ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು

ಶ್ರೀ ಚಂದ್ರಶೇಖರಭಾರತೀ ಮಹಾಸ್ವಾಮಿಗಳು

ಇಂದು ಮಹಾಲಯ ಅಮಾವಾಸ್ಯೆ.ಶೃಂಗೇರಿಯ 34ನೇ ಪೀಠಾಧಿಪತಿಗಳಾದ ಶ್ರೀ ಶ್ರೀ ಚಂದ್ರಶೇಖರಭಾರತೀಯವರ ಆರಾಧನೆಯ ಇಂದು ಶೃಂಗೇರಿಯಲ್ಲಿ ನಡೆಯಿತು.
ಕ್ರಿಸ್ತಶಕ 1879 ರಿಂದ 1912 ರವರೆಗೆ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಅವರು 33ನೇ ಜಗದ್ಗುರುಗಳಾಗಿದ್ದರು.ಅವರು ಆದಿಶಂಕರರ ಅವತಾರವೆಂದೇ ಕರೆಯಲ್ಪಡುತ್ತಿದ್ದ​ರು.ಅವರ ಉತ್ತರಾಧಿಕಾರಿಗಳೇ ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳು.
ಶ್ರೀ ಚಂದ್ರಶೇಖರಭಾರತೀ ಸ್ವಾಮಿಗಳ ಪೂರ್ವಾಶ್ರಮದ ತಂದೆಯವರು ಶ್ರೀ ಗೋಪಾಲ ಶಾಸ್ತ್ರಿಗಳು ಮತ್ತು ತಾಯಿ ಲಕ್ಷ್ಮಮ್ಮನವರು.ಇವರು ಶೃಂಗೇರಿಯಲ್ಲಿ ನೆಲೆಸಿದ್ದರು. ಮಠದಿಂದ ಬರುವ ಅಲ್ಪ ವರಮಾನದಿಂದ ಸಂಸಾರ ನಡೆಸುತ್ತಿದ್ದರು.ಮನೆಯಲ್ಲಿ ಮಕ್ಕಳಿಲ್ಲ ಎಂಬ ಚಿಂತೆಯು ಇವರಿಗಿತ್ತು.ಇವರಿಗೆ ಮಕ್ಕಳಾಗಲಿಲ್ಲ ಎಂದಲ್ಲ, ಹುಟ್ಟಿದ ಹದಿಮೂರು ಮಕ್ಕಳನ್ನು ವಿಧಿ ಕೊಟ್ಟಂತೆ ಮಾಡಿ ಕಿತ್ತುಕೊಳ್ಳುತ್ತಿತ್ತು. ಮನಸ್ಸಿನ ನೋವನ್ನು ಮರೆಯಲು ಗುರುಗಳ ಆಶೀರ್ವಾದವನ್ನು ಪಡೆದು ತೀರ್ಥಯಾತ್ರೆಗೆ ಹೊರಟರು. ಶೃಂಗೇರಿಯಿಂದ ಕಾಲ್ನಡಿಗೆಯಲ್ಲಿ ಸಂಚರಿಸುತ್ತ ಆಗುಂಬೆ,ಉಡುಪಿಯಲ್ಲಿ ನೆಲೆಸಿ ಗೋಕರ್ಣಕ್ಕೆ ಆಗಮಿಸಿ ಮಹಾಬಲೇಶ್ವರನನ್ನು ಭಕ್ತಿಯಿಂದ ಅರ್ಚಿಸಿ ಮನಶ್ಯಾಂತಿ ಹೊಂದಿ ಶೃಂಗೇರಿಗೆ ಮರಳಿದರು‌.ಸ್ವಲ್ಪ ಕಾಲದಲ್ಲಿಯೇ ಅವರಿಗೆ ಮಗು ಜನಿಸುತ್ತದೆ.ಶ್ರೀ ನಂದನ‌ ಸಂವತ್ಸರದ ಆಶ್ವಯುಜ ಬಹುಳ ಏಕಾದಶಿ ರವಿವಾರ ಕ್ರಿ.ಶ 16-10-1892ರಂದು ಲಕ್ಷ್ಮಮ್ಮನವರು ಪುತ್ರರತ್ನಕ್ಕೆ ಜನ್ಮವಿತ್ತರು‌. ಶ್ರೀ ಮಹಾಬಲೇಶ್ವರನ ಅನುಗ್ರಹದಿಂದ ಜನಿಸಿದ ಮಗುವಿಗೆ ನರಸಿಂಹ ಎಂದು ಹೆಸರಿಟ್ಟರು.ಶಾರದಾಂಬೆಯ ಸೇವೆಗೆ ಅರ್ಪಿಸುವುದಾಗಿ ಹರಸಿಕೊಂಡರು.

ಬಾಲಕ ನರಸಿಂಹನು ಶಾಲೆಯ ವಿದ್ಯಾಭ್ಯಾಸದಲ್ಲಿ ಹರಿತವಾದ ಬುದ್ಧಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದನು.ತಂದೆಯೊಡನೆ ಶಾರದಾಂಬೆಯ ಮತ್ತು ಗುರುಗಳ ದರ್ಶನ ಮಾಡುವುದು ನಿತ್ಯನೇಮವಾಗಿತ್ತು.ಅವನ ತೇಜಸ್ಸನ್ನು ಗುರುತಿಸಿ ಗುರುಗಳು ಈ ಬಾಲಕನು ತಮ್ಮ ಉತ್ತರಾಧಿಕಾರಿ ಎಂದು ಆಗಲೇ‌ ನಿಶ್ಚಯಿಸಿದ್ದರು.
ಎಂಟನೇ ವಯಸ್ಸಿನಲ್ಲಿ ಉಪನಯನ ಮಾಡಲಾಯಿತು. ವಿದ್ಯಾಭ್ಯಾಸವನ್ನು ಶೃಂಗೇರಿಯ ಸದ್ವಿದ್ಯಾ ಪಾಠಶಾಲೆಯಲ್ಲಿ ಆರಂಭಿಸಿದರು.ಅಲ್ಲಿಂದ ಮುಂದೆ ಗುರುಗಳ ಸಲಹೆಯಂತೆ ಬೆಂಗಳೂರಿನ ಶ್ರೀ ಶಂಕರಮಠದ ಪಾಠಶಾಲೆಯಲ್ಲಿ ಶಿಕ್ಷಣ ಪಡೆಯಲು ಪಾಲಕರ ಜೊತೆಗೆ ಬೆಂಗಳೂರಿಗೆ ಬಂದು ನೆಲೆಸಿದರು.
1912ರಲ್ಲಿ ಗುರುಗಳಾದ ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀರವರ ಶರೀರ ಜೀರ್ಣವಾಗುತ್ತಾ ಬಂದಿತ್ತು.ನರಸಿಂಹರನ್ನು ಕರೆಸಿ ಸನ್ಯಾಸ ದೀಕ್ಷೆ ಕೊಡುವಂತೆ ತಿಳಿಸಿದರು.ಬಾಲಕನನ್ನು ಕರೆದು ತರಲು ಮಠದ ಅಧಿಕಾರಿಗಳು ಬೆಂಗಳೂರಿಗೆ ಬಂದು ವಿಷಯ ತಿಳಿಸಲು,ಹದಿಮೂರು ಮಕ್ಕಳನ್ನು ಕಳೆದುಕೊಂಡ ತಾಯಿ ಇದ್ದ ಒಬ್ಬನೇ ಮಗನನ್ನು ಸನ್ಯಾಸಿ ಮಾಡಲು ಒಪ್ಪಲಿಲ್ಲ.ಆದರೆ ಬಾಲಕನ ಹಟದಿಂದಾಗಿ ಒಪ್ಪಿಗೆ ಕೊಟ್ಟರು.ಆದರೆ ನರಸಿಂಹ ಬರುವಷ್ಟರಲ್ಲಿ ಗುರುಗಳು ದೈವಾದೀನರಾಗಿದ್ದರು.ಶ್ರೀಗಳ ಆರಾಧನೆ,ಉತ್ತರ ಕ್ರಿಯೆಗಳು ಮುಗಿದ ನಂತರ ದಿನಾಂಕ 07-04-1912ರಂದು ಸನ್ಯಾಸ ದೀಕ್ಷೆ ಪಡೆದು ಶ್ರೀ ಶ್ರೀ ಚಂದ್ರಶೇಖರಭಾರತೀ ಎಂಬ ಯೋಗಪಟ್ಟವನ್ನು ಪಡೆದರು.


ಬೆಂಗಳೂರಿನಲ್ಲಿ ನಿಂತುಹೋದ ವೇದಾಂತಶಾಸ್ತ್ರಾಭ್ಯಾಸವನ್ನು ಮುಂದುವರೆಸಿದರು.ದಕ್ಷಿಣಾಮ್ನಾಯ ಪೀಠಾಧೀಶ್ವರರಾಗಿ ಅಕ್ಷರಶಃ ಜಗದ್ಗುರುವೇ ಆಗಿದ್ದರೂ ಸಹ ಸರಳರೂ,ಆಡಂಭರರಹಿತರೂ,ವಾತ್ಸಲ್ಯಪೂರ್ಣರೂ ಆಗಿದ್ದರು.ಆಧ್ಯಾತ್ಮದ ತುತ್ತತುದಿಯಲ್ಲಿದ್ದು ಆತ್ಮಸಾಕ್ಷಾತ್ಕಾರ ಮಾಡಿಕೊಂಡಿದ್ದ ಮಹಾಪುರುಷರು.ಗುರುಗಳು ತಿಂಗಳುಗಟ್ಟಲೆ ಅಂತರ್ಮುಖಿಗಳಾಗಿಯೇ ಇದ್ದುಬಿಡುತ್ತಿದ್ದರು.
ಕ್ರಿಸ್ತಶಕ 1916ರಲ್ಲಿ ಶಾರದಾ ಮಂದಿರ ಪುನರ್ನಿರ್ಮಾಣ ಮಾಡಿ ಕುಂಭಾಭಿಷೇಕ ನೆರವೇರಿಸಲಾಯಿತು.1924 ರಲ್ಲಿ ದಕ್ಷಿಣ ಭಾರತ ಯಾತ್ರೆ ಕೈಗೊಂಡು ಭಕ್ತರನ್ನು ಆಶೀರ್ವದಿಸಿದರು.ಸದಾಕಾಲ ತಪಶ್ಚರ್ಯದಲ್ಲಿಯೇ ಕಾಲ ಕಳೆಯುತ್ತಿದ್ದು ಅವಧೂತ ಸ್ಥಿತಿಗೆ ತಲುಪಿದರು. ಅಪರೂಪವಾಗಿ ಕಿಟಕಿಯಿಂದಲೇ ದರ್ಶನ ಕೊಡುತ್ತಿದ್ದರು.
ಶ್ರೀ ನರಸಿಂಹ ಜಯಂತಿಯ ಸಾಯಂಕಾಲ ಗುರುಗಳೇ ಸೋಹಂ ಭಾವದಿಂದ ಪೂಜೆ ಮಾಡಿ ನಂತರ ರಾತ್ರಿಯಲ್ಲಿ ಸಿಂಹಗರ್ಜನೆ ಮಾಡುತ್ತಿದ್ದುದನ್ನು ಕೇಳಿದವರು ಭಯದಿಂದ ತಲ್ಲಣಿಸಿತ್ತಿದುದೂ ಉಂಟು. ಅವರ ಶ್ರೀಮುಖವು ನರಸಿಂಹನ ಮುಖದಂತೆ ಗೋಚರಿಸುತ್ತಿದ್ದುದೂ ಉಂಟು.
ಭಾರತದ ರಾಷ್ಟ್ರಪತಿಗಳಾದ ಶ್ರೀ ರಾಜೇಂದ್ರ ಪ್ರಸಾದ್ ಅವರು ಶೃಂಗೇರಿಗೆ ಆಗಮಿಸಿ ದರ್ಶನ ಪಡೆದಿದ್ದರು.
ಮೇ 22,1931 ಪ್ರಜಾಪತ್ಯ ಸಂವತ್ಸರದ ಜ್ಯೇಷ್ಠ ಶುದ್ಧ ಪಂಚಮಿಯ ಶುಭದಿನದಂದು ಶ್ರೀನಿವಾಸ ಎಂಬ ಬಾಲಕನಿಗೆ ಸನ್ಯಾಸ ದೀಕ್ಷೆಯನ್ನು ಕೊಟ್ಟು ಶ್ರೀಮದಭಿನವ ವಿದ್ಯಾತೀರ್ಥ ಎಂಬ ನಾಮಕರಣ ಮಾಡಿದರು.
ಜಗದ್ಗುರುಗಳ ಷಷ್ಠಬ್ದಿ ನಡೆಸಲು ನಿಶ್ಚಯಿಸಲಾಯಿತು. ಮಾರ್ಚ್ 1953ರಲ್ಲಿ ಲೋಕಕಲ್ಯಾಣಾರ್ಥವಾಗಿ ಅತಿರುದ್ರ ಸ್ವಾಹಾಕಾರ ಮಹಾಯಾಗ ಮತ್ತು ಶ್ರೀ ಸಹಸ್ರ ಚಂಡಿಹೋಮ ನಡೆದವು.ಪೂರ್ಣಾಹುತಿ ಕಾಲಕ್ಕೆ ಸರಿಯಾಗಿ ವರುಣದೇವನು ಪುಷ್ಪವೃಷ್ಟಿಯನ್ನು ಕರೆದನು.

ಶ್ರೀಗಳು ಇಚ್ಛಾಮರಣಿಗಳಾ ಗಿದ್ದರು.ದಿನಾಂಕ 29- 9-1954 ಭಾದ್ರಪದ ಅಮವಾಸ್ಯೆ ದಿನ ಮುಂಜಾನೆ ತುಂಗಾ ನದಿಗೆ ಸ್ನಾನಕ್ಕೆ ಬಂದರು.ಹಾಗೆಯೇ ಶ್ರೀಚಕ್ರದಲ್ಲಿ ವಿರಾಜಮಾನಳಾಗಿದ್ದ ಶ್ರೀ ಶಾರದೆಯನ್ನು ನೋಡಿದರು.ಬಳಿಕ ನೀರಿನಲ್ಲಿ ಇಳಿದರು.ಸಂಕಲ್ಪ ಮಾಡಿ, ಪ್ರಾಣಾಯಾಮ ಮಾಡಿ ಬ್ರಹ್ಮ ರಂದ್ರದ ಮೂಲಕ ಪಂಚಪ್ರಾಣ ಗಳನ್ನು ಹೊರಡಿಸಿದರು. ದೇಹವು ಮಳೆಗಾಲದಲ್ಲಿ ತುಂಬಿಹರಿಯುತ್ತಿದ್ದ ತುಂಗಾನದಿಯಲ್ಲಿ ತೇಲಿಹೋಯಿತು.ಇಬ್ಬರು ಮಠದ ಭಕ್ತರು ನೀರಿನಲ್ಲಿ ಧುಮುಕಿ ಮೇಲೆತ್ತಿ ತಂದರು.ಜಲ ಪ್ರವಾಹದಲ್ಲಿ ಸಿಲುಕಿದ್ದ ದೇಹವು ಪದ್ಮಾಸನದಲ್ಲಿದ್ದು ಎರಡೂ ಹಸ್ತಗಳು ಧ್ಯಾನಮುದ್ರೆಯನ್ನು ತೋರುತ್ತಿದ್ದವು.
ಅವರ ಕಳೇಬರವನ್ನು ಅವರ ಗುರುಗಳ ಸಮಾಧಿಯ ಉತ್ತರ ಪಾರ್ಶ್ವದಲ್ಲಿ ಸಮಾಧಿ ಮಾಡಲಾಯಿತು.

ಅವರ ಜೀವನ ಮತ್ತು ಅಂತ್ಯವು ವೈಶಿಷ್ಟ್ಯಪೂರ್ಣವಾಗಿದ್ದು ವಿಸ್ಮಯಕಾರಿಯಾಗಿದೆ.
ಶ್ರೀಪಾದ.
17/09/2020.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles