ ಪಕ್ಕದಲ್ಲಿ) ಒಂದು ಪುರಾತನ ಹಾಗೂ ಭವ್ಯ ದೀಪಸ್ತಂಭವಿದೆ‌.ಇದಕ್ಕೆ ಪ್ರತಿ ವರ್ಷ ಪೂಜೆಯ ಸೇವೆಯಿದೆ. ಕಾರ್ತಿಕ ಹುಣ್ಣಿಮೆ ಹಾಗೂ ಮಾಘ ಶುದ್ಧ ದ್ವಾದಶಿಯಂದು ಈ ಸ್ತಂಭಕ್ಕೆ ಗಂಧ ಪುಷ್ಪಗಳನ್ನು ಅರ್ಪಿಸಿ ಆರತಿ ಮಾಡಲಾಗುತ್ತದೆ .ಜ್ಙಾನದೀಪ ಸ್ತಂಭ ಸ್ಥಾಪನೆಯ ಪೂರ್ವದಲ್ಲಿ ಇಲ್ಲಿ ತೈಲದ ಪಣತಿಗಳನ್ನು ಬೆಳಗಿಸಲಾಗುತ್ತಿತ್ತು‌.ಈಗ ಅದು ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ.
ತುಳಸಿ ವೃಂದಾವನ:
ಸಭಾಮಂಟಪದ ಪಕ್ಕದಲ್ಲಿಯೇ ದೇವಿಗೆ ಹೊಸದಾಗಿ ಕಟ್ಟಿಸಿದ ತುಳಸಿ ಬೃಂದಾವನ ಇದೆ.ಈ ಸ್ಥಳದಲ್ಲಿಯೇ ವನಭೋಜನ ಕಾರ್ಯಕ್ರಮ ನಡೆಯುತ್ತದೆ.ಶ್ರೀ ಶಾಂತೇರಿ ಹಾಗೂ ಶ್ರೀ ಮಹಾಲಸಾ ದೇವತೆಗಳನ್ನು ವನಭೋಜನದ ದಿನದಂದು ಮುಂಜಾನೆ ಸುಮಾರು 10 ಗಂಟೆಗೆ ಕರೆತಂದು ಸಂಜೆ 5-6 ಗಂಟೆಯ ಹೊತ್ತಿಗೆ ದೇವಾಲಯದಲ್ಲಿ ತಿರುಗಿ ಕರೆದೊಯ್ಯಲಾಗುತ್ತದೆ. ಈ ದಿನ ಜ್ಙಾನದೀಪವನ್ನು ಬೆಳಗಿಸಲಾಗುತ್ತದೆ. ವನಭೋಜನವಾದ ಮಾರನೆಯ ದಿನದಂದು ಲಕ್ಷದೀಪೋತ್ಸವದ ಕಾರ್ಯಕ್ರಮ ಜರುಗುತ್ತದೆ.
ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನದಲ್ಲಿ ನಡೆಯುವ ವರಭೇಟಿ ಸೇವೆ .

ವರಭೇಟಿ ಸೇವೆಯು ಕೇವಲ ನೂತನ ದಂಪತಿಗಳಿಗೆ ಮಾತ್ರ ಅನ್ವಯಿಸುತ್ತದೆ. ಮಹಾಲಸೆಯ ಕುಳಾವಿ ಪೈಕಿ ವರನು ವಿವಾಹದ ತರುವಾಯ ವಧುವಿನೊಂದಿಗೆ ಪ್ರಥಮ ಬಾರಿಗೆ ಶ್ರೀಯ ದರ್ಶನಕ್ಕೆ ಬಂದಾಗ ಈ ಸೇವೆಯನ್ನು ಸಲ್ಲಿಸುವುದು ಇರುತ್ತದೆ. ವಿವಾಹವಾದ ಕೂಡಲೇ ಈ ಸೇವೆಯನ್ನು ಸಲ್ಲಿಸಲಾಗದವರು ತಮಗೆ ಅನುಕೂಲವಾದಾಗ ಇಲ್ಲಿಗೆ ಬಂದು ಸಲ್ಲಿಸಬಹುದು‌.ಆದರೆ ಆದಷ್ಟು ಶೀಘ್ರದಲ್ಲಿ ಸೇವೆ ಸಲ್ಲಿಸುವುದು ಉತ್ತಮ.ನೂತನ ವಿವಾಹಿತ ದಂಪತಿಗಳು ಇಲ್ಲಿಯ ಕೆರೆಯಲ್ಲಿ ಧಾರ್ಮಿಕ ವಿಧಿ ಪ್ರಕಾರ ಸ್ನಾನ ಮಾಡಬೇಕು. ನಂತರ ವಧು ವರ ಈರ್ವರು ವಸ್ತ್ರಗಳಿಗೆ ಗಂಟುಹಾಕಿ ಕಟ್ಟಿಕೊಂಡು ಶ್ರೀಯ ಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ತಾವು ಇಚ್ಛಿಸಿದ ಸೇವೆಯನ್ನು ಸಲ್ಲಿಸುವುದು ಇರುತ್ತದೆ.ಈ ಸೇವೆಯನ್ನು ವಿವಾಹದ ಬಳಿಕ ಪ್ರಥಮ ಸಲ ಶ್ರೀಯ ಭೇಟಿಗೆ ಬಂದಾಗ ಒಮ್ಮೆ ಮಾತ್ರ ಸಲ್ಲಿಸುವುದು ಇರುತ್ತದೆ. ನೂತನ ಸಾಂಸಾರಿಕ ಜೀವನವು ಸುಗಮವಾಗಿ ಸಾಗಲೆಂದು ಕುಂಕುಮಾರ್ಚನೆಯ ಸೇವೆಯನ್ನು ಸಹ ಇದರ ಜೊತೆಗೆ ಸಲ್ಲಿಸುವದಿರುತ್ತದೆ. ಆದುದರಿಂದ ವಿವಾಹವಾದ ಕೂಡಲೇ ನೂತನ ದಂಪತಿಗಳು ಅವಶ್ಯವಾಗಿ ವರಭೇಟಿ ಸೇವೆಯ ಧಾರ್ಮಿಕ ವಿಧಿಯನ್ನು ಶ್ರೀಯ ಸ್ಥಾನದಲ್ಲಿ ನೆರವೇರಿಸುವುದು ಉಚಿತವಾದುದು.
ಶ್ರೀಪಾದ.
06/04/2020.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles