ಸರಸ್ವತಿಯ ಫೇಸ್‌ಬುಕ್ ಪ್ರಸಂಗ (ಸುನಂದಾ ಕಡಮೆ ಕಥೆ)

ಸರಸ್ವತಿಯ ಫೇಸ್‌ಬುಕ್ ಪ್ರಸಂಗ (ಸುನಂದಾ ಕಡಮೆ ಕಥೆ)

ಸಿಂಡಿಕೇಟ್ ಬ್ಯಾಂಕಿನ ದಾಜಿಬಾನಪೇಟೆ ಬ್ರಾö್ಯಂಚಿನಲ್ಲಿ ಉದ್ಯೋಗಿಯಾದ ತನ್ನ ಗಂಡ ಶಂಕರನಿAದ ‘ಫೇಸ್‌ಬುಕ್ ಕ್ವೀನ್’ ಎಂದು ಮುದ್ದಿನಿಂದ ಕರೆಸಿಕೊಳ್ಳುವ ಸುಮಾರು ಮೂವತ್ತೆಂಟು ನಲವತ್ತರ ಆಸುಪಾಸಿನ ನಮ್ಮ ಸರಸ್ವತಿಗೆ, ಅಂದು ಹೊರಕೋಣೆಯ ಗೋಡೆ ಗಡಿಯಾರದ ಮುಳ್ಳು ಸಂಜೆ ಐದು
ಗಂಟೆ ತೋರಿಸುತ್ತಿದ್ದಂತೆಯೇ ಒಂದು ರೀತಿಯ ಭಯಮಿಶ್ರಿತ ದಿಗಿಲು ಮುತ್ತಿಕೊಳ್ಳತೊಡಗಿತ್ತು. ಅವಳ ಈ ವಿಚಿತ್ರ ಮನಸ್ಥಿತಿಗೆ ಕಾರಣವೆಂದರೆ, ಅಂದು ಮುಂಜಾನೆ ಒಂಬತ್ತಕ್ಕೆ ಶಂಕರ ತಯಾರಾಗಿ ಅತ್ತ ಬ್ಯಾಂಕಿಗೆ ತೆರಳುತ್ತಿದ್ದಂತೆಯೇ, ಇತ್ತ ಸರಸ್ವತಿ ತನ್ನ ಅನುದಿನದ ರೂಢಿಯಂತೆ ,ಕಂಪ್ಯೂಟರಿನ ಎದಿರು ಕೂತು ಫೇಸ್ ಬುಕ್ ತೆರೆದು ತನ್ನ ಸೆಲ್ಫೀ ಜೊತೆ ಬಾಗಿಲ ಎದುರಿನ ರಂಗೋಲಿಯ ಫೋಟೋವನ್ನು ಅಪ್ ಡೇಟ್ ಮಾಡುತ್ತಿದ್ದಳು. ಎಂದೂ ಇಲ್ಲದ್ದು ಈ ದಿನವೇ, ಸತ್ಯ ಹರಿಶ್ಚಂದ್ರ ಎಂಬ ಅವಳ ಅನಾಮಿಕ ಸ್ನೇಹಿತನೊಬ್ಬ ‘ನಿಮ್ಮ ದೊಡ್ಡ ಅಭಿಮಾನಿ ನಾನು, ದಯವಿಟ್ಟು ನಿಮ್ಮ ಮನೆ ವಿಳಾಸ ಕೊಡಿ, ಇಂದು ಸಂಜೆ ನಿಮ್ಮನ್ನು ಮುಖತಃ ಭೇಟಿಯಾಗುವ ಇಚ್ಛೆ ಇದೆ’ ಎಂಬ ಒಂದು ಸಂದೇಶ ಅವಳ ಇನ್ ಬಾಕ್ಸಿಗೆ ಕಳಿಸಿದ್ದ. ಅದನ್ನು ಕಂಡೇ ಅವಳು ತೀವ್ರ ಗಲಿಬಿಲಿಗೆ ಒಳಗಾಗಿದ್ದಳು. ಕನಸೋ ಭ್ರಮೆಯೋ ಎಂಬAತೆ ಮತ್ತೆ ಮತ್ತೆ ಅದನ್ನು ಓದಿಕೊಂಡಿದ್ದಳು.
ಹಾಗೆಯೇ ತುಸು ಹೊತ್ತು ಏನು ಮಾಡಬೇಕೆಂದೇ ತೋಚದ ಸರಸ್ವತಿ, ‘ಖುಷಿಯಾಯ್ತು ಬನ್ನಿ, ಸಂಜೆ ನನ್ನ ಗಂಡ ಬ್ಯಾಂಕಿನಿAದ ಆರೂವರೆಗೆಲ್ಲ ಮನೆಗೆ ಬರುತ್ತಾರೆ. ನೀವೂ ಆಗಲೇ ಬಂದರೆ ಅವರ ಪರಿಚಯವೂ ಆದಂತಾಗುತ್ತದೆ’ ಎಂದು ಸಂದೇಶ ನೀಡಿ, ಅದರೊಂದಿಗೆ, ಮನೆ ನಂ. ೩೦೪, ಮೂರನೇ ಮಹಡಿ, ಓಂ ಅಪಾರ್ಟಮೆಂಟ್, ಕುಸುಗಲ್ ರಸ್ತೆ, ಕೇಶ್ವಾಪುರ, ಅನ್ನುವ ತನ್ನ ವಿಳಾಸವನ್ನೂ ಟೈಪ್ ಮಾಡಿದ್ದಳು. ‘ಓಕೆ ಮ್ಯಾಡಂ, ಖಂಡಿತಾ, ನಿಮ್ಮ ಮನೆಯವರ ಬಳಿಯೂ ಮಾತಾಡಿದ ಹಾಗಾಗುತ್ತದೆ’ ಅಂತ ಅತ್ತ ಕಡೆಯಿಂದಲೂ ಸಂದೇಶ ಬಂತು. ಸರಸ್ವತಿಗೂ ತುಸು ನಿರಾಳವಾಯ್ತು. ಮುಂದಿನ ಕ್ಷಣದಲ್ಲೇ ‘ನಿಮ್ಮ ಸೆಲ್ ನಂ. ಪ್ಲೀಸ್ ಮ್ಯಾಡಂ, ಯಾಕೆಂದರೆ ನಾನು ವಿಶ್ವ ಸಂಚಾರಿ, ನಿಮ್ಮ ಅಪಾರ್ಟಮೆಂಟ್ ಸಿಗದಿದ್ದರೆ, ಅಗತ್ಯಕ್ಕೆ ಇರಲಿ ಅಂತ’ ಎಂಬ ಇನ್ನೊಂದು ಚುಟುಕು ಸಂದೇಶ ಅಲ್ಲಿತ್ತು. ಇವಳೂ ಕೊಂಚ ಯೋಚಿಸಿ ‘ಸೆಲ್ ನಂ. ೯೪೮೩೯ ೭೧೦೨೬’ ಅಂತ ಶಂಕರ್ ನ ಫೋನ್ ನಂ. ಟೈಪಿಸಿ ಕಳಿಸಿದ್ದಳು. ತಕ್ಷಣವೇ ‘ನೀವು ತುಂಬಾ ಕ್ಯೂಟ್ ಮತ್ತು ಸ್ಮಾರ್ಟ!’ ಅಂತ ಅತ್ತ ಕಡೆಯಿಂದ ಇನ್ನೊಂದು ಪುಟ್ಟ ಸಂದೇಶ ರವಾನೆಯಾಗಿತ್ತು. ಸರಸ್ವತಿ ಒಮ್ಮೆಲೇ ಹೌಹಾರಿದಳು. ಕ್ಷಣ ಮನಸ್ಸು ನಡುಗಿದಂತಾಗಿ ಮೈಯೆಲ್ಲ ಬೆವೆತು ಹೋಯಿತು. ಮತ್ತೆ ಅವಳು ಉತ್ತರಿಸುವ ಗೊಡವೆಗೆ ಹೋಗಲಿಲ್ಲ. ಇದನ್ನೇ ಮುಂದುವರೆಸಿದರೆ, ಎದುರಲ್ಲೇನೋ ಗಂಡಾAತರ ಕಾದಿರುವುದು ಅವಳ ಅಂತರAಗದ ಅರಿವಿಗೆ ಸೂಕ್ಷö್ಮ ನಿಲುಕಿತು. ಇಂಥದೊAದು ಸಂದಿಗ್ಧತೆಯಲ್ಲಿ ತೇಲುವಂತೆ ಮಾಡಿದ ಈ ಫೇಸ್ ಬುಕ್ ಸಹವಾಸ ಸರಸ್ವತಿಯೊಂದಿಗೆ ಶುರುವಾಗಿದ್ದು, ಇತ್ತೀಚಿನ ಎರಡು ಮೂರು ವರ್ಷಗಳ ಅವಧಿಯಲ್ಲಿ. ಈ ಸತ್ಯ ಹರಿಶ್ಚಂದ್ರ ಎಂಬ ಅನಾಮಿಕ ಖಾತೆಯವ ಪರಿಚಿತನಾಗಿದ್ದು ಅವಳು ‘ಹುಬ್ಬಳ್ಳಿ ಮಂದಿ’ ಎಂಬ ಗ್ರೂಪ್ಪಿಗೆ ಸೇರಿಕೊಂಡ ನಂತರದಲ್ಲಿ.
ಮಧ್ಯಾಹ್ನದ ಊಟದ ವೇಳೆಯಲ್ಲಿ ರೂಡಿಯಂತೆ ಸುಮ್ಮನೇ ಫೋನ್ ಮಾಡಿದ ಶಂಕರ ನ ಬಳಿಯೂ ಈ ವಿಷಯ ಹೇಳಲು ಸರಸ್ವತಿ ತುಸು ಹೆದರಿಕೊಂಡಳು. ‘ಹಿಂದೆ ಮುಂದೆ ಗೊತ್ತಿಲ್ಲದ ಯಾರು ಯಾರೋ ಅಪರಿಚಿತರಿಗೆಲ್ಲ ನಮ್ಮ ವಿಳಾಸ ಕೊಡಲು ಹೋಗಬೇಡ, ಇದು ಪಟ್ಟಣ, ನಿಮ್ಮ ಅಂಬೆಹಳ್ಳಿಯAಥಲ್ಲ ಇದು’ ಅಂತ ಆತ ಅಲ್ಲಿಂದ ಫೊನ್ ನಲ್ಲೇ ದಬಾಯಿಸಿದರೆ
ಎಂಬ ಸಣ್ಣ ಭಯ ಅವಳಿಗೆ. ಆದರೂ ಅವಳ ಸ್ಪಂದನೆಗೂ ಮೀರಿ ಅವಳ ಕೈಗಳು ಮನೆಯನ್ನು ಓರಣಗೊಳಿಸಿದವು. ದಿನವೂ ಮಾಡಿಡುವ ಹಚ್ಚಿದವಲಕ್ಕಿಯ ಬದಲು, ಶೇಂಗಾ ಗಜ್ಜರಿ ಬೀನ್ಸ್ ಹಸಿಮೆಣಸಿನಕಾಯಿ ಅಲ್ಲಾ ಕೊತ್ತಂಬರಿ ಸೊಪ್ಪು ಎಲ್ಲಾ ಹಾಕಿ ಚೂರು ಎಣ್ಣೆ ಜಾಸ್ತಿ ಬಳಸಿ ಘಮಘಮ ಅವಲಕ್ಕಿ ಒಗ್ಗರಣೆ ಸಿದ್ಧಪಡಿಸಿದಳು.
ತನ್ನ ಹಾಗೂ ಇತರರ ಅಪ್ ಡೇಟ್ ಗಳಿಗೆಲ್ಲ ಭಿನ್ನವಾಗಿ ಪ್ರತಿಕ್ರಿಯೆ ನೀಡುವ, ಈ ಸತ್ಯ ಹರಿಶ್ಚಂದ್ರ ಎಂಬ ಅನಾಮಿಕನ ವಿಷಯ ಸರಸ್ವತಿ ಆಗಾಗ ಶಂಕರನ ಬಳಿ ಪ್ರಸ್ತಾಪಿಸುತ್ತಿದ್ದಳಾದರೂ, ಇಂದು ಆತ ನಮ್ಮ ಮನೆಯನ್ನೇ ಅರಸಿ ಬರುವ ಸಂಗತಿಯನ್ನು ಶಂಕರನ ಬಳಿ ಹೇಳದೇ ಇರುವುದು ಹೇಗೆ ಅನ್ನುವ ಚಿಂತೆಯಲ್ಲೇ ಸ್ವಲ್ಪ ಹೊತ್ತು ಆತಂಕಗೊAಡಿದ್ದಳು. ಶಂಕರ ಬ್ಯಾಂಕಿನಿAದ ಬಂದ ಕೂಡಲೇ ತಕ್ಷಣ ಈ ಸತ್ಯ ಹರಿಶ್ಚಂದ್ರನ ಆಗಮನದ ಸಂಗತಿಯನ್ನು ಅವನೊಟ್ಟಿಗೆ ಹೇಳಿಬಿಡುವುದೇ ವಾಸಿ ಅಂದುಕೊAಡಳು. ಆರಕ್ಕೆ ಆಫೀಸು ಬಿಟ್ಟರೆ ಶಂಕರ ಆರೂವರೆಗೆಲ್ಲ ಮನೆಯಲ್ಲಿರುತ್ತಿದ್ದ. ಹಾಗೇ ಅರ್ಧ ಗಂಟೆ ಸರಸ್ವತಿ ಕೊಡುವ ತಿಂಡಿ ತೀರ್ಥ ಮುಗಿಸಿ ರೆಸ್ಟ್ ಮಾಡುತ್ತಿದ್ದ. ಸರಸ್ವತಿ ರಾತ್ರೆಯ ಅಡುಗೆಯ ವರೆಗೆ ಪುನಃ ಒಂದು ಸುತ್ತು ಫೇಸ್ ಬುಕ್ ನೋಡುತ್ತಿದ್ದಳು, ಇದು ಅವರ ಪ್ರತಿ ಸಂಜೆಯ ದಿನಚರಿ.
‘ಇಬ್ಬರೂ ಜೊತೆಯಲ್ಲೇ ಬಂದುಬಿಟ್ಟರೆ ಇನ್ನೂ ಸುರುಳೀತ. ಫೋನ್ ನಂಬರ್ ಕೂಡ ಶಂಕರನದೇ ಕೊಟ್ಟಿದ್ದೇನೆ, ಯಾವ ಸಮಸ್ಯೆಯೂ ಇಲ್ಲ’ ಅಂದುಕೊಳ್ಳುತ್ತ ಈಗ ಸರಸ್ವತಿ ತನ್ನನ್ನೇ ತಾನು ಸಮಾಧಾನ ಪಡಿಸಿಕೊಂಡಳು. ಆದರೂ ಬೆಳಿಗ್ಗೆಯಿಂದ ಆ ಸತ್ಯ ಹರಿಶ್ಚಂದ್ರನ ಪೂರ್ಣ ಮಾಹಿತಿ ಕಂಡು ಹಿಡಿಯಲು ತನಗೆ ತಿಳಿದ ಎಲ್ಲ ಮಾರ್ಗದಿಂದಲೂ ಪತ್ತೇದಾರಿ ಕೆಲಸ ನಡೆಸಿದ್ದಳು. ಆದರೆ ಅವನ ಯಾವ ಸರಿಯಾದ ವಿವರಗಳೂ ಅಲ್ಲಿ ದೊರಕದೇ ಇನ್ನಷ್ಟು ಸಂಶಯಕ್ಕೊಳಗಾಗುವAತಾಗಿತ್ತು.
ಹರಿಶ್ಚAದ್ರನ ಉದ್ಯೋಗ ದ ಮಾಹಿತಿ ಇರಬೇಕಾದಲ್ಲಿ ನಿರುದ್ಯೋಗಿ ಅಂತಲೂ, ಶಿಕ್ಷಣ ದ ವಿವರ ಇರಬೇಕಾದಲ್ಲಿ ಅಶಿಕ್ಷಿತ ಅಂತಲೂ, ಊರು ಅಂದಿದ್ದಲ್ಲಿ ವಿಶ್ವ ಅಂತಲೂ, ವಯಸ್ಸು ಅಂದಿದ್ದಲ್ಲಿ ಎಂದೂ ಹುಟ್ಟದವ, ತಂದೆ-ತಾಯಿಗಳ ವಿವರ ಅಂದಿದ್ದಲ್ಲಿ – ಇಲ್ಲ, ನಾನು ಟೆಸ್ಟ್ ಟ್ಯೂಬ್ ಬೇಬಿ ಅಂತಲೂ, ಸಂಬAಧಿಗಳು ಅಂದಿದ್ದಲ್ಲಿ ವಿಶ್ವೇಶ್ವರಯ್ಯ, ಮದರ್ ಥೇರೆಸಾ ಮತ್ತು ಅಬ್ದುಲ್ ಕಲಾಂ ಅಂತಲೂ, ಹೀಗೆಲ್ಲ ಹೆದರಿಸುವ ವಿಚಿತ್ರ ಪ್ರೊಫೈಲ್ ಕಂಡು ಸರಸ್ವತಿಗೆ ಇನ್ನಷ್ಟು ಕಸಿವಿಸಿಯಾಗಿತ್ತು. ಇಡೀ ಅಕೌಂಟೆಲ್ಲ ಜಾಲಾಡಿದರೂ ನೋಡಲು ಅವನ ಒಂದೂ ಫೋಟೋ ಸಿಗಲಿಲ್ಲ. ಎಲ್ಲ ಅಪ್ ಡೇಟ್ ಗಳೂ ಹಳ್ಳಿಗರ ಜೀವನಕ್ರಮ, ರೈತರ ಆತ್ಮಹತ್ಯೆಗೆ ಕಾರಣವಾಗುವ ಸಮಸ್ಯೆಗಳು, ಬರ, ಅತಿವೃಷ್ಟಿ ಗಳಿಂದ ಆತಂಕಗೊAಡ ಜನರ ವಿಡಿಯೋ ಕ್ಲಿಪಿಂಗ್ ಗಳು, ಪರಿಸರ ನಾಶದಿಂದ ಉಂಟಾಗುವ ಭೂಮಿಯ ಭವಿಷ್ಯ, ಅನಾಥಾಶ್ರಮಗಳ ಮಾಹಿತಿ, ವೃದ್ಧಾಶ್ರಮಗಳಲ್ಲಿರುವ ವೃದ್ಧರ ಸಂದರ್ಶನಗಳು, ವೇಶ್ಯಾಗೃಹಗಳಿಂದ ಮುಕ್ತಿ ಪಡೆದು ಸ್ವಾವಲಂಬನೆ ಸಾಧಿಸಿರುವ ಮಹಿಳೆಯರ ವಿವರಗಳು, ಬುದ್ಧಿ ಬೆಳೆಯದ ಹಾಗೂ ಅಂದಮಕ್ಕಳ ಶಾಲೆಗಳು, ಅಂಗವೈಕಲ್ಯ ಉಳ್ಳವರು ಸಾಧಿಸಿದ ಸಾಧನೆಗಳು, ಕುಷ್ಟರೋಗಿಗಳ ಆರೋಗ್ಯ ಧಾಮಗಳು, ಅಸಹಾಯಕ ಮಹಿಳೆಯರು, ಥರ್ಡ ಜೆಂಡರ್ ಹಾಗೂ ಸಲಿಂಗ ಪ್ರೇಮಿಗಳ ಸಮಾನ ಹಕ್ಕುಗಳ ಕುರಿತಾದ ಹೋರಾಟಗಳ ಮಾಹಿತಿ.. ಹೀಗೆ ನೆಟ್ ನಿಂದ ಲಿಂಕ್ ತೊಗೊಂಡAತಹ ಎಲ್ಲ ರೀತಿಯ ಸಾಮಾಜಿಕ ಕಾಳಜಿಯ ಶೇರ್ ಮತ್ತು ಟ್ಯಾಗ್ ಗಳೇ ತುಂಬಿದ್ದವು. ಈತ ಯಾರಿರಬಹುದು? ಹೇಗಿರಬಹುದು? ಅಥವಾ ಒಬ್ಬ ಮಹಿಳೆಯೂ ಆಗಿರಬಹುದೇ ? ಅಂದುಕೊಳ್ಳುತ್ತಲೇ, ಇಷ್ಟೆಲ್ಲ ಸಾಮಾಜಿಕ ಕಳಕಳಿಯುಳ್ಳವ ನನಗೇನೂ ಅಪಾಯ ಮಾಡಲಿಕ್ಕಿಲ್ಲ ಅಂತಲೂ ಇನ್ನೊಮ್ಮೆ ಯೋಚಿಸಿದಳು.
ಶಂಕರ ಬ್ಯಾಂಕಿನಿAದ ಬರುವ ಪೂರ್ವದಲ್ಲಿ ಯಾರೇ ಬಂದು ಬಾಗಿಲು ಬಡಿದರೂ, ಕಿಟಕಿಯಲ್ಲಿ ವೀಕ್ಷಿಸದೇ ಬಾಗಿಲು ತೆರೆಯಬಾರದೆಂದುಕೊAಡಳು. ಇನ್ನೇನಾದರೂ ಹೆಚ್ಚುಕಮ್ಮಿಯಾದರೆ, ನಂ. ೧೦೦ ನಂಬರ್ ಒತ್ತಿ ಪೊಲೀಸ್ ಗೆ ಫೋನ್ ಮಾಡಿದರಾಯಿತು ಅಂತೆಲ್ಲ ತನ್ನೊಳಗೇ ತಾನು ಧೈರ್ಯ ತುಂಬಿಕೊAಡಳು. ಆದರೂ ಮನಸ್ಸಿನ ತಾಕಲಾಟ ಹದ್ದುಬಸ್ತಿಗೆ
ಬರುತ್ತಿಲ್ಲ. ಎಂಥದೋ ದುಗುಡ, ಎಲ್ಲ ಬೇಗ ಮುಗಿದು ಹೋದರೆ ಸಾಕು ಎನ್ನಿಸುವ ಅವಸರ. ‘ಅಥವಾ ಇಂವ ನಾ ಶಾಲೀ ಕಾಲೇಜ್ ಕಲಿಯೂಮುಂದ ಕ್ಲಾಸ್‌ಮೇಟ್ ಗೀಸ್‌ಮೇಟ್ ಆಗಿದ್ನೇನ ಮತ್ತ?’ ಅನ್ನುವುದರತ್ತಲೇ ಚಿತ್ತ.
ಸ್ನೇಹ ಹಸ್ತ ಚಾಚಿದ ಇತ್ತೀಚಿನ ಆರು ತಿಂಗಳಲ್ಲಿ ಒಮ್ಮೆಯೂ ಹೀಗೆ ‘ಮನೆಗೆ ಬರುವೆ , ವಿಳಾಸ ಕೊಡಿ’ ಅಂತ ಕೇಳದಿದ್ದವ ಈವತ್ತ ಯಾಕ್ ಕೇಳೀದ್ನೋ? ಛೇ, ಶಂಕರ ಏನಾರ ತಪ್ಪು ತಿಳಕೊಂಡರ?’ ಎಂಬೆಲ್ಲ ಅನಗತ್ಯ ವಿಚಾರಗಳು ಸರಸ್ವತಿಯನ್ನು ಮುತ್ತಿ ಎಡಬಿಡದೇ ಹಿಂಸಿಸತೊಡಗಿದ್ದವು. ಅಥವಾ ಒಂದೇ ಕ್ಷಣದಲ್ಲಿ ಎಲ್ಲ ಸುಳ್ಳಾಗಿ ಈತ ಯಾವುದಾದರೂ ಖಾಸಗಿ ಕಂಪನೀ ವಿವೆಗಿಮೆ ಪಾಲಿಸಿ ಮಾಡ್ಸೋ ಎಜೆಂಟನೇ? ಬೆಡ್‌ಸಿಟ್ ಗಿಡ್‌ಸಿಟ್ ಮಾರಾಕ ಬರೋ ವ್ಯಕ್ತೀನೋ ಎಂಬೆಲ್ಲ ತಳಮಳಗಳು ಹೊಟ್ಟೆಯಲ್ಲೇ ಹುಟ್ಟಿಕೊಂಡು ಚಡಪಡಿಸಲಾರಂಭಿಸಿದ್ದವು.
*
ಎರಡು ವರ್ಷಗಳ ಕೆಳಗೆ ಒಮ್ಮೆ ಹೀಗೇ ಅಂಥದೇ ಇಕ್ಕಟ್ಟಿಗೆ ಸಿಲುಕಿಕೊಂಡಿದ್ದಳು ಸರಸ್ವತಿ. ‘ಹುಬ್ಬಳ್ಳಿ ಮಂದಿ’ ಗ್ರೂಪ್ ಸೇರಿದ ಹೊಸದರಲ್ಲಿ ನಡೆದ ಪ್ರಕರಣ ಅದು. ಆಗಿನ್ನೂ ಈ ಸತ್ಯ ಹರಿಶ್ಚಂದ್ರ ಬೆಳಕು ಕಂಡಿರಲಿಲ್ಲ. ಆಕಾಶ್ ಮನೋಹರ ಎಂಬ ಹೆಸರಿಟ್ಟುಕೊಂಡು ಸ್ಟೆöÊಲಿಶ್ ಆಗಿರುವ ಕಾಲೇಜು ಯುವಕನಂತೆ ಕಾಣುವ ಅವನ ಪ್ರೊಫೈಲ್ ಪಿಕ್ ನೋಡಿ, ಮೋಸ ಹೋಗಿ ಸರಸ್ವತಿ ಅವನ ಫ್ರೆಂಡ್ ರಿಕ್ವೆಸ್ಟ್ ಕನ್ಫರ್ಮ ಮಾಡಿದ್ದಳು. ಇವಳು ಅಪ್ ಲೋಡ್ ಮಾಡುತ್ತಿದ್ದ, ತುಟಿಗೆ ಗಾಢ ಬಣ್ಣದ ಲಿಪ್ ಸ್ಟಿಕ್, ಕಣ್ಣಿಗೆ ದಟ್ಟ ಕಾಜಲ್ ಹಣೆಯಲ್ಲಿ ಒಂದೆರಡು ಮುಂಗುರುಳು ಇಳಿಬಿಟ್ಟುಕೊಂಡ ಸೆಲ್ಪೀ ಗಳಿಗೆ ಆತ ಆಗಾಗ , ವಾವ್! ಸುಪರ್! ಸಕತ್! ವೆರಿ ನೈಸ್ ! ಎಂದು ಕಮೆಂಟು ಮಾಡುತ್ತ ಪರಿಚಯವಾದವ.
ಆ ನಡುವೆ ಅವನು, ಸರಸ್ವತಿ ಹಾಕಿದ ಮನೆ ಮುಂದಿನ ಬಣ್ಣದ ರಂಗೋಲಿಯ ಒಂದು ಫೋಟೋಕ್ಕೆ ಲೈಕ್ ಮಾಡಿ, ‘ನಾನು ನಿಮ್ಮ ಅಭಿಮಾನಿ, ನನಗೆ ನಿಮ್ಮ ಸಿಂಪ್ಲಿಸಿಟಿ ಇಷ್ಟವಾಗುತ್ತದೆ’ ಎಂದು ಇನ್ ಬಾಕ್ಸಿನಲ್ಲಿ ಕಮೆಂಟು ಮಾಡಿ ಇವಳ ತಲೆಯನ್ನು ಇನ್ನಷ್ಟು ಕೆಡಿಸಿಬಿಟ್ಟಿದ್ದ. ಅವನ ಪ್ರೊಫೈಲನ್ನು ತೆಗೆದು ಅವನ ಆಳಗಲ ಅಳೆದ ನಂತರ ಸರಸ್ವತಿಗೆ ಸಿಕ್ಕ ಮಾಹಿತಿಯೆಂದರೆ, ಆಕಾಶ್ ಮನೋಹರ್ ಮೂವತ್ತೆöÊದು ವರ್ಷ ದಾಟಿದವ. ಗೋಕುಲ ರಸ್ತೆಯ ನೆಹರು ನಗರದ ವಾಟರ್ ಟ್ಯಾಂಕಿನ ಹತ್ತಿರ ಮನೆ ಇರುವವ. ಅಲ್ಲಿ ಅವನ ಹೆಂಡತಿ ಜೊತೆ ಎರಡು ಮಕ್ಕಳು ಹಾಗೂ ಅವರ ಹುಟ್ಟುಹಬ್ಬದ ಫೋಟೋಗಳು ಕೂಡ ಸಿಕ್ಕವು. ಮತ್ತು ಸ್ವಂತ ಉದ್ಯೋಗ ಎಂದು ಬರೆದುಕೊಂಡಿದ್ದ. ಹೀಗಿರುತ್ತಿರಲಾಗಿ ಒಂದು ದಿನ ಆತ ಇದ್ದಕ್ಕಿದ್ದಂತೆ ‘ನಿಮ್ಮನ್ನು ಒಮ್ಮೆ ಭೇಟಿಯಾಗಬೇಕು’ ‘ಮುಖತಃ ನೋಡಬೇಕು’ ‘ಈ ನಿಮ್ಮ ಬಡಪಾಯಿ ಅಭಿಮಾನಿಗೆ ನಿಮ್ಮ ಫೋನ್ ನಂಬರ್ ಮತ್ತು ಮನೆ ವಿಳಾಸ ಕೊಡಿ’ ಎಂದೆಲ್ಲ ಇವಳ ಇನ್ ಬಾಕ್ಸಿಗೆ ಸಂದೇಶ ರವಾನಿಸಿದ್ದ.
ಆಗೆಲ್ಲ ತನ್ನ ಫೇಸ್ ಬುಕ್ ಸ್ನೇಹಿತರೇ ಜೀವಾಳವಾಗಿದ್ದ ಸರಸ್ವತಿ ಆಚೀಚೆ ಯೋಚಿಸದೇ, ನಂ. ೩೦೪, ಓಂ ಅಪಾರ್ಟಮೆಂಟ್, ಮುಂತಾಗಿ ತನ್ನ ವಿವರಗಳನ್ನು ನೀಡಿಬಿಟ್ಟಿದ್ದಳು. ಒಂದು ಸುಂದರ ದಿನದ ಬೆಳಿಗ್ಗೆ ಅಡುಗೆ ಮಾಡುವ ಗಡಿಬಿಡಿಯಲ್ಲಿದ್ದ ಸರಸ್ವತಿಗೆ ‘ಈಗಲೇ ಬರುತ್ತಿದ್ದೇನೆ’ ಅಂತ ಆಕಾಶ್ ಮನೋಹರ್ ನಿಂದ ಫೋನ್ ಬಂದಿತ್ತು. ಅದೇ ಹೊತ್ತಿಗೆ ಶಂಕರ್ ಸ್ನಾನಕ್ಕೆ ಹೋಗಿದ್ದ. ‘ಈಗ ಬೇಡ, ನಾನು ಬಿಝಿ, ಹತ್ತು ಗಂಟೆಯ ನಂತರ ಬನ್ನಿ’ ಅಂತ ಸರಸ್ವತಿಯೇ ಹೇಳಿ
ಫೋನಿಟ್ಟಳು. ಆಗಲೂ ಹೀಗೇ, ಎಂಥದೋ ಭಯ ತಲ್ಲಣ. ಅಪರಿಚಿತರನ್ನು ಈ ಸಿಟಿಯಲ್ಲಿ ನಂಬುವುದು ಹೇಗೆ ಎಂಬ ಚಿಂತೆ. ಅಂದು ಹತ್ತು ಗಂಟೆಯ ನಂತರ ಆಕಾಶ್ ಮನೋಹರ್ ಮರ‍್ನಾಲ್ಕು ಬಾರಿ ಫೋನಾಯಿಸಿ, ಮತ್ತೆ ಮತ್ತೆ ವಿಳಾಸ ಕೇಳಿ ಅಂತೂ ಅಪಾರ್ಟಮೆಂಟ್ ಮೆಟ್ಟಿಲುಗಳ ಹತ್ತಿ ಬಂದಿದ್ದ.
ಅವನನ್ನು ಕಂಡ ಕೂಡಲೇ ಸರಸ್ವತಿಯ ಸೌಂದರ್ಯ ಪ್ರಜ್ಞೆಯ ಭ್ರಮೆ ಕಳಚಿಬಿದ್ದಿತ್ತು. ಫೇಸ್ ಬುಕ್ ಪ್ರೊಫೈಲ್ ನಲ್ಲಿದ್ದ ಫೋಟೋಕ್ಕಿಂತ ಆತ ಎರಡುಪಟ್ಟು ವಯಸ್ಸಾದಂತೆ, ಸಂಸಾರ ಸಾಗರದಲ್ಲಿ ಜರ್ಜರಿತಗೊಂಡ ಒಬ್ಬ ಹಳೆಯ ಗ್ರಹಸ್ಥನಂತಿದ್ದ . ಆಕಾಶ ಮನೋಹರ್ ಸೋಪಾದಲ್ಲಿ ಕೂತು ಅರ್ಧ ಗಂಟೆ ಫೇಸ್ ಬುಕ್ಕಿನ ಇವಳ ಚಟುವಟಿಕೆಯ ಕುರಿತು ‘ಅದೂ ಇಷ್ಟ ಇದೂ ಇಷ್ಟ’ ಅಂತ ಪೂಸಿ ಹೊಡೆದು, ನಂತರ ತನ್ನ ನಿಜ ನಾಮಧೇಯ ಅಡಿವೆಪ್ಪ ಅಂತಲೂ, ಸುಮ್ಮನೇ ಆಕರ್ಷಣೆಗಾಗಿ ಇರಲಿ ಅಂತ ಆಕಾಶ್ ಮನೋಹರ್ ಅಂತ ಇರಿಸಿಕೊಂಡಿರುವದಾಗಿಯೂ ಹೇಳುತ್ತ, ದೋಸೆ ಚಾ ತಿಂಡಿಯನ್ನು ಬೇಡ ಬೇಡವೆನ್ನುತ್ತಲೇ ತಿಂದು ಮುಗಿಸಿದ ನಂತರದಲ್ಲಿ ನಿಧಾನಕ್ಕೆ, ಯಾವುದೋ ಹೆಸರೇ ಕೇಳಿಲ್ಲದ ಸನ್‌ರೈಸ್ ಇನ್ಸೂರನ್ಸ್ ಕುರಿತು ವಿವರ ಹೇಳಿ, ತಾನು ಅದರ ಎಜೆಂಟನೆAದೂ, ‘ಮ್ಯಾಡಂ , ನಿಮ್ ಅಭಿಮಾನಿ ಅದೀನ್ ನಾನು, ನೀವ್ ಒಂದ್ ಪಾಲಿಸಿ ಮಾಡಿದ್ರ ನನಗ ಮಹಾ ಉಪಕಾರ ಮಾಡಿದಂಗ್ ಆಕ್ಕೇತಿ, ಹೀಂಗ್ ಮನೀ ಬಾಗ್ಲಕ್ ಬಂದಿದ್ ನೆಪಕ್ಕರ ಒಂದ್ ಪಾಲಿಸಿ ಮಾಡರ‍್ರೀ’ ಅನ್ನುತ್ತ ‘ವರ್ಷಕ್ ಬರೇ ಆರೂವರಿ ಸಾವ್ರ್ ತುಂಬಿದ್ರ ಮುಗೀತ್ರಿ, ನಿಮಗ ಏಳೂವರೀ ಸಾವ್ರ ಲಾಭ ಬರತೇತಿ, ನೀವ್ ಒಮ್ಮಿಗೇ ನಲವತ್ತು ಸಾವಿರದಷ್ಟು ದೊಡ್ ಮೊತ್ತ ಪಡೆದು, ಚಿನ್ನಗಿನ್ನ ತೊಗೋಳಾಕ ಬರತೇತಿ’ ಎಂದೆಲ್ಲ ಆರಂಭಿಸಿದ್ದೇ ಸರಸ್ವತಿಗೆ ಒಮ್ಮೆಲೇ ತಲೆ ತಿರುಗಿ ಬಂದAತಾಗಿ, ಮಾತೇ ಮರೆತು ಕಲ್ಲಿನಂತೆ ಕೂತುಬಿಟ್ಟಿದ್ದಳು. ಅಭಿಮಾನಿ ಎಮದು ಹೇಳಿಕೊಂಡು ಬಂದ ಆ ವ್ಯಕ್ತಿಯ ವ್ಯವಹಾರದ ವರಸೆಯೇ ಅವಳಲ್ಲಿ ರೋಷ ಉಕ್ಕಿಸುತ್ತಿತ್ತು.
ಪುನಃ ಶುರು ಮಾಡಿದ ಆತ ‘ನೋಡಿ ಮ್ಯಾಡಂ, ನಿಮ್ಮಂಥಾ ಭಾಳ ಹೆಣಮಕ್ಕಳು ಪಾಲಿಸಿ ಮಾಡ್ಸಾರ. ನಿಮ್ ಮನೀಯವ್ರೀಗೆ ತಿಳೀದಂಗೂ ಬೇಕಾರ ನಾ ಗೌಪ್ಯ ಕಾಪಾಡಿಕೊಳ್ತೀನಿ, ನನ್ ಸಿಸ್ಟರ್ ಥರಾ ಅದೀರಿ ನೀವ್ ದೇವತೆ ತರಹ ಅದೀರಿ’ ಅಂತೆಲ್ಲ ಬೆಣ್ಣೆ ಹಚ್ಚುತ್ತ ಗೋಗರೆಯುತ್ತ ಎದ್ದು ಹೋಗಲು ತಯಾರಿಲ್ಲದೇ ಕೂತು ಬಿಟ್ಟಿದ್ದ. ಆ ಅವನ ಅತಿರೇಕ ಸಹಿಸಿಕೊಳ್ಳಲಾಗದೇ ಸರಸ್ವತಿ ‘ಇಲ್ಲಪ್ಪ, ಹಾಗೆಲ್ಲ ನಮ್ಮ ಕೈಯಾಗ ಅಷ್ಟೊಂದು ದುಡ್ಡು ಒಮ್ಮೆಲೇ ಬರಂಗಿಲ್ಲ, ಸುಮ್ನ ಏನೇನರ ಹೇಳಬ್ಯಾಡ್ರಿ’ ಅಂತ ಇನ್ನೇನು ‘ಜಾಗಾ ಖಾಲಿ ಮಾಡಿ’ ಅಂತ ಹೇಳಬೇಕೂ ಅನ್ನುವುದರೊಳಗೆ ಆತ ಕೈಯಲ್ಲಿರುವ ಪ್ಲಾಸ್ಟಿಕ್ಕಿನಿಂದ ಒಂದು ಬೆಡ್ ಸೀಟನ್ನು ಹೊರತೆಗೆದು ‘ಪಾಲಿಸಿ ಮಾಡದಿದ್ರ್ ಹೋಗ್ಲಿ ಬಿಡ್ರಿ ಮ್ಯಾಡಂ, ನಿಮಗೇ ಅಂತ ಈ ಚಂದದ ಬೆಡ್ ಸೀಟ್ ತಂದೇನಿ, ಇದರ ನೋಡ್ರಲಾ?’ ಅನ್ನುತ್ತ ಸೋಪಾ ಬಿಟ್ಟು ಎದ್ದು ನಿಂತು ಬೆಡ್ ಸೀಟನ್ನು ಬಿಚ್ಚಿ ಹಿಡಿದ. ನಂತರ ಅದನ್ನು ಮಡಚಿ ಸರಸ್ವತಿಯ ಕೈಯಲ್ಲಿ ಒತ್ತಾಯದಿಂದ ಹಿಡಿಸುತ್ತ ‘ಮಾರ್ಕೆನಾಗ್ ಇದ್ರ್ ಬೆಲೀ ಕೇಳ್ ನೋಡ್ರಿ, ಮುಟ್ಟರ ನೋಡ್ರಿ ಒಮ್ಮೆ, ಎಷ್ಟ್ ಮಿದು ಎಷ್ಟು ನಯ ಅಂತ, ಟೇಬಲ್ ಕ್ಲಾಥ್ ಆಗಿನೂ ಇದನ್ ಬಳಸಬೋದು, ಮನೀ ಬಾಗಲ್ಗೆ ಪರದೀ ಹಂಗನೂ ಹಾಕ್ಕೋಬೌದು, ತ್ರಿ ಇನ್ ಒನ್ ಐತ್ರೀ ಮ್ಯಾಡಂ, ಪ್ಲೀಸ್ ಇದನ್ ಮಾತ್ರ ಬ್ಯಾಡ್ ಅನ್ಬಾಡ್ರಿ ಮ್ಯಾಡಂ’ ಅನ್ನುತ್ತ ಅಳುಮೋರೆ ಮಾಡಿಬಿಟ್ಟದ್ದಕ್ಕಾಗಿ, ಮನಸ್ಸು ಕರಗಿದ ಸರಸ್ವತಿ ನಾಲ್ಕುನೂರು ಕೊಟ್ಟು ಬೆಡ್ ಸೀಟು ಖರೀದಿಸಿದ್ದಳು. ಮತ್ತು ಆತ ಅತ್ತ ಹೋದ ನಂತರ ಎಂಥದೋ ಸಿಟ್ಟಿನಿಂದ ಅವನ ಅಕೌಂಟ್ ತೆರೆದು ಮೊದಲು ಅವನನ್ನು ಅನ್ ಫ್ರೆಂಡ್ ಮಾಡಿದ್ದಳು. ಎಷ್ಟೋ ದಿನಗಳ ನಂತರ ಶಂಕರನಿಗೆ ಈ ಸಂಗತಿ ಹೇಳಿ ಮನಸ್ಸಿನ ದುಗುಡ ಇಳಿಸಿಕೊಂಡಿದ್ದಳು ಕೂಡ. ‘ಮತ್ತೊಮ್ಮೆ ಹೀಂಗ ಅಪರಿಚಿತರನ್ನು ಮನೀಗ್ ಸರ‍್ಸು ಮುಂದ ಭಾಳ ಯೋಚ್ನೀ ಮಾಡು, ಪಟ್ಣ ಇದು ಪಟ್ಣ’ ಅಂತ ಶಂಕರನೂ ನಾಜೂಕಾಗಿ ಬುದ್ಧಿ ಹೇಳಿ ಪ್ರಕರಣ ಅಲ್ಲೇ ಮುಗಿಸಿಹಾಕಿದ್ದ.
ಅಂದಿನಿAದ ಸರಸ್ವತಿ ಆಗಾಗ ತನ್ನ ಫೇಸ್ಬುಕ್ ಸಂಗತಿಗಳನ್ನೆಲ್ಲ ಅಭಿಮಾನದಿಂದ ಹೇಳಿಕೊಳ್ಳುವಾಗ ಯಾಕೋ ಅತಿರೇಕವೆನ್ನಿಸಿದರೆ ಶಂಕರ ‘ಅದೇ, ಇನಸೂರೆನ್ಸ್ ಎಜೆಂಟಿನ ನಾಕ್ನೂರು ರೂಪಾಯ್ನ್ ಬೆಡ್ ಸೀಟ್ ಪ್ರಕರಣ’ ಅಂತ ತಮಾಷೆ ಮಾಡಿಕೊಂಡು ನೆನಪಿಸುವನು. ಅವನೂ ಸಹ ಫೇಸ್‌ಬುಕ್ ನಲ್ಲಿ ಅಷ್ಟು ಬೇಗ ನಂಬಿಕೆ ಕಳೆದುಕೊಳ್ಳಲು ತಯಾರಿರಲಿಲ್ಲ, ಅದಕ್ಕೆ ಬಹುಮುಖ್ಯ ಕಾರಣವೂ ಇತ್ತು. ಪತ್ರಿಕೆಗಳನ್ನು ಅಷ್ಟಾಗಿ ಓದುವ ಹವ್ಯಾಸ ಇಲ್ಲದೇ, ಟೀವಿಯಲ್ಲಿ ಪ್ರಸಾರವಾಗುವ ಜಾಹಿರಾತು ಹಾಗೂ ಸೀರಿಯಲ್ ಗಳನ್ನಷ್ಟೇ ನೋಡಿ, ವಾರ್ತೆ ಶುರು ಆದಕೂಡಲೇ ಟೀವಿ ಸ್ವಿಚ್ ಆಫ್ ಮಾಡುವ ಸರಸ್ವತಿಗೆ ಈ ಫೇಸ್‌ಬುಕ್ ಒಂದು e್ಞÁನದ ಕಣಜವಾಗಿ ಪೊರೆಯತೊಡಗಿದ್ದನ್ನು ಶಂಕರ ಬಹುಸೂಕ್ಷö್ಮವಾಗಿ ಅವಲೋಕಿಸುತ್ತಿದ್ದ.
ಹಲವು ಜನರ ಮಿಚುವಲ್ ಫ್ರೆಂಡ್‌ಗಳಿದ್ದ ಯಾವು ಯಾವುದೋ ಸಾಹಿತಿಗಳ, ಕಲಾಕಾರರ, ಸಿನೆಮಾ ಜನರ ಸ್ನೇಹ ಸಂಪಾದಿಸುತ್ತ ಇದ್ದಲ್ಲೇ ಅವಳ ಮಿತ್ರ ಬಳಗ ಹೆಚ್ಚಿದುದಲ್ಲದೇ, ಅವರ ಸ್ಫೂರ್ತಿಯಿಂದ ಸಣ್ಣ ಸಣ್ಣ ಕವನಗಳನ್ನೂ ಸರಸ್ವತಿ ಬರೆಯಲು ಆರಂಭಿಸಿದ್ದಳು. ಇತ್ತೀಚೆಗೆ ಅಲ್ಲಲ್ಲಿ ನಡೆವ ಹನಿಗವನ ಗೋಷ್ಠಿಗಳಿಗೂ ಅವಳಿಗೆ ಕರೆಬರತೊಡಗಿತ್ತು. ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಸಹ ಪರಿಚಯವಾಗಿ ‘ನೀನು ಡುಂಡಿರಾಜರನ್ನು ಓದಬೇಕು, ದಿನಕರ ದೇಸಾಯರನ್ನು ಓದಬೇಕು’ ಅಂತ ತಿಳಿ ಹೇಳಿದ್ದಕ್ಕಾಗಿ, ಅಂಥ ಪುಸ್ತಕಗಳಿಗಾಗಿ ಸರಸ್ವತಿ ಆಗಾಗ ಸಾಹಿತಿಗಳ ಮನೆಗಳಿಗೂ ಭೇಟಿಕೊಡತೊಡಗಿದ್ದಳು. ‘ನೀನು ಚುಟುಕು ಬರೆವುದನ್ನು ಬಿಟ್ಟು ದೊಡ್ಡ ಕವಿತೆ ಬರೆಯಬೇಕು, ಕತೆ ಬರೆಯಬೇಕು’ ಅಂತ ಬುದ್ಧಿ ಹೇಳಿದ ಹಿರಿಯ ಸಾಹಿತಿಗಳಿಗೆ ‘ಮೊದಲು ಮಿನಿಗವನದÀಲ್ಲಿ ಚಾಂಪಿಯನ್ ಆಗ್ತೇನೆ ಸರ್, ನಂತರ ದೊಡ್ಡದು’ ಅಂತ ಅವರಿಗೇ ತಿರುಗೇಟು ಕೂಡ ನೀಡುತ್ತಿದ್ದಳು.
ಹುಬ್ಬಳ್ಳಿ ಕಲ್ಚರಲ್ ಹಿಸ್ಟರಿ ಎಂಬ ಗುಂಪAತೂ ಇಡೀ ಹುಬ್ಬಳ್ಳಿ ತಾಲೂಕಿನಲ್ಲಿ ನೋಡುವಂಥ ಸ್ಥಳಗಳು ಯಾವುವು? ಆ ಸ್ಥಳನಾಮಗಳ ಪ್ರಸಿದ್ಧಿ ಏನು? ಮತ್ತು ಅದರ ಫೋಟೋಗಳು ಪ್ರಕಟವಾಗುತ್ತಿದ್ದು, ಎಲ್ಲವನ್ನೂ ಸರಸ್ವತಿ ಚಾಚೂ ತಪ್ಪದೇ ಶಂಕರನೊAದಿಗೆ ಹಂಚಿಕೊಳ್ಳುತ್ತಿದ್ದಳು. ಭಾನುವಾರದ ದಿನಗಳಲ್ಲಿ ಸರಸ್ವತಿಯನ್ನು ಅಂಥ ಜಾಗೆಗೆ ಕರೆದೊಯ್ಯಲು ಕೂಡ ಶಂಕರನಿಗೆ ಸಹಕಾರಿಯಾಗುತ್ತಿತ್ತು. ಮತ್ತು ಸರಸ್ವತಿಯ ಬುದ್ಧಿ ಹಾಗೂ ಮನಸ್ಸು ವಿಕಾಸಗೊಳ್ಳಲು ಆರಂಭಿಸಿದ್ದೇ ‘ಹುಬ್ಬಳ್ಳಿ ಮಂದಿ’ ಗುಂಪಿಗೆ ಸದಸ್ಯೆಯಾದ ನಂತರ ಎಂದು ಶಂಕರನಿಗೂ ಕ್ರಮೇಣ ಮನವರಿಕೆಯಾಗಿತ್ತು. ಫೇಸ್ ಬುಕ್ ತುಂಬಾ ನಾನಾ ರೀತಿಯ ವಿಚಾರಧಾರೆಯ ವ್ಯಕ್ತಿಗಳೂ ಗುಂಪುಗಳೂ ಇದ್ದುದರಿಂದ ಸರಸ್ವತಿಗೂ ಅದು ದಕ್ಕಲಿ ಎಂಬ ಆಲೋಚನೆಯೂ ಅವನಿಗಿತ್ತು.
ಸತ್ಯ ಹರಿಶ್ಚಂದ್ರ ಹುಬ್ಬಳ್ಳಿಯ ರಸ್ತೆ ಹೊಂಡಗಳ ಕುರಿತಾಗಿಯೂ ವಿನೋದಪೂರ್ಣ ಫೋಟೋ ಹಾಕಿದ್ದನ್ನು ಸರಸ್ವತಿ ತುಂಬ ಉತ್ಸಾಹದಿಂದ ಹೇಳುತ್ತಿದ್ದಳು. ಅದು ಅಂದಿನ ದಿನ ಪತ್ರಿಕೆಯಲ್ಲಿ ಬಂದಿದ್ದು ಅದರ ಫೋಟೋ ತೆಗೆದು ಆತ ಅಪ್ ಲೋಡ್ ಮಾಡಿದ್ದನ್ನು ಶಂಕರ ಸರಸ್ವತಿಗೆ ತೋರಿಸಿದ್ದ. ಹುಬ್ಬಳ್ಳಿಯ ಬಹುಮುಖ್ಯ ರಸ್ತೆಯಾದ ಕೊಪ್ಪೀಕರ ರಸ್ತೆಯಲ್ಲಿ ನಡೂಮಧ್ಯೆ ದೊಡ್ಡ ದೊಡ್ಡ ಹೊಂಡಗಳ ನಿರ್ಮಾಣವಾಗಿದ್ದು, ಮಳೆಗಾಲದಲ್ಲಿ ಅದರ ತುಂಬ ನೀರು ತುಂಬಿಕೊAಡು ರಸ್ತೆಯ ಮಧ್ಯೆಯೇ ಹಳ್ಳಗಳ ನಿರ್ಮಾಣವಾದದ್ದನ್ನು ವ್ಯಂಗ್ಯವಾಗಿ ಹೇಳುವಂತೆ, ಫೋಟೋದಲ್ಲಿ ಈಜುಡುಗೆ ತೊಟ್ಟ ವ್ಯಕ್ತಿಗಳಿಬ್ಬರು ಇನ್ನೇನು ಸ್ವಿಮಿಂಗ್ ಫೂಲಲ್ಲಿ ಹಾರುವಂತೆ ನಿಂತ ಫೋಟೋಗಳು ಅವಳ ಮನ ಸೆಳೆದಿದ್ದವು. ಇನ್ನೊಂದರಲ್ಲಿ ರಸ್ತೆಗಳಿಗೆ ಗಾಯವಾಗಿದೆ, ಅದನ್ನು ಚಿಕಿತ್ಸೆ ಮಾಡುವಂತೆ ಅದರ ಸುತ್ತ ವೈದ್ಯರ ಸಮವಸ್ತçದಲ್ಲಿರುವ ಕೆಲ ವ್ಯಕ್ತಿಗಳು ಆಪರೇಷನ್ನಿನ ಹತಾರುಗಳನ್ನು ಹಿಡಿದು ನಿಂತಿರುವ ಫೋಟೋಗಳನ್ನು ನೋಡಿದ್ದೇ ಬಿದ್ದು ಬಿದ್ದು ನಕ್ಕಿದ್ದಳು. ಅದನ್ನು ಸೇವ್ ಮಾಡಿಟ್ಟುಕೊಂಡು ಗಂಡನಿಗೂ ತೋರಿಸಿ ಮನೆಗೆ ಬಂದವರಿಗೆಲ್ಲ ತೋರಿಸಿ ಅಚ್ಚರಿ ಹಂಚಿಕೊAಡಿದ್ದಳು. ‘ಹುಬ್ಬಳ್ಳಿ ಮಂದಿ ತಂಡ’ದಲ್ಲಿ ಈ ಫೋಟೋ
ಹರಿದಾಡಿದ ಮುಂದಿನ ಮೂರೇ ದಿನಗಳಲ್ಲಿ ಕೊಪ್ಪೀಕರ ರಸ್ತೆಯ ಆ ಹಳ್ಳ ಸಂಬAಧಪಟ್ಟವರಿAದ ಮುಚ್ಚಲ್ಪಟ್ಟು ರಿಪೇರಿಯಾದ ಸುದ್ದಿಯನ್ನು ಶಂಕರ ಅವಳಿಗೆ ಹೇಳಿದ್ದ. ಸರಸ್ವತಿಗೆ ಇವೆಲ್ಲ ಹೊಸ ಹೊಸ ಕಿಟಕಿ ಬಾಗಿಲುಗಳು.
ವಿಧಾನ ಸಭೆ ಹಾಗೂ ಸಂಸತ್ತಿನ ಚುನಾವಣೆ ನಡೆಯುತ್ತಿದ್ದ ಸಂದರ್ಭದಲ್ಲAತೂ ಒಂದು ಪ್ರತಿಷ್ಠಿತ ಪತ್ರಿಕೆಯ ಒಬ್ಬ ವರದಿಗಾರನಿಗೆ ಒಂದು ಪಕ್ಷದ ಮುಖಂಡ ರೇಮಂಡ್ ಪ್ಯಾಂಟು- ಶರ್ಟಗಳನ್ನು ಮತ್ತು ಹೆಚ್‌ಎಂಟಿ ವಾಚುಗಳನ್ನು ಕಾಣಿಕೆಯಾಗಿ ಕೊಟ್ಟು ಕಳಿಸಿದ್ದ. ಆ ವರದಿಗಾರ ಅದರ ಫೋಟೋ ಹೊಡೆದು ತಮ್ಮ ಪತ್ರಿಕೆಯಲ್ಲೇ ಪ್ರಕಟಿಸಿ, ಅದನ್ನು ಲಂಚವೆAದು ಕರೆದು ಹಿಂದಿರುಗಿಸಿದ್ದ. ಮಾರನೇ ದಿನ ಸತ್ಯ ಹರಿಶ್ಚಂದ್ರ ಪತ್ರಿಕೆಯಲ್ಲಿ ಬಂದ ವಿವರಗಳ ಫೋಟೋ ತೆಗೆದು ಪೇಸ್‌ಬುಕ್ ನಲ್ಲಿ ಅಪ್‌ಲೋಡ್ ಮಾಡಿದ್ದ. ಹುಬ್ಬಳ್ಳಿ ಮಂದಿಯಲ್ಲಿ ಅದೊಂದು ದೊಡ್ಡ ಸಂಚಲನಕ್ಕೇ ಕಾರಣವಾಗಿತ್ತು. ನಂತರದ ದಿನಗಳಲ್ಲಿ ಹುಬ್ಬಳ್ಳಿಯ ರಾಜಕೀಯ ಮುಖಂಡರು ಭ್ರಷ್ಟಾಚಾರಕ್ಕೆ ಮುಂದಾಗಲು ಭಯಪಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಗತಿ ಸರಸ್ವತಿಗೆ ‘ಇದು ತಪ್ಪು, ಇದನ್ನು ನಾವು ಹೀಗೂ ವಿರೋಧಿಸಬಹುದು’ ಎಂಬ ಅಂಶ ಮನವರಿಕೆಯಾಗಲು ಕಾರಣವಾಗಿತ್ತು. ಈ ತರಹದ್ದೇ ಅನೇಕ ಬಗೆಯ ಅಪ್‌ಡೇಟ್‌ಗಳು ಈಗ ಅವಳ ಟೈಮ್ ಲೈನ್ ಮೇಲೆ ನುಸುಳಿ ನುಸುಳಿ ಬರತೊಡಗಿದವು. ಎಲ್ಲವನ್ನೂ ಸರಸ್ವತಿ ತನ್ಮಯತೆಯಿಂದ ಗ್ರಹಿಸತೊಡಗಿದಳು.
ಒಂದು ಸುಂದರ ಬೆಳಗಿನಲ್ಲಿ ಸರಸ್ವತಿ ಪೇಸ್ ಬುಕ್ ಲಾಗಿನ್ ಆದಾಗ ‘ಹೆಪಿ ಟು ಬ್ಲೀಡ್’ ಎಂಬ ಧ್ಯೇಯವಾಕ್ಯ ನುಸುಳುತ್ತಿತ್ತು. ಮುಟ್ಟಾದ ಹೆಂಗಸೊಬ್ಬಳು ತಮಿಳುನಾಡಿನಲ್ಲಿ ದೇವಸ್ಥಾನ ಪ್ರವೇಶಿಸಿದಳೆಂದು ಅವಳನ್ನು ಹೊಡೆದು ಸಾಯಿಸಿದ ವಿವರಗಳ ಜೊತೆ ಅದನ್ನು ಅಪ್ ಡೇಟ್ ಮಾಡಿದ ಕಾಲೇಜು ವಿದ್ಯಾರ್ಥಿನಿ, ‘ಹೌದು, ನಾವು ಮುಟ್ಟಾಗುತ್ತೇವೆ ಏನೀಗ ?’ ಎಂದು ಪ್ರಶ್ನಿಸಿದ್ದಳು. ಬದುಕಿನಲ್ಲಿ ಇದಕ್ಕಿಂತ ದೊಡ್ಡ ಶಾಕ್ ಸರಸ್ವತಿಗೆ ಬೇರೊಂದಿರಲಿಲ್ಲ. ಒಮ್ಮೆಲೇ ಸರಸ್ವತಿಗೆ ಮುಜುಗರವೆನ್ನಿಸಿದರೂ ಕ್ರಮೇಣ ಹೌದಲ್ಲ, ನೈಸರ್ಗಿಕ ಕ್ರಿಯೆಯಾದ ನಮ್ಮ ಮುಟ್ಟಿನ ವಿಷಯವನ್ನು ಹೇಳಲು ನಾವೇಕೆ ಅಂಜಬೇಕು ಎಂಬ ಮನಸ್ಥಿತಿ ರೂಪಗೊಂಡಿತ್ತು. ಮತ್ತೆ ಮತ್ತೆ ಆ ಪೋಸ್ಟನ್ನು ತೆಗೆದು ಓದಿದಳು. ಅದಕ್ಕೆ ಯಾರು ಏನು ಕಮೆಂಟು ಬರೆದಿದ್ದಾರೆಂದು ಪದೇ ಪದೇ ನೋಡಿದಳು. ಏನೋ ಒಂಥರಾ ಧೈರ್ಯ ಉಕ್ಕಿತು. ಅದಕ್ಕೆ ತಾನೂ ಲೈಕ್ ಮಾಡಿದಳು, ಈಗ ಆ ಪೋಸ್ಟಿನ ಲೈಕ್ ಗಳ ಸಂಖ್ಯೆ ಮೂರು ಸಾವಿರವನ್ನೂ ದಾಟಿತ್ತು. ಅದಕ್ಕೆ ತನ್ನ ಪ್ರತಿಕ್ರಿಯೆ ಬರೆಯುತ್ತ ಸತ್ಯ ಹರಿಶ್ಚಂದ್ರ ‘ಸನಾತನಿಗಳು ಅನಗತ್ಯ ಬೊಬ್ಬಿಡುವ ಈ ನೆಲದಲ್ಲಿ ಇದು ಸ್ತಿçà ಅಸ್ತಿತ್ವದ ಕುರಿತಾದ ಒಂದು ಸಣ್ಣ ಕ್ರಾಂತಿ’ ಅಂತ ಬರೆದಿದ್ದ. ಅವನ ಪ್ರತಿಕ್ರಿಯೆಯೊಂದಕ್ಕೇ ಮುನ್ನೂರು ಹೆಣ್ಣುಮಕ್ಕಳು ಲೈಕ್ ಮಾಡಿದ್ದರು. ಹೀಗೆ ಸರಸ್ವತಿಗೆ ಈ ಪೇಸ್ ಬುಕ್ ಎಂಬ ತಾಣವು ನೂರಾರು ಬಣ್ಣಗಳ ಕಣ್ಣು ನೀಡುವ ಶುದ್ಧ ಕನ್ನಡಕವೆನಿಸಿತ್ತು.
ಮೊದಮೊದಲು ‘ಗುಡ್ ನೈಟ್ ಸ್ವೀಟ್ ಡ್ರೀಮ್ಸ್’ ಎಂದು ಬರೆದುಕೊಂಡ, ಆಗಷ್ಟೇ ಅರಳಿದ ಸುಂದರ ಹೂವಿನ ಚಿತ್ರಗಳು ಅರವತ್ತೋ ಎಪ್ಪತ್ತೋ ಜನರಿಗೆ ಟ್ಯಾಗ್ ಆಗಿ ಬರುವ ಸ್ನೇಹಿತರ ಪೋಸ್ಟುಗಳನ್ನು ತನ್ನ ಚೌಕಟ್ಟಿಗೆ ಸುಮ್ಮನೇ ಬಿಟ್ಟುಕೊಳ್ಳುತ್ತಿದ್ದವಳು, ಈಗ ಯಾವುದೇ ಮುಲಾಜಿಲ್ಲದೇ ಅಂಥವುಗಳನ್ನು ಹೈಡ್ ಮಾಡಿಬಿಡುವಳು. ತನ್ನದೇ ಮನಸ್ಸಿನ ದುಗುಡ ದುಮ್ಮಾನಗಳನ್ನು ಈ ಪೇಸ್‌ಬುಕ್ ಎಂಬ ಲೋಕ ತನಗರಿವಿಲ್ಲದೇ ಹೊರಹಾಕುತ್ತಿದೆ ಅನ್ನಿಸುತ್ತ ಹೋದ ಹಾಗೆ ಸರಸ್ವತಿಗೆ ಅದು ಇನ್ನಷ್ಟು ಆಪ್ತವೆನಿಸಿತ್ತು.
*
ಮದುವೆಗಿಂತ ಮೊದಲು ಹಾವೇರಿ ಜಿಲ್ಲೆಯ ಅಂಬೇಹಳ್ಳಿ ಎಂಬ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಬೆಳೆದು; ಪಿಯೂಸಿ ತನಕ ಓದಿದ ಸರಸ್ವತಿ, ಮುಂದೆ ಡಿಗ್ರಿ ಕಲಿಯಲು ಹಾವೇರಿ ಪಟ್ಟಣಕ್ಕೆ ಬರಲು ಬಸ್ಸಿನ ವ್ಯವಸ್ಥೆ ಸರಿಯಾಗಿಲ್ಲದೇ; ಓದಿಗೆ ಪೂರ್ಣವಿರಾಮ ಇತ್ತವಳು. ಅದರ ಮಾರನೇ ವರ್ಷವೇ ಅಂದರೆ ತನ್ನ ಹತ್ತೊಂಬತ್ತನೇ ವಯದಲ್ಲೇ ಅವಳ ಮದುವೆ ನಿಶ್ಚಯ, ಸಿಂಡಿಕೇಟ್ ಬ್ಯಾಂಕಿನಲ್ಲಿ ಕ್ಲಾರ್ಕ ಆಗಿದ್ದ ಈ ಶಂಕರನೊAದಿಗೆ ಹಾವೇರಿಯ ರ‍್ಯಾಂಭಾ ಮಠದಲ್ಲಿ ನಡೆದು, ಮುಂದಿನ ಆರು ತಿಂಗಳಲ್ಲಿ ಬೆಳಗಾವಿಯ ನೌಕರರ ಭವನದಲ್ಲಿ ಮದುವೆಯೂ ಜರುಗಿ ಹೋಗಿತ್ತು. ಆ ಹಂತದಲ್ಲಿ ಜರತಾರಿ ಸೀರೆಗಳು, ಹೊಳೆವ ಆಭರಣಗಳು ಅವಳನ್ನು ಬೇರೆಲ್ಲೂ ಕಣ್ತೆರೆದು ನೋಡದಂತೆ ಮೈಮರೆಸಿ ಕೂಡಿಸಿ ಬಿಟ್ಟಿದ್ದವು.
ನಂತರ ಸಂಸಾರ ಶುರುವಾದಾಗ ಅತ್ತೆ ರೇಣುಕಮ್ಮ ‘ಬ್ಯಾಳಿ ಹಸನ ಮಡಾಕ ನಿಮ್ಮವ್ವ ಕಲಸಿಲ್ಲನ?’ ‘ಮುಸರಿ ಸ್ವಚ್ಛಂಗ ಬಳಿಯೂದ್ ನಿಮ್ಮವ್ವ ಹೇಳಕೊಟ್ಟಿಲ್ಲನ ?’ ‘ಅಯ್ಯ ನಮ್ಮವ್ವ, ರೊಟ್ಟೀ ಬೆಸಂಗ ನಾದಾಕ ಬರವಲ್ದಲ್ಲಲೇ ನಿನಗ’ ‘ಚಂದAಗ ಸಂಸಾರ ಮಾಡಾಕ ಕಲ್ತೇ ಇಲ್ಲಬಿಡ ನೀ’ ‘ಛಿಛೀ, ನೆಗಡೀ ಆದಾಗ ಯಾರರ ಬಲಗೈಯಾಗ ಸಿಂಬಳದ ಮೂಗ್ ಹಿಂಡತಾರೆನ?’ ಎನ್ನುತ್ತಲೇ ಹಗೂರಕ್ಕೆ ,ಹುಬ್ಬಳ್ಳಿಯಲ್ಲಿ ನೌಕರಿ ಮಾಡುವ ಮಗ ಶಂಕರನ ಬಳಿ ಸೊಸೆಯನ್ನು ಕಳಿಸಲು ಮನಸ್ಸಿಲ್ಲದೇ ‘ಶನಿಯಾರ ಆಯ್ತಾರ ನೀನ ಮನೀಗ್ ಬಂದ್ ಹೋಗಲೇ ಶಂಕ್ಯಾ, ನಿನ ಹೇಂತೀಗೆ ನಾ ಬೇಸಂಗ ಅಡಗೀ ಕಲಸ್ತೇನಿ’ ಎಂದು ರಗಳೆ ತೆಗೆದಾಗಲೇ ಸರಸ್ವತಿಗೆ ತಾನು ಎಂಥ ಅಂಬಾರಿಯಲ್ಲಿದ್ದೇನೆ ಅನ್ನುವ ಅರಿವು ಮೂಡತೊಡಗಿತ್ತು.
ಮುಂದೆ ವರ್ಷಾನುಗಟ್ಟಲೇ ಹೀಗೇ ಕಳೆದ ಸರಸ್ವತಿ ತನ್ನ ಅತ್ತೆಯ ಮಾತನ್ನು ವಿರೋಧಿಸಿ ಗಂಡನೊಡನೆ ಹುಬ್ಬಳ್ಳಿಯ ಈ ಅಪಾರ್ಟಮೆಂಟಿನ ಪುಟ್ಟ ಮನೆಗೆ ತನ್ನ ಕನಸು ಸಾಗಿಸಲು ಹರಸಾಹಸವೇ ಪಡಬೇಕಾಯ್ತು. ಸಂಕ್ರಮಣ ಹಬ್ಬಕ್ಕೆಂದು ಹಾವೇರಿಗೆ ಬಂದವಳು ನಂತರ ಅತ್ತೆಯ ಬಳಿ ಹಿಂದಿರುಗದೇ ಸೀದಾ ಗಂಡನ ರೂಮಿಗೆ ಬಂದು ‘ನಿಮ್ಮವ್ವನ ಕಡೀ ಅಡಗೀ ಮಾಡಾಕ ನನ್ನ ಮದ್ವೀ ಮಾಡ್ಕೊಂಡೆನ?’ ಅನ್ನುತ್ತ ಜಗಳ ತೆಗೆದು ಇಲ್ಲೇ ಉಳಿದುಕೊಂಡುಬಿಟ್ಟಳು. ಮುಂದೆ ಅವಳ ಅತ್ತೆ ರೇಣುಕಮ್ಮನೇ ವರವರ ಗುಟ್ಟುವಂತೆ ‘ಎಣಿಸಿ ಎಣಿಸಿ ಎಂಟೇ ರೊಟ್ಟಿ, ಆರೇ ಬದನೆ ಎಣಗಾಯಿ, ನಾಲ್ಕೇ ಬೊಗಸೆ ಶೇಂಗಾ ಚಟ್ನಿ, ಎರಡೇ ಮುಷ್ಠಿ ರಂಜಕ, ಒಂದೇ ಬಟ್ಲ ಮೊಸರು, ಮಕ್ಕಳ ಬ್ಯಾಡಾ ಮರೀ ಬ್ಯಾಡಾ, ಯಾರ ದರಕಾರ ಇಲ್ಲದನ ಗಂಡಗ ಹೇಂತಿ, ಹೇಂತೀಗ ಗಂಡ’ ಎನ್ನುವ ರೀತಿಯಲ್ಲಿ ಬದುಕು ಕಟ್ಟಿಕೊಳ್ಳುತ್ತ ಹದಿನೈದು ವರ್ಷ ಸವೆಸಿಬಿಟ್ಟಳು. ಆಗಲೇ ಸಿಂಡೀಕೇಟ್ ಬ್ಯಾಂಕಿನವರು ಒಮ್ಮೆ ತಮ್ಮೆಲ್ಲ ಸ್ಟಾಪಿನವರಿಗೆ, ‘ಬ್ಯಾಂಕು ಉಚಿತ ಕಂಪ್ಯೂಟರ್ ತರಬೇತಿ ಕ್ಲಾಸ್ ನಡೀಸ್ತದೆ, ನಿಮ್ಮ ಜೊತೆ ನಿಮ್ಮ ಫ್ಯಾಮಿಲಿಯನ್ನೂ ರ‍್ಕೊಂಬನ್ನಿ’ ಅಂತ ಒಂದು ಉಪಯುಕ್ತ ಶಿಬಿರದ ಯೋಜನೆ ಆರಂಭಿಸಿದ್ದೇ, ಅತ್ಯುತ್ಸಾಹದಿಂದ ಅಲ್ಲಿ ಪ್ರವೇಶ ಪಡೆದ ಮೊದಲ ವಿದ್ಯಾರ್ಥಿ ಎಂದರೆ ಈ ನಮ್ಮ ಸರಸ್ವತಿಯೇ.
ಮೊದಲು ಕಂಪ್ಯೂಟರ್ ಆನ್ ಮಾಡಲು ಆಫ್ ಮಾಡಲು ಕಲಿಸಿದ ಅವರು ನಂತರ ನಿಧಾನವಾಗಿ ಅದರಲ್ಲಿರುವ ವಿಡಿಯೋ ಗೇಮ್ ಆಡಲು, ಅವರವರ ಹೆಸರಿನ ಮೇಲ್ ಓಪನ್ ಮಾಡಿ ಪರಸ್ಪರ ಸಂಭಾಷಿಸಲು, ಆನ್ಲೆöÊನ್ ನಲ್ಲಿ ಸಿನೆಮಾಗಳನ್ನು ನೋಡಲು, ಯಾವುದೇ ಮಾಹಿತಿ ಬೇಕಿದ್ದÀರೂ ಅದರ ಪುಟ ತೆಗೆದು ಹುಡುಕಲು, ಇಂಥ ಕೆಲವು ಮಹತ್ವದ ಸಂಗತಿಗಳ ಜೊತೆಗೆ, ಕಂಪ್ಯೂಟರ್ ಕಲಿಯಲು ಬಂದ ಬ್ಯಾಂಕಿನ ಫ್ಯಾಮಿಲಿಯವರನ್ನೆಲ್ಲ ಸೇರಿಸಿ ಒಂದು ನೆಟ್‌ವರ್ಕನ್ನು ಅವರೇ ನಿರ್ಮಿಸಿಕೊಟ್ಟು, ಅದರ ಆಪರೇಷನ್ ಗಳನ್ನೂ ಕಲಿಸಿಕೊಟ್ಟಿದ್ದರು. ಮತ್ತು ತರಬೇತಿಯ ನಿಯಮದಂತೆ ಅರ್ಧ ದರಕ್ಕೆ ಮನೆಗೊಂದರAತೆ ಕಂಪ್ಯೂಟರನ್ನೂ ನೀಡಿದ್ದರು. ಹಾಗೆ ಕಂಪ್ಯೂಟರ್ ತರಬೇತಿ ಮುಗಿದ ಮಾರನೆ ದಿನದಿಂದಲೇ, ಅಲ್ಲಿ ಕ್ಲಾಸಿನಲ್ಲಿ ಹೇಳಿಕೊಟ್ಟ ರೀತಿಯಲ್ಲೇ ಸರಸ್ವತಿ ದಿನವೂ ತನ್ನ ತಿಳಿವಳಿಕೆಯಲ್ಲೇ ಅಭ್ಯಾಸ ಮಾಡತೊಡಗಿದ್ದಳು.
ಹೀಗೆ ಬ್ಯಾಂಕಿನ ಸ್ಟಾಪಿನ ಕುಟುಂಬವಷ್ಟೇ ಸ್ನೇಹಿತರಾಗಿದ್ದ ಸಣ್ಣ ಗುಂಪನ್ನು ಈಗ ಸರಸ್ವತಿ, ಕೂಸಿನ ಜವಳ, ಮದುವೆ ಗಳಂತಹ ಕಾರ್ಯಕ್ರಮಗಳಿಗೆ ಹೋದಾಗ, ತನ್ನ ಸಂಬAಧಿಗಳು ಸಿಕ್ಕಾಗಲೆಲ್ಲ ‘ನೀನ್ ಫೇಸ್‌ಬುಕ್‌ನಾಗ ಅದೀಯೆನ?’ ಅಂತ ಕೇಳಿ ಕೇಳಿ ಅವರಿವರ ತಲೆತಿಂದು, ಫೇಸ್ ಬುಕ್ ನಲ್ಲಿ ಇದ್ದಂಥ ಮಹನೀಯರಿಗೆಲ್ಲ ಅವರು ಫೀಡ್ ಮಾಡಿದ ಹೆಸರನ್ನು ಸರಿಯಾಗಿ ತಿಳಿದುಕೊಂಡು, ಮನೆಗೆ ಬಂದವಳೇ ಅವರ ಅಕೌಂಟ್ ಹುಡುಕಿ, ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಸ್ನೇಹಬಳಗ ಹೆಚ್ಚಿಸಿಕೊಂಡಳು. ‘ಯಾರರ ತಾಂವ್ ಫೇಸ್‌ಬುಕ್‌ನಾಗ್ ಇಲ್ಲ ಅಂದ್ ಕೂಡ್ಲೇ, ಅವರ್ ಬದುಕೇ ಇಲ್ಲ ಅನ್ನೋ ಹಾಂಗ ಆಡ್ತೀಯಲ್ಲ?’ ಅಂತ ಗಂಡ ಶಂಕರನೊಡನೆಯೂ ಹಲವು ಸಲ ಬೈಸಿಕೊಂಡಳು. ಕೆಲವೊಮ್ಮೆ ‘ನೀನ ಇಲ್ಲ ಫೇಸ್ ಬುಕ್‌ನಾಗ, ಅದಕ ನಿನಗ ಅದರ ಮಜಾ ಗೊತ್ತಿಲ್ಲ’ ಅಂತ ಅವನನ್ನೇ ದಬಾಯಿಸುತ್ತಿದ್ದಳು.
ಶಂಕರ ತನ್ನ ಬ್ಯಾಂಕಿನ ಕೆಲ ವ್ಯವಹಾರಗಳನ್ನು ಕಂಪ್ಯೂಟರ್ ನಲ್ಲಿ ಮನೆಯಿಂದಲೇ ಪೂರೈಸುವ ಕಾರಣಕ್ಕಾಗಿ ಮನೆಗೆ ಬಂದ ಆ ಕಂಪ್ಯೂಟರ್ ಈಗ ಇಡೀ ದಿನ ಸರಸ್ವತಿಯ ಸ್ವತ್ತಾಗಿಬಿಟ್ಟಿತ್ತು. ಶಂಕರ ತನ್ನ ಎನ್ರಾಯ್ಡ್ ಮೊಬೈಲ್ ನಲ್ಲೇ ಸಣ್ಣ ಪುಟ್ಟ ಕೆಲಸ ಪೂರೈಸುತ್ತಿದ್ದ. ಸಂಜೆ ಆರೂವರೆಗೆಲ್ಲ ಮನೆಗೆ ಬಂದನೆAದರೆ ಶಂಕರ ಹಚ್ಚಿದ ಅವಲಕ್ಕಿಯ ಜೊತೆ ಒಂದಿಷ್ಟು ಬಿಸಿ ಚಹ ಕುಡಿದು ಹೊರಗೆ ಸೋಪಾದಲ್ಲಿ ಕೂತು ತನ್ನ ಸೆಲ್ ಫೋನ್ ನಲ್ಲೇ ಅಗತ್ಯದ ಕೆಲಸ ಪೂರೈಸುತ್ತಿದ್ದ. ಈ ಪೇಸ್‌ಬುಕ್ ಎಂಬ ವಿಧಾನ ನಮ್ಮ ಮನೆ ಪ್ರವೇಶಿಸುವದಕ್ಕೆ ಮುಂಚೆ ದಿನಾ ಸಂಜೆ ನೃಪತುಂಗ ಬೆಟ್ಟಕ್ಕೋ, ಉಣಕಲ್ ಕೆರೆಗೋ, ಗ್ಲಾಸ್ ಹೌಸ್ ಗಾರ್ಡನ್ನಿಗೋ ಅಥವಾ ಯುಮಾಲ್, ಬಿಗ್ ಬಝಾರ್ ಗಳಿಗೋ ಕರೆದೊಯ್ಯುವಂತೆ ಸರಸ್ವತಿ ಹಟಮಾಡುತ್ತಿದ್ದಳು, ಅತ್ತ ಜೇಬಿಗೆ ಕತ್ತರಿಯೂ ಇಲ್ಲ, ಇತ್ತ ಸುಸ್ತಾಗಿ ಮನೆಗೆ ಬಂದು ಮತ್ತೆ ಹೊರಹೋಗುವ ಬೇಸರವೂ ಇಲ್ಲ, ಇಂಟರ್ ನೆಟ್‌ಗಾಗಿ ತಿಂಗಳೂಪ್ಪತ್ತಿಗೆ ರ‍್ನೂರರ ಕರೆನ್ಸೀ ಹಾಕಿದರೆ ತೀರಿತು, ಥ್ಯಾಂಕ್ ಗಾಡ್ ಅಲ್ಲಲ್ಲ ಥ್ಯಾಂಕ್ ಫೇಸ್ ಬುಕ್ ಅಂದುಕೊಳ್ಳುತ್ತ ಶಂಕರ ಈಗ ಆರಾಮಾಗಿರತೊಡಗಿದ್ದ. ನಮಗಿನ್ನೂ ಮಕ್ಕಳಾಗಿಲ್ಲ ಎಂಬ ಮಾತುಗಳನ್ನು ಬೇರೆಯವರಿಂದ ಪದೇಪದೇ ಹೇಳಿಸಿಕೊಂಡು, ಅದನ್ನೇ ನೆನೆಸಿಕೊಂಡು ಕೊರಗುತ್ತ, ದಿನಕ್ಕೊಂದು ರಾದ್ಧಾಂತ ಎಬ್ಬಿಸುತ್ತಿದ್ದ ತನ್ನ ಸರಸ್ವತಿ ಇದ್ದಲ್ಲೇ ಇವೆಲ್ಲದರಿಂದ ಬಿಡುಗಡೆಗೊಂಡು, ಹೊಸತೇ ಆದೊಂದು ವಿಶಾಲ ಲೋಕಕ್ಕೆ ಸೇರ್ಪಡೆಯಾಗಿದ್ದು ಶಂಕರನಿಗAತೂ ನೆಮ್ಮದಿ ತಂದಿತ್ತು.
*
ಹೀಗಿರುವಾಗ ಒಮ್ಮೆ ಎಂಬಿಎ ಕಲಿಯುತ್ತಿದ್ದ ರಮ್ಯಶ್ರೀ ಎಂಬ ಹುಡುಗಿ ‘ಎರಡೂ ಪಾದಗಳ ಹಿಮ್ಮಡಿ ಒಡೆದಿದ್ದರೆ ದಿನವೂ ರಾತ್ರೆ ಮಲಗುವಾಗ ಹತ್ತು ನಿಮಿಷ ನಿಮ್ಮ ಪಾದಗಳನ್ನು ಬಿಸಿ ನೀರಿನಲ್ಲಿ ಅದ್ದಿಟ್ಟು ನಂತರ ಚೆನ್ನಾಗಿ ಒರೆಸಿಕೊಂಡು ಮಲಗಿರಿ, ಮೂರು ತಿಂಗಳಲ್ಲಿ ನಿಮ್ಮ ಸುಂದರ ಹಿಮ್ಮಡಿಯ ಫೋಟೋ ತೆಗೆದು ನೀವು ಫೇಸ್ ಬುಕ್ ನಲ್ಲಿ ಅಪ್‌ಲೋಡ್ ಮಾಡಬಹುದು ಎಂದು ಬರೆದುಕೊಂಡಿದ್ದಳು. ಅವಳ ಟೈಮ್ ಲೈನ್ ತೆಗೆದು ನೋಡಿದರೆ, ಬರೀ ಇಂಥ ಹೆಲ್ತ್ ಟಿಪ್ಸ್ ಗಳೇ ತುಂಬಿದ್ದವು. ಅವುಗಳಲ್ಲಿ ಕೆಲವೊಂದನ್ನು ಸರಸ್ವತಿ ಪ್ರಯೋಗ ಮಾಡಿ ನೋಡಿ, ಅವಳ ಇನ್ ಬಾಕ್ಸಿನಲ್ಲಿ ಥ್ಯಾಂಕ್ಸ್ ಎಂಬ ಸಂದೇಶ ಕೂಡ ರವಾನಿಸಿದ್ದಳು.
ಬುದ್ಧಿಯನ್ನು ಒಂದಿಷ್ಟೂ ಬೆಳೆಸಲು ಸಮರ್ಥ್ಯವಿಲ್ಲದ ಬರೀ ದೇವರು, ದೇವಸ್ಥಾನಗಳ ಚಿತ್ರ ಹಾಕುತ್ತ ಕೂಡುವ ಸ್ನೇಹಿತರಿಗಿಂತ , ಅಯ್ಯಪ್ಪ ಮಂದಿರದಲ್ಲಿ ಯಾಕೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ? ಎಂಬ ಚರ್ಚೆ ಮಾಡುವ ಸತ್ಯ
ಹರಿಶ್ಚಂದ್ರ, ಸರಸ್ವತಿಗೆ ಇಷ್ಟವಾಗತೊಡಗಿದ್ದ. ಗಾಂಧೀ ಜಯಂತಿಯ ದಿನ ಮೂರೇ ಮೂರು ಗೆರೆಗಳಲ್ಲಿ ಗಾಂಧಿಯನ್ನು ಮೂಡಿಸಿದ ಸತ್ಯ ಹರಿಶ್ಚಂದ್ರನಿAದ ಸ್ಪೂರ್ತಿ ಪಡೆದು ಸರಸ್ವತಿ ತಾನೂ ಕೆಲ ದಿನ ರೇಖಾಚಿತ್ರ ಬಿಡಿಸಲು ಪ್ರಯತ್ನಿಸಿದ್ದಳು.
ಇವೆಲ್ಲದರಿಂದ ಹೊಸ ಉತ್ಸಾಹ ಉಕ್ಕಿದ ಸರಸ್ವತಿ ಈಗ ತನಗೆ ಬಾಲ್ಯದಲ್ಲಿ ಬರುತ್ತಿದ್ದ ಕಸೂತಿ ಕಲೆಯನ್ನು ಪುನಃ ಹೊಸದಾಗಿ ಆವಾಹಿಸಿಕೊಂಡು, ಆ ಕಲೆಯ ಕುರಿತು ದಿನಕ್ಕೊಂದು ಹೊಸ ಮಾಹಿತಿ ನೀಡಿ ತನ್ನ ಟೈಮ್ ಲೈನ್ ನಲ್ಲಿ ವಿವರ ಹಾಕತೊಡಗಿದಳು. ತನಗೆ ಗೊತ್ತಿರುವ ಕಲೆಯನ್ನು ತನ್ನ ಸ್ನೇಹಬಳಗಕ್ಕೆ ಹೀಗೆ ಹಂಚುವಾಗ ಸರಸ್ವತಿಯಲ್ಲಿ ಒಂದು ರೀತಿಯ ಅವ್ಯಕ್ತ ಖುಷಿ ಆವರಿಸುವದು. ಕೆಲವರು ಅದರ ಕುರಿತು ಉಪಯುಕ್ತ ಮಾಹಿತಿಯನ್ನೂ ಕೇಳುವರು. ಅದಕ್ಕೆಲ್ಲ ಉತ್ತರಿಸುವಾಗ ಸರಸ್ವತಿಗೆ ತಾನು ಟೀಚರ್ ಎಂಬ ಭಾವ ಮುತ್ತಿಕೊಳ್ಳುವುದು. ಇವಳಿಂದÀ ಮಾಹಿತಿ ಪಡೆದ ಆಯೇಶಾ ಎಂಬ ಒಬ್ಬ ಮಹಿಳೆ ತಾನೂ ಕಲಿತು ಹಾಕಿದ ಕಸೂತಿಯ ಫೋಟೋ ತೆಗೆದು ಅಪ್ ಡೇಟ್ ಮಾಡಿ, ‘ಕ್ರೆಡಿಟ್ ಸರಸ್ವತಿಯವರಿಗೆ’ ಅಂತ ಟ್ಯಾಗ್ ಕೊಟ್ಟಿದ್ದಳು. ಅದನ್ನು ಕಂಡು ಸರಸ್ವತಿಗೆ ಎಂಥದೋ ಭಾವೋದ್ವೇಗ ಉಕ್ಕಿ ಕಣ್ಣು ತುಂಬಿ ಬಂದಿತ್ತು.
ಒಬ್ಬನAತೂ ‘ನೆಗಡಿಯಾದರೆ ನೀವು ಯಾವ ಕೈಯಲ್ಲಿ ಮೂಗನ್ನು ಸ್ವಚ್ಛಗೊಳಿಸಿಕೊಳ್ಳುತ್ತೀರಿ?’ ಅಂತ ಅಪ್ ಡೇಟ್ ಹಾಕಿದ್ದ. ಇದು ಕೆಲವರಿಗೆ ಕಾಮಿಡಿಯಾಗಿ ಕಂಡರೂ ಸರಸ್ವತಿಗೆ ಒಂದು ನಿಗೂಢವಾದ ಸಂಗತಿಯೇ ಆಗಿತ್ತು. ಸರಸ್ವತಿಗೆ ಒಮ್ಮೆಲೇ ಅವಳ ಮದುವೆಯ ದಿನಗಳ ನೆನಪಾಗಿತ್ತು. ಅತ್ತೆ ರೇಣುಕಮ್ಮನ ರಿಪಿ ರಿಪಿ ಕಣ್ಣೆದುರೇ ಬಂದ ಹಾಗಾಗಿತ್ತು. ಅದಕ್ಕೆ ಸುಮಾರು ಮೂವತ್ತೇಳು ಕಮೆಂಟುಗಳು ನೂರಾರು ಲೈಕ್ಗಳೂ ಬಂದಿದ್ದವು. ಕಮೆಂಟುಗಳು ಓದಲು ತಮಾಷೆಯಾಗಿತ್ತು. ‘ಎಡಗೈಯಲ್ಲಿ ಸ್ವಚ್ಛಗೊಳಿಸಿಕೊಳ್ಳುವುದು ಸಂಪ್ರದಾಯ’ ‘ನಮ್ಮ ನಮ್ಮ ಅನುಕೂಲಕ್ಕೆ ತಕ್ಕಂತೆ ಯಾವ ಕೈಯಲ್ಲಾದರೂ ಸರಿ’ ‘ರೊಡ್ಡರು ಬಲಗೈಲ್ಲೇ ಸ್ವಚ್ಛಗೊಳಿಸಿಕೊಳ್ಳುವರು’ ಎಂದೆಲ್ಲ ತಮಾಷೆಯಾಗಿರುವ ಕಮೆಂಟುಗಳನ್ನು ಶಂಕರನ ಬಳಿ ಸರಸ್ವತಿ ಓದಿಯೂ ಹೇಳಿದ್ದಳು. ‘ಹೌದೇ? ಹೌದೇ?’ ಅಂತ ಕೇಳುತ್ತ ಶಂಕರ ಅಷ್ಟೇನೂ ಆಸಕ್ತಿ ತೋರಿಸಿರಲಿಲ್ಲ. ‘ನಿನ್ನದೂ ಒಂದು ಫೇಸ್ ಬುಕ್ ಅಕೌಂಟ್ ಓಪನ್ ಮಾಡಿಕೊಡಲೇ?’ ಅಂತ ಕೇಳಿದ್ದಕ್ಕೆ ಶಂಕರ ‘ನನಗೆಲ್ಲಿ ಪುರುಸೊತ್ತು? ಬ್ಯಾಂಕಿನ ಕೆಲಸವೇ ಹಾಸು ಹೊದೆಯುವಷ್ಟಿದೆ’ ಅನ್ನುತ್ತ ನಿರಾಸಕ್ತಿ ತೋರಿದ್ದ.
ಶಂಕರ ಅತ್ತ ಬ್ಯಾಂಕಿಗೆ ಹೋದದ್ದೇ ಅಷ್ಟೇ ಬೇಗ ಮನೆಗೆಲಸ ಮುಗಿಸಿದ ಸರಸ್ವತಿ ಇತ್ತ ಪೇಸ್ ಬುಕ್ ಓಪನ್ ಮಾಡುತ್ತಿದ್ದಳು. ನೂರಾರು ಹೊಸ ಹೊಸ ವಿವರ ನೀಡುವ ಅಪ್ ಡೇಟ್ಸ್ಗಳು ಅವಳಿಗಾಗಿ ಕಾಯುತ್ತಿದ್ದವು. ಕೆಲವರು ಕಂಗ್ಲೀಷಿನಲ್ಲಿ ಬರೆದಿರುತ್ತಿದ್ದರು. ‘ಊಟ ಆಯ್ತೇ’ ಅಂತ ಕೇಳಿದ್ದು ಒಮ್ಮೆಲೆ ಗ್ರಹಿಸಲು ಬಾರದೇ ‘ಊತ ಆಯ್ಟೇ’ ಎಂದು ಓದಿಕೊಂಡು ನಂತರ ಸರೀ ಓದಿಕೊಳ್ಳುತ್ತಿದ್ದಳು. ‘ಇಲ್ಲಿ ತುಂಬಾ ಮಳೆ ಇದೆ’ ಎಂದ್ಯಾರೋ ಕೊಟ್ಟಿದ್ದನ್ನು ‘ಇಲ್ಲಿ ಟುಂಬಾ ಮಲೆ ಇಡೆ’ ಅಂತ ಓದಿಕೊಳ್ಳುವಂತಾಗುತ್ತಿತ್ತು. ತನ್ನ ಕಂಗ್ಲೀಷಿನ ಬರಹವೂ ಬೇರೆಯವರಿಗೆ ಇಂಥದೇ ಹಿಂಸೆ ಕೊಡಬಹುದು ಎಂದು ತಿಳಿದ ಸರಸ್ವತಿ ‘ಇಲ್ಲಿ ಕನ್ನಡ ಲಿಪಿಯಲ್ಲಿ ಬರೆಯಲು ಎನು ಮಾಡಬೇಕು?’ ಅಂತ ಕೇಳಿ ಒಂದು ಅಪ್ಡೇಟ್ ಹಾಕಿದಳು.
ಮುಂದಿನ ಕೆಲವೇ ನಿಮಿಷಗಳಲ್ಲಿ ಎಂಟ್ಹತ್ತು ಕಮೆಂಟುಗಳು ಬಂದವು. ‘ಬರಹ ಸಾಫ್ಟ್ ವೇರ್ ಹಾಕಿಸಿಕೊಳ್ಳಿ ಮ್ಯಾಡಂ’ ‘ಯೂನಿಕೋಡ್ ಬಳಸಿ ಮ್ಯಾಡಂ’ ಅಂತೆಲ್ಲ ಬರೆದಿದ್ದನ್ನು ಓದಿದರೂ ಸರಸ್ವತಿಗೆ ತಲೆಯಲ್ಲಿ ಹೋಗಿರಲಿಲ್ಲ. ಅಂದೇ ಊಟ ಮಾಡುತ್ತ ಕೂತಿರುವಾಗ ಶಂಕರ ‘ಪಿಯೂಸಿ ಆಗಿದೀಯಂತ, ಕನ್ನಡ ಬರೆಯಾಕ್ ಬರಂಗಿಲ್ಲನ?’ ಅಂತ ತಮಾಷೆ ಮಾಡಿಬಿಟ್ಟಿದ್ದ. ‘ಅದ ನಿನಗ ಹ್ಯಂಗ್ ಗೊತ್ತಾತು?’ ಅಂತ ಸರಸ್ವತಿ ಹಿಡ್ತು ಬಿಡ್ತು ಮಾಡುತ್ತ ಕೇಳಿದ್ದಳು. ‘ಇಲ್ಲ ಮಾರಾಯ್ತೀ, ನಮ್ಮ
ಬ್ಯಾಂಕಿನವರೆಲ್ಲ ನಿಮ್ ಹುಬ್ಬಳ್ಳಿ ಮಂದಿ ಗುಂಪಿನ್ಯಾಗ ಅದಾರಂತ, ಅವರ ಹೇಳ್ತಿರತಾರ, ನಿಮ್ ಮನೀಯವ್ರು ಈವತ್ತು ಹೀಂಗ ಬರದಾರ, ನಿನ್ನೆ ಹಂಗ ಬರದಿದ್ರು ಅಂತ’ ಅನ್ನುತ್ತ ಶಂಕರ ಅಲ್ಲೇ ಜಾರಿಕೊಂಡಿದ್ದ.
ಆದರೆ ಇತ್ತೀಚೆಗೆ ಹೆಚ್ಚಾಗಿ ಕಾಣುತ್ತಿದ್ದ ಸತ್ಯ ಹರಿಶ್ಚಂದ್ರ ಎಂಬ ಗೌಪ್ಯ ನಾಮದಿಂದ ಅಕೌಂಟ್ ಹೊಂದಿದ್ದ ವ್ಯಕ್ತಿಯೊಬ್ಬ ತೀರಾ ಪ್ರಾಮಾಣಿಕವಾಗಿ ಕಮೆಂಟು ಮಾಡುತ್ತಿದ್ದುದನ್ನು ಸರಸ್ವತಿ ಮೊದಮೊದಲು ಸುಮ್ಮನೇ ಓದುತ್ತಿದ್ದಳು. ಒಮ್ಮೆ ಶಕುಂತಲಾ ಪೈ ಎನ್ನುವ ಸ್ನೇಹಿತೆಯೊಬ್ಬಳು ತನ್ನ ಟೈಮ್ ಲೈನ್ ನಲ್ಲಿ ‘ಊಟವಾದ ನಂತರ ಅರ್ಧ ಗಂಟೆ ಬಿಟ್ಟು ಒಂದು ಲೋಟ ಬೆಚ್ಚಗಿನ ನೀರು ಕುಡಿದರೆ, ಜೀರ್ಣ ಶಕ್ತಿ ಹೆಚ್ಚುತ್ತದೆ’ ಅಂತ ಅಪ್ ಡೇಟ್ ಕೊಟ್ಟಿದ್ದಳು. ಅದಕ್ಕೆ ನೂರುಗಟ್ಟಲೇ ಕಮೆಂಟುಗಳು, ಆರುನೂರು ಲೈಕ್ ಗಳು ಬಂದಿದ್ದವು. ಸರಸ್ವತಿ ಅದಕ್ಕೆ ಕಟ್ಟಕಡೆಯಲ್ಲಿ ‘ಊಟವಾದ ನಂತರ ಹಣ್ಣುಗಳನ್ನು ತಿಂದರೂ ಜೀರ್ಣ ಶಕ್ತಿ ಹೆಚ್ಚುತ್ತದೆ’ ಅಂತ ಕಮೆಂಟು ಹಾಕಿದಳು.
ಅದರ ಕೆಳಗಡೆ ಸತ್ಯ ಹರಿಶ್ಚಂದ್ರ ಬರೆದ ಕಮೆಂಟು ಹೀಗಿತ್ತು: ‘ನಮ್ಮ ಹುಬ್ಬಳ್ಳಿಯ ಹದಿನೈದು ಲಕ್ಷ ಜನರಲ್ಲಿ ಎಷ್ಟು ಜನರು ಹಣ್ಣು ತಿನ್ನುವ ಸಾಮರ್ಥ್ಯ ಪಡೆದಿದ್ದಾರೆ? ಎಷ್ಟೋ ಜನರಿಗೆ ಎರಡು ಹೊತ್ತಿನ ಊಟಕ್ಕೇ ಗತಿಯಿಲ್ಲ’ ಆ ಕಮೆಂಟಿಗೇ ಇಪ್ಪತ್ತೆಂಟು ಜನ ಲೈಕ್ ಮಾಡಿದ್ದರು. ಅದನ್ನು ಓದಿ ಪ್ರೇರೇಪಣೆಗೊಂಡ ದಿನವೇ ಸರಸ್ವತಿ, ಆ ಸತ್ಯ ಹರಿಶ್ಚಂದ್ರನ ಸ್ನೇಹಕ್ಕಾಗಿ ತಾನೇ ಫ್ರೆಂಡ್ ರಿಕ್ವೆಸ್ಟ್ ರವಾನಿಸಿದ್ದಳು. ಅದಕ್ಕಿಂತ ಮೊದಲು ‘ಯಾರೀತ ರಗಳೆ ಸತ್ಯ ಹರಿಶ್ಚಂದ್ರ? ಎಲ್ಲದಕ್ಕೂ ಉಲ್ಟಾ ವಾದ ತೆಗೆದು ಕಮೆಂಟು ಮಾಡುತ್ತಾನೆ’ ಅಂತಲೇ ಕಡೆಗಣಿಸಿದ್ದಳು. ಆದರೆ ಅವತ್ಯಾಕೋ ಈ ಹರಿಶ್ಚಂದ್ರನೆÀAಬ ಅನಾಮಧೇಯ ಹೇಳುವುದೆಲ್ಲ ಸತ್ಯವಾದುದು, ಸರಿಯಾದುದು ಅನಿಸತೊಡಗಿದ್ದರಿಂದ ತಾನೇ ಅವನೆಡೆಗೆ ಸ್ನೇಹ ಹಸ್ತ ಚಾಚುವ ಮನಸ್ಸು ಮಾಡಿದ್ದಳು. ಏಳೆಂಟು ದಿನಗಳವರೆಗೆ ಕಾಯಿಸಿ ನಂತರ ಆತ ಇವಳ ರಿಕ್ವೆಸ್ಟನ್ನು ಒಪ್ಪಿ ಖಚಿತ ಮಾಡಿದ್ದ. ಅದನ್ನು ಕಂಡವಳೇ ಸರಸ್ವತಿ ಅಕ್ಷರಶಃ ಕುಣಿದಾಡಿಯೇ ಬಿಟ್ಟಿದ್ದಳು. ಸರಸ್ವತಿ ದಿನಗಳೆದಂತೆ ಅವನ ಅಷ್ಟು ದೊಡ್ಡ ಫ್ಯಾನ್ ಆಗಿ ಮಾರ್ಪಾಡಾಗಿದ್ದಳು. ಅದನ್ನು ಅಂದೇ ಸರಸ್ವತಿ ಶಂಕರನ ಬಳಿ ಹೇಳಿದ್ದಳು ಕೂಡ. ‘ಹೌದೇ ? ಆಲ್ ದಿ ಬೆಸ್ಟ್’ ಅನ್ನುತ್ತ ಆತ ಸುಮ್ಮನೆ ಮುಗುಳ್ನಕ್ಕಿದ್ದ.
*
ಹೀಗೆ ಫೇಸ್‌ಬುಕ್ ಲೋಕದ ಹುಬ್ಬಳ್ಳಿ ಮಂದಿ ಗ್ರೂಪ್ಪಿನ ಕಿಂಗ್ ಆಗಿ ಮೆರೆಯುತ್ತಿದ್ದ ಸತ್ಯ ಹರಿಶ್ಚಂದ್ರ ಒಮ್ಮಿಂದೊಮ್ಮೆಲೇ ಈಗ ನನ್ನನ್ನು ನೋಡಲು ಬರುತ್ತಿದ್ದಾನೆಂದರೆ, ಎಂಥದೇ ಸಂದಿಗ್ಧದ ಮಧ್ಯೆಯೂ ಎಲ್ಲ ತಾರತಮ್ಯಗಳೂ ಸಂಶಯಗಳೂ ಗೌಣವೆನಿಸಿ ಸರಸ್ವತಿಯ ಸಂತೋಷಕ್ಕೆ ಪಾರವೇ ಇರಲಿಲ್ಲ.
ಇತ್ತ ಶಂಕರ ಬ್ಯಾಂಕು ಬಿಟ್ಟು ಮನೆಗೆ ಬಂದು ಅರ್ಧ ಗಂಟೆಯಾದರೂ ಅತ್ತ ಸತ್ಯ ಹರಿಶ್ಚಂದ್ರನ ಸುಳಿವೇ ಇಲ್ಲ. ಸರಸ್ವತಿ ಕಾದಳು, ಕಾದಳು, ಕಾಯುತ್ತಲೇ ಇದ್ದಳು. ‘ಏನು ಮಾಡಿದ್ದೀ ತಿನ್ನಾಕ? ನನಗ ಕೊಟ್ಬಿಡು, ಆಮ್ಯಾಗ ತಣ್ಣಗಾಕ್ಕೇತಿ’ ಅಂತ ಕಿಚಾಯಿಸುವ ದನಿಯಲ್ಲಿ ತಣ್ಣಗೆ ಅಂದ ಶಂಕರ. ‘ಸ್ವಲ್ಪ ಹೊತ್ತು ನೋಡೂಣು, ಅದೇ ಆ ಹರಿಶ್ಚಂದ್ರ ಬಂದ್ ಬಿಟ್ರ ಅವನ ಜೋಡೀನ ತಿಂದ್ರಾತು’ ಅಂದಿದ್ದಳು ಹುಸಿಕೋಪ ತೋರಿಸುತ್ತ ಸರಸ್ವತಿ. ‘ಅಂವ ಏನ್ ಬರೂವಂಗ ಕಾಣಂಗಿಲ್ಲ, ಒಗ್ಗರಣಿ ಘಮಾ ಘಮಾ ಅನಲಿಕ್ಕ ಹತ್ತದ, ನನಗ ಕೊಡು’ ಅಂತ ಶಂಕರ ಮೀಸೆಯಲ್ಲೇ ಸಣ್ಣಗೆ ನಗುತ್ತ ಹಟಹಿಡಿದ.
‘ಯಾಕ್ ಬರಂಗಿಲ್ಲ? ನಿನ್ನ್ ಕೂಡೂ ಮಾತಾಡದಂಗ ಆಕ್ಕೇತಿ ಅಂತ, ಈಗ ರ‍್ತೇನಿ ಅಂದಿದ್ದ, ಮನೀ ಎಡ್ರೆಸ್ಸು ತಪ್ ಗಿಪ್ ಗರ‍್ತ್ ಹಾಕೊಂಡಾನೋ ಏನೋ’ ಅನ್ನುತ್ತ ಸರಸ್ವತಿ ಮನಸ್ಸಿಲ್ಲದ ಮನಸ್ಸಿನಿಂದ ಪ್ಲೇಟಿನಲ್ಲಿ ಒಗ್ಗರಣೆ ಬಡಿಸಿಕೊಂಡು ಶಂಕರನ ತಲೆಯ ಮೇಲೆ ಜರಿಯುವಂತೆ ಹೊರಗೆ ಟೀಪಾಯಿಯ ಮೇಲೆ ತಂದಿರಿಸಿದಳು. ‘ನೀನೂ ಹಾಕ್ಕೊಂಡು ತಿಂದಬಿಡು, ನಿನ ಹರಿಶ್ಚಂದ್ರ ಮಹಾರಾಜ ಇನ್ ಮ್ಯಾಗ್ ಏನ್ ಬರಂಗಿಲ್ಲ ತೊಗೋ’ ಅಂತ ಶಂಕರ ನಗುತ್ತ, ಅಷ್ಟೇ ಖಚಿತವಾದ ದನಿಯಲ್ಲಿ ಹೇಳಿದ್ದೇ ಸರಸ್ವತಿ ‘ಅದೇನ? ಅಷ್ಟ್ ಸರೀ ಹೇಳ್ತೀ? ನಿನಗೇನ್ ಗೊತ್ತೇತಿ ಅವಂದು? ನೋಡ್ತಿರು ಬಂದ ರ‍್ತಾನ’ ಅನ್ನುತ್ತ ತಿರುಗಿ ಗಂಡನ ಮೇಲೇ ಹರಿಹಾಯ್ದಳು. ಏಳು ಏಳೂವರೆ, ಎಂಟು ಎಂಟೂವರೆಯ ತನಕ ಕಾದಿದ್ದೇ ಬಂತು. ಸತ್ಯವಂತ ವಂಶದ ಹರಿಶ್ಚಂದ್ರನ ಪತ್ತೆಯೇ ಇಲ್ಲ.
ಎಂದಿನAತೆ ಶಂಕರ ‘ನಿನ್ನ ಫೇಸ್ ಬುಕ್ಕಿನ ರಗಳೆಗಿಂತ ಸ್ವಲ್ಪ ಹೊತ್ತು ವಿಡಿಯೋ ಗೇಮ್ ಆಡುವುದೇ ನನಗೆ ನೆಮ್ಮದಿ’ ಎಂದು ಹೇಳುತ್ತ , ತನ್ನ ಎನ್ರಾಯ್ಡ್ ಮೊಬೈಲ್ ಅನ್ನು ಕೂತಲ್ಲೇ ಚಾರ್ಜಿಗೆ ಹಾಕುತ್ತ ಅಲ್ಲೇ ಸೋಫಾದಲ್ಲಿ ಒರಗಿದ್ದ. ‘ಯಾಕೆ ಇಂವ ಬರದೇ ಮೋಸ ಮಾಡಿದ?’ ಅಂದುಕೊಳ್ಳುತ್ತ ಎಂಥದೋ ಅವಮಾನವಾದ ಮನಸ್ಥಿತಿಯಲ್ಲಿ ಸರಸ್ವತಿ ಪೇಸ್ ಬುಕ್ ತೆರೆದು ‘ಯಾಕೆ ಬರಲೇ ಇಲ್ಲ?’ ಅಂತ ಒಂದು ಸಂದೇಶವಾದರೂ ಕಳಿಸೋಣ ಅಂತ ಪುನಃ ಕಂಪ್ಯೂಟರ್ ಎದಿರು ಕೂತಳು.
ಫೇಸ್ ಬುಕ್ ತೆರೆದದ್ದೇ ಒಂದೇ ನಿಮಿಷದ ಹಿಂದೆ ಕಳಿಸಿದ ಒಂದು ಸಂದೇಶ ಅವಳಿಗಾಗೇ ಕಾದಿತ್ತು. ಖುಷಿಯಿಂದ ಅಷ್ಟೇ ಲಗುಬಗೆಯಿಂದ ಮೆಸೇಜ್ ಬಾಕ್ಸಿನ ಮೇಲೆ ಕ್ಲಿಕ್ ಮಾಡಿದಳು. ‘ಬೀನ್ಸು, ಗಜ್ಜರಿ ತುರಿದು ಹಾಕಿದ್ದಕ್ಕೆ ಒಗ್ಗರಣೆ ಅವಲಕ್ಕಿ ರುಚಿಯಾಗಿತ್ತು, ಥ್ಯಾಂಕ್ಸ್’ ಎಂಬ ಒಕ್ಕಣೆ ಅಲ್ಲಿತ್ತು. ಒಮ್ಮೆಲೇ ಶಾಕ್ ಆದ ಸರಸ್ವತಿ ಥರಗುಟ್ಟಿಹೋದಳು. ‘ಅಯ್ಯೋ ದೇವರೇ’ ಎನ್ನುತ್ತ ಎದ್ದುನಿಂತಳು. ‘ಇಷ್ಟು ವರ್ಷ ಕೂಡಿ ಸಂಸಾರ ಮಾಡಿದವ, ಹೀಗೆ ನನ್ನನ್ನು ಪರೀಕ್ಷಿಸುವುದೇ? ‘ಅಂತ ಆ ಕ್ಷಣ ಮನಸ್ಸಿನಲ್ಲಿ ಸಂಬAಧದ ಒಂದು ರೀತಿಯ ಸಂಘರ್ಷವೂ ಆಗಿಹೋಯಿತು. ಅದನ್ನು ಆ ಕ್ಷಣದಲ್ಲೇ ಸರಿಮಾಡಿಕೊಳ್ಳುವವಳಂತೆ, ಥಟ್ಟನೆ ಎದ್ದವಳೇ ಸರಸ್ವತಿ, ಕುರ್ಚಿಯ ಬೆನ್ನಿಗೆ ಹಾಕಿದ್ದ ತಲೆದಿಂಬನ್ನು ಎತ್ತಿಕೊಂಡು ಹೊರಓಡಿ ಬಂದು, ಸೋಫಾದಲ್ಲಿ ಒರಗಿಕೊಂಡಿದ್ದ ನಮ್ಮ ಸತ್ಯ ಹರಿಶ್ಚಂದ್ರನನ್ನು ‘ಅವಲಕ್ಕಿ ರುಚಿಯಾಗಿತ್ತೇ? ರುಚಿಯಾಗಿತ್ತೇ ಅವಲಕ್ಕಿ?’ ಅಂತ ಕೇಳುತ್ತಲೇ ಕೈಯಲ್ಲಿದ್ದ ದಿಂಬಿನಿAದ ರಬ್ ರಬ್ ಅಂತ ಭಾರಿಸತೊಡಗಿದಳು. ‘ಸ್ಮಾರ್ಟಾ? ನಾನು ಕ್ಯೂಟಾ ?’ ಅಂತ ಮತ್ತೆ ಮತ್ತೆ ದಿಂಬಿನಿAದ ಗಂಡನನ್ನು ದಬದಬ ಬಡಿದಳು. ‘ಹಹ್ಹಹಾ’ ಎಂದು ಕೀಟಲೆಯ ಸದ್ದು ಮಾಡಿ ನಗುತ್ತ ಶಂಕರ, ಹೆಂಡತಿಯ ಹೊಡೆತದಿಂದ ತಪ್ಪಿಸಿಕೊಳ್ಳಲು, ಕೂತಲ್ಲೇ ಹೆಣಗಾಡುತ್ತ ‘ನನ್ನ ನಂಬರ್ ನನಗೇ ಕೊಟ್ಟರೆ ! ಸ್ಮಾರ್ಟ ಅಲ್ಲದೇ ಮತ್ತೇನು?’ ಅನ್ನುತ್ತ ದಿಂಬು ಕಸಿದು ಸರಸ್ವತಿಯನ್ನು ಮೃದುವಾಗಿ ಬರಸೆಳೆದುಕೊಂಡಿದ್ದ. ಸರಸ್ವತಿ ಯಾಕೋ ಇದ್ದಲ್ಲೇ ಗಂಬೀರಳಾದಳು.
ಆ ಕ್ಷಣದಲ್ಲಿ ಆ ಸ್ಪಂದನೆ, ಆ ಮಧುರ ಭಾವ, ಆ ಕಾಯುವಿಕೆ, ತಾನು ಮಾಡಿದ ವಗ್ಗರಣೆ ಅವಲಕ್ಕಿಯ ಘಮ ಎಲ್ಲದರ ಬಿಂಬಗಳೂ ಅವಳ ಮನಸ್ಸಿನಲ್ಲಿ ಮರುಕಳಿಸಿದವು. ಆ ಸತ್ಯಹರಿಶ್ಚಂದ್ರ ಇವನಲ್ಲ , ಇವನಲ್ಲ ಅನ್ನಿಸತೊಡಗಿತು. ಕೂತಲ್ಲೆ ಹೂವಿನಂತಹ ಭಾವಗಳೆಲ್ಲ ಜಡಗೊಳ್ಳತೊಡಗಿದವು.
ಇಷ್ಟು ದಿನ ಫೇಸ್ ಬುಕ್ ನೀಡಿದ ಹೊಸ ಚಹರೆಯೊಂದು ಈ ಪ್ರಕರಣದಲ್ಲಿ ಇನ್ನೊಂದೇ ವಿಷವರ್ತುಲವಾಗಿ ತನ್ನನ್ನಾವರಿಸಿದ್ದನ್ನು ಮನಗಂಡ ಸರಸ್ವತಿಯ ಮನಸ್ಸು ಶಂಕರನ ಮುದ್ದಿಗೆ ಮನಸೋಲಲಿಲ್ಲ. ಆ ಕ್ಷಣದ ಕೀಟಲೆಯನ್ನು ಮೀರಿ, ಅವಳ ದ್ವಂದ್ವ ದುಗುಡ ದುಮ್ಮಾನಗಳೆಲ್ಲ ಒಂದು ಸಂಶಯ ಹಾಗೂ ಅದರಿಂದ ಹೊರತಾದ ಉದ್ವೇಗವು, ತೆಳುವಾದ
ತಿರಸ್ಕಾರವೊಂದಕ್ಕೆ ಎಳೆದೊಯ್ಯುತ್ತಿತ್ತು. ನಿರಾಳವಾಗಿದ್ದ ಈ ಗಂಡ ಹೆಂಡತಿಯ ಸಂಬAಧದಲ್ಲಿ ಅಂದಿನಿAದ ಮುಂದೆ ಹೊಸದೇ ಆದೊಂದು ವೈರುಧ್ಯದ ಕಥನ ಹೆಣೆದುಕೊಳ್ಳತೊಡಗಿತು.
( ಮಯೂರ, ಮಾರ್ಚ ಮಹಿಳಾ ವಿಶೇಷ-೨೦೧೬)

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles