ಶ್ರೀ ಶಂಕರ ಜಯಂತಿ

ಶ್ರೀ ಶಂಕರ ಜಯಂತಿ

ಭರತ ಭೂಮಿಯಲ್ಲಿ ನಾಸ್ತಿಕ ಮತಗಳ ವಿಸ್ತಾರವಾಗುತ್ತ ಇರುವಂತೆ ವೈದಿಕ ಮತಗಳ ಅವನತಿ ಆರಂಭವಾಯಿತು. ಇದರಿಂದ ಧರ್ಮಸಂಸ್ಥಾಪನೆಗಾಗಿ ಪರಮೇಶ್ವರನು ಶಂಕರನಾಗಿ ಜನಿಸಿದನು. ಬಾಲ್ಯದಲ್ಲಿಯೇ ಗೋವಿಂದ ಭಗವತ್ಪಾದರ ಶಿಷ್ಯರಾಗಿ ಸನ್ಯಾಸ ಸ್ವೀಕರಿಸಿ ಭರತ ಭೂಮಿಯಾದ್ಯಂತ ಸಂಚರಿಸಿ, ಅವೈದಿಕ ಮತಗಳನ್ನು ಖಂಡಿಸಿ, ಸನಾತನಧರ್ಮದ ಪುನರುಜ್ಜೀವನ ಮಾಡಿದರು.

ಇವರ ಜನ್ಮದಿನವಾದ ವೈಶಾಖ ಶುಕ್ಲ ಪಂಚಮಿಯಂದು ದೇಶದಾದ್ಯಂತ ತತ್ವಜ್ಞಾನಿಗಳ ದಿನವನ್ನಾಗಿ ಆಚರಿಸುತ್ತಾರೆ.

ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಭಾರತಿ ಸ್ವಾಮಿಗಳು (1857-1912) ಶೃಂಗೇರಿ ಪೀಠದ 33ನೇ ಜಗದ್ಗುರುಗಳು. ಆ ಕಾಲದಲ್ಲಿ ಶಂಕರ ಭಗವತ್ಪಾದಾಚಾರ್ಯ ರ ಅನುಯಾಯಿಗಳಲ್ಲಿ ಯಾರೊಬ್ಬರೂ ಶಂಕರರ ಜನ್ಮದಿನೋತ್ಸವವನ್ನು ಆಚರಿಸುತ್ತಿರಲಿಲ್ಲ. ಈ ಕೊರತೆಯು ಶ್ರೀಗಳವರ ಮನಸ್ಸಿಗೆ ಬಲವಾಗಿ ತಟ್ಟಿತು. ಜನಸಾಮಾನ್ಯರಿಗೆ  ಶಂಕರರ ಸಾಧನೆಯ ಬಗ್ಗೆ ತಿಳಿಸಿ ಅವರ ತತ್ವಗಳನ್ನು ಪ್ರಚಾರ ಮಾಡಬೇಕೆಂದು ಸಂಕಲ್ಪ ಮಾಡಿದರು.

ಶೃಂಗೇರಿಯಲ್ಲಿ ಇತರ ದೇವತಾ ಮೂರ್ತಿಗಳ ಜೊತೆ ಪೂಜಿಸಲ್ಪಡುವ ಶಂಕರರ ಪುರಾತನ ಪ್ರತಿಮೆಯನ್ನು ಪ್ರತ್ಯೇಕಿಸಿ ಸುಮಾರು 1880ರಲ್ಲಿ ಮಂದಿರ ನಿರ್ಮಾಣ ಮಾಡಿದರು.

ಶಂಕರ ಭಗವತ್ಪಾದರ ಜಯಂತ್ಯುತ್ಸವವನ್ನು ನಿಯಮದಿಂದ ಆಚರಿಸಬೇಕೆಂದು ತೀರ್ಮಾನಿಸಿದರು. ವೈಶಾಖ ಶುಕ್ಲ ಪ್ರತಿಪದೆಯಿಂದ  ಆಚಾರ್ಯ ಮೂರ್ತಿಗೆ ವಿಶೇಷವಾಗಿ ಅಭಿಷೇಕ, ಪೂಜೆ, ವೇದಪಾರಾಯಣ, ಶಂಕರರ ತತ್ವಗಳನ್ನು ಶಿಷ್ಯ ಜನರಿಗೆ ಉಪದೇಶಿಸುವುದು, ಶೃಂಗೇರಿಯ 4 ಬೀದಿಗಳಲ್ಲಿಯೂ ನಾಮಸಂಕೀರ್ತನೆ ಮಾಡಿ ಪಂಚಮಿಯ ದಿನ ಉತ್ಸವ ಪಾನಕ ಪೂಜೆ ನಡೆಸುವ ವ್ಯವಸ್ಥೆ ಮಾಡಿದರು. ಶ್ರೀಗಳ ಉದ್ದೇಶವೂ ಬಹಳ ಶ್ರೀಘ್ರದಲ್ಲಿ ಪೂರ್ಣವಾಗಿ ಫಲಿಸಿ ಈಗ ಆಚಾರ್ಯರ ಜಯಂತ್ಯುತ್ಸವ ಜಗತ್ತಿನಾದ್ಯಂತ ಆಚರಿಸಲ್ಪಡುತ್ತದೆ.

ಆ ಕಾಲದಲ್ಲಿ ಕಲ್ಯಾಣಪುರಿ ಎಂದು ಕರೆಯಲ್ಪಡುವ ಈಗಿನ ಬೆಂಗಳೂರು ನಗರದಲ್ಲಿ ಶಂಕರ ಮಠವನ್ನು ಸ್ಥಾಪಿಸಲು ಸಂಕಲ್ಪಿಸಿದರು. ಹೊಸ ಬಡಾವಣೆಯಾದ ಚಾಮರಾಜಪುರ ಬಸವನಗುಡಿ ಮಧ್ಯದಲ್ಲಿ ಗಿಡಗಂಟೆಗಳಿಂದ ಆವೃತವಾಗಿ ದುಷ್ಟಜಂತು ಗಳಿಂದ ಕೂಡಿದ ಪ್ರದೇಶವನ್ನು ಪರಿಷ್ಕರಿಸಿ 1907ರಲ್ಲಿ  ಶಂಕರರ ಪ್ರತಿಮೆಯನ್ನು ಸ್ಥಾಪಿಸಿದರು.

ಶಂಕರಾಚಾರ್ಯರು ಜನಿಸಿದ ಕಾಲಡಿಯಲ್ಲಿ ಅವರ ಸ್ಮರಣಾರ್ಥ ಯಾವುದೇ ಸ್ಮಾರಕ ಇಲ್ಲದಿರುವುದರಿಂದ ಶಂಕರ ಮತ್ತು ಶಾರದಾಂಬೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಲು ನಿಶ್ಚಯಿಸಿದರು. ಪರರ ಅಧೀನದಲ್ಲಿರುವ ಸ್ಥಳವನ್ನು ಅನಂತಶಯನ ಮಹಾರಾಜರ ಸಹಕಾರದಿಂದ ವಶಕ್ಕೆ ಪಡೆದುಕೊಂಡರು. 1910 ರಲ್ಲಿ ಭವ್ಯವಾದ ಮಠವನ್ನು ಸ್ಥಾಪಿಸಿದರು. ಈ ಕಾರ್ಯಕ್ಕೆ ಶಂಕರರ ತಾಯಿಯಾದ ಆರ್ಯಾಂಬೆ ಶ್ರೀಗಳ ಕನಸಿನಲ್ಲಿ ಬಂದು ಮಾರ್ಗದರ್ಶನ ನೀಡಿದರು.

ಶಂಕರಾಚಾರ್ಯರು ಸಾವಿರಾರು ದೇವತಾ ಶ್ಲೋಕಗಳನ್ನು ರಚಿಸಿದ್ದು ಅವುಗಳು ಬೆಳಕಿಗೆ ಬಂದಿರಲಿಲ್ಲ. ಶ್ರೀಗಳು ಶಂಕರರ ಹಲವಾರು ಶ್ಲೋಕಗಳನ್ನು ಪ್ರಕಾಶನ ಗೊಳಿಸಿ ಲೋಕಾರ್ಪಣೆ ಮಾಡಿದರು. ಈ ರೀತಿಯಾಗಿ ಶಂಕರರ ಸಂದೇಶಗಳನ್ನು ಜಗತ್ತಿಗೆ ಸಾರಿದ ಶ್ರೇಯಸ್ಸು ಶ್ರೀ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹ ಸ್ವಾಮಿಗಳಿಗೆ ಸಲ್ಲುತ್ತದೆ.

ಶ್ರೀಪಾದ

6 may 2022

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles