ಅಮೆರಿಕದಲ್ಲಿಯೂ ಬಡವರು!

ಅಮೆರಿಕದಲ್ಲಿಯೂ ಬಡವರು! (ಕಾವ್ಯಾ ಕಡಮೆ ನಾಗರಕಟ್ಟೆ ಲೇಖನ)

“ಡೂ ಯೂ ಹ್ಯಾವ್ ಅ ಮಿನಿಟ್?” ನಮ್ಮ ಮನೆಗೆ ಹತ್ತಿರವಿರುವ ಹೈಲ್ಯಾಂಡ್ ಪಾರ್ಕ್ ಗ್ರಂಥಾಲಯದಲ್ಲಿ ಪುಸ್ತಕವೊಂದರಲ್ಲಿ ಮುಖ ಹುದುಗಿಸಿ ಕುಳಿತಾಗ ಕೇಳಿದ ಆ ದನಿಗೆ ತಲೆಯೆತ್ತಿದೆ. ಸುಮಾರು ನಲವತ್ತರಂಚಿನ ಆ ಹೆಂಗಸು ಪ್ರಶ್ನಾರ್ಥಕವಾಗಿ ನನ್ನನ್ನು ನೋಡುತ್ತಿದ್ದಳು. ನನಗೆ ಆ ಹೊತ್ತು ಬೇರೇನೂ ಮುಖ್ಯ ಕೆಲಸ ಇರದಿದ್ದ ಕಾರಣ “ಯೆಸ್, ಹೌ ಮೆ ಐ ಹೆಲ್ಪ್ ಯೂ?” ಅಂದೆ.
ಆಗ ನಾನು ಈ ಗ್ರಂಥಾಲಯದಲ್ಲಿ ವಾಲಂಟಿಯರಿಂಗ್ ಮಾಡುತ್ತಿದ್ದೆ. ಅಂದರೆ ಸಮಯ ಸಿಕ್ಕಾಗ ಲೈಬ್ರರಿಯ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಡುವುದು. ಓದುಗರು ಮರಳಿಸಿದ ಪುಸ್ತಕಗಳನ್ನು ಪುನಃ ರ‍್ಯಾಕ್‌ಗಳಲ್ಲಿ ಹೊಂದಿಸಿಡುವುದು, ಲೈಬ್ರರಿಗೆ ಬಂದ ಹೊಸ ಪುಸ್ತಕಗಳಿಗೆ ಲೇಬಲ್ ಹಚ್ಚಿ ವೆಬ್‌ಸೈಟಿನಲ್ಲಿ ಪಟ್ಟಿ ಮಾಡುವುದು, ಪುಟ್ಟ ಚೀಟಿಗಳಲ್ಲಿ ಪುಸ್ತಕದ ಹೆಸರನ್ನು ಮಾತ್ರ ಬರೆದು ತಂದ ಹಿರಿಯ ನಾಗರಿಕರಿಗೆ ಆ ಹೊತ್ತಿಗೆಗಳನ್ನು ಹುಡುಕಿಕೊಡುವುದು ಮುಂತಾದವು ಆ ಕೆಲಸದಲ್ಲಿ ಸೇರಿರುತ್ತಿದ್ದವು. ಆಗಾಗ ಇಷ್ಟದ ಪುಸ್ತಕ ಹಿಡಿದು ಸೋಫಾದ ಮೇಲೆ ಪವಡಿಸುವುದೂ ಸಾಧ್ಯವಾಗುತ್ತಿತ್ತು.
ಅಂದು ನನ್ನನ್ನು ಮಾತನಾಡಿಸಿದ ಹೆಂಗಸಿನ ಹೆಸರು ಟ್ರೇಸಿ ಅಂತ ತಿಳಿಯಿತು. ಅಂತರ್ಜಾಲದಲ್ಲಿ ಒಂದು ಅರ್ಜಿಯನ್ನು ಕಳುಹಿಸಲು ಸಹಾಯ ಬೇಕಿತ್ತೆಂದು ಕೇಳುತ್ತಿದ್ದಳು. ಗ್ರಂಥಾಲಯದ ಓದುವ ತಾಣದಿಂದ ಕಂಪ್ಯೂಟರ್ ಸೆಕ್ಷನ್ನಿಗೆ ತೆರಳುವಾಗ ಮಾತನಾಡುತ್ತ ನಡೆದಳು.
ಟ್ರೇಸಿ ಒಬ್ಬ ಸಿಂಗಲ್ ಮದರ್. ಅಂದರೆ ಸಂಗಾತಿಯ ಸಹಾಯವಿಲ್ಲದೇ ಮಕ್ಕಳನ್ನು ಬೆಳೆಸುವ ಹೊಣೆ ಹೊತ್ತವಳು. ಅವಳಿಗೆ ಮೂವರು ಮಕ್ಕಳು. ದೊಡ್ಡವನು ಮೈಕಲ್ ಸಿನಿಮಾಗಳಲ್ಲಿ ನಟಿಸುವ ಆಸೆಯಿಂದ ದೂರದ ಲಾಸ್ ಏಂಜಲಿಸ್ ಪಟ್ಟಣವನ್ನು ಸೇರಿದ್ದ. ಕಳೆದ ಒಂದಿಷ್ಟು ತಿಂಗಳಿಂದ ಅವನ ಫೋನ್ ಕರೆಗಳು ಬರುವುದೂ ನಿಂತುಹೋಗಿತ್ತು. ಮಗಳು ಸೂಸಿ ಮತ್ತು ಚಿಕ್ಕ ಮಗ ಟರ‍್ರಿ ಇಬ್ಬರೂ ಶಾಲೆಯಲ್ಲಿ ಓದುತ್ತಿದ್ದರು. ಒಂದಿಷ್ಟು ವರ್ಷ ತನ್ನ ಮನೆಯ ಹತ್ತಿರವಿರುವ ರೆಸ್ಟಾರೆಂಟ್ ಒಂದರಲ್ಲಿ ಟ್ರೇಸಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಅವಳು ಇಡೀ ದಿನ ಕೆಲಸಕ್ಕೆಂದು ತೆರಳಿದಾಗ ಮನೆಯಲ್ಲಿ ಮಕ್ಕಳ ಬದುಕು ಅತಂತ್ರವಾಗುತ್ತಿತ್ತು. ಅವಳ ಮನೆಯಿರುವ ಏರಿಯಾ ಅಷ್ಟೇನೂ ಸುರಕ್ಷಿತವಾಗಿರಲಿಲ್ಲ. ಎಂಟ್ಹತ್ತು ವರ್ಷದ ಹುಡುಗರನ್ನೇ ಮಾದಕ ವಸ್ತುಗಳನ್ನು ಮಾರುವ ಏಜೆಂಟರನ್ನಾಗಿ ಲೋಕಲ್ ಡ್ರಗ್ ಲಾರ್ಡುಗಳು ನೇಮಿಸಿಕೊಳ್ಳುತ್ತಿದ್ದರು. ಪೋಷಕರು ಮಕ್ಕಳ ವಿಷಯದಲ್ಲಿ ಚೂರೇ ಚೂರು ಅಸಡ್ಡೆ ತೋರಿದರೂ ಅವರು ಕೈತಪ್ಪಿ ಹೋಗುವುದರಲ್ಲಿ ಸಂದೇಹವಿರಲಿಲ್ಲ. ಅವಳ ಚಿಕ್ಕ ಮಗನ ಸ್ನೇಹಿತರನೇಕರು ಕಿಸೆಗಳಲ್ಲಿ ಚಾಕುಗಳನ್ನು ಜಳಪಿಸುತ್ತ ನಡೆಯುತ್ತಿದ್ದರಂತೆ.
ಮಕ್ಕಳ ಭವಿಷ್ಯದ ಕುರಿತು ಚಿಂತೆ ಕಾಡಿ ಟ್ರೇಸಿ ಕೆಲಸ ಬಿಟ್ಟಿದ್ದಳು. ಈಗ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಸರ್ಕಾರ ಒದಗಿಸುವ ಧನಸಹಾಯದಿಂದ ಬದುಕು ನಡೆಸುತ್ತಿದ್ದಳು. ಆಹಾರ ಕೊಳ್ಳಲು ಫುಡ್-ಸ್ಟಾಂಪುಗಳು, ನಿರುದ್ಯೋಗಿ ಭತ್ಯೆ, ‘ಮೆಡಿಕೇಡ್’ ಹೆಸರಿನ ಆರೋಗ್ಯ ಸೇವೆ, ಸಹಾಯ ಬೇಕಿರುವ ಕುಟುಂಬಗಳಿಗೆ ಒದಗಿಸಲಾಗುವ ತಾತ್ಕಾಲಿಕ ನೆರವು (TANF- Temporary Assistance for Needy Families), ಆರ್ಥಿಕವಾಗಿ ಹಿಂದುಳಿದವರಿಗೆ ಕೊಡಮಾಡುವ ವಿಶೇಷ ತೆರಿಗೆ ವಿನಾಯಿತಿ ಮುಂತಾದ ಅನೇಕ ಸೇವೆಗಳು ಸರಕಾರ ಒದಗಿಸುವ ಈ ಧನಸಹಾಯ ಸೇವೆಯಲ್ಲಿ ಸೇರಿರುತ್ತದೆ. ಟಿ.ಎ.ಎನ್.ಎಫ್ ಸೇವೆಗೆ ಅರ್ಹವಾಗಲು ಅವಳು ವಾರಕ್ಕೆ ಮೂವತ್ತು ಘಂಟೆಗಳ ಕಾಲ ಕೆಲಸ ಮಾಡಲೇಬೇಕಿತ್ತು. ಹೀಗಾಗಿ ಮಕ್ಕಳ ಶಾಲೆಯ ಸಮಯದಲ್ಲಿಯೇ ನ್ಯಾನಿಯಾಗಿ ಅಂದರೆ ಪರರ ಮಕ್ಕಳನ್ನು ನೋಡಿಕೊಳ್ಳುವ ದಾದಿಯಾಗಿ ಪಾರ್ಟ್-ಟೈಮ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಳು.
ಅಂದು ಟ್ರೇಸಿ ನನ್ನ ಸಹಾಯ ಕೇಳುತ್ತಿದ್ದುದೂ ಅಂಥದೇ ಒಂದು ಧನಸಹಾಯಕ್ಕಾಗಿ ಅರ್ಜಿ ಸಲ್ಲಿಸಲು. ಸ್ಕ್ಯಾನ್ ಮಾಡಿದ ಅವಳ ಸಹಿಯನ್ನು ಅರ್ಜಿಯಲ್ಲಿ ನಮೂದಿಸಲು ಕಷ್ಟಪಡುತ್ತಿದ್ದಳು. ಒಂದೇ ಕ್ಲಿಕ್ಕಿನಲ್ಲಿ ಅವಳ ಸಹಿ ಅರ್ಜಿಯಲ್ಲಿ ನಮೂದಾಗುವಂತೆ ಮಾಡಿದ್ದಕ್ಕೆ ಖುಷಿಪಟ್ಟು ಹಾರ್ದಿಕವಾಗಿ ಥ್ಯಾಂಕ್ಸ್ ಹೇಳಿ ಅಪ್ಪಿಕೊಂಡಳು.
ಟ್ರೇಸಿಯ ನಡೆಯಲ್ಲಿ, ಮಾತಿನಲ್ಲಿ ಒಂದು ಬಗೆಯ ನಿರಾತಂಕವನ್ನು ಕಂಡೆ. ಅಮೆರಿಕದಂಥ ದೈತ್ಯದೇಶ ಮಾತ್ರ ಕಡುಬಡವರಿಗೂ ಒದಗಿಸಬಲ್ಲ ನಿರಾಯಾಸವಿರಬಹುದು ಇದು ಅನ್ನಿಸಿತು. ಉಗುರನ್ನು ನೀಟಾಗಿ ಕತ್ತರಿಸಿಕೊಂಡು ನೇಲ್‌ಪಾಲಿಶ್ ಹಚ್ಚಿದ್ದಳು. ಒಂದು ಬದಿಯ ಕೂದಲಿಗೆ ಚೆಲುವಾಗಿ ನೀಲಿ ಬಣ್ಣದ ಹೇರ್‌ಕಲರ್ ಹಚ್ಚಲಾಗಿತ್ತು. ಸ್ವಭಾವದಲ್ಲಿ, ಆಗಾಗ ಚೆಲ್ಲುವ ನಗುವಿನಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು.
“ವಾರಕ್ಕೆ ಮೂವತ್ತು ಘಂಟೆ ದುಡಿದು, ಆ ಸಂಬಳದ ಜೊತೆ ಸರ್ಕಾರದ ಧನಸಹಾಯ ಪಡೆದರೂ ಅದು ಮನೆಯ ಬಾಡಿಗೆಗೆ, ಕಾರಿನ ಪೆಟ್ರೋಲಿಗೇ ಸಾಕಾಗಲ್ಲ. ಹೆಚ್ಚು ದುಡಿಯಲು ಹೋಗಿ ಮನೆಯಲ್ಲಿ ಮಕ್ಕಳನ್ನಷ್ಟೇ ಬಿಡುವ ರಿಸ್ಕನ್ನು ಹೇಗೆ ತೊಗೊಳ್ಳಲಿ ಹೇಳು?” ಅಂತ ನಿಟ್ಟುಸಿರುಬಿಟ್ಟಳು. ವರ್ಷಕ್ಕೆ ನಾಲ್ಕು ತಿಂಗಳು ಹಿಮ ಸುರಿಯುವ ನ್ಯೂಜೆರ್ಸಿಯಂಥ ರಾಜ್ಯದ ಪಟ್ಟಣಗಳಲ್ಲಿ ಕಾರು ಮತ್ತು ಏರ್‌ಕಂಡೀಷನರ್‌ಗಳು ಐಶಾರಾಮಿ ಸಾಧನಗಳಾಗಿರದೇ ದಿನಬಳಕೆಯ ಅಗತ್ಯ ವಸ್ತುವಾಗಿರುವುದರ ಅರಿವಿದ್ದ ನಾನು ತಲೆದೂಗಿದೆ. ಇಲ್ಲಿ ಹೆಚ್ಚು ಕಡಿಮೆ ಎಲ್ಲರ ಬಳಿಯೂ ಕಾರ್ ಇರುವುದರಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೂ ನೆಚ್ಚಿಕೊಳ್ಳುವಂತಿಲ್ಲ.
ಇಲ್ಲಿಗೆ ಬರುವ ಮೊದಲು ನನಗೆ ಅಮೆರಿಕಾದಲ್ಲೂ ಬಡವರಿರುತ್ತಾರೆ ಅಂತ ಹೇಳಿದ್ದರೆ ನಂಬುತ್ತಿದ್ದೆನೋ ಇಲ್ಲವೋ. ಅದಕ್ಕೆ ಕಾರಣ ನಮ್ಮ ಸಿನಿಮಾಗಳಲ್ಲಿ, ಪ್ರವಾಸಿ ಫೋಟೋಗಳಲ್ಲಿ ಅಮೆರಿಕವೆಂದರೆ ಥಳಥಳ ಹೊಳೆಯುವ ರಸ್ತೆಗಳನ್ನು, ಗಾಜು ಹೊದಿಸಿದ ಸ್ಟೇನ್‌ಲೆಸ್ ಸ್ಟೀಲು ಕಟ್ಟಡಗಳನ್ನು, ಐಶಾರಾಮಿ ಬಂಗಲೆಗಳನ್ನು ಮಾತ್ರ ಕಾಣಿಸುವುದೂ ಇದಕ್ಕೆ ಕಾರಣವಿರಬಹುದೇನೋ. ಆ ಥಳುಕಿನ ಪರದೆಯನ್ನು ಚೂರೇ ಚೂರು ಸರಿಸಿ ನೋಡಿದಾಗ ಜನಜೀವನದ ಇತರ ಸಹಜ ಬಣ್ಣಗಳು ತಡವಿಲ್ಲದೇ ಕಣ್ಣಿಗೆ ಕಾಣುವವು.
“ದುಡಿದಿದ್ದನ್ನೆಲ್ಲ ಬಾಡಿಗೆಗೆ, ಪೆಟ್ರೋಲಿಗೆ ಹಾಕಿದರೆ ಮತ್ತೆ ಊಟಕ್ಕೇನು ಮಾಡುತ್ತೀರಿ ನೀನು ಮತ್ತು ಮಕ್ಕಳು?” ಅಂತ ಟ್ರೇಸಿಯನ್ನು ಕೇಳಿದೆ. ಆಗಲೇ ನನಗೆ ಕೇಂದ್ರ ಕೃಷಿ ಇಲಾಖೆಯ ‘ಸ್ನಾಪ್’ ಸೇವೆಯ ಬಗೆಗೆ ತಿಳಿದಿದ್ದು.
‘ಸ್ನಾಪ್’ ಎಂದರೇನು?
೨೦೦೪ರ ತನಕ ಕೇಂದ್ರ ಸರಕಾರ ಬಡತನ ರೇಖೆಗಿಂತ ಕೆಳಗಿರುವವರಿಗೆ ‘ಫುಡ್-ಸ್ಟಾಂಪ್’ಗಳನ್ನು ಕೊಡುತ್ತಿತ್ತು. ಫುಡ್‌ಸ್ಟಾಂಪುಗಳೆಂದರೆ ಊಟ ಕೊಳ್ಳುವ ಚೀಟಿಗಳು. ಈ ಸ್ಟಾಂಪುಗಳಲ್ಲಿ ಒಂದು ಡಾಲರ್ ಮೌಲ್ಯದ ಕಂದು ಚೀಟಿ, ಐದು ಡಾಲರ್ ಮೌಲ್ಯದ ನೀಲಿ ಚೀಟಿ ಮತ್ತು ಹತ್ತು ಡಾಲರ್ ಮೌಲ್ಯದ ಹಸಿರು ಚೀಟಿಗಳು ಸೇರಿರುತ್ತಿದ್ದವು. ಈ ಚೀಟಿಗಳನ್ನು ಸೂಪರ್‌ಮಾರ್ಕೆಟ್ಟಿನಲ್ಲಿ, ದಿನಸಿ ಅಂಗಡಿಗಳಲ್ಲಿ ಕೊಟ್ಟರೆ ಆ ಚೀಟಿಯ ಮೌಲ್ಯದ ದಿನಸಿಯನ್ನು ಅಥವಾ ತಯಾರಿಸಿದ ಊಟವನ್ನು ಕೊಳ್ಳಬಹುದಿತ್ತು. ಈ ಚೀಟಿಗಳ ಮೂಲಕ ಹಣ್ಣು ಮತ್ತು ತರಕಾರಿಗಳು, ಬೆಳಗಿನ ತಿಂಡಿಗಾಗಿ ಬ್ರೆಡ್ ಮತ್ತು ಸೀರಿಯಲ್‌ಗಳು, ಹಾಲು, ಊಟಕ್ಕೆ ಅಗತ್ಯವಿರುವ ಮೀನು ಮತ್ತಿತರ ಮಾಂಸಾಹಾರಿ ಪದಾರ್ಥಗಳನ್ನು ಕೊಳ್ಳಬಹುದಿತ್ತು. ಆದರೆ ವೈನ್, ಬಿಯರ್, ಸಿಗರೇಟ್, ಹೊಗೆಸೊಪ್ಪು ಮುಂತಾದ ಮಾದಕ ವಸ್ತುಗಳನ್ನು ಈ ಚೀಟಿಗಳಲ್ಲಿ ಕೊಳ್ಳಲು ಬಿಡುತ್ತಿರಲಿಲ್ಲ.
ಈ ವ್ಯವಸ್ಥೆಯನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂತು. ಕೆಲವರು ಈ ಫುಡ್‌ಸ್ಟಾಂಪುಗಳನ್ನು ಇನ್ನೊಬ್ಬರಿಗೆ ಮಾರಿ ಆ ಹಣದಲ್ಲಿ ಮಾದಕ ವಸ್ತುಗಳನ್ನು ಕೊಳ್ಳುತ್ತಿದ್ದರು. ಒಮ್ಮೊಮ್ಮೆ ಈ ಚೀಟಿಗಳು ಕಳುವಾಗಿಬಿಡುತ್ತಿದ್ದವು. ಕೆಲವು ಸಲ ದಿನಸಿ ಅಂಗಡಿಯ ಸಾಲುಗಳಲ್ಲಿ ನಿಂತಾಗ ಫುಡ್‌ಸ್ಟಾಂಪುಗಳನ್ನು ಪೇರಿಸಿ ಕೊಡುವುದು ಮುಜುಗರದ ಸಂಗತಿಯಾಗಿತ್ತು. ಸಾಲಿನಲ್ಲಿ ನಿಂತ ಇತರ ನಾಗರಿಕರು ಇವರನ್ನು ಕಡೆಗಣ್ಣಿನಿಂದ ಹಂಗಿಸಿ ನೋಡುತ್ತಿದ್ದರು. ಇಂಥ ನೋಟಗಳಿಂದ ಹಣವಿಲ್ಲದವರ ಆತ್ಮಸ್ಥೈರ್ಯ ಇನ್ನಷ್ಟು ಕುಗ್ಗಿ ಗಾಯದ ಮೇಲೆ ಬರೆ ಎಳೆದಂತಾಗುತ್ತಿತ್ತು. ಇಂಥದೇ ಹಲವು ಕಾರಣಗಳಿಗಾಗಿ ಈ ಚೀಟಿಗಳ ಉಪಯೋಗವನ್ನು ನಿಲ್ಲಿಸಿ ಇಲೆಕ್ಟ್ರಾನಿಕ್ ಕಾರ್ಡುಗಳ ಬಳಕೆ ತರಬೇಕೆಂದು ಕೆಲವರ್ಷಗಳಿಂದ ಮಾತುಕತೆ ನಡೆಯುತ್ತಿತ್ತು.
ಕೊನೆಗೆ ೨೦೦೪ರ ಜೂನ್ ತಿಂಗಳಲ್ಲಿ ಆಗ ಅಧಿಕಾರದಲ್ಲಿದ್ದ ಬುಶ್ ಆಡಳಿತ ಫುಡ್‌ಸ್ಟಾಂಪುಗಳಿಗೆ ಸಂಪೂರ್ಣವಾಗಿ ವಿದಾಯ ಹೇಳಿತು. ಆ ಊಟದ ಚೀಟಿಗಳ ಬದಲಾಗಿ ಡೆಬಿಟ್ ಕಾರ್ಡುಗಳನ್ನು ಹೋಲುವ ಇ.ಬಿ.ಟಿ (ಇಲೆಕ್ಟ್ರಾನಿಕ್ ಬೆನಿಫಿಟ್ ಟ್ರಾನ್ಸ್ಫರ್) ಕಾರ್ಡುಗಳನ್ನು ಫಲಾನುಭವಿಗಳಿಗೆ ಕೊಡಮಾಡಲಾಯಿತು. ಈಗ ಈ ಸೇವೆ ಪಡೆಯುವವರು ಕಟ್ಟುನಿಟ್ಟಾಗಿ ಊಟಕ್ಕೆ ಬೇಕಾಗುವ ಅಗತ್ಯ ವಸ್ತುಗಳನ್ನು ಮಾತ್ರ ಕೊಳ್ಳಲು ಸಾಧ್ಯವಾಗಿದೆ. ಈ ಕಾರ್ಡುಗಳು ಕಳುವಾದರೂ ತಕ್ಷಣ ಕಳುವಾದ ಕಾರ್ಡಿನ ಉಪಯೋಗವನ್ನು ನಿಲ್ಲಿಸುವಂತೆ ಬ್ಲಾಕ್ ಮಾಡಲಾಗುತ್ತದೆ. ಈ ಸೇವೆಯಲ್ಲಿ ತಿಂಗಳಿಗೆ ಒಬ್ಬರಿಗೆ ಸುಮಾರು ನೂರಾ ಇಪ್ಪತ್ತೊಂದು ಡಾಲರುಗಳಷ್ಟು ಹಣವನ್ನು ಊಟದ ನಿರ್ವಹಣೆಗೆಂದು ಕೊಡಲಾಗುತ್ತದೆ. ಈ ಪೂರ್ತಿ ಕಾರ್ಯಕ್ರಮವನ್ನು ‘ಸ್ನಾಪ್’ ಎಂಬ ಹೊಸ ಹೆಸರಿನಲ್ಲಿ ಕರೆಯಲಾಗುತ್ತದೆ. ‘ಸ್ನಾಪ್’ ಎಂದರೆ ‘ಸಪ್ಲಿಮೆಂಟಲ್ ನ್ಯೂಟ್ರಿಷನ್ ಅಸಿಸ್ಟನ್ಸ್ ಪ್ರೋಗ್ರಾಮ್’ ಎಂದು. ಅಂದರೆ ಅಧಿಕ ಅಗತ್ಯ ಪೋಷಕಾಂಶಗಳನ್ನು ಒದಗಿಸುವ ಸೇವೆ ಎಂಬ ಅರ್ಥ ಬರುತ್ತದೆ.
ಅಮೇರಿಕದ ಜನಗಣತಿ ಕಾರ್ಯಾಲಯ ೨೦೧೬ರಲ್ಲಿ ತಯಾರಿಸಿದ ವರದಿಯ ಪ್ರಕಾರ ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಶೇಖಡಾ ೧೨.೭%ರಷ್ಟು ಜನ ಬಡತನ ರೇಖೆಗಿಂತ ಕೆಳಗಿದ್ದಾರೆ. ಅಂದರೆ ಸುಮಾರು ನಾಲ್ಕುಕೋಟಿ, ಆರು ಲಕ್ಷ ಜನರು ಈ ವರ್ಗದಲ್ಲಿ ಗುರುತಿಸಲ್ಪಡುತ್ತಾರೆ. ಈ ಗಣತಿ ಕಾರ್ಯಾಲಯವು ಬಡತನ ರೇಖೆಯನ್ನು ವ್ಯಾಖ್ಯಾನಿಸಲು ಬೇರೆಬೇರೆ ಮಾನದಂಡಗಳನ್ನು ಉಪಯೋಗಿಸುತ್ತದೆ. ಉದಾಹರಣೆಗೆ ಇಬ್ಬರು ವಯಸ್ಕರು ಮತ್ತು ಇಬ್ಬರು ಮಕ್ಕಳಿರುವ ಮನೆಯ ಆದಾಯ ವರ್ಷಕ್ಕೆ ೨೪,೮೫೮ ಡಾಲರುಗಳಿಗಿಂಥ ಕಡಿಮೆಯಿದ್ದರೆ ಅವರು ಈ ಅಧಿಕ ಸೇವೆಗಳನ್ನು ಪಡೆಯಲು ಅರ್ಹರಾಗುತ್ತಾರೆ.
ಕಳೆದ ವರ್ಷ ವಿಶ್ವಸಂಸ್ಥೆಗಾಗಿ ಸಿದ್ಧಪಡಿಸಿದ ವಿಶೇಷ ವರದಿಯಲ್ಲಿ ಅಂತರಾಷ್ಟ್ರೀಯ ಕಾನೂನು ತಜ್ಞ ಫಿಲಿಪ್ ಆಲ್ಸ್ಟನ್ ಅಮೇರಿಕದಲ್ಲಿ ಒಂದು ಕೋಟಿ, ತೊಂಬತ್ತು ಲಕ್ಷ ಜನ ಭರವಸೆಯೇ ಇಲ್ಲದ ಕಡುಬಡತನದಲ್ಲಿ ಬದುಕು ನಡೆಸುತ್ತಿದ್ದಾರೆ ಅಂತ ಹೇಳಿದಾಗಿನಿಂದ ಇಲ್ಲಿನ ಮಾನವ ಹಕ್ಕುಗಳ ಪ್ರತಿಪಾದಕರು ನಿದ್ದೆಗೆಡುವಂತಾಗಿದೆ. ಪ್ರಪಂಚದ ಅತಿ ಶ್ರೀಮಂತ ರಾಷ್ಟçಗಳಲ್ಲಿ ಒಂದಾದ ಅಮೇರಿಕಾದ ಪ್ರಜೆಗಳು ಆಹಾರ, ಕುಡಿಯುವ ನೀರು, ನೈರ್ಮಲ್ಯ, ಆರೋಗ್ಯಸೇವೆ, ಆಶ್ರಯ, ವಿದ್ಯೆ, ಮಾಹಿತಿಯಿಂದ ವಂಚಿತರಾಗಿದ್ದಾರೆ ಎಂದು ಸಾರುವ ಈ ವರದಿ ಎಷ್ಟೋ ಪಂಡಿತರನ್ನು ಕಂಗೆಡಿಸಿದೆ. ಈ ಸಂಖ್ಯೆಗಳು ಈ ದೇಶದ ಆತ್ಮಸ್ಥೈರ್ಯ ಎತ್ತಿಹಿಡಿವ ‘ಅಮೆರಿಕನ್ ಡ್ರೀಮ್’ ಎಂಬ ಮೂಲಮಂತ್ರಕ್ಕೆ ಕುತ್ತು ತರುವಂತಿದೆ. ಯಾವುದೇ ಹಿನ್ನಲೆಯಿಂದ ಬಂದವರಾದರೂ ಕಷ್ಟಪಟ್ಟು ದುಡಿದರೆ ಮುಂದೆ ಬರಬಹುದು ಎಂಬ ನಂಬಿಕೆಗೆ ಪೆಟ್ಟುಬಿದ್ದಂತಾಗಿದೆ. ಸ್ವತಃ ಮಾನವ ಹಕ್ಕುಗಳ ಕಾರ್ಯಕರ್ತರೂ ಆಗಿರುವ ಫಿಲಿಪ್ ಆಲ್ಸ್ಟನ್ ತಮ್ಮ ಒಂದು ರೇಡಿಯೋ ಸಂದರ್ಶನದಲ್ಲಿ ಅಮೆರಿಕಾದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ ಎಂದು ಕಟುನುಡಿಗಳನ್ನಾಡಿದ್ದಾರೆ.
ಬಡತನವೆಂಬ ವಿಷಚಕ್ರ ಮತ್ತು ಶಿಕ್ಷಣ ವ್ಯವಸ್ಥೆ
ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಗಾಗಿ ಬರೆದ ಲೇಖನದಲ್ಲಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಪತ್ರಕರ್ತ ನಿಕೊಲಾಸ್ ಕ್ರಿಸ್ಟಾಫ್ ಹೀಗೆ ಹೇಳಿದ್ದಾರೆ- “ಅಮೆರಿಕದಲ್ಲಿ ಬಡತನವೆಂಬುದು ಹಣದ ಅಭಾವದಿಂದ ಮಾತ್ರ ಉಂಟಾಗುತ್ತದೆ ಅಂತ ಹೇಳಿದರೆ ಅಪೂರ್ಣವಾದೀತು. ಏಕೆಂದರೆ ಒಮ್ಮೆ ಈ ವಿಷಚಕ್ರಕ್ಕೆ ಸಿಲುಕಿದ ವ್ಯಕ್ತಿ ಮತ್ತೆ ಮೇಲೇಳಲು ನಮ್ಮ ಸಮಾಜದಲ್ಲಿ ಬಹು ಕಡಿಮೆ ಆಯ್ಕೆಗಳಿವೆ.”
ಅಮೆರಿಕದ ಶಿಕ್ಷಣ ವ್ಯವಸ್ಥೆ ವಿವಿಧ ಆರ್ಥಿಕ ವರ್ಗಗಳ ನಡುವೆ ತಾರತಮ್ಯ ಉಂಟು ಮಾಡುವುದು ವಿಪರ್ಯಾಸವೇ ಸರಿ. ಈ ದೇಶದ ಶೇಖಡಾ ೮೭% ಮಕ್ಕಳು ಸರಕಾರಿ ಶಾಲೆಗಳಲ್ಲೇ ಉಚಿತವಾಗಿ ಕಲಿಯುತ್ತಾರೆ. ಆಯಾ ಪ್ರಾಂತ್ಯದಲ್ಲಿ ವಾಸಿಸುವ ಮಕ್ಕಳು ಆ ಪ್ರಾಂತ್ಯದ ಶಾಲೆಗಳಿಗೇ ಹೋಗಬೇಕೆಂಬ ನಿಯಮವಿದೆ. ಆ ಶಾಲೆಗಳನ್ನು ನಡೆಸಲು ಬಹುಪಾಲು ಹಣ ಆ ಪ್ರಾಂತ್ಯದಲ್ಲಿ ವಾಸಿಸುವವರ ಆಸ್ತಿ ತೆರಿಗೆಯಿಂದ (ಪ್ರಾಪರ್ಟಿ ಟ್ಯಾಕ್ಸ್ನಿಂದ) ಸಂದಾಯವಾಗುತ್ತದೆ. ಹೀಗಿದ್ದಾಗ ಶ್ರೀಮಂತ ಅಥವಾ ಮಧ್ಯಮವರ್ಗದವರು ವಾಸವಾಗಿರುವ ಪ್ರಾಂತ್ಯ (ಸ್ಕೂಲ್ ಡಿಸ್ಟಿಕ್ಟ್) ಗಳಲ್ಲಿ ಶಾಲೆಗಳ ಗುಣಮಟ್ಟ ಬಡ ಪ್ರಾಂತ್ಯದ ಶಾಲೆಗಳಿಗಿಂತ ಉತ್ತಮವಾಗಿರುತ್ತದೆ. ಬಡಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳು, ಶಿಕ್ಷಕರ ಗುಣಮಟ್ಟ, ಸುರಕ್ಷತೆ ಎಲ್ಲದಕ್ಕೂ ಮಕ್ಕಳೂ, ಪೋಷಕರೂ ಹೆಣಗಾಡಬೇಕು.
ಹಾಗಂತ ಬಡವರು ಶ್ರೀಮಂತ ಪ್ರಾಂತ್ಯಗಳಲ್ಲಿ ಮನೆ ಕೊಂಡು ಅಲ್ಲಿನ ಶಾಲೆಗಳಿಗೆ ತಮ್ಮ ಮಕ್ಕಳನ್ನು ಕಳಿಸುವುದೂ ಕಷ್ಟಸಾಧ್ಯ. ಸಿರಿವಂತ ಪ್ರಾಂತ್ಯಗಳ ಅಧಿಕ ತೆರಿಗೆ ಮತ್ತು ಮಿತಿಮೀರಿದ ಆಸ್ತಿ ಬೆಲೆಗಳು ಅವರನ್ನು ಕಂಗೆಡಿಸುತ್ತವೆ. ಈ ಕಾರಣಕ್ಕಾಗಿ ಬಡಪ್ರಾಂತ್ಯಗಳ ಶಾಲೆಯಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಎದುರಿಸುವ ಸವಾಲುಗಳು ಅಧಿಕವಾಗುತ್ತದೆ. ಹೀಗೆ ಬಡವರ ಮಕ್ಕಳನ್ನು ಬಡವರಾಗೇ ಉಳಿಸುವ, ಶ್ರೀಮಂತರ ಮಕ್ಕಳನ್ನು ಇನ್ನಷ್ಟು ಹಣವಂತರನ್ನಾಗಿಸುವ ವ್ಯವಸ್ಥೆಯಲ್ಲಿನ ತಾರತಮ್ಯವನ್ನು ಭೇದಿಸಲು ಇತ್ತೀಚೆಗೆ ಕೆಲವು ಕ್ರಮಗಳ ಕುರಿತು ಮಾತುಕತೆ ನಡೆಯುತ್ತಿದೆ.
ಹೋಮ್‌ಲೆಸ್ ಹೇಗಾಗುತ್ತಾರೆ?
ಬಡತನ ರೇಖೆಗಿಂತ ಕೆಳಗಿರುವಾಗ ಬದುಕಿನಲ್ಲಿ ಅನಿರೀಕ್ಷಿತ ತಿರುವುಗಳು ಬಂದರೆ ಆ ಸಂಕಟ ಹೇಳತೀರದು. ಇರುವ ಕೆಲಸ ದಿಢೀರನೆ ಹೋದಾಗ, ಮನೆಯ ಕ್ರಯ ತೀರಿಸಲು ಆಗದಿದ್ದಾಗ, ಮಾದಕ ವ್ಯಸನಕ್ಕೆ ತುತ್ತಾದಾಗ, ಮಾನಸಿಕವಾಗಿ ಅಸ್ವಸ್ಥರಾದಾಗ, ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತಾಗ ಇವರು ಮನೆ ತೊರೆದು ರಸ್ತೆಗಳ ಮೇಲೆ ವಾಸಿಸಲು ತೊಡಗುತ್ತಾರೆ. ೨೦೧೫ರಲ್ಲಿ ರೈಟರ್ಸ್ ನ್ಯೂಸ್ ಏಜೆನ್ಸಿಯು ವರದಿ ಮಾಡಿದ ಪ್ರಕಾರ ಅಮೇರಿಕಾದಲ್ಲಿ ಐದು ಲಕ್ಷಕ್ಕಿಂತ ಹೆಚ್ಚು ಜನ ‘ಹೋಮ್‌ಲೆಸ್’ ಅಂದರೆ ಸೂರಿಲ್ಲದ ಜನರಿದ್ದಾರೆ.
ನಾನು ಕೇಳರಿಯದ ಅನ್ಯ ಲೋಕದ ಮಾಹಿತಿಯನ್ನು ಟ್ರೇಸಿಯಿಂದ ತಿಳಿದುಕೊಂಡಾಗಿನಿದ ಅಮೆರಿಕದ ಜನಜೀವನವನ್ನು ಬೇರೆಯದೇ ಕಣ್ಣಿನಿಂದ ಕಾಣುವುದು ಸಾಧ್ಯವಾಗಿದೆ. ಅಂದು ಸಮಯವಾಯಿತೆಂದು ಲೈಬ್ರರಿಯಿಂದ ಹೊರಟ ಟ್ರೇಸಿಯನ್ನು ಇನ್ನೊಮ್ಮೆ ಅಪ್ಪಿ ಬೀಳ್ಕೊಟ್ಟೆ. ಯಾವ ಕೆಟ್ಟ ಕ್ಷಣದಲ್ಲೂ ಇವಳ ತಲೆಯ ಮೇಲಿನ ಸೂರು ಮಾಯವಾಗದಿರಲಿ ಅಂತ ಮನಸ್ಸು ಆಳವಾಗಿ ಬಯಸಿತು.
ಅಂಥ ದುರುಳ ಕ್ಷಣ ಎಂದಿಗೂ ಬರುವುದಿಲ್ಲವೆಂಬ ಆತ್ಮವಿಶ್ವಾಸದಲ್ಲಿ ಹೈಹೀಲ್ಡು ಧರಿಸಿ ಟ್ರೇಸಿ ವಿಂಗಿನಿದ ನಡೆದಿದ್ದಳು.
###

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles