ಜೀವ ಗೋಡೆಯ ನಡುವೆ (ಸುನಂದಾ ಕಡಮೆ ಕಥೆ)

ಜೀವ ಗೋಡೆಯ ನಡುವೆ (ಸುನಂದಾ ಕಡಮೆ ಕಥೆ)

ಒಂದು ವಾರದಿಂದ ಸುರಿಯುತ್ತಿದ್ದ ಮಳೆ ಇಂದೂ ಸಹ ಮುಂದುವರೆದಿತ್ತು. ಚಂಡಿಯೆ ಗುಡ್ಡದಡಿ ಇರುವ ಬಿಣಗಾ ಫ್ಯಾಕ್ಟರಿಯ ಅಷ್ಟೇನೂ ದೊಡ್ಡದಲ್ಲದ ಕ್ವಾಟ್ರಸ್ಸಿನ ಮನೆಯಲ್ಲಿ, ಉಂಡು ಸುಮ್ಮನೇ ಚಾಪೆಯಲ್ಲಿ ಒರಗಿಕೊಂಡ ಗಂಡ ವೆಂಕಟೇಶನ ಎದುರಿನ ಮಂಚದಲ್ಲಿ ಯಶೋಧಕ್ಕ, ಆವತ್ತು ಮಧ್ಯಾಹ್ನ ತನ್ನ ಮನೆಯಲ್ಲಿ ನಡೆದ ಒಂದು ಭಯಾನಕ ಪ್ರಕರಣದಿಂದ ಇನ್ನೂ ಥರಗುಡುತ್ತಲೇ, ಪಾದಗಳನ್ನೂ ಸಹ ನೆಲಕ್ಕೆ ಹತ್ತಗೊಡದಂತೆ ಅಲ್ಲೇ ಮುದುಮುದುರಿ ಕೂತಿದ್ದಳು. ಆರನೇಯತ್ತೆಯಲ್ಲಿದ್ದ ಒಬ್ಬನೇ ಮಗ ಶರತ್, ಅಂದು ನಡೆಯಲಿರುವ ೨೦-೨೦ ಕಪ್ ಭಾರತ- ಪಾಕಿಸ್ತಾನ ಮ್ಯಾಚನ್ನು, ಎದುರು ಮನೆಯ ಮಂಕಾಳಜ್ಜಿಯ ಬಣ್ಣದ ಟೀವಿಯಲ್ಲಿ ನೋಡ ಹೋಗಲು ನಿನ್ನೆಯಿಂದಲೇ ಕುಣಿದಾಡುತ್ತಿದ್ದ. ಮಂಕಾಳಜ್ಜಿಯ ಮೊಮ್ಮಗ ಪವನ್ ನೊಡನೆ ಆಗಲೇ ಶರತ್ ನದು ಅಲ್ಲಲ್ಲೇ ನಿಂತು ಗುಸುಗುಸು ಪಿಸುಪಿಸು ಶುರುವಾಗಿತ್ತು. ನಡುರಾತ್ರಿಯ ತನಕ ಮ್ಯಾಚ್ ನಡೆಯುತ್ತಿರುವುದರಿಂದ ಶರತ್ ನನ್ನು ತಮ್ಮ ಮನೆಯಲ್ಲೇ ಉಳಿಸಿಕೊಳ್ಳುವ ಉಪಾಯವನ್ನು ಎರಡೂ ಮನೆ ಹಿರಿಯರ ಕಿವಿಯಲ್ಲಿ ಯಾವ ರೀತಿ ಹಾಕಬೇಕೆಂಬ ಕುರಿತು ಪುಟಾಣಿಗಳಿಬ್ಬರೂ ತಮ್ಮದೇ ತೊದಲು ಶೈಲಿಯಲ್ಲಿ ಕೆಲವು ಸಂಭಾಷಣೆಗಳನ್ನು ತಯಾರು ಮಾಡಿಕೊಂಡಾಗಿತ್ತು.
ಸAಜೆಯ ಆ ನಾಲ್ಕರ ಹೊತ್ತಿನಲ್ಲೂ ಸಹ ಹೊರಗೆ ತುಂಬು ಮೋಡದ ಕತ್ತಲು ಕವಿದು ಹನಿ ಹನಿ ಶುರು ಹಚ್ಚಿಕೊಂಡೇ ಇತ್ತು. ‘ಏಳು ಚಹಕ್ಕಿಡು’ ಎಂದು ಪತ್ನಿಯನ್ನು ಗೋಗರೆದಂತೆ ಕೇಳಿಕೊಳ್ಳುತ್ತ ಎದ್ದ ವೆಂಕಟೇಶ, ಉಟ್ಟ ಮುಂಡಾಸನ್ನು ಬಿಚ್ಚಿ ಟಪ್ ಅಂತ ಝಾಡಿಸಿ ಪುನಃ ಸುತ್ತಿಕೊಂಡ. ‘ಚಾ ಪಾತ್ರೆಯಲ್ಲೇನಾದರೂ ಅದು ಹೊಕ್ಕಿ ಕೂತಿದ್ದೀತು ಹುಷಾರು’ ಎನ್ನುತ್ತ ತಮಾಷೆ ಮಾಡಿದ. ‘ನಿಮಗೆ ಆಟವಾಗಿದೆ, ನೀವಿವತ್ತು ರಾತ್ರಿ ಪಾಳಿಗೆ ಹೋದರೆ ನಂಗೊಬ್ಬಳಿಗೇ ಇರಲು ಸಾಧ್ಯವಿಲ್ಲ ಇಲಿ’್ಲ ಎಂತೆನ್ನುತ್ತ ಎದ್ದು ಅಡಿಗೆ ಮನೆಗೆ ಹೋಗುವಾಗ ಯಶೋಧಕ್ಕ ಬಾಗಿಲ ಸಂದಿಯಲ್ಲೇನೋ ಸರಸರ ಸದ್ದಾದಂತೆ ಭ್ರಮೆಯಾಗಿ ಬೆಚ್ಚಿ ಬಿದ್ದಳು. ಮತ್ತೊಮ್ಮೆ ಮೈಯೆಲ್ಲ ಝುಂ ಅಂದAತಾಗಿ ಬೆವರೊಡೆಯಿತು. ಬಾಗಿಲು ಮುಟ್ಟಲೂ ಭಯ. ನೀರಿನ ಕೊಡಕ್ಕೆ ಲೋಟ ಅದ್ದಲೂ ಅಳುಕು. ಬೆಂಕಿಯ ಕೊಳ್ಳಿ ಖಾಲಿ ಒಲೆಗೆ ನೂಕಲೂ ಭೀತಿ. ಬೆಚ್ಚಗಿನ ಒಲೆಯಲ್ಲೇನಾದರೂ ಸುರುಳಿಯಾಗಿ ಮಲಗಿ ಬಿಟ್ಟಿದ್ದರೆ, ಹೀಗೆ ಸುಭದ್ರ ಹೊಕ್ಕಿ ಕೂಡಲು ನಮ್ಮ ಮನೆ ಬಿಟ್ಟು ಈ ಜಂತುವಿಗೆ ಬೇರೆಲ್ಲೂ ಜಾಗ ಸಿಗಲಿಲ್ಲವೇ? ಛೇ. ಎಂಬ ಆತಂಕ ಅವಳಿಗೆ. ‘ಯಾವ ಮೂಲೇಲೂ ನಿಶ್ಚಿಂತೆಯಿAದ ನಿಲ್ಲು ಹಾಗಿಲ್ಲ, ಕೂಡೂ ಹಾಗೂ ಇಲ್ಲ. ಇನ್ನು ರಾತ್ರೆ ಮಲಗಿದರೆ ನಿದ್ರೆ ಬೀಳುವುದೆಂತ? ಇನ್ನೊಮ್ಮೆ ಮೂಲೆ ಮೂಲೆ ಜಾಲಾಡಿ ಎಲ್ಲೂ ಅದು ಇಲ್ಲ ಅಂಬುದನ್ನು ಖಾತ್ರಿ ಮಾಡಿ ಹೋಗಿ ನಂಗೆ’ ಎಂದವಳು ಹಟವನ್ನೇ ಹಿಡಿದು ನಿಂತಳು ಯಶೋಧಕ್ಕ.
ಎಲ್ಲಿ ನೋಡಿದರೂ ಮತ್ತೆ ಮತ್ತೆ ಕಣ್ಮುಂದೆ ಕಟ್ಟುವ, ಮಧ್ಯಾಹ್ನ ಮಲಗುವ ಕೋಣೆಯ ಕಪಾಟಿನಡಿ ಸುರುಳಿಯಾಗಿ ಮಲಗಿದ್ದ ಅದೇ ಚಿತ್ರ. ಯಾವ ಪಾತ್ರೆಯ ತಳದಿಂದ ಹೊರಬರುವುದೋ ಯಾವ ಡಬ್ಬದ ಬದಿಯಿಂದ ಹೆಡೆಯೆತ್ತುವದೋ ಎಂಬ ನಡುಕದಲ್ಲಿಯೇ ಚಹಕ್ಕಿಟ್ಟಳು ಯಶೋಧಕ್ಕ. ‘ಅದು ಹೊರಹೋಗಿದ್ದು ಕಂಡರಾದರೂ ಕೊಂಚ ಸಮಾಧಾನವೆನಿಸುತ್ತಿತ್ತು, ಅಯ್ಯೋ ದೇವರೇ, ಈಗ ಎಲ್ಲಿ ಕೈಯಿಡಲೂ ಅಂಜಿಕೆ’ ಎಂದು ಹೆಂಡತಿ ನಡುಗುವ ಸ್ವರದಲ್ಲೇ ಗೊಣಗುಟ್ಟಿದ್ದನ್ನು ಕೇಳಿಸಿಕೊಳ್ಳದವನಂತೆ ವೆಂಕಟೇಶ ತನ್ನ ಫ್ಯಾಕ್ಟರಿಯ ರಾತ್ರೆ ಪಾಳಿಗೆ ಹೋಗುವ ತಯಾರಿಗಾಗಿ ಬ್ಯಾಟರಿಯನ್ನು ಹುಡುಕಾಡ ತೊಡಗಿದ. ಶಕ್ತಿಗುಂದಿದ ಹಳೆಯ ಶೆಲ್ಲನ್ನು ಹೊಂದಿದ ಸಣ್ಣ ಸ್ಟೀಲಿನ ಬ್ಯಾಟರಿ ಮಂದವಾದ ಬೆಳಕನ್ನು ಕೊಡುತ್ತಿತ್ತು. ಯಾಕೋ ಆ ಬ್ಯಾಟರಿಯನ್ನು ಈವತ್ತು ಹೆಂಡತಿಯ ಬಳಿಯೇ ಬಿಟ್ಟುಹೋದರಾಯಿತೆಂದು ನಿರ್ಧರಿಸಿದ. ಒಗೆದು ಹಾಕಿ ನಾಲ್ಕು ದಿನವಾದರೂ, ಕಂಕಳು ಹಾಗೂ ಬಟನ್ ಕಾಜು ಪಟ್ಟಿಯ ಬದಿಯಲ್ಲಿ ಇನ್ನೂ ಪೂರ್ತಿ ಒಣಗದ ನೀಲಿ ಸಮವಸ್ತçವನ್ನು ಮಡಚಿ ಒಂದು ಚೀಲದಲ್ಲಿ ಹಾಕಿಕೊಂಡ.
‘ಅಬ್ಬಾ, ಯಾವ ಮಾಯದಲ್ಲಿ ಅದು ಒಳಸೇರಿರಬಹುದು?’ ಅದನ್ನೇ ಮರಳಿ ಮರಳಿ ಧ್ಯಾನಿಸುವ ಹೆಂಡತಿಯ ಮೇಲೆ ಸಿಟ್ಟು ಬಂದರೂ ವೆಂಕಟೇಶ ಸಮಾಧಾನದಿಂದ, ‘ಛೆ, ಅದನ್ನೇ ಯೋಚಿಸುತ್ತ ಕೂಡಬೇಡ ಈಗ. ಕಂಡದ್ದು ಹೌದು, ಇಡೀ ಓಣಿಯ ಜನ ಬಂದು ಹುಡುಕಿದರಲ್ಲಾ, ಎಲ್ಲಿಂದಲೋ ಪಾರಾಗಿ
ಹೋಗಿರಬೇಕು, ಅದಕ್ಕೆಷ್ಟು ಜಾಗೆ ಬೇಕು? ಬಚ್ಚಲ ರಂದ್ರದಿAದಲೂ ಹೊರಹೋಗಿರಲು ಸಾಕು, ಪಾಪ, ಈ ಮಳೆಯ ಆರ್ಭಟ ನೋಡಿ ಒಳ ಬಂದು ಬಿಟ್ಟಿದೆ. ಪುಕ್ಕಲು ಅದು, ನಮಗಿಂತ ಹೆಚ್ಚು ಭಯವರ‍್ತದೆ ಅದಕ್ಕೆ, ನಾನು ಸರೀ ನೋಡಿದ್ದೇನೆ ಕಪ್ಪು ಬಣ್ಣವಿತ್ತದಕ್ಕೆ, ಕೆರೆ ಹಾವದು ಬಿಡು, ಏನೂ ಅಪಾಯವಿಲ್ಲ’ ಎನ್ನುತ್ತ ಇದ್ದುದರಲ್ಲೇ ಹೆಂಡತಿಗೆ ಧೈರ್ಯ ತುಂಬಲು ಯತ್ನಿಸಿದ ವೆಂಕಟೇಶ.
‘ನಿಮ್ಮದೊAದು ವೈಟು ಕಾಯ್ದೆಯೇ. ನಾನು ಸರೀ ನೋಡಿದ್ದೇನೆ ಈ ಈ ಬಣ್ಣವಿತ್ತು ಅದಕ್ಕೆ’ ಎನ್ನುತ್ತ ಶರತ್ ನ ಖಾಕಿ ಚಡ್ಡಿ ತೋರಿಸುತ್ತ ಯಶೋಧಕ್ಕ, ‘ರಾತ್ರಿ ಒಬ್ಬಳೇ ಇಲ್ಲಿರಲು ನನ್ನ ಕೈಲಾಗೊದಿಲ್ಲ ನೋಡಿ, ಇದ್ದಲ್ಲೇ ಹ್ಯಾಗೆ ಮಾಯವಾದದ್ದು ಅದು ಅಂತ? ಏನಾದರಾಗಲಿ ನನ್ನೊಬ್ಬಳ್ಳನ್ನು ಬಿಟ್ಟು ನೀವು ಡೂಟಿಗೆ ಹೋಗುವಂಗಿಲ್ಲ ನೋಡಿ’ ಎಂದು ತುಸು ದೊಡ್ಡ ದನಿಯಲ್ಲೇ ಸಿಡುಕಿದ ಪತ್ನಿಯನ್ನು ಸಂತೈಸುವ ಧಾಟಿಯಲ್ಲಿ ‘ಏನೂ ಆಗೂದಿಲ್ಲ, ತಲೆ ಕೆಟ್ಟವರ ಹಾಗೆ ಮಾತಾಡಬೇಡ, ಎಲ್ಲಿ ಹೊಕ್ಕಿ ಕೂತಿದ್ದರೂ ಹಾಗೆಲ್ಲ ಒಮ್ಮೆಲೇ ಹೊರಬರೂದಿಲ್ಲ ಅದು, ಅಮ್ಮ ಮಗ ಇಬ್ಬರೂ ಮಂಚದ ಮೇಲೆ ಮಲಗಿ, ಹಾಗೆಲ್ಲ ಒಮ್ಮೆಲೇ ಮಂಚ ಗಿಂಚ ಏರಲು ಬರೂದಿಲ್ಲ ಅದಕ್ಕೆ’ ಅಂದ.
‘ಆ ಬಾಜೀರಾಯ ಎಲ್ಲಿ ಮನೇಲರ‍್ತಾ ಇವತ್ತು ? ಆ ಹಾಳಾದ ಟೀವಿ ರಿಪೇರಿ ಮಾಡಿಸಿ ಅಂದರೆ ಕೇಳಲಿಲ್ಲ, ಈಗ ನೋಡಿ, ಇವತ್ತು ಇಡೀ ದಿನ ಅವ ಅಲ್ಲೇ’ ಎಂದು ಪರಿತಪಿಸಿದ ಹೆಂಡತಿಯ ಪರ ವಹಿಸಿಕೊಳ್ಳುವವನಂತೆ ‘ಕರೀ ಅವನನ್ನು ನಾನು ಹೇಳ್ತೆ’ ಎನ್ನುತ್ತ ಸ್ವತಃ ವೆಂಕಟೇಶನೇ ಎದ್ದು ಬಾಗಿಲ ಬಳಿ ಹೋಗಿ, ‘ಏ ಬಾರೋ ಇಲ್ಲಿ, ಅಭ್ಯಾಸ ಗಿಭ್ಯಾಸ ಇಲ್ವೋ ನಿಂಗೆ ? ಅವರ ಮನೆಯಲ್ಲೆಂಥ ಸುಳಿರೊಟ್ಟಿ ಮಾಡೀರೇನೋ ? ಅಷ್ಟೊತ್ತಿಂದ ಅಲ್ಲೇ ಅವಿಯುತ್ತಿದ್ದೀ ?’ ಎನ್ನುತ್ತ ಸನ್ನೆ ಮಾಡಿ ಮಾಡಿ ಕರೆದ. ಮಂಕಾಳಜ್ಜಿಯ ಮೊಮ್ಮಗ ಪವನ್ ಜೊತೆ ಏನೋ ಮಾತು ಹಚ್ಚಿಕೊಂಡು, ತೆಂಗಿನ ಪರಟೆಯೊಂದರ ತೂತಿಗೆ ಕೋಲು ಸಿಕ್ಕಿಸಿ, ಹುಟ್ಟಿನಂತೆ ಮಾಡಿ, ಹರಿಯುತ್ತಿದ್ದ ರಸ್ತೆ ನೀರಿನಲ್ಲಿ ಆಡಿಸುತ್ತಿದ್ದ ಶರತ್ ಕೈಯಲ್ಲಿಯ ಕೋಲು ಅಲ್ಲೇ ಬಿಸಾಕಿ ಮನೆಗೆ ಓಡಿ ಬಂದ.
‘ಮಳೆಯಲ್ಲೆAಥದೋ ಆಟ ಶರತ್, ಕೂತು ಬಾಯಿಪಾಠ ಹೇಳು’ ಎನ್ನುತ್ತ ಯಶೋಧಕ್ಕ ಚಹ ತಂದು ಕೊಟ್ಟಳು. ‘ಕ್ರಿಕೆಟ್ ನಾಳೆ ನೋಡುವಿಯಂತೆ, ಇವತ್ತು ಎಲ್ಲೂ ಹೋಗಬೇಡ, ಅಮ್ಮನ ಜೊತೆ ಇರು’ ಎಂದ ಅಪ್ಪನ ಮಾತು ಕೇಳಿದ್ದೇ ಶರತ್ ದಿಗಿಲಾದ. ‘ಇಲ್ಲ ನಾನು ಈವತ್ತು ಮ್ಯಾಚು ನೋಡಬೇಕು’ ಎನ್ನುವುದಕ್ಕೆ ಪುರುಸೊತ್ತಿಲ್ಲದೇ ವೆಂಕಟೇಶ ಮಗನ ತಲೆಯ ಮೇಲೊಂದು ಫಟ್ಟನೆ ಹೊಡೆದು ‘ಅಮ್ಮನ ಜೊತೆ ಉಳಿ ಅಂದರೆ ಉಳೀಬೇಕು ಅಷ್ಟೇ, ಎದ್ದು ಹೊರ ಹೋದೆ ಅಂದರೆ ಹ್ಯಾಂಗರಿನ ಹೊಡೆತ ಗೊತ್ತಲ್ಲ?’ ಅಂತ ಅಗತ್ಯಕ್ಕಿಂತ ಹೆಚ್ಚೇ ಸಿಡುಕಿದ. ಶರತ್ ಮರು ಮಾತಾಡದೇ ಮುಖ ಉಬ್ಬಿಸಿಕೊಂಡೇ ಚಹ ಕುಡಿದ.್ಟಪ್ಪ ಮಗ ಇಬ್ಬರೂ ಕೋಪದಿಂದಲೇ ಅಷ್ಟಷ್ಟು ಹೊತ್ತಿಗೆ ದೃಷ್ಟಿ ಯುದ್ಧ ನಡೆಸಿದರು.
ಕತ್ತಲಾವರಿಸತೊಡಗಿತು. ಹೊರಗೆ ಮಳೆ ಇನ್ನೂ ಜೋರಾಗುವದರಲ್ಲಿತ್ತು. ಕೆಲ ಸಮಯ ಅಲ್ಲಿ ಇಲ್ಲಿ ಸುಮ್ಮನೆ ಅಲೆದ ಗಂಡನನ್ನು ನೋಡಿ ‘ರಜೆ ಹಾಕ್ತೇನೆ ಇವತ್ತೊಂದು ದಿನಾ ಅಂತ ಆಗೊಮ್ಮೆ ಅಂದ ಹಾಗಿತ್ತಲ್ಲ?’ ಎಂದು ಸಣ್ಣ ಮುಖ ಮಾಡಿ ನಿಂತ ಯಶೋಧೆಯ ಬಳಿ ತಿರುಗಿದ ವೆಂಕಟೇಶ, ‘ಹ್ಯಾಂಗೇ ಹಾಕ್ಲಿ? ಇಬ್ಬರು ಆಗಲೇ ರಜೆಯ ಮ್ಯಾಲಿದ್ದಾರೆ’ ಅಂತೆಲ್ಲ ಬೇಸರ ವ್ಯಕ್ತ ಪಡಿಸಿದ. ಏಳೂವರೆಯ ಹೊತ್ತಿಗೆ ಗಂಡ ಇದ್ದಕ್ಕಿದ್ದಂತೆ ತಯಾರಾಗತೊಡಗಿದ್ದೇ ಯಶೋಧೆಗೆ ಇನ್ನೂ ಗಾಬರಿಯಾಗತೊಡಗಿತು. ‘ಊಟ ಹಾಕಿಬಿಡು’ ಎಂದು ಅವಸರಿಸಿತ್ತ ವೆಂಕಟೇಶ ಪ್ಯಾಂಟು ಸಿಕ್ಕಿಸಿಕೊಳ್ಳತೊಡಗಿದ. ‘ಲೈಟು ಹಚ್ಚಿಕೊಂಡೇ ಮಲಗು, ಅವನನ್ನು ಆ ಪವನ್ ಬಳಿ ಹೋಗದಂತೆ ಇಲ್ಲೇ ಕಟ್ಟಿ ಹಾಕು’ ಎಂದು ಎರಡು ಮೂರು ಸರ್ತಿ ಹೇಳಿದ್ದೇ ಹೇಳಿದ. ಊಟ ಮುಗಿಸಿ ಬೂಟು ಹಾಕುತ್ತ, ‘ಮನುಷ್ಯರಿಗಿಂತ ಈ ಪ್ರಾಣಿಗಳೇನೂ ಕೆಟ್ಟವಲ್ಲ ಹ್ಞ’ ಎನ್ನುತ್ತ ನಡೆದೇ ಬಿಟ್ಟ ಗಂಡನನ್ನು ಯಶೋಧೆ ಎರಡೊಂದು ಮನಸ್ಸಿನಿಂದ ಹೊರಗಿನ ಬಾಗಿಲ ತನಕ ಬಂದು ಬೀಳ್ಕೊಟ್ಟಿದ್ದಳು.
ಅತ್ತ ವೆಂಕಟೇಶ ಫ್ಯಾಕ್ಟರಿಗೆ ಹೋದ ನಂತರ ಇತ್ತ ಮನೆಯೊಳಗೆ ಕಾಲಿಡುವದೇ ಬೇಡವೆನ್ನಿಸಿತು ಯಶೋಧೆಗೆ. ಅಪ್ಪ ಆ ಕಡೆ ತಿರುಗಿದ್ದೇ ಶರತ್ , ಅಮ್ಮನ ಕಣ್ಣು ತಪ್ಪಿಸಿ ಪವನ್ ಮನೆ ಬದಿ ಓಡಿಬಿಟ್ಟ. ಯಶೋಧೆಯ ದೃಷ್ಟಿ ಮಾತ್ರ ಎಲ್ಲ ಕೋಣೆಗಳ ಮೂಲೆ ಮೂಲೆಯೆಡೆಗೇ ಸಂಶಯದಿAದ ಹಾಯುತ್ತಿತ್ತು.
ಪಾಯಿಖಾನೆಯ ಬಾಗಿಲು ತೆರೆದು ಮೇಲೆ ಕೆಳಗೆ ಅಕ್ಕ ಪಕ್ಕ ಎಲ್ಲೆಡೆ ನೋಡಿಕೊಂಡು ಹುಷಾರಾಗಿ ಅಲ್ಲಿಗೂ ಒಮ್ಮೆ ಹೋಗಿ ಬಂದುಬಿಟ್ಟಳು. ಪಾಯಿಖಾನೆಯ ಬಾಗಿಲ ಸಂದಿಗೆ ಹಲ್ಲಿಯ ಬಾಲ ಕಂಡು ಒಮ್ಮೆಲೇ ಬೆಚ್ಚಿಬಿದ್ದಳು. ಎಲ್ಲ ಖೋಲಿಯ ದೀಪಗಳನ್ನು ಹಚ್ಚಿಟ್ಟು, ಮಂಚವೇರಿ ಕೂತು ಒಂದು ಮೊರದಲ್ಲಿ ಅವಲಕ್ಕಿಯನ್ನು ಸುರಿದುಕೊಂಡು ಹಗೂರ ಆರಿಸತೊಡಗಿದಳು. ಮಿಲ್ಲಿಗೆ ಭತ್ತ ಕೊಟ್ಟು ಮಾಡಿಸಿದ ಅವಲಕ್ಕಿಯಾದುದರಿಂದ ಸುಮಾರು ಭತ್ತಗಳು ಹಾಗೇ ಉಳಿದುಹೋಗುದ್ದವು. ಅಷ್ಟರಲ್ಲೇ ಓಡಿ ಬಂದ ಶರತ್, ‘ಈಗ್ಲೇ ನಂಗೆ ಊಟ ಹಾಕಮ್ಮಾ ಎಂಟೂವರೆಗೆ ಆಟ ಶುರುವಾಗುತ್ತೆ, ಆಮೇಲೆ ಕರೆದರೆ ನಾನು ಊಟಕ್ಕೆ ಬರುವದಿಲ್ಲ’ ಅಂತ ಹೆದರಿಸಿದ. ‘ಮಗಾ, ಎಂಥಾ ಆಟವೋ ಅದು, ಇಂದೊAದು ದಿನಾ ಅಮ್ಮನ ಜೊತೆ ಇರು ಮಗಾ’ ಎಂದು ಬೆಣ್ಣೆಯಂತೆ ಮಾತಾಡುತ್ತಲೇ ಮಗನ ಮನ ಒಲಿಸಲು ಯತ್ನಿಸಿದಳು. ಯಾವುದಕ್ಕೂ ಹ್ಞು ಹ್ಞಾ ಅನ್ನದ ಮಗನನ್ನು ತಡೆಯುವುದು ಅಸಾಧ್ಯವೆಂದು ತಿಳಿದ ಯಶೋಧೆ ಅವನಿಗೆ ಊಟ ಬಡಿಸುತ್ತಲೇ ‘ನಿಂಗೆ ಅಮ್ಮನೆಂದರೆ ಪ್ರೀತಿಯೇ ಇಲ್ಯೆ’ ಎಂದು ಮುಖ ಉಬ್ಬಿಸಿದಳು.
ಇದ್ಯಾವುದಕ್ಕೂ ಸೊಪ್ಪು ಹಾಕದ ಶರತ್ ಉಂಡು ಕೈ ತೊಳೆದುಕೊಂಡು ಕ್ಷಣವೂ ನಿಲ್ಲದೇ ಬ್ಯಾಟು ಚೆಂಡಿನ ಮೋಹದತ್ತ ಓಡಿದ. ಯಶೋಧೆ ಪುನಃ ಒಂಟಿಯಾಗಿ ಅತ್ತಿತ್ತ ಓಡಾಡಲಾಗದೇ ಕಂಪಿಸಿದಳು. ತಾನೂ ಒಂದು ಬಟ್ಟಲಲ್ಲಿ ಅನ್ನ ಸಾರು ಹಾಕಿ ತಂದು ಮಂಚದ ಮೇಲೆ ಕೂತೇ ಉಂಡಳು. ಆಗಾಗ ಏನೋ ಎಲ್ಲೋ ಸರಪರ ಸದ್ದಾದಂತೆ ಭಯವಾಗಿ ಮಂಚದಡಿ ಬಗ್ಗಿ ಬಗ್ಗಿ ನೋಡಿದಳು. ಉಂಡು ಮುಗಿಸುವ ಹೊತ್ತಿಗೆ ಇದ್ದ ಕರೆಂಟು ಸಹ ಹೋಗಿ ಮನೆಯೆಲ್ಲ ಕತ್ತಲಲ್ಲಿ ಮುಳುಗಿತು. ಕಾಲು ಕಾಲಲ್ಲೇ ಎಂಥದೋ ಮೆತ್ತಗೆ ಹತ್ತಿದಂತಾಗಿ ಶಾಕ್ ಆಗುತ್ತಿತ್ತು. ತಾಟಲ್ಲೇ ಕೈತೊಳೆದು, ಮೇಣದ ಬತ್ತಿ ಹುಡುಕಲು ಎದ್ದಾಗಲೇ ಪುನಃ ಕರೆಂಟು ಬಂದು ದೀಪ ಹೊತ್ತಿಕೊಂಡಿತು.
ಗAಡನ ಪ್ಯಾಂಟಿನ ಹಳೆಯ ಬೆಲ್ಟೊಂದು ಬಟ್ಟೆ ಸ್ಟಾö್ಯಂಡಿಗೆ ತೂಗಾಡುತ್ತಿದ್ದದ್ದು ಜೀವವಿದ್ದ ಹಾಗೆ ಒಂಥರಾ ಕಂಡು ಎದೆ ದಸಕ್ಕೆಂದಿತು. ಅದು ಬೆಲ್ಟಿನ ನೆರಳು ಎಂದು ಖಾತ್ರಿ ಪಡಿಸಿಕೊಳ್ಳಲು ಯಶೋಧಕ್ಕನಿಗೆ ತುಂಬ ಹೊತ್ತು ಹಿಡಿಯಿತು. ಹೊರಗಿನ ಗುಡುಗು ಸಿಡಿಲಿನ ಸದ್ದಿಗೆ ಗ್ಯಾರಂಟೀ ಈವತ್ತು ಇಡೀ ರಾತ್ರಿ ಕರೆಂಟು ಹೋಗಿಯೇ ಬಿಡ್ತದೆ ಅಂದುಕೊAಡು ಇನ್ನಷ್ಟು ಭಯಗೊಂಡಳು. ಏನು ಮಾಡುವುದೆಂದೇ ತಿಳಿಯದೇ ತಾನೂ ಎದುರಿನ ಮಂಕಾಳಜ್ಜಿಯ ಮನೆಗೆ ಹೋಗಿ ಕೂತು, ಆಟ ಮುಗಿದ ನಂತರ ಶರತ್ ನನ್ನು ಕರಕೊಂಡೇ ಬಂದರೆ ಹೇಗೆ ಎಂದು ಯೋಚಿಸತೊಡಗಿದಳು. ಚೂರು ಧೈರ್ಯದ ಜೊತೆ ಸಮಾಧಾನವೂ ಮೂಡಿತು. ನಿಧಾನ ಎದ್ದು ಕೂಡಬೇಕೆನ್ನುವದರಲ್ಲಿ ಪುನಃ ಕರೆಂಟು ಹೋಗಿ ಕತ್ತಲಾವರಿಸಿತು.
ನೆಲಕ್ಕೆ ಹೆಜ್ಜೆ ಇಡಲೂ ಭಯವಾಗಿ ಪಾದಗಳನ್ನು ಮಂಚದ ಮೇಲಿಟ್ಟೇ ಕೂತಳು. ಹೊರಗೆ ಮಿಂಚಿನ ಬೆಳಕು ಹೆಂಚಿನ ಸಂದಿಯಿAದ ಒಳ ತೂರಿ ಬಂತು. ಎಂಥದೋ ಬಳಲಿಕೆಯ ನಿದ್ದೆಯಿಂದ ಕಣ್ಣು ಮುಚ್ಚಿ ಮುಚ್ಚಿ ಬರುತ್ತಿತ್ತು. ಆದರೆ ಹಾಸಿಗೆಗೆ ತಲೆಯಿಟ್ಟು ನಿದ್ದೆಗೆ ಇಳಿಯಲು ಭಯ. ತಕ್ಷಣ ಏನನ್ನಿಸಿತೋ ಧೈರ್ಯದಿಂದ ಎದ್ದವಳೇ ಬೇರೇನೂ ಯೋಚಿಸದೇ ಗೂಡಿನಲ್ಲಿದ್ದ ಚಾವಿಗಾಗಿ ಹುಡುಕಿ, ತಲೆಯ ಮೇಲೊಂದು ಕೊತ್ತಲ ಹಾಕಿಕೊಂಡು ಅವಸರದಿಂದ ಹೊರ ಬಂದು ಬಾಗಿಲೆಳೆದು ಕೀಲಿ ಜಡಿದು, ರಸ್ತೆಯ ಆ ಬದಿ ಇರುವ ಮಂಕಾಳಜ್ಜಿಯ ಮನೆಗೆ ಎಂಟ್ಹತ್ತು ದೊಡ್ಡ ದೊಡ್ಡ ಹೆಜ್ಜೆಯಲ್ಲೇ ಹಾರಿಕೊಂಡೇ ಹೋಗಿ ಬಿಟ್ಟಳು. ಆ ಮನೆ ತಲುಪುವದರಲ್ಲಿ ತಲೆ ಮೇಲಿನ ಕೊತ್ತಲವೆಲ್ಲ ತೊಯ್ದು, ರಸ್ತೆಯ ನೀರಿನಿಂದ ಸೀರೆಯ ನಿರಿಗೆಯೆಲ್ಲ ಒದ್ದೆಯಾಗಿ ತಪತಪ ಅನ್ನುತ್ತಿತ್ತು.
ಅಲ್ಲಿ ಮಂಕಾಳಜ್ಜಿಯ ಮನೆ ಬಾಗಿಲು ತೆರೆದೇ ಇತ್ತು. ಕರೆಂಟು ಹೋಗಿದ್ದಕ್ಕೆ ಪವನ್ ಅಜ್ಜಿಯ ಮೇಲೆ ವಿನಾಕಾರಣ ರೇಗುತ್ತಿದ್ದ. ಆ ಮಾತುಗಳನ್ನೇ ಆಲಿಸುತ್ತ ಅವರ ಹೊರಕಟ್ಟೆಯಲ್ಲಿ ನಿಂತು ಸೀರೆಯ ನಿರಿಗೆಗಳನ್ನೆಲ್ಲ ಸೇರಿಸಿ ಹಿಂಡಿಕೊAಡ ನಂತರ ಅವರ ಮನೆಯೊಳಗೆ ಹೆಜ್ಜೆ ಇರಿಸಿದಳು. ಪವನ್ ‘ಬಾ ಯಶೋಧಕ್ಕ ಶರತ್ ಇಲ್ಲೇ ಇದ್ದಾ’ ಎನ್ನುತ್ತ ಕರೆದ. ಮಂಕಾಳಜ್ಜಿ ಮಲಗಿದ ಮಂಚದಿAದಲೇ ‘ಯಾರದು? ಯಶೋಧೆಯಾ ? ಕರೆಂಟೊAದು ಹೋಗಿ ಈ ಮಕ್ಕಳ ಗದ್ದಲ ನೋಡು’ ಎನ್ನುತ್ತಿರುವಾಲೇ ಲೈಟು ಝಗ್ಗನೆ ಹೊತ್ತಿಕೊಂಡಿತು. ಮಕ್ಕಳಿಬ್ಬರೂ ಕುಣಿದಾಡಿ ಟೀವಿ ಹಚ್ಚಿದರು.
ದೋನಿ ಬ್ಯಾಟಿಂಗ್ ಮಾಡುತ್ತಿದ್ದ. ‘ಹೀಗೆ ಗುಡುಗು ಸಿಡಿಲು ಇದ್ದಾಗ ಹಚ್ಚಿದರೆ ಟೀವಿ ಹಾಳಾಗ್ತದಂತೆ, ಅದನ್ನು ಹೇಳಿದರೆ ಇವ ನನ್ನೇ ಬೈಯಲು ರ‍್ತಾ ನೋಡೇ’ ಅಂತೇನೋ ಮೊಮ್ಮಗನ ವಿರುದ್ದ ದೂರು ಹೇಳಿದರು ಮಂಕಾಳಜ್ಜಿ. ‘ಇಲ್ಲೇ ಕೂಡು ಬಾ ಬಾ, ಹ್ಞಾ! ಮತ್ತೆ ಅದು ಕಂಡು ಗಿಂಡಿತ್ತೇ’ ಎನ್ನುತ್ತ ಮಧ್ಯಾಹ್ನದ ನೆನಪು ಕೆದಕಿದಾಗ. ‘ಹೌದಜ್ಜಿ ನಂತರ ಕಾಣಿಸಿಕೊಳ್ಳಲೇ ಇಲ್ಲ ನೋಡು, ಇದ್ದಲ್ಲೇ ಅದು ಹ್ಯಾಗೆ ಮಾಯಾತು ಅಂತೆ? ಎಲ್ಲಿಂದಾದರೂ ಹೊರಗೆ ಹೋಗಿದ್ದು ದೃಷ್ಟಿಗೆ ಬೀಳಬೇಡವೇ ?’ ಎನ್ನುತ್ತ ಅಲ್ಲೇ ನೆಲಕ್ಕೆ ಕೂತಳು. ‘ಎಂಥ ಭೀತಿನೂ ಇಲ್ಲೆ, ಹೋತದು, ಆದ್ರೂ ಇಂದಿಲ್ಲೇ ಬಿದ್ದುಕೊ’ ಎನ್ನುತ್ತ ಮಂಕಾಳಜ್ಜಿ ಒಂದು ಚಾಪೆ ಕೊಟ್ಟಳು. ಚಾಪೆ ಬಿಚ್ಚಿ ಒರಗಿ ಕೊಳ್ಳುತ್ತಲೇ ‘ಇಲ್ಲ ಇಲ,್ಲ ಆಟ ಮುಗಿದ ನಂತರ ಶರತ್ ನನ್ನು ಕರಕೊಂಡೇ ಹೋಗ್ತೆ’ ಅಂದಳು ಯಶೋದೆ.
ಹೊರಗೆ ಮಳೆಯ ಆರ್ಭಟ ಇನ್ನಷ್ಟು ಹೆಚ್ಚುತ್ತಿತ್ತು. ಮಂಪರು. ವಿದ್ಯುದ್ದೀಪ ಹೋಗುವುದು ಬರುವುದು ಮಾಡಿ ಕಣ್ಣುಮುಚ್ಚಾಲೆಯಾಟ ನಡೆಸುತ್ತಿರುವಾಗ ಪವನ್ ಮತ್ತು ಶರತ್ ರ ‘ಔಟ್, ಸಿಕ್ಸರ್, ಇಲ್ವೋ, ನಾಲ್ಕು, ಅರೆ, ಹೋವ್’ ಅಂತೇನೋ ಗದ್ದಲ ಆಗಾಗ ಸಣ್ಣದಾಗಿ ಕನಸಿನಲ್ಲೆಂಬAತೆ ಯಶೋಧಕ್ಕನ ಕಿವಿಯಲ್ಲಿ ಗುಂಯ್‌ಗುಡುತ್ತಿತ್ತು. ಎಲ್ಲೋ ಒಂಚೂರು ಎಚ್ಚರವಾದಾಗ ಎಷ್ಟು ರಾತ್ರಿಯಾಗಿತ್ತೋ ಏನೋ, ಬಹು ದೂರದಲ್ಲೆಲ್ಲೋ ಭಯಂಕರ ಸದ್ದಾದಂತಾಯಿತು. ಭೂಮಿಯೇ ಅದುರಿದ ಹಾಗೆ. ‘ಎಲ್ಲೋ ಸಿಡ್ಲು ಬಿದ್ದಿರಬೇಕು’ ಎಂದು ಅಲ್ಲೇ ಮಂಚದಲ್ಲಿ ಮಲಗಿದ ಮಂಕಾಳಜ್ಜಿ ನಿದ್ದೆಗಣ್ಣಲ್ಲೇ ಬಡಬಡಿಸಿದ್ದು ಕೇಳಿದಾಗಲೇ ಯಶೋಧೆಗೆ ತಾನಿಲ್ಲೇ ಇವರ ಮನೆಯಲ್ಲೇ ಮಲಗಿದ್ದೇನೆ ಎಂಬ ಎಚ್ಚರ ಮೂಡಿತು.
ಆನಂತರ ಎಷ್ಟೋ ಹೊತ್ತಿನವರೆಗೆ ಕರೆಂಟು ಹೋಗಿಯೇ ಬಿಟ್ಟಿತ್ತು. ಕಿಟಕಿಯಿಂದ ಆಗಾಗ ಒಳಬರುವ ಮಿಂಚಿನ ಬೆಳಕಿನಲ್ಲೇ ಯಶೋಧೆ ನಿದ್ದೆಯ ಮಂಪರಿನಲ್ಲೇ ಅತ್ತಿತ್ತ ಕಣ್ಣು ಹಾಯಿಸಿದಳು. ಟೀವಿ ಎದುರಲ್ಲೇ ಇನ್ನೊಂದು ಚಾಪೆ ಹಾಸಿಕೊಂಡು ಪವನ್ ಮತ್ತು ಶರತ್‌ರೂ ನಿದ್ದೆ ಹೋಗಿದ್ದುದು ಮಸಕು ಮಸಕಾಗಿ ಕಂಡಿತು. ಮಂಕಾಳಜ್ಜಿಯ ಒಂದೇ ದುಪ್ಪಟಿಯನ್ನು ಇಬ್ಬರೂ ಹೊದ್ದು ಮಲಗಿದ್ದನ್ನು ದೂರದಿಂದಲೇ ಕಂಡ ಯಶೋಧೆ ಆ ಚಳಿಗೆ ಸುಮ್ಮನೆ ಸೆರಗನ್ನು ಪಾದದ ತನಕ ಹೊದ್ದು ಅಲ್ಲೇ ಮುದ್ದೆಯಾಗಿ ಮಲಗಿದಳು.
ಬೆಳಕು ಹರಿದು ಎಚ್ಚರವಾದಾಗ ಬಾಗಿಲ ಹೊರಗೆ ಎಂಥದೋ ದೊಡ್ಡ ಗದ್ದಲ ಕೇಳಿ ಬರುತ್ತಿತ್ತು. ಮಂಕಾಳಜ್ಜಿಯೂ ಯಶೋಧೆಯೂ ಕೂಡಿಯೇ ಎದ್ದು ಕುತೂಹಲದಿಂದಲೂ ಗಾಬರಿಯಿಂದಲೂ ನಿಧಾನ ಬಾಗಿಲು ತೆರೆದರು. ಮಳೆ ಆಗಷ್ಟೇ ಹೊಳುವಾಗಿತ್ತು. ಓಣಿಯ ಜನರೆಲ್ಲ ಮನೆಯೆದುರು ತಮ್ಮೆಡೆಗೆ ಬೆನ್ನುಹಾಕಿ, ಗಂಭೀರ ಚರ್ಚೆಯಲ್ಲಿ ಶೋಕದ ಮಡುವಿನಲ್ಲಿ ತೊಯ್ದು ನಿಂತAತಿದ್ದುದನ್ನು ಇಬ್ಬರೂ ಸೋಜಿಗದಿಂದ ಆವಾಹಿಸಿಕೊಂಡರು. ಆಗಲೇ ಎದುರು ಕಂಡಿದ್ದು ಈ ಭಯಾನಕ ದೃಶ್ಯ. ಎದುರಿನ ಹಸಿರು ಬೆಟ್ಟ ಒಂದು ಬದಿ ಕುಸಿದು ಯಶೋಧಳ ಮನೆ ಪೂರ್ತಿ ಮುಚ್ಚುವಂತೆ ಹಸಿ ಮಣ್ಣು ಗುಡ್ಡೆಯಾಗಿ ಬಿದ್ದು ಬಿಟ್ಟಿತ್ತು. ಎಲ್ಲೋ ಒಂಚೂರು ಕಲ್ಲಿನ ಗೋಡೆ ಮಾತ್ರವೇ ಕಾಣುತ್ತಿತ್ತು.
ಕಣ್ಣೆದುರಿಗೇ ತನ್ನ ಮನೆ ಹೀಗೆ ಅಪ್ಪಚ್ಚಿಯಾದದ್ದು ಕಾಣುತ್ತಲೇ ಅಯ್ಯೋ ಎಂದು ಚೀರುತ್ತ ಯಶೋಧೆ ಅಲ್ಲೇ ಕುಸಿದು ಕೂತಳು. ಈ ಇವಳ ಶಬ್ದ ಹೀಗೆ ಕೇಳುತ್ತಲೇ ಈ ಬದಿ ತಿರುಗಿ ನಿಂತ ಜನಸಾಗರವೆಲ್ಲ ಒಮ್ಮೆಲೇ ಇವಳನ್ನು ನೋಡಿ, ಅಚ್ಚರಿಗೊಂಡು ‘ಅರೆ! ಇಲ್ಲೇ ಇದ್ದಾಳಲ್ಲ? ಅಬ್ಬಾ, ಯಶೋಧಕ್ಕ ನೋಡು ಮಂಕಾಳಜ್ಜಿಯ ಮನೆಯಲ್ಲಿ.. ನೋಡಲ್ಲಿ.. ವೆಂಕಟೇಶನ ಹೆಂಡತಿ.. ಅಬ್ಬಾ, ಎಷ್ಟು ಹೆದರಿದ್ದೆವು, ಅಯ್ಯೊ, ಇವಳಿಗೆ ಆಯುಷ್ಯ ಹೆಚ್ಚು ನೋಡೇ ವೆಂಕಟೇಶನ ಹೆಂಡತಿ, ಮಗ ಎಲ್ಲೆ? ಶರತ್ ಶರತ್ ಶರತ್’ ಗದ್ದಲವೆದ್ದಾಗ, ಮಂಕಾಳಜ್ಜಿ ‘ಅವನೂ ನಮ್ಮ ಮನೆಯಲ್ಲೇ ಮಲಗಿರುವಾ’ ಎನ್ನುತ್ತ ಕಣ್ಣು ತುಂಬಿಕೊAಡಳು.
ಅಯ್ಯೋ, ಅದು ಹ್ಯಾಗೆ ಇವರು ನಿಮ್ಮ ಮನೆಗೆ ಬಂದ್ರು ? ವೆಂಕಟೇಶ ಎಲ್ಲಿ ? ಯಾವಾಗ ಬಂದು ಮಲಗಿದ್ರು ? ಮೊದಲೇ ಏನಾದ್ರೂ ಸದ್ದಾಗಿ ಗುಡ್ಡ ಬೀಳುವುದು ಇವರಿಗೆ ಗೊತ್ತಾಗಿತ್ತೇ? ಇಷ್ಟೊತ್ತು ಇವರ ಬಗ್ಗೆಯೇ ಮರುಗುತ್ತಿದ್ದೆವು, ಪೋಲೀಸರಿಗೆ ಫೋನ್ ಸಹ ಮಾಡಿಬಿಟ್ಟೆವಪ್ಪ ಹೀಗೀಗೆ ಅಂತ. ಯಾವ ಜನ್ಮದ ಪುಣ್ಯ ಇದು ? ಇವತ್ತೇ ಇವರು ನಿಮ್ಮ ಮನೆಯಲ್ಲಿರಬೇಕೆಂದರೆ!, ವೆಂಕಟೇಶ ನೈಟ್ ಡ್ಯೂಟಿಗೆ ಹೋಗಿದ್ದಾನೋ ? ಅಬ್ಬಾ! ಎಂಥ ಅಪಘಾತ ತಪ್ಪಿತು, ಎಲ್ಲ ಆ ದೇವರೇ ಕಾದಿದ್ದು, ಯಾಕೆ ಬೇಜಾರು
ಮಾಡ್ತೀ ಯಶೋಧೆ ? ನಿಮ್ಮ ಜೀವಕ್ಕೆ ಎಲ್ಲಿ ಹಾನಿಯಾಯ್ತೋ ಅಂದುಕೊAಡಿದ್ದೆವು ಇಷ್ಟೊತ್ತು, ದೇವರಿದ್ದಿದ್ದು ಸುಳ್ಳಲ್ಲಪ್ಪ, ವೆಂಕಟೇಶ ನೈಟ್ ಡ್ಯೂಟಿ ಮುಗಿಸಿ ಬರುವ ಹೊತ್ತಾಯ್ತು ನೋಡಿ, ನಮ್ಮ ಹಾಗೇ ಹೆದರಿಕೊಂಡಾನು, ಎದೆ ಒಡೆದುಕೊಂಡಾನು, ಆ ಕ್ರಾಸಿನಲ್ಲಿ ಒಬ್ಬರು ನಿಂತುಕೊಳ್ಳಿ, ಬಂದ ತಕ್ಷಣ ಹೇಳಿ ಹೀಗೀಗೆ ಅಂತ, ಮನೆ ಹೋದರೆ ಮತ್ತೆ ಕಟ್ಟಬಹುದು, ಇಂಥೆಲ್ಲ ಮಾತುಗಳು ಇಡೀ ಓಣಿಯ ಜನರಿಂದ ಹರಿದು ಬಂದವು.
ರಸ್ತೆಯ ಆ ಮುರ್ಕಿಯಲ್ಲೇ ನಾಲ್ವರು ಹೋಗಿ ವೆಂಕಟೇಶನನ್ನು ಹಿಡಿದು, ಈ ವಿಷಯವನ್ನು ಸೂಕ್ಷö್ಮವಾಗಿ ಹೇಳುತ್ತ ಕರೆತಂದರು. ಅವನ ಮುಖವೇಕೋ ಕ್ಷಣದಿಂದ ಕ್ಷಣಕ್ಕೆ ರಾವು ಬಡಿದ ಹಾಗಾಗುತ್ತಿತ್ತು. ಮಂಕಾಳಜ್ಜಿಯ ಕಟ್ಟೆಯಲ್ಲಿ ತನ್ನ ಹೆಂಡತಿ ಮಗನನ್ನು ಕಂಡವನೇ ‘ಏನಾಯ್ತು ? ಏನಾಯ್ತು ? ನಿಮಗೇನೂ ಆಗಲಿಲ್ಲಲ್ಲಾ.. ಅಯ್ಯೋ ಏನು ಗತಿಯಾಗಿತ್ತಪ್ಪಾ.. ‘ ಎಂದವನೇ ಸುಮ್ಮನೆ ಹೆಂಡತಿಯ ಪಕ್ಕ ಕೂತು ಎದುರಿನ ದೃಶ್ಯವನ್ನೇ ಎವೆ ಇಕ್ಕದೇ ನೋಡಹತ್ತಿದ. ‘ಇದೇನು ಕನಸೋ ಅನ್ನಿಸ್ತಿದೆ ಮಂಜಪಾ’್ಪ ಎನ್ನುತ್ತ ಓಣಿಯ ತುದಿಯಲ್ಲೇ ಇದ್ದ ದೋಸ್ತ ಮಂಜಪ್ಪನನ್ನು ಗೋತು ಹಾಕಿ ಅತ್ತುಬಿಟ್ಟಾ ವೆಂಕಟೇಶ.
ನನ್ನ ಮನೆ ನೋಡು ಮಾರಾಯಾ ಅನ್ನುತ್ತ ಕುಸಿದು ಕೂತವನನ್ನು ಎಲ್ಲರೂ ‘ಯಾರ ಜೀವಕ್ಕೂ ಏನೂ ಅಪಾಯ ಆಗಿಲ್ಲವಲ್ಲ ಅದಕ್ಕೆ ಖುಷಿಪಡು’ ಅಂತ ರಮಿಸಿದರು. ಮೊದಲ ದಿನ ಮನೆಯಲ್ಲಿ ಹಾವು ಕಾಣಿಸಿಕೊಂಡದ್ದರ ಬಗ್ಗೆ ಕುತೂಹಲದಿಂದ ಮಾತಾಡಿಕೊಂಡರು. ಈ ಜಾಗೆಯಲ್ಲಿ ಅಪಾಯವಿರುವುದನ್ನು ಸೂಚಿಸಲೆಂದೇ ಒಳ ಬಂದು ಭಯದ ವಾತಾವರಣ ಸೃಷ್ಟಿಸಿದ್ದಕ್ಕಾಗಿ ಹಾವಿಗೆ ಕೃತಜ್ಞತೆ ಹೇಳಬೇಕಪ್ಪ ಅಂದರು. ಹೌದು ಹೌದು ಹಾವು ಎಚ್ಚರಿಸಲೆಂದೇ ಬಂದಿದ್ದು ಪಾಪ, ದೇವರ ಸತ್ಯ ನೋಡು, ಎರಡು ಹಸೀ ಜೀವ ಉಳಿಯಿತಲ್ಲ, ನಿನಗೇನು ಗುಡ್ಡೆ ಕುಸಿಯುವ ಕನಸು ಗಿನಸು ಬಿದ್ದಿತ್ತೇನೆ ? ಅಂತ ಯಶೋಧೆಯನ್ನು ಕೆಲವರು ನಗುತ್ತ ಕೇಳಿ ಹೋದರು.
ಟೀವಿ ಕೆಟ್ಟಿರದಿದ್ದರೆ ಅಮ್ಮ ಮಗ ಇಬ್ಬರಿಗೂ ಕಷ್ಟವಿತ್ತು ಅಂತ ಕೆಟ್ಟು ಕೂತ ಟೀವಿಯನ್ನೂ ಹೊಗಳಲಾಯಿತು. ಶರತ್ ನ ಕ್ರಿಕೆಟ್ ಹುಚ್ಚೇ ಅವರಿಬ್ಬರ ಪ್ರಾಣ ಉಳಿಸಿತು ಎಂದರು ಒಬ್ಬರು. ಕೆಟ್ಟು ಕೂತ ಟೀವಿಯನ್ನು ರಿಪೇರಿ ಮಾಡಿಸದೇ ನಿಷ್ಕಾಳಜಿ ಮಾಡಿದ್ದಕ್ಕೆ ವೆಂಕಟೇಶನನ್ನು ಪ್ರಶಂಸಿಸಿದರು ಇನ್ನೊಬ್ಬರು. ಸಧ್ಯ ನನಗೆ ರಜೆ ಹಾಕಿ ಮನೆಯಲ್ಲಿರುವ ಬುದ್ದಿಕೊಡಲಿಲ್ಲವಲ್ಲ ಆ ದೇವರು ಅಂತ ನಿಟ್ಟುಸಿರುಬಿಟ್ಟ ವೆಂಕಟೇಶ. ಹೀಗೆ ಜೀವ ಉಳಿಯಲು ನೂರಾರು ಕಾರಣಗಳು ಎಲ್ಲವೂ ಸತ್ಯವೇ.
ನೋಡ ನೋಡುತ್ತಲೇ ಓಣಿಯ ಜನರೇ ಮನೆಯ ಮೇಲೆ ಬಿದ್ದ ಮಣ್ಣು ಬಗೆಯಲು ಶುರು ಹಚ್ಚಿಕೊಂಡರು. ಗುಡ್ಡದ ಮಣ್ಣು ಮಳೆಯಿಂದ ಒದ್ದೆಯಾಗಿ ಭಾರವಾಗಿತ್ತು. ಎಲ್ಲ ಮನೆಯ ಗಂಡಸರೂ ಲುಂಗಿ ಮೇಲಕ್ಕೆ ಕಟ್ಟಿ ನಿಂತು ಒಂದೊAದೇ ಬುಟ್ಟಿ ಮಣ್ಣನ್ನು ಎತ್ತಿ ಎತ್ತಿ ಬದಿಗೆ ರಾಶಿ ಹಾಕಲು ಪ್ರಾರಂಭಿಸಿದರು. ಯಶೋಧೆಗೆ ಕೂತಲ್ಲೇ ಪುನಃ ಕಣ್ಣು ತುಂಬಿ ಬಂತು. ಚಹ ಕುಡಿದು ಹೋಗು ಎಂದು ಪಕ್ಕದ ದೇಸಾಯಿ ಮನೆಯಿಂದ ವೆಂಕಟೇಶನಿಗೆ ಕರೆ ಬಂತು. ಮಂಕಾಳಜ್ಜಿ ಚಹ ಮಾಡಿ ಶರತ್‌ನಿಗೂ ಯಶೋಧೆಗೂ ಒಳ ಕರೆದು ಕೊಟ್ಟಳು. ಓಣಿಯವರು ಯಾರೂ ಬಿಟ್ಟುಕೊಡುವುದಿಲ್ಲ, ಮನೆ ಅಂತ ಆಗುವತನಕ ನಾವಿದ್ದೇವೆ ಅಂದರು ತುದೀ ಮನೆಯ ನಾಡಿಗೇರರು.
ಮರುದಿನ ಶಾಲೆಗೆ ಹೋಗಬೇಕಿರುವ ಶರತ್ ನ ಪುಸ್ತಕ ವಸ್ತç ಪಾಟಿಚೀಲಗಳಾದರೂ ಅಗೆದು ತೆಗೆಯಬೇಕಿತ್ತು. ಗುಡ್ಡೆಯ ಮಣ್ಣು ಇಡೀ ಓಣಿಯ ಶ್ರಮದಾನದಿಂದ ಇನ್ನೊಂದೇ ಬದಿಗೆ ರಾಶಿಯಾಗಿ ಬಿತ್ತು. ಮಡಿಕೆ ಕುಡಿಕೆ ಪ್ಲಾಸ್ಟಿಕ್ ವಸ್ತುಗಳೆಲ್ಲ ಪುಡಿ ಪುಡಿಯಾಗಿದ್ದವು. ತನ್ನ ಒಂದೊAದೇ ವಸ್ತು ಕಂಡದ್ದೇ ಶರತ್ ನೇ ಓಡಿ ಹೋಗಿ ಎತ್ತಿ ತಂದು ಮಂಕಾಳಜ್ಜಿಯ ಮನೆ ಕಟ್ಟೆಯ ಮೇಲಿರಿಸಿಕೊಳ್ಳುತ್ತಿದ್ದ. ಇದನ್ನು ಕಂಡ ಮಂಜಪ್ಪನ ಹೆಂಡತಿಗೆ ಅಳು ಉಕ್ಕಿ ಬಂತು. ಮಳೆ ನಿಂತು ಬೆಳಕು ಕಂಡರೂ ಸೂರ್ಯನಿನ್ನೂ ಹೊರಗೆ ತನ್ನ ಬಿಸಿಲ ಕಿರಣ ಚಾಚಿರಲಿಲ್ಲ.
ರಸ್ತೆಯೆಲ್ಲ ಕೆಂಪು ಮಣ್ಣಿನ ರಾಡಿಯಿಂದ ಗೊಚ್ಚೆಯಾಯಿತು. ಎಲ್ಲರ ಮನೆಯ ಅಂಗಳದಲ್ಲೂ ಕೆಂಪು ಹೆಜ್ಜೆ ಗುರುತುಗಳು ಮೂಡಿದವು. ಮುರಿದು ಬಿದ್ದ ಕಿಟಕಿ ಬಾಗಿಲುಗಳನ್ನು ಹೊಂದಿಸಿಡುತ್ತ ವೆಂಕಟೇಶ ಮತ್ತು ಸಂಗಡಿಗರು ದಣಿದು ಹೋದರು. ಯಾವುಯಾವುದೋ ಅಧಿಕಾರಿಗಳು ಪೊಲೀಸ್ ಆಫೀಸರರು
ರಾಜಕಾರಣಿಗಳು ಬಂದು ನಿಂತು ಶರತ್ ನ ಕಣ್ಣೊರೆಸಿದಂತೆ ಮಾಡಿ ಫೋಟೋ ತೆಗೆಸಿಕೊಂಡರು. ಯಶೋಧೆಗೆ ದುಃಖವೋ ಭಯವೋ ಗಾಬರಿಯೋ ವೇದನೆಯೋ ಏನೆಂದೇ ತಿಳಿಯದ ಹಾಗಿತ್ತು.
ಸ್ಥಳೀಯ ಶಾಸಕರು ಬಂದು ಪರಿಹಾರ ಪರಿಹಾರ ಅಂತೆಲ್ಲ ಗದ್ದಲ ಹಾಕಿ, ಹತ್ತು ಸಾವಿರದ ಚೆಕ್ಕೊಂದನ್ನು ಯಶೋಧೆಯ ಹತ್ತಿರ ಕೊಡಲು ಬಂದು ಅವಳು ಹಿಡಿಯದೇ ಇದ್ದಾಗ ಶರತ್ ನ ಕೈಯಲ್ಲಿ ಹಿಡಿಸಿ ಫೋಟೋ ತೆಗೆಸಿಕೊಂಡು ಕಾರಿನಲ್ಲಿ ಅಸಂಖ್ಯ ಹಿಂಬಾಲಕರೊAದಿಗೆ ಹೊರಟುಹೋದರು. ವೆಂಕಟೇಶನಿಗೆ ಎಂಥದೋ ನಡುಕದ ಅನುಭವ. ಮನೆಯಿರುವ ಜಾಗೆ ಸ್ವಚ್ಛಗೊಂಡಾಗ ಆಗಲೇ ರಾತ್ರಿಯಾಗಿತ್ತು.
‘ಒಂದು ಮನೆ ಅಂತ ಆಗಿ, ಅಡಿಗೆ ಶುರುವಾಗುವ ತನಕ ನಮ್ಮ ಮನೆಯಲ್ಲಿರಿ’ ಅಂದಳು ಮಂಕಾಳಜ್ಜಿ. ‘ಇನ್ನೆಲ್ಲಿ ಹೋಗ್ಲಿ ಮಂಕಾಳಜ್ಜೀ’ ಎನ್ನುತ್ತ ವೆಂಕಟೇಶ ಗದ್ಗದಿತನಾದ. ನೋಡು, ಮನೆ ಹೋದರೆ ಮತ್ತೆ ಕಟ್ಟಬಹುದು, ಈ ಸಲ ಗುಡ್ಡೆಯಿಂದ ಸ್ವಲ್ಪ ಜಾಗೆ ಬಿಟ್ಟು ರಸ್ತೆಯ ಬದಿಗೇ ಕಟ್ಟು, ಸಣ್ಣದಾದರೂ ಅಡ್ಡಿಲ್ಲ ಎಂಥೇನೋ ಮಾತಾಡುತ್ತ ಕೂತಾಗಲೇ ಶರತ್ ಮತ್ತು ಪವನ್ ಬಾಗಿಲಲ್ಲಿ ಆಡುತ್ತಿದ್ದವರು ಒಮ್ಮೆಲೇ ‘ಹಾವು ಹಾವು’ ಎಂದು ಕೂಗಿಕೊಂಡರು.
ಎಲ್ಲರೂ ಮುಂಚಿನ ಬಾಗಿಲಿಗೆ ಓಡಿಬರುವುದರೊಳಗೆ ಅದು ಹೆಡೆಯೆತ್ತಿಕೊಂಡು ಗಂಭೀರವಾಗಿ ರಾಶಿಬಿದ್ದ ಮಣ್ಣಿನ ಮೇಲೆ ಏರಿ ಗುಡ್ಡೆಯ ಬದಿಗೆ ಮೆಲ್ಲಗೆ ಸರಿಯುತ್ತ ಇದ್ದಲ್ಲೇ ಮಾಯವಾಯಿತು.
(ಉಳುಮೆ ವಿಷೇಶಾಂಕ)

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles