ದಿವಂಗತ ಮಾಳಪ್ಪ ಸಾಂತಪ್ಪ ಶೆಟ್ಟಿ ಬಡಗೇರಿ – ಕಿರು ಪರಿಚಯ

ದಿವಂಗತ ಮಾಳಪ್ಪ ಸಾಂತಪ್ಪ ಶೆಟ್ಟಿ ಬಡಗೇರಿ

ಇಂದು ಭಾದ್ರಪದ ಶುಕ್ಲ ಏಕಾದಶಿಯಂದು ಶ್ರೀಯುತರ 89ನೇ ಪುಣ್ಯತಿಥಿ.ಆನಿಮಿತ್ತ ದಿವಂಗತರ ಪುಣ್ಯಸ್ಮರಣೆ,ಕಿರು ಪರಿಚಯ ಮಾಡಿಕೊಡಲಾಗಿದೆ.
19ನೇ ಶತಮಾನದ ಕೊನೆಯಲ್ಲಿ ಮತ್ತು 20ನೇ ಶತಮಾನದ ಆದಿಯಲ್ಲಿ ನಮ್ಮ ಕುಟುಂಬದಲ್ಲಿ ಬದುಕಿ ಬಾಳಿದ ಮಹಾನುಭಾವರು ಇವರು. ನಮ್ಮ ಕುಟುಂಬದ,ಅಷ್ಟೇ ಏಕೆ ಕನ್ನಡ ವೈಶ್ಯ ಸಮಾಜದ ಪ್ರಪ್ರಥಮ ಶಿಕ್ಷಕರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದವರು.
ಬಡಗೇರಿಯ ರಾಮನ ಸುಬ್ಬು ಕುಟುಂಬದ ಮೂಲಪುರುಷನಾದ ಸುಬ್ಬನ 5ನೇ ಮಗ (1ನೇ ) ಸಾಂತಪ್ಪ ಇವರ ಧರ್ಮಪತ್ನಿ (1ನೇ) ಪಾರ್ವತಿ.ಈ ದಂಪತಿಗಳ ಹಿರಿಯ ಮಗನು ಮಾಳಪ್ಪ.ಸುಮಾರು ಕ್ರಿ.ಶ 1888 ರಲ್ಲಿ ಇವರು ಜನಿಸಿದರು. ಇವರ ಕಿರಿಯ ಸಹೋದರ ಮಂಜುನಾಥ.ಇವರ ಬಾಲ್ಯದಲ್ಲಿಯೇ ತಂದೆ ಸ್ವರ್ಗಸ್ಥರಾದರು.ಆಗ ಮಾಳಪ್ಪನಿಗೆ 6 ವರ್ಷ,ಮಂಜುನಾಥನಿಗೆ ಕೇವಲ 4 ವರ್ಷ.ತಾಯಿ ಪಾರ್ವತಿಯು ಬಡತನದಲ್ಲಿಯೇ ಮಕ್ಕಳನ್ನು ಸಲುಹಿದಳು.ಆ ಕಾಲದ ಗೃಹೋದ್ಯಮವಾಗಿದ್ದ ಅವಲಕ್ಕಿಯನ್ನು ತಯಾರಿಸಿ ಮಾರುತಿದ್ದಳು.ತಂದೆಯ ವಾತ್ಸಲ್ಯದಿಂದ ವಂಚಿತರಾದ ಈ ಸಹೋದರರು ಕುಟುಂಬದ ಸದಸ್ಯರ ಕರುಣೆಯಿಂದ ಬೆಳೆಯತೊಡಗಿದರು.ತಾಯಿಗೆ ವ್ಯವಹಾರಜ್ಞಾನ ಇಲ್ಲದಿರುವುದರಿಂದ ದೊಡ್ಡಪ್ಪನ ಮಗ ಕೃಷ್ಣನು ಹಣಕಾಸಿನ ವ್ಯವಹಾರ ನೋಡಿಕೊಳ್ಳುತ್ತಿದ್ದನು. ರೈತರಿಂದ ಬಂದ ಅಕ್ಕಿಯನ್ನು ಮಾರಿ ಆ ಹಣದಿಂದ ಮಕ್ಕಳ ಶಿಕ್ಷಣಕ್ಕೆ ಹಣವನ್ನು ಪೂರೈಸುವುದು ಕೃಷ್ಣನ ಜವಾಬ್ದಾರಿಯಾಗಿತ್ತು. ಚಿಕ್ಕಪ್ಪನಾದ (1ನೇ) ಪುಂಡಲಿಕನಿಂದ ಉಪನಯನ ಸಂಸ್ಕಾರ ಮಾಡಲ್ಪಟ್ಟಿತ್ತು.
ಮಾಳಪ್ಪನ ಪ್ರಾಥಮಿಕ ಶಿಕ್ಷಣವು ಭಾವಿಕೇರಿ ಶಾಲೆಯಲ್ಲಿ ನಡೆಯಿತು.ಕಲಿಕೆಯಲ್ಲಿ ಬುದ್ಧಿವಂತರಾಗಿದ್ದ ಇವರು ಮುಲ್ಕಿ ಪರೀಕ್ಷೆ ಪಾಸಾಗೋದು ಅಪರೂಪವಾಗಿದ್ದ ಕಾಲದಲ್ಲಿ ಮುಲ್ಕಿ ಪರೀಕ್ಷೆ ಪಾಸಾದರು.ಆಗ ಶಿಕ್ಷಕ ವೃತ್ತಿ ಕೈಗೊಳ್ಳಲು ವಿದ್ಯಾರ್ಹತೆ ಮುಲ್ಕಿ ಆಗಿತ್ತು. ಅವರು ಶಿಕ್ಷಕರಾಗಲು ಬಯಸಿ ಧಾರವಾಡದಲ್ಲಿ ಶಿಕ್ಷಕ ತರಬೇತಿ ಕಾಲೇಜಿಗೆ ಸೇರಿದರು. ಅಂಕೋಲಾದವರೇ ಆದ ಶ್ರೀ ವಾಸುದೇವ ಕಸಬೇಕರ ಅವರು ಸಹಪಾಠಿಯೂ,ಗೆಳೆಯರೂ ಆಗಿದ್ದರು.ಮಾಳಪ್ಪನು ತಮ್ಮ 18ನೇ ವಯಸ್ಸಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ನೇಮಕಗೊಂಡರು.ನಮ್ಮ ಸಮಾಜದ ಪ್ರಪ್ರಥಮ ಶಿಕ್ಷಕರು ಎಂಬ ಗೌರವಕ್ಕೆ ಪಾತ್ರರಾದರು.
ಇವರ ಧರ್ಮಪತ್ನಿ ಬಬ್ರುವಾಡದ ಕಾಶಿಬಾಯಿ.ಈ ದಂಪತಿಗಳಿಗೆ ಇಬ್ಬರು ಗಂಡುಮಕ್ಕಳು.ಸಾಂತಪ್ಪ(2) ಮತ್ತು ಮಹಾಬಲೇಶ್ವರ.ಹೆಣ್ಣುಮಕ್ಕಳು ಗಂಗಾ (ಕಾಕರಮಠ),ಶಾಂತಿ (ಬಬ್ರುವಾಡ),ಗುಲಾಬಿ (ಮಾಸ್ತಿಕಟ್ಟಾ),ಸರಸ್ವತಿ (ಅಲಗೇರಿ, ಬೆಂಗಳೂರು), ಸುಶೀಲ (ಅಮದಳ್ಳಿ),ಯಮುನಾ(ಅಂಬಾರಕೋಡ್ಲ).
ಮಾಳಪ್ಪನವರು ಧಾರ್ಮಿಕ ಪ್ರವೃತ್ತಿವುಳ್ಳವರಾಗಿದ್ದರು.ಆ ಕಾಲದ ನಮ್ಮ ಸಮಾಜದ ಅನೇಕರಂತೆ ಬಾಡದ ಪದ್ಮನಾಭತೀರ್ಥ ಮಠದ ಭಕ್ತರಾಗಿದ್ದರು.ಅವರಿಗೆ ಧಾರ್ಮಿಕ ಗ್ರಂಥಗಳಾದ ರಾಮಾಯಣ, ಮಹಾಭಾರತಗಳನ್ನು ಓದುವ ಹವ್ಯಾಸವಿತ್ತು.ಸಾಹಿತ್ಯದಲ್ಲಿ ಅಭಿರುಚಿಯುಳ್ಳವರಾಗಿದ್ದು ಪುಸ್ತಕ ಪ್ರೇಮಿಯಾಗಿದ್ದರು. ಅನೇಕ ಗ್ರಂಥಗಳನ್ನು ಸಂಗ್ರಹಿಸಿದ್ದರು.ಲೋಕಮಾನ್ಯ ತಿಲಕರ ಗೀತಾರಹಸ್ಯ, ವಿಷ್ಣುಸಹಸ್ರನಾಮ ಇವರ ಸಂಗ್ರಹದಲ್ಲಿತ್ತು.ಸುಮಾರು 110 ವರ್ಷಗಳ ಹಿಂದೆಯೇ ಮಂಗಳೂರಿನಲ್ಲಿ ಪ್ರಕಟವಾಗುವ ಮಾಸಪತ್ರಿಕೆ ಶ್ರೀಕೃಷ್ಣ ಸೂಕ್ತಿಯನ್ನು ಸಂಗ್ರಹಿಸಿದ್ದರು.ಕ್ರಿಸ್ತಶಕ 1912 ರಿಂದ 1916 ರವರೆಗೆ ಪ್ರಕಟವಾದ ಶ್ರೀಕೃಷ್ಣಸೂಕ್ತಿಯನ್ನು ಈಗಲೂ ಆಸಕ್ತರು ಓದಬಹುದು.
ಸಮಾಜಸೇವಕರಾಗಿದ್ದ ಇವರು ನಮ್ಮ ವೈಶ್ಯ ಸಮಾಜವು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಹಿಂದುಳಿದದ್ದನ್ನು ಮನಗಂಡು ಸಮಾನಮನಸ್ಕರ ಜೊತೆಗೆ ಸಮಾಲೋಚಿಸಿ ಆಗಿನ ಮುಂಬಯಿ ಸರ್ಕಾರದಿಂದ ಮೀಸಲಾತಿ ಸೌಲಭ್ಯ ಪಡೆಯಲು ಹಿಂದುಳಿದ ಜಾತಿಯ ಸೂಚಕವಾದ ವೈಶ್ಯ ಕೋಮುಟಿಗ ಶಬ್ದವನ್ನು ನಮ್ಮ ಜಾತಿಯ ಜೊತೆ ಉಪಯೋಗಿಸುವಂತೆ ಕರೆಕೊಟ್ಟರು.
ಸುಮಾರು 1907ರಲ್ಲಿ ಇವರು ಹೊನ್ನಾವರದಲ್ಲಿ ಶಿಕ್ಷಕರಾಗಿ ನೇಮಕಗೊಂಡರು.ಆಗ ಅವರ ಸಂಬಳ ಕೇವಲ 15ರೂ.ಕೆಲವೇ ತಿಂಗಳಲ್ಲಿ ಬಂಕಿಕೊಡ್ಲಕ್ಕೆ ವರ್ಗಾವಣೆಯಾಗಿ ಬಂದರು. ಅಲ್ಲಿಂದ ಒಂದು ವರ್ಷದ ನಂತರ ಅಂಕೋಲಾಗೆ ಬಂದು ಮುಂದೆ ಭಾವಿಕೇರಿಯಲ್ಲಿ 1909 ರಿಂದ ಶಿಕ್ಷಕರಾಗಿ ಸುಮಾರು 12 ವರ್ಷ ಕಾರ್ಯನಿರ್ವಹಿಸಿದರು. ಅನಂತರ ಸುಂಕೇರಿಯಲ್ಲಿ ಒಂದುವರೆ ವರ್ಷ,ಕಡವಾಡದಲ್ಲಿ ಆರು ತಿಂಗಳು,ಹಳಿಯಾಳದಲ್ಲಿ ಒಂದುವರೆ ವರ್ಷ, ಕಾರವಾರದಲ್ಲಿ ಎರಡು ವರ್ಷ, ಪುನಃ ಅಂಕೋಲಾದಲ್ಲಿ ಒಂದು ವರ್ಷ, ಅಲ್ಲಿಂದ ಕಾರವಾರದ ಬಾಡಕ್ಕೆ ವರ್ಗಾವಣೆಗೊಂಡರು.ಆ ಕಾಲದಲ್ಲಿ ವಾಹನ ಸಂಚಾರ ಇಲ್ಲದೇ ಇರುವುದರಿಂದ ಎತ್ತಿನ ಗಾಡಿಯಲ್ಲಿ ಸಂಚರಿಸುವುದು ಅನಿವಾರ್ಯವಾಗಿತ್ತು.
ಆಗ 1931 ನೇ ಇಸ್ವಿ.ಬಾಡದಲ್ಲಿ ಕುಟುಂಬ ಸಹಿತ 4 ತಿಂಗಳಿಂದ ನೆಲೆಸಿದ್ದರು.ಆಗಲೇ ದೇಶದಲ್ಲಿ ಪ್ಲೇಗ್ ಮಹಾಮಾರಿ ಕಾಲಿಟ್ಟಿತು. ಇದೊಂದು ಇಲಿಗಳಿಂದ ಹರಡುವ ಸಾಂಕ್ರಾಮಿಕ ರೋಗ. ಆಗ ಈ ರೋಗಕ್ಕೆ ಔಷಧ ಕಂಡು ಹಿಡಿದಿರಲಿಲ್ಲ‌.ಸಾವಿರಾರು ಇಲಿಗಳು ಸಾಯಲಾರಂಭಿಸಿದವು.ಸತ್ತ ಇಲಿಗಳಿಂದ ಹುಟ್ಟಿದ ಕೀಟದಿಂದ ಈ ರೋಗ ಹರಡುತ್ತಿತ್ತು.ಆಗ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹಿರಿಯ ಮಗ ಸಾಂತಪ್ಪನು ಹಬ್ಬಕ್ಕೆ ಬಬ್ರುವಾಡದ ಅಜ್ಜನಮನೆಗೆ ಆಗಮಿಸಿದ್ದನು. ಬಾಡದಲ್ಲಿ ರೋಗ ಹರಡಲಾರಂಭಿಸಿತು.ಮಾಳಪ್ಪನು ರೋಗ ತಗುಲಿ ಮೃತಪಟ್ಟಿದ್ದ ಗೆಳೆಯನನ್ನು ನೋಡಲು ಹೋಗಿದ್ದರಿಂದ ಇವರಿಗೂ ರೋಗ ತಗುಲಿ ಜ್ವರ ಬಂದು ಪರಿಸ್ಥಿತಿ ವಿಷಮವಾಯಿತು. ಊರಿಗೆ ಬಂದ ಮಗನಿಗೆ ಬಾಡಕ್ಕೆ ಜರೂರ್ ಬರುವಂತೆ ಟೆಲಿಗ್ರಾಂ ಬಂದಿತು.ಸಾಂತಪ್ಪನು ಸೋದರಮಾವ ನಾಗಪ್ಪನ ಜೊತೆ ಬಾಡಕ್ಕೆ ತೆರಳಿದನು.ಆಗಲೇ ಮಾಳಪ್ಪನವರು ದೈವಾಧೀನರಾದರು.ಇದರಿಂದ ಕುಟುಂಬದವರು ಶೋಕಸಾಗರದಲ್ಲಿ ಮುಳುಗಿದರು.ಆಗ ಅವರಿಗೆ ಕೇವಲ 43 ವರ್ಷ.ಮೃತರ ಅಂತ್ಯಕ್ರಿಯೆಯನ್ನು ಬಾಡದಲ್ಲಿ ನಡೆಸಿ ಉಳಿದ ಕಾರ್ಯವನ್ನು ಬಡಗೇರಿಯಲ್ಲಿ ನಡೆಸಲಾಯಿತು.
ಈ ದುರದೃಷ್ಟಕರ ಘಟನೆಯಿಂದ ಮನೆಯ ಪರಿಸ್ಥಿತಿ ಕಳವಳಕಾರಿಯಾಯಿತು. ಮಕ್ಕಳೆಲ್ಲರೂ ಅಪ್ರಾಪ್ತ ವಯಸ್ಕರು.ಹಿರಿಯ ಮಗ ಸಾಂತಪ್ಪನಿಗೆ ಹದಿನೈದು ವರ್ಷ. ಕಿರಿಯಮಗ ಮಹಾಬಲೇಶ್ವರನಿಗೆ 11ವರ್ಷ. ಕಿರಿಯ ಮಗಳು ಯಮುನಾಳಿಗೆ ಎರಡು ವರ್ಷ.ಹಿರಿಯ ಮಗಳು ಗಂಗಾಳ ಮದುವೆಯನ್ನು ತಂದೆಯೇ ಮಾಡಿದ್ದರು.ದುಡಿಯುವ ಸದಸ್ಯರು ಮನೆಯಲ್ಲಿ ಇಲ್ಲದಿರುವುದರಿಂದ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಯಿತು.ಆಗ ಮೃತರ ಉಳಿತಾಯ ಖಾತೆಯಲ್ಲಿದ್ದ ಹಣ ಕೇವಲ 3400 ರೂ.ಮಾತ್ರ.
ಆಗಿನ ಶಿಕ್ಷಣಾಧಿಕಾರಿಗಳಾದ ಶ್ರೀ ನವಲಗುಂದ ಸಾಹೇಬರು ಸಾಂತಪ್ಪನಿಗೆ ನೌಕರಿ ಕೊಡುವ ಆಶ್ವಾಸನೆ ನೀಡಿದರು.18 ವರ್ಷ ಆಗುವವರೆಗೆ ಕಾಯುವುದು ಅನಿವಾರ್ಯವಾಗಿತ್ತು.ಆದರೆ ಕೆಲವೇ ದಿನಗಳಲ್ಲಿ ನವಲಗುಂದ ಸಾಹೇಬರಿಗೆ ವರ್ಗಾವಣೆಯಾದ್ದರಿಂದ ಸಮಸ್ಯೆ ಎದುರಾಯಿತು. ಸುದೈವದಿಂದ ಶ್ರೀ ವಾಸುದೇವರಾವ್ ಕಸಬೇಕರ ಶಿಕ್ಷಣ ಅಧಿಕಾರಿಗಳಾಗಿ ಆಗಮಿಸಿ ಸಾಂತಪ್ಪನಿಗೆ ಶಿಕ್ಷಕರಾಗಿ 1933 ರಲ್ಲಿನೇಮಕ ಮಾಡಿದರು.
ಕುಟುಂಬದ ಸದಸ್ಯರು, ಸಮಕಾಲೀನರೂ ಆದ ಶ್ರೀ ಏಕನಾಥ,ನಾಗಪ್ಪ,ಮಂಜುನಾಥ ಮತ್ತು ರಾಮಚಂದ್ರ ಇವರ ಲಿಖಿತ ದಾಖಲೆಯ ಆಧಾರದಿಂದ ಮೇಲಿನ ಮಾಹಿತಿಯನ್ನು ಕೊಡಲಾಗಿದೆ. ಅವರೆಲ್ಲರಿಗೂ ಕೃತಜ್ಞತೆಗಳು.
ಪ್ರತಿ ವರ್ಷ ಮಹಾಲಯದ ದಿನದಂದು ಅವರನ್ನು ಸ್ಮರಿಸಿ ಅನ್ನವನ್ನು ನೀಡಿ ಆತ್ಮಕ್ಕೆ ಶಾಂತಿಯನ್ನು ಕೋರಲಾಗುತ್ತಿದೆ.
ದಿವಂಗತರ ಕೃಪಾಶೀರ್ವಾದ ಕುಟುಂಬದವರ ಮೇಲೆ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.
ಶ್ರೀಪಾದ.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles