ಶೃಂಗೇರಿ – ಶ್ರೀ ಶ್ರೀ ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳು

ಶ್ರೀ ಶ್ರೀ ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳು

ಶೃಂಗೇರಿ ಮಠದ 32ನೇ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನರಸಿಂಹಭಾರತೀ ಮಹಾಸ್ವಾಮಿಗಳ 141ನೇ ಆರಾಧನೆಯನ್ನು ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳು ಮತ್ತು ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳವರಿಂದ ಶೃಂಗೇರಿಯಲ್ಲಿ ದಿನಾಂಕ 24/5/ 2020 ರಂದು ನಡೆಸಲಾಯಿತು.
ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳ ಚರಿತ್ರೆಯನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.
32ನೇ ಜಗದ್ಗುರುಗಳಾದ ಶ್ರೀ ನರಸಿಂಹ ಭಾರತೀ ಮಹಾಸ್ವಾಮಿಗಳು 1798 ರಲ್ಲಿ ಜನಿಸಿದರು.ಮಹಾನ್ ತಪಸ್ವಿಗಳಾದ ಇವರು ಸುಮಾರು 40 ವರ್ಷಗಳ ಕಾಲ ವಿಜಯ ಯಾತ್ರೆ ಮಾಡಿದರು. ಬಾಲ್ಯದಲ್ಲಿ ಕಾಶಿಗೆ ತೆರಳಿ ಶಾಸ್ತ್ರಾಧ್ಯಯನವನ್ನು ನಡೆಸಿದರು.ಜಗದ್ಗುರುಗಳಾದ ಮೇಲೆ ಎಲ್ಲಾ ಶಾಸ್ತ್ರಗಳಲ್ಲಿ ಪಾರಂಗತರಾಗಿ ಮಠದ ಆಡಳಿತವನ್ನು ಸುವ್ಯವಸ್ಥೆಗೆ ತಂದರು.

ಅವರು ಹಸಿವು ನೀರಡಿಕೆಗಳನ್ನು ಜಯಿಸಿದವರಾಗಿದ್ದು,ತಮ್ಮ ಐವತ್ತನೆಯ ವಯಸ್ಸಿನಲ್ಲಿ ಸಾಮಾನ್ಯ ಆಹಾರಗಳನ್ನು ತ್ಯಜಿಸಿ ಹಾಗಲಕಾಯಿ ರಸವನ್ನು ಮಾತ್ರ ಸೇವಿಸುತ್ತಿದ್ದರು. ಶ್ರೀಗಳು ತೆಲುಗು,ಕನ್ನಡ, ತಮಿಳು,ಮರಾಠಿ,ಹಿಂದುಸ್ತಾನಿ ಬಲ್ಲವರಾಗಿದ್ದು ಸಂಸ್ಕೃತದಲ್ಲಿ ಪಾರಂಗತರಾಗಿದ್ದರು.ತಮ್ಮ ಅಪಾರವಾದ ಮಹಿಮೆಯಿಂದಾಗಿ ಪ್ರಸಿದ್ಧರಾಗಿದ್ದವರು.1838 ರಲ್ಲಿ ರಾಮೇಶ್ವರ ಪ್ರವಾಸದಲ್ಲಿ ಒಂದು ಘಟನೆ ನಡೆಯಿತು. ರಾಮನಾಥ ದೇವಾಲಯದ ಸ್ನಾನಘಟ್ಟವಾದ ಕೋಟಿತೀರ್ಥದಲ್ಲಿ ಸ್ನಾನ ಮಾಡಲು ಅಲ್ಲಿಯ ಪೂಜಾರಿಗಳು ಇತರರಿಗೆ ಸ್ನಾನ ಮಾಡಲು ಅವಕಾಶ ಕೊಡದೇ ಇರುವುದರಿಂದ ಶ್ರೀಗಳು ಈ ಕೆಟ್ಟ ಸಂಪ್ರದಾಯವನ್ನು ಮುರಿಯಲು ತಮ್ಮ ಮಂತ್ರಶಕ್ತಿಯಿಂದ ದಕ್ಷಿಣ ಭಾಗದಲ್ಲಿರುವ ‘ಸರ್ವತೀರ್ಥ’ವನ್ನು ಪವಿತ್ರಗೊಳಿಸಿದರು ಮತ್ತು ಕೋಟಿತೀರ್ಥದ ನೀರು ಮಲಿನಗೊಂಡಿತು.1872 ರಲ್ಲಿ ಎರಡನೆಯ ಯಾತ್ರೆಯಲ್ಲಿ ಅಲ್ಲಿಯ ಪೂಜಾರಿಗಳು ಕ್ಷಮಾಪಣೆ ಕೇಳಿದ್ದರಿಂದ ಕೋಟಿತೀರ್ಥವು ಮೊದಲಿನಂತೆ ಶುದ್ಧವಾಗುವಂತೆ ಅನುಗ್ರಹಿಸಿದರು.ಇದೇ ರೀತಿ ಇನ್ನೊಂದು ಪ್ರಸಂಗವು ಮಧುರೆಯ ಮೀನಾಕ್ಷಿ ದೇವಾಲಯದಲ್ಲಿ ನಡೆಯಿತು. ಶ್ರೀಗಳ ಶಿಷ್ಯರು ಮೀನಾಕ್ಷಿ ದೇವರಿಗೆ ಪೂಜಿಸಲು ಬಯಸಿದಾಗ ಅಲ್ಲಿಯ ಪೂಜಾರಿಗಳು ಅವಕಾಶ ನಿರಾಕರಿಸಿದರು.ಆಗ ಶ್ರೀಗಳು ಪೂಜಾರಿಗಳಿಗೆ ಬುದ್ಧಿ ಕಲಿಸಲು ತಮ್ಮ ಶಿಷ್ಯರ ಮೂಲಕ ಎರಡು ತೆಂಗಿನಕಾಯಿ ತರಿಸಿ,ತಮ್ಮ ಮಂತ್ರಶಕ್ತಿಯಿಂದ ದೇವತೆಯನ್ನು ಮೂರ್ತಿಯಿಂದ ತೆಂಗಿನಕಾಯಿಗೆ ಆಹ್ವಾನಿಸಿದರು.ಇನ್ನು ಮುಂದೆ ಮೀನಾಕ್ಷಿದೇವಿಯು ಮೂರ್ತಿಯ ಬದಲಾಗಿ ತೆಂಗಿನಕಾಯಿಯಲ್ಲಿ ಇರುವುದರಿಂದ ಅದಕ್ಕೆ ಪೂಜೆ ಸಲ್ಲಿಸುವಂತೆ ಭಕ್ತರಿಗೆ ಕರೆಕೊಟ್ಟರು.ಕೆಲವು ಕಾಲದ ನಂತರ ಪೂಜಾರಿಗಳು ಕ್ಷಮೆ ಕೇಳಲಾಗಿ ತೆಂಗಿನಕಾಯಿಯಿಂದ ಪುನಃ ದೇವಿಯನ್ನು ಮೂರ್ತಿಗೆ ವರ್ಗಾಯಿಸಿದರು.
ಕ್ರಿ.ಶ. 1828 ರಲ್ಲಿ ಮೈಸೂರು ಮಹಾರಾಜ ಮುಮ್ಮಡಿ ಕೃಷ್ಣರಾಜ ಒಡೆಯರ ಆಹ್ವಾನದ ಮೇರೆಗೆ ಮೈಸೂರಿಗೆ ಭೇಟಿ ಕೊಟ್ಟರು.ಮಹಾರಾಜರು ಹೇರಳ ಭೂಮಿಯನ್ನು ಮಠಕ್ಕೆ ದಾನವಾಗಿ ಕೊಟ್ಟರು. ನ್ಯಾಯ ನಿರ್ಣಯದ ಅಧಿಕಾರವನ್ನು ಮಠಕ್ಕೆ ನೀಡಿದರು. ಮಹಾರಾಜರು ಶ್ರೀಗಳಿಗೆ ಅಮೂಲ್ಯವಾದ ಕಿರೀಟವನ್ನು ಮತ್ತು ಶ್ರೀ ಚಂದ್ರಮೌಳೇಶ್ವರನಿಗೆ ನಾಗಾಭರಣಗಳನ್ನು ಅರ್ಪಿಸಿದರು. ಶ್ರೀಗಳ ಅಷ್ಟೋತ್ತರಶತನಾಮಾವಳಿಯನ್ನು ರಚಿಸಿ ಮಹಾರಾಜರು ಶ್ರೀಗಳಿಗೆ ಅರ್ಪಿಸಿದರು.ಮಠದ ಆಸ್ತಿಗೆ ಕರ ವಿಧಿಸಬಾರದೆಂದು ಆದೇಶ ಹೊರಡಿಸಿದರು.

ಆಗ ಶ್ರೀಗಳಿಗೆ 60ವರ್ಷ. ಮೈಸೂರಿನ ಶಿವಸ್ವಾಮಿ ಎಂಬ ಬಾಲಕಿನಿಗೆ ಸನ್ಯಾಸ ದೀಕ್ಷೆ ಕೊಟ್ಟು ಶ್ರೀ ಸಚ್ಚಿದಾನಂದ ಶಿವಾಭಿನವ ನರಸಿಂಹಭಾರತೀ ಎಂದು ನಾಮಕರಣ ಮಾಡಿ ತಮ್ಮ ಉತ್ತರಾಧಿಕಾರಿಯಾಗಿ ನೇಮಿಸಿದರು.ಶ್ರೀಗಳು ತಮ್ಮ ಶಿಷ್ಯರೊಂದಿಗೆ ಇನ್ನೊಮ್ಮೆ 12 ವರ್ಷಗಳ ಕಾಲ ದಕ್ಷಿಣ ಭಾರತ ಯಾತ್ರೆಯನ್ನು ಕೈಗೊಂಡರು.ಆ ಸಮಯದಲ್ಲಿ ಮೈಸೂರು, ಮದ್ರಾಸು ಮತ್ತು ಬ್ರಿಟಿಷ್ ಭಾರತ ಸರ್ಕಾರವು ಯಾತ್ರೆಗೆ ಬೇಕಾದ ಎಲ್ಲಾ ಅನುಕೂಲವನ್ನು ಮಾಡಿಕೊಟ್ಟಿತು.ಬೆಂಗಳೂರಿನ ಕಮಿಷನರ್ ಬೌರಿಂಗ್,ಸರ್ಕಾರಿ ಅಧಿಕಾರಿಗಳು ಗುರುಗಳ ಯಾತ್ರೆಯಲ್ಲಿ ಹಾಜರಿದ್ದು ಗುರುಗಳನ್ನು ಸ್ವಾಗತಿಸಬೇಕೆಂದು ಆದೇಶಿಸಿದ್ದನು.
ಕ್ರಿಸ್ತಶಕ 1877 ರಲ್ಲಿ ಶೃಂಗೇರಿಗೆ ಆಗಮಿಸಿ 1879 ರಲ್ಲಿ ಮಹಾಸಮಾಧಿಯನ್ನು ಹೊಂದುತ್ತಾರೆ.ಆಗ ಪವಾಡವೊಂದು ನಡೆಯುತ್ತದೆ. ತಮ್ಮ ಅಂತ್ಯಕಾಲದಲ್ಲಿ ಗೋಕರ್ಣದ ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸಲು ಸಂಕಲ್ಪ ಮಾಡುತ್ತಾರೆ.ಅವರ ಆತ್ಮವು ಗೋಕರ್ಣಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತದೆ. ಮಹಾಬಲೇಶ್ವರನಿಗೆ ಪೂಜೆ ಸಲ್ಲಿಸುವುದನ್ನು ಗೋಕರ್ಣದಲ್ಲಿದ್ದ ಶೃಂಗೇರಿ ಮಠದ ಪ್ರತಿನಿಧಿಯೊಬ್ಬರು ಕನಸಿನಲ್ಲಿ ಸ್ಪಷ್ಟವಾಗಿ ನೋಡುತ್ತಾರೆ.
ತಮ್ಮ ಜೀವಿತಾವಧಿಯಲ್ಲಿ ಅನೇಕ ಯುದ್ಧಗಳನ್ನು, ರಾಜ್ಯಗಳ ಏಳುಬೀಳುಗಳನ್ನು ನೋಡಿದ ಜಗದ್ಗುರುಗಳು ಹಿಂದೂ-ಮುಸ್ಲಿಂ ಮತ್ತು ಬ್ರಿಟಿಷ್ ಅಧಿಕಾರಿಗಳ ಗೌರವಕ್ಕೆ ಪಾತ್ರರಾಗಿದ್ದರು.ಗುರುಗಳ ಕೃಪಾಶೀರ್ವಾದ ಸದಾಕಾಲ ಭಕ್ತರ ಮೇಲೆ ಇರಲಿ.
ಶ್ರೀಪಾದ.
25/05/2020.
ಆಧಾರ: Book:- The Greatness of Sringeri.
A Publication of Sarada Peetham,Sringeri.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles