ಸುಭದ್ರಕ್ಕ (ಸುನಂದಾ ಕಡಮೆ ಕಥೆ)

ಸುಭದ್ರಕ್ಕ (ಸುನಂದಾ ಕಡಮೆ ಕಥೆ)

ಅದು ಚೌಕ. ಚಚ್ಚೌಕ. ಮೂರು ಬಾಯ್ ಮೂರರ ಖೋಲಿ ಇರಬಹುದು. ಬಾಗಿಲು ತೆರೆದು ಒಳ ಹೋಗಿ ಕೂತರೆ ಮೂಗಿಗೆ ಅಡರುವ ದುರ್ನಾತ. ಎಷ್ಟು ಬೇಗ ಎದ್ದು ಹೊರಬರುವೆನೋ ಎಂಬ ಚಡಪಡಿಕೆ ಎಪ್ಪತ್ತೆöÊದರ ಸುಭದ್ರಕ್ಕನಿಗೆ. ಊರಲ್ಲಿ ಹೀಗಲ್ಲ, ಪಾಯಿಖಾನೆಯಿದ್ದರೂ ಬಳಸುವವರೇ ಗತಿಯಿಲ್ಲ. ವಿಶಾಲ ಬಯಲು, ಕೂಡುವುದು ಏಳುವುದು, ಎಲ್ಲ ಸ್ವಚ್ಛ ಎಂದು ಎಷ್ಟೋ ಬಾರಿ ಅಂದುಕೊAಡರೂ ಮಗನಿಗೆ ಹೇಳಿದರೆಲ್ಲಿ ಬೈಸಿಕೊಳ್ಳಬೇಕಾಗುವುದೋ ಅಂತ ಸುಮ್ಮನೆ ಒಬ್ಬಳೇ ಹೀಗೆಲ್ಲ ಯೋಚಿಸುತ್ತ ಇದ್ದು ಬಿಡುವಳು. ಆದರೆ ದಿನಕ್ಕೊಂದು ಸಲವಾದರೂ ತನ್ನೆಲ್ಲ ಗಾಬರಿಯನ್ನೂ ಭಯವನ್ನೂ ತಲೆಭಾರವನ್ನೂ ಶರೀರದ ಜಡತೆಯನ್ನೂ ಇಳಿಸಿ ಬರುವ ಏಕೈಕ ಜಾಗೆಯಾದ್ದರಿಂದ ಸುಭದ್ರಕ್ಕ ಅಲ್ಲಿ ಒಮ್ಮೆ ಭೇಟಿಕೊಟ್ಟು ಹೊರಬಂದಳೆAದರೆ ಆ ದಿನದ ಒಂದು ದೊಡ್ಡ ಕೆಲಸ ಮುಗಿಸಿ ಆ ದಿನವಿಡೀ ಎಂಥದೋ ನಿರಾಳತೆಯಿಂದಿರುತ್ತಾಳೆ.
ಇAದು ಮಾತ್ರ ಅದು ಹೇಗೋ ಬೇರೆ ತರಹವೇ ಆಗಿಹೋಯ್ತು. ಎಂದೂ ಆಗದಿದ್ದ ಹಾಗೆ ಆಯ್ತದು. ಆಫೀಸು ಶಾಲೆಗಳಿಗೆ ಸನಿಹವೆಂಬ ಕಾರಣಕ್ಕೆ ಪಟ್ಟಣದ ಮಧ್ಯೆಯೇ ಇರುವ ಅಪಾರ್ಟಮೆಂಟು. ಮಧ್ಯಾಹ್ನ ಮಗ ಸೊಸೆ ಮೊಮ್ಮಗಳು ಮೂವರೂ ಊಟ ಮುಗಿಸಿ ತಮ್ಮ ತಮ್ಮ ಆಫೀಸುಗಳಿಗೋ ಶಾಲೆಗೋ ಹೋಗಿ ಒಂದೆರಡು ತಾಸಾಗಿದೆ ಅಷ್ಟೆ. ಬಾಗಿಲ ಚಿಲಕ ಹಾಕಿ, ಅದನ್ನೇ ಮತ್ತೆ ಮತ್ತೆ ಎರಡೆರಡು ಬಾರಿ ಪರೀಕ್ಷಿಸಿ, ಅನುದಿನದಂತೆ ತನ್ನ ಮಲುಗುವ ಕೋಣೆಗೆ ಹೋಗಿ ಮಲಗಿಕೊಂಡಳು ಸುಭದ್ರಕ್ಕ. ಒಂದು ಸಣ್ಣ ನಿದ್ದೆ ಬಿದ್ದು ಎಚ್ಚರಾಗಿರಬಹುದು, ಹೊಟ್ಟೆಯಲ್ಲಿ ಏನೋ ಹಾಕಿ ತಿರುಗಿಸಿದ ಹಾಗೆ. ತೇಗು ಬಂದ ಹಾಗೆ. ಏನೋ ತನಗೆ ಬೇಡದ್ದು ಹೊಟ್ಟೆಗೆ ಆಗಿಬರದ್ದು ತಿಂದು ಬಿಟ್ಟಿದ್ದೇನೆ ಅನ್ನುವ ಹಾಗೆ. ಊಟದಲ್ಲಿ ಏನು ತಿಂದೆ ಎಂದು ಜ್ಞಾಪಿಸಿಕೊಳ್ಳುತ್ತಲೇ ನಿಧಾನ ಎದ್ದು ಕೂತಳು ಸುಭದ್ರಕ್ಕ.
ಏನೂ ಅಂಥ ಜಡವಾಗಿದ್ದು ಇದ್ದಂತಿರಲಿಲ್ಲ. ನೀರಾದರೂ ಕುಡಿಯೋಣವೆಂದುಕೊಳ್ಳುತ್ತ ಎದ್ದು, ಸೊಸೆ ಪ್ಲಾಸ್ಕಿನಲ್ಲಿ ತುಂಬಿಟ್ಟು ಹೋಗಿದ್ದ ಬಿಸಿ ನೀರನ್ನು ಬಗ್ಗಿಸಿ ಲೋಟಕ್ಕೆ ಹಾಕಿ ಅಲ್ಲೇ ಕುರ್ಚಿಯ ಮೇಲೆ ಕೂತು ನಿಧಾನ ಕುಡಿದಳು. ಸಮಾಧಾನವೆನ್ನಿಸಿತು. ಪುನಃ ಎದ್ದು ಹೋಗಿ ಮಂಚವನ್ನೇರಿ ಚಾದರ ಹೊದ್ದು ಮಲಗಿಕೊಂಡಳು. ತುಸು ಹೊತ್ತಿನ ನಂತರ ಮತ್ತೆ ಹೊಟ್ಟೆಯೊಳಗೆ ಗೊಡಗೊಡ ಸದ್ದಾದಂತಾಯಿತು. ಅಲ್ಲೇ ಮಗ್ಗಲು ಬದಲಿಸಿ ಮಲಗಿದಳು ಸುಭದ್ರಕ್ಕ. ನಿದ್ದೆ, ಮಂಪರು. ಅರೆಎಚ್ಚರ, ತೂಕಡಿಕೆ. ಕನಸಿನಲ್ಲೇನೋ ಎಂಬAತೆ ಉದರದೊಳಗೆ ಅದೆಷ್ಟೋ ಕಪ್ಪೆಗಳ ಜಿಗಿತ.
ಒಮ್ಮೆ ಏಳಬೇಕು ಅನ್ನಿಸುವುದು, ಇನ್ನೊಮ್ಮೆ ಬೇಡ ಎನ್ನಿಸುವುದು. ಹಾಗಾಗಿ ಸುಭದ್ರಕ್ಕ ತುಂಬ ಹೊತ್ತು ಮಲಗಿಯೇ ಇದ್ದಳು. ಈಗ ಇದ್ದಲ್ಲೇ ಸುಡುಮುಡಿಸಿದಂತಾಗಿ, ಪೂರ್ತಿ ಎಚ್ಚರಾಗಿ, ಒಮ್ಮೆಲೇ ಎದ್ದು ಕೂತಳು. ಮಂಚವಿಳಿದು ಪಾಯಿಖಾನೆಯ ಬದಿಗೆ ಓಡಿದಳು, ಯಾಕೆ ಯಾವತ್ತೂ ಇಲ್ಲದ್ದು ಇವತ್ತೇ ಹಿಂಗಾಯ್ತು? ಇನ್ನೂ ಪಾಯಿಖಾನೆಗೆ ಹೋಗಿ ಮುಟ್ಟಲಿಲ್ಲ, ಅಲ್ಲಿಗೆ ಇನ್ನು ಎರಡೇ ಹೆಜ್ಜೆ ಬಾಕಿ ಉಳಿದಿತ್ತು, ಅಲ್ಲೇ ಅಲ್ಲೇ, ಬಂದೇ ಬಿಟ್ಟಿತು. ಛೆ, ಎಂಥ ವಾಕರಿಕೆ, ಎಷ್ಟದು ಹೀಂಕರಿಕೆ, ಅಬ್ಬಬ್ಬಾ ಕೆಟ್ಟ ಪರಿಮಳ, ನನ್ನದು ನನಗೇ ಗಲೀಜು, ಪಾಪ, ನನ್ನ ಸೊಸೆ ಮೊಮ್ಮಗಳಿಗೆ ಹೇಗಾಗಬೇಡ, ಇನ್ನು ಮಗನಿಗೆ? ಅಮ್ಮ ಮುದ್ದಾದರೆ ಅಮ್ಮನ ಮಲ ಮುದ್ದೇ? ಸುಭದ್ರಕ್ಕನ ಮೈಯೆಲ್ಲ ಹೇಸಿಕೆಯಾದಂತಾಗಿ ಇನ್ನೊಮ್ಮೆ ಸ್ನಾನವನ್ನೇ ಮಾಡಿಬಿಡುವಾ ಅಂತ ತೀರ್ಮಾನಿಸಿಬಿಟ್ಟಳು.
ಈ ಒಂದು ವಿಷಯಕ್ಕೆ ಬಂದರೆ ಮಾತ್ರ ಹಾಗೆಯೇ. ಯಾರೂ ನೋಡಬಾರದು. ಯಾರಿಗೂ ಅದರ ಸುಳಿವು ಗಂಧ ಗಾಳಿ ಕೂಡ ತಟ್ಟಬಾರದು. ನಾನೇ ನಾನೇ ಸ್ವತಃ ನಾನೊಬ್ಬಳೇ ಅನುಭವಿಸಬೇಕು. ಬೇಡ ಬೇಡ ಯಾರಿಗೂ ಗೊತ್ತಾಗುವುದು ಬೇಡ. ಛೇ ಗೊತ್ತಾಗೇ ಬಿಟ್ಟಿತೇ? ದೇವರೇ ಬೇಗ ಎಲ್ಲ ಸರೀ ಮಾಡು. ಎಲ್ಲಿ ಸೊಸೆ ಮೊಮ್ಮಗಳು ಅಸಹ್ಯ ಪಡುವರೋ, ಎಲ್ಲಿ ಮಗ ಕಂಡುಹಿಡಿದು ಗದರುವನೋ, ಎಲ್ಲ ಮುಚ್ಚಿ ಮುಚ್ಚಿ ಇಡಬೇಕು. ಎಲ್ಲ ಗುಟ್ಟು ಗುಟ್ಟು. ನಾಲ್ಕು ಹೆಜ್ಜೆ ಹೊರಕೋಣೆಯ ಕಡೆಗೆ. ಮೂರು ಹೆಜ್ಜೆ ಬೆಡ್‌ರೂಮಿನ ಬದಿಗೆ, ಎರಡು ಹೆಜ್ಜೆ ಪಾಯಿಖಾನೆಯೆಡೆಗೆ. ಕಾಲಿಗೇನು ಚಕ್ರ ಕಟ್ಟಿಕೊಂಡಿದ್ದೇನೆಯೇ? ಛೆ,
ಹೋಗಿ ಕೂಡುವ ಮೊದಲೇ ಹೇಗೆ ಬಂದೇ ಬಿಟ್ಟಿತು ಅದು, ಛೆ, ಛೆ. ಈ ಹಿಂದೆ ವಯಸ್ಸಿದ್ದಾಗ, ಹುಷಾರಿಲ್ಲದೇ ಎಷ್ಟೋ ದಿನ ಹಾಸಿಗೆಯಲ್ಲೇ ಬಿದ್ದ ನಮ್ಮ ಅತ್ತೆ ಮಾವನದನ್ನು ಇದೇ ಕೈಯಿಂದ ಬಗೆಬಗೆದು ಹಾಕಿದ್ದೇನೆ ನಾನು. ಈಗ್ಯಾಕೆ ಇಷ್ಟೊಂದು ಹಿಂಸೆಯೆನಿಸುತ್ತಿದೆ. ಅಯ್ಯೋ ಶೀ ಅಬ್ಬಾ, ಮೂಗು ಮುಚ್ಚಿಕೊಳ್ಳಲೂ ಆಗದೇ ಕೈಯೆಲ್ಲಾ ಗಲೀಜಾಗಿ ಮೂರುನಾಕು ಸಲ ಸಾಬೂನು ಹಚ್ಚಿ ಹಸ್ತಗಳನ್ನು ಉಜ್ಜಿ ಉಜ್ಜಿ ತೊಳೆದುಕೊಂಡಳು ಸುಭದ್ರಕ್ಕ.
ಆ ಹದಿನೆಂಟು ಮೊಳದ ಕಚ್ಚೆ ಹಾಕಿ ಉಡುವ ಸೀರೆಯಿಂದ ಈ ಗೋಲುಡುಗೆಗೆ ಬಂದಿದ್ದು ಚೊಲೋದೇ ಆಯ್ತು. ಒಳಗೆ ಲಂಗವರ‍್ತದೆ. ಗಲೀಜಾದರೆ ಲಂಗವೊAದೇ ಒಗೆದು ಹಾಕಬಹುದು. ಆ ಒಂಬತ್ತು ಮೊಳದ ಸೀರೆಯಲ್ಲಿ ಹೀಗಾಗಿದ್ದರೆ, ದೇವರೇ ಗತಿ. ನನಗೆ ಅಷ್ಟು ದೊಡ್ಡ ಸೀರೆ ನೀರಲ್ಲಿ ಮುಳುಗಿಸಿ ಎತ್ತಲೂ ಶಕ್ತಿಯಿದ್ದಿಲ್ಲ. ಈ ಇಳಿ ವಯಸ್ಸಿನ ಸನಿಹ. ನಮ್ಮ ಅತ್ತೆ ಇದೇ ರೀತಿ ಹೊಲಸು ಮಾಡಿಕೊಂಡು ಬಿದ್ದದ್ದು, ನಾನು ಗದರುತ್ತ ಸ್ವಚ್ಛ ಮಾಡಿದ್ದು ಎಲ್ಲ ಜ್ಞಾಪಕಕ್ಕೆ ರ‍್ತಿದೆ ಈಗ. ಈಗಲೇ ಹೀಗೆ.. ಇನ್ನು ಮುಂದೆ ದಿನಗಳೆದಂತೆ ನಾನು ಇನ್ನೂ ಹಣ್ಣಾಗುತ್ತಾ ಹೋದಂತೆ ಹೇಗಪ್ಪಾ ತಂದೆ, ನೀನೇ ಕಾಪಾಡಪ್ಪಾ. ನನ್ನ ಸೊಸೆ ಪಾಪದವಳು. ಎಲ್ಲೋ ಹುಟ್ಟಿ ನಾಜೂಕಾಗಿ ಎಲ್ಲೋ ಬೆಳೆದು ಇಂಥದ್ದನ್ನೆಲ್ಲ ನೋಡಿದವಳೂ ಇರಲಿಕ್ಕಿಲ್ಲವೇನೊ. ಇಲ್ಲಿ ಒಳಗೆ ಮನೆಗೆಲಸ ಅಡಿಗೆ, ಅಲ್ಲಿ ಹೊರಗೂ ಹತ್ತು ತಾಸು ಡ್ಯೂಟಿ ಮುಗಿಸಿ ಬಂದು, ಇಲ್ಲಿ ನೋಡಿದರೆ ನಾನು ಹೀಗೆ ಹೇಸಾಟ ಮಾಟಿಟ್ಟರೆ ಹೇಗೆ? ಎಲ್ಲ ಅವಳು ಬರುವ ಹೊತ್ತಿಗೆ ಝಳ ಝಳಾ ತೊಳೆದಿಟ್ಟಿರಬೇಕು, ಸುಭದ್ರಕ್ಕ ಗಡಿಬಿಡಿಗೆ ಬಿದ್ದಳು. ಎಲ್ಲೆಡೆ ಪರಿಮಳ ಹರಡಿತು, ತನ್ನ ಸನಿಹದಿಂದಲೇ ತನ್ನೊಳಗಿಂದಲೇ ಹೊಮ್ಮುತ್ತಿದೆ ಅನ್ನುವ ಹಾಗೆ.
ಎಲ್ಲವನ್ನೂ ಸ್ವಚ್ಛ ಗೊಳಿಸಲು ಮೊದಲ್ಗೊಂಡಳು. ಕಣ್ಣು ಬೇರೆ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಎಲ್ಲಿ ಎಲ್ಲಿ ಬಿದ್ದಿದೆ ಅದು ಅಂತ ಸಹ ಕಾಣುತ್ತಿರಲಿಲ್ಲ. ಎಲ್ಲಿ ಹೋದರೂ ಎಲ್ಲೆಡೆ ವಾಸನೆ ಹರಡಿಕೊಂಡAತೆ ಅನಿಸುತ್ತಿತ್ತು, ಇಡೀ ಮನೆ ತುಂಬ ಅದರ ತಿಳಿ ನಾತದ ಮೋಡ ಆವರಿಸಿಕೊಂಡAತಿತ್ತು. ಮೊದಲು ತನ್ನ ದೇಹವನ್ನೇ ಮತ್ತೆ ಮತ್ತೆ ತೊಳೆದು ಸ್ವಚ್ಛಗೊಳಿಸಿಕೊಂಡಳು ಸುಭದ್ರಕ್ಕ. ನಂತರ ಬೇರೆ ವಸ್ತç ತೊಟ್ಟು ತಾನು ಮಂಚದಿAದ ಓಡಿ ಬಂದ ಜಾಗೆಯನ್ನೆಲ್ಲ ವರೆಸಲು ಶುರು ಮಾಡಿದಳು.
ಮನೆಯಲ್ಲಿ ಅಲ್ಲಲ್ಲಿ ಕತ್ತಲು ಬೆಳಕಿತ್ತು. ಕತ್ತಲು ಬೆಳಕು, ಬೆಳಕು ಕತ್ತಲು ಈಗ ಎರಡೂ ಒಂದೇ ಅನ್ನಿಸಿತು ಸುಭದ್ರಕ್ಕನಿಗೆ. ಈ ಒಂದು ಪ್ರಕರಣ ತನ್ನನ್ನೂ ತನ್ನ ಸೊಸೆಯನ್ನೂ ಮಗನನ್ನೂ ಮೊಮ್ಮಗಳನ್ನೂ ದೂರಮಾಡದಿದ್ದರೆ ಸಾಕು ಅನ್ನಿಸಲು ಶುರುವಾಯಿತು ಅವಳಿಗೆ. ಯಾಕೆಂದರೆ ಸೊಸೆ ಮೈತ್ರಿ ತುಂಬಾ ಸೂಕ್ಷö್ಮ, ತಿಕ್ಕಿದಲ್ಲೇ ತಿಕ್ಕಿ ತೊಳೆದಲ್ಲೇ ತೊಳೆಯುವವಳು, ದಿನವೂ ಬೆಳಿಗ್ಗೆ ಐದಕ್ಕೆ ಎದ್ದರೆ ಅವಳಿಗೆ ಮನೆ ಸ್ವಚ್ಛಗೊಳಿಸುವುದೇ ಒಂದು ಕಾಯಕ. ಗಂಡ ಮಗಳು, ಇಟ್ಟ ವಸ್ತು ಒಂದೆಡೆ ಇಡದೇ ಅಲ್ಲೇ ನೀರು ಗೀರು ಚೆಲ್ಲಿ ಅಲ್ಲಲ್ಲೇ ಚಹಗಿಹ ಕೈತಪ್ಪಿ ಬೀಳಿಸಿ ಗಲೀಜು ಮಾಡಿಡುತ್ತಾರೆಂದು ದಿನವಿಡೀ ಗದರುತ್ತಲೇ ಇರುವವಳು. ದಿನಕ್ಕೆ ಐದಾರು ಸಲ ಕೈ ಕಾಲು ತೊಳೆದುಕೊಳ್ಳುವವಳು, ಮನೆಯೊಳಗೆ ಕಾಲಿಗೆ ಧರಿಸಿ ಓಡಾಡಲು ಎಲ್ಲರಿಗೂ ಒಂದೊAದು ಚಪ್ಪಲಿ ತಂದು ಕೊಟ್ಟು ಅದನ್ನು ಧರಿಸದೇ ನಿಷ್ಕಾಳಜಿ ತೋರಿದಾಗಲೊಮ್ಮೆ ಎಲ್ಲರನ್ನೂ ತನ್ನನ್ನೂ ಸೇರಿಯೇ ತರಾಟೆಗೆ ತೆಗೆದುಕೊಳ್ಳುವವಳು.
ಅವಳ ಸ್ವಚ್ಛತೆ ಕಂಡು ನಾನೂ ಈಗೀಗ ಸೂಕ್ಷö್ಮವಾಗಿ ಎಲ್ಲೂ ಏನೂ ಹೆಚ್ಚು ರಸಕಸಿ ಮಾಡದ ಹಾಗೆ ನಾಜೂಕಾಗಿರಲು ಕಲಿತಿದ್ದೆ. ಇಂದು ಮಾತ್ರ ನನ್ನಿಂದ, ಅದೂ ನನ್ನಂಥವಳಿAದ, ಈ ಬಗ್ಗೆ ಯಾವಾಗಲೂ ಹುಷಾರಿಯಿಂದಿರುವವಳಿಗೆ ಹೀಗೇಕಾಯ್ತು ಎಂದೇ ತಿಳಿಯದೇ ಸುಭದ್ರಕ್ಕ ಪರಿತಪಿಸಿದಳು. ಅದಕ್ಕಾಗೇ ನಾನು ಊಟ ಗೀಟ ಹಿತ ಮಿತವಾಗಿ ಮಾಡುತ್ತೇನೆ, ಯಾರು ಎಂಥ ಪಂಚಪಕ್ವಾನ್ಯ ಮಾಡಿ ಕರೆದು ಬಡಿಸಿಕೊಳ್ಳಲು ಒತ್ತಾಯಿಸಿದರೂ ನಾನು ಸೋಲುವುದಿಲ್ಲ. ಎಲ್ಲ ಈ ಒಂದು ಸಂಗತಿಗಾಗೇ. ಅಂಥದ್ದಾವುದನ್ನೂ ಈವತ್ತು ನೀಡಿಸಿಕೊಂಡ ನೆನಪಿಲ್ಲ.
ಹೊರಗೆ ಯಾರೋ ಬಂದ ಸದ್ದು. ಟಪ್ ಟಪ್ ಟಪ್ ಮೆಟ್ಟಿಲುಗಳನ್ನೇರುವ ಸಪ್ಪಳ. ಸೊಸೆಯೇ ಇರಬೇಕು. ಒಂದೊAದು ದಿನ ಮೊಮ್ಮಗಳು ನವಮಿಗಿಂತ ಅವಳೇ ಬೇಗ ಬಂದು ಬಿಡುತ್ತಾಳೆ, ಅಥವಾ ಮಗನೇ ಅಥವಾ ಮೊಮ್ಮಗಳೇ, ಟೈಮು ಎಷ್ಟಾಗಿರಬಹುದು ಈಗ? ಇನ್ನೂ ಎಲ್ಲೆಲ್ಲಿ ರಾಡಿ
ಮಾಡಿಟ್ಟಿದ್ದೇನೆಯೊ, ಅಯ್ಯೋ ಶಿವನೇ, ಇನ್ನು ಸ್ವಲ್ಪ ಹೊತ್ತು ಬಿಟ್ಟು ಅವರೆಲ್ಲ ಬರುವಂತಾಗಿದ್ದರೆ, ಅಷ್ಟರೊಳಗೆ ನಾನು ಎಲ್ಲವನ್ನೂ ಮೊದಲಿದ್ದ ಹಾಗೆಯೇ ನಿರುಂಬಳ ಛಕ ಛಕ ಮಾಡಿಡಬಹುದಿತ್ತು. ಉಪಾಯವಿಲ್ಲ ಈಗ. ಸುಭದ್ರಕ್ಕ ಕಾಲಿನ ಪಾದಕ್ಕಷ್ಟೇ ನೀರು ಸುರಿದುಕೊಂಡು ಬಾಗಿಲ ಬಳಿ ಬಂದಳು.
ಯಾರಾದರೂ ಬಂದಿದ್ದಾರೆ ಅಂದಮೇಲೆ ನಾನು ಬಾಗಿಲು ತೆರೆಯಲೇ ಬೇಕಲ್ಲವೆ, ಏನು ಮಾಡುವುದು ನನ್ನ ಹಣೇ ಬರಹ, ಆದದ್ದಾಗಲಿ. ಬಾಗಿಲು ತೆರೆಯುವ ಕೈ ಒಮ್ಮೆಲೇ ನಡುಗಿದಂತಾಯಿತು, ತನ್ನ ಖಾಸಗೀ ವಿಷಯಕ್ಕೆ ಇನ್ನೊಬ್ರ‍್ಯಾರೋ ಪ್ರವೇಶ ಪಡೆದಂತೆ, ತಾನು ತುಂಬ ಸಣ್ಣವಳಾದಂತೆ ಆತಂಕ, ಸುಸ್ತು. ಎದೆ ಅದುರಿದಂತಾಗುತ್ತಿತ್ತು. ಹಾಗೇ ಕಿಟಕಿಯಲ್ಲಿ ಹಣಕಿದಳು. ‘ಓ ಪಕ್ಕದ ಮನೆಯ ಸರಸ್ವತಿ, ಯಾಕೆ ಬಂದಿರಬಹುದು? ಅವರಿಗೇನಾದರೂ ನನ್ನೀ ಪರಿಮಳದ ಲೋಕ ನಿಧಾನ ಪಸರಿಸಿ, ಹೋಗಿ ತಲುಪಿತೆ? ಇರಲಿಕ್ಕಿಲ್ಲ ಬಿಡು. ಇದ್ದರೂ ಇರಬಹುದು. ಬಾಗಿಲು ಸಾವಕಾಶ ತೆರೆದಳು.
‘ಅಮ್ಮಾ ಮಲಗಿದ್ದಿರೇನು? ನಮ್ಮ ಕೀಲಿ ಗೀಲಿ ಏನಾದರೂ ಕೊಟ್ಟು ಹೋಗಿದ್ದಾರೆಯೇ ನಮ್ಮ ಮನೆಯವರು?’ ಅಂತೊAದು ಪ್ರಶ್ನೆ ಒಗೆದಳು ಸರಸ್ವತಿ. ‘ಇಲ್ಲ ಇಲ್ಲ’ ಎಂದ ಸುಭದ್ರಕ್ಕನ ದೃಷ್ಟಿ ತಟ್ಟನೆ ಕೀಲಿ ತೂಗು ಹಾಕುವ ಜಾಗೆಯ ಕಡೆ ಹೋಯಿತು, ಅಲ್ಲಿ ತೂಗಾಡುತ್ತಿರುವ ತಮ್ಮದಲ್ಲದ ಚಾವಿಯೊಂದು ಕಣ್ಣಿಗೆ ಮಸುಕು ಮಸುಕಾಗಿ ಕಂಡಿತು. ‘ಓ ಹೌದೌದು ಕೊಟ್ಟಿದ್ದಾರೆ ಕೊಟ್ಟಿದ್ದಾರೆ’ ಅನ್ನುತ್ತ ಅತ್ತ ಒಂದೆರಡು ಹೆಜ್ಜೆ ನಡೆದು ಕೀಲಿಕೈ ತೆಗೆದು ಸರಸ್ವತಿಗೆ ಕೊಟ್ಟಳು. ಅವಳ ಪಾದಗಳು ನಾಲ್ಕೆöÊದು ತಪ್ಪು ತಪ್ಪು ಹೆಜ್ಜೆಗಳನ್ನು ಹಾಕಿತು. ಜೀವ ತೇಲಿಸಿದಂತಾಯಿತು.
‘ಯಾಕಮ್ಮಾ ಹುಷಾರಿಲ್ಲೇನು?’ ಅಂತ ಉಲಿಯಿತು ಸರಸ್ವತಿಯ ದನಿ. ‘ಇಲ್ಲ ಇಲ್ಲ ಹುಷಾರಿದ್ದೇನೆ, ಸ್ನಾನಕ್ಕೆ ಹೋಗಿದ್ದೆ’ ಅಂತೇನೋ ಅಂದ ಸುಭದ್ರಕ್ಕನ ಮಾತು ಅಚ್ಚರಿಯಿಂದ ಕೇಳಿದ ಸರಸ್ವತಿ ಹೊರಡುತ್ತಿದ್ದವಳು ಪುನಃ ತಿರುಗಿ ನಿಂತು ‘ಸ್ನಾನಕ್ಕೆ? ಈ ಹೊತ್ತಿನಲ್ಲಿ? ಏನೋ ವಾಸನೆ ಬಂದAತೆ ಅನಿಸುತ್ತಿದೆಯಲ್ಲ’ ಅಂತೇನೋ ಅನ್ನುತ್ತಿರುವಾಗಲೇ ಸುಭದ್ರಕ್ಕ, ‘ಹೌದೌದು ಇಲ್ಲ ಇಲ್ಲ ಬಟ್ಟೆ ಒಗೆಯುತ್ತಿದ್ದೆ’ ಅಂದವಳೇ ಅವಸರದಿಂದ ಬಾಗಿಲು ಜಡಿದೇ ಬಿಟ್ಟಿದ್ದಳು.
ಮಾತಿಗೆ ನಿಂತರೆ ಈ ಸರಸ್ವತಿ ಒಂದು ತಾಸಿನ ಕಮ್ಮಿ ಹೋಗುವುದಿಲ್ಲ. ನಂತರ ಅವರೆಲ್ಲ ಬರುವ ಸಮಯವಾಗಿಬಿಟ್ಟರೆ, ಆಗೇ ಹೋಯಿತೇ ಮತ್ತೆ ? ಕತ್ತೆತ್ತಿ ಗಡಿಯಾರದ ಬದಿ ನೋಡಿದಳು ಸುಭದ್ರಕ್ಕ. ಕಣ್ಣು ಮಂಜು, ಸರಿಯಾಗಿ ಕಾಣಲಿಲ್ಲ. ಹತ್ತಿರ ಹೋಗಿ ದಿಟ್ಟಿಸಿ ನಿರುಕಿಸಿದಳು. ಈಗ ತುಸು ತುಸುವೇ ಕಂಡಿತು. ಐದು ಗಂಟೆಗೆ ಐದೇ ನಿಮಿಷ ಬಾಕಿ ಉಳಿದಿತ್ತು. ಐದೂವರೆಯ ನಂತರ ಮೂವರೂ ಬರುತ್ತಾರೆ. ಸ್ವಲ್ಪ ಸರಳವಾಗಿ ಉಸಿರು ಎಳೆದುಕೊಂಡಳು ಸುಭದ್ರಕ್ಕ.
ಮತ್ತೆ ಒಳ ಹೋಗಿ ತೊಳೆದದ್ದೇ ತೊಳೆದಳು, ಒಗೆದದ್ದೇ ಒಗೆದಳು. ಬಕೇಟು ಬಕೇಟೆಲ್ಲವೂ ವಾಸನಾಮಯವಾದಂತೆನಿಸಿತು. ಇಂಥದನ್ನೆಲ್ಲ ಸುಭದ್ರಕ್ಕನಿಗೆ ಸ್ವತಃ ಅನುಭವಿಸಿ ಗೊತ್ತಿಲ್ಲದಿದ್ದರೂ ಇಷ್ಟು ದಿನದ ಜೀವನಾನುಭವದಲ್ಲಿ ಅವರಿವರು ಇಂಥ ವಿಷಯವನ್ನೆಲ್ಲ ಹಗುರವಾಗಿ ಕೀಳಾಗಿ ಹೇಸಿಕೆಯಿಂದ ಮಾತಾಡಿಕೊಂಡಿದ್ದನ್ನೆಲ್ಲ ಕಿವಿಯಾರೆ ಕೇಳಿದ್ದಳು. ಯಾವುದೋ ಅಜ್ಜಿ, ಬೇಕಾದ್ದು ಬ್ಯಾಡಾಗಿದ್ದು ತಿಂದು ಹೊಟ್ಟೆ ಕೆಡಿಸಿಕೊಂಡು ಇದೇ ತರಹ ಪಿರಿ ಪಿರಿ ಮಾಡಿ ಸೊಸೆಯನ್ನು ಗೋಳುಹುಯ್ದುಕೊಳ್ಳುತ್ತಿದ್ದಳಂತೆ.
ಇನ್ನೊಬ್ಬಳು ಹೀಗೆ ನನ್ನಂತೆಯೇ ಪಟ್ಟಣಕ್ಕೆ ಮಗನ ಮನೆಗೆ ಬಂದುಳಿದ ಮುದುಕಿಯನ್ನು, ಅಡಿಗೆ ಮನೆ ಪಕ್ಕವಿರುವ ಪಾಯಿಖಾನೆ ಗಲೀಜು ಮಾಡಿಡುತ್ತಾಳೆಂಬ ಕಾರಣಕ್ಕಾಗೇ ವೃದ್ದಾಶ್ರಮದಲ್ಲಿ ಇರಿಸಿದ್ದರಂತೆ. ಒಮ್ಮೆ ಊರಲ್ಲಿರುವ ನನ್ನ ಚಿಕ್ಕಪ್ಪನ ಹೆಂಡತಿ ನೇತ್ರಕ್ಕನಿಗೆ, ಯಾಕೆ ಮಗನ ಮನೆಯಿಂದ ಇಷ್ಟು ಬೇಗ ಓಡಿ ಬಂದೆ ಅಂತ ಕೇಳಿದ್ದಕ್ಕೆ ‘ಅಲ್ಲೇನು ಸುಖ ಬಿಡು ಸುಭದ್ರಾ, ಉಂಡಿದ್ದು ಸರಿಯಾಗಿ ಹೇಲುವ ಹಾಗೂ ಇಲ್ಲ, ಅದಕ್ಕೇ ಸುಮ್ಮನೆ ಎದ್ದು ಬಂದುಬಿಟ್ಟೆ’ ಅಂದವಳನ್ನು ನಾನೇ ಕೂತು ಬೈದುಕೊಂಡಿದ್ದೆ. ನೋಡಿದರೆ ಇಲ್ಲಿ ನನ್ನ ಪರಿಸ್ಥಿತಿಯೇ ಹೀಗಾಗಿದೆ. ಯರ‍್ಯಾರಿಗೆ ಎಂಥೆAಥ ಕಾಲವೊ ಶಿವನೆ.
ನಮ್ಮ ಮಾವನ ಹೆಂಡತಿ ಕಮಲಕ್ಕನಿಗೆ, ಅವಳ ಸೊಸೆಯಂತೂ ಎಲ್ಲೋ ಬಿದ್ದ ಆಡಿನದೋ ಕುರಿಯದೋ ಕಾಳಿನಂತಹ ಹೊಲಸನ್ನು ಕಾಗದದಲ್ಲೇ ವರೆಸಿ ತಂದು ‘ಇದೇ, ಇದೇ, ನೀವು ಪಾಯಿಖಾನೆಗೆ ಹೋಗುವಲ್ಲೇ ಬಿದ್ದಿತ್ತು ನೋಡಿ ಇದು, ಪೂರ್ತಿ ಬಂದ ಮೇಲೆ ಅವಸರಿಸಿ ಹೋಗುವುದ್ಯಾಕೆ ನೀವು? ಸ್ವಲ್ಪ
ಮೊದಲೇ ಹೋಗಬಾರದೇ?’ ಎಂದು ಕೈಯಲ್ಲಿದ್ದದ್ದನ್ನು ತೋರಿಸಿ ತೋರಿಸಿ ಹೀಗಳೆದಿದ್ದಳಂತೆ. ‘ನನ್ನದಲ್ಲ ಅದು, ನನಗೆ ಹಾಗೆ ಕಾಳು ಕಾಳಿನ ಹಾಗೆ ಯಾವಾಗಲೂ ಆಗುವುದಿಲ್ಲ’ ಅಂತ ಹೇಳಿದರೂ ಕೇಳದೇ ‘ಇನ್ಯಾರದು? ನಾನು ಮಾಡುತ್ತೇನೋ ಹಾಗೆ ದಾರಿಯಲ್ಲಿ? ಅಥವಾ ನಿಮ್ಮ ಮಗ ಮಾಡುತ್ತಾರೋ’ ಅಂತ ದೊಡ್ಡ ರಾದ್ಧಾಂತವನ್ನೇ ಎಬ್ಬಿಸಿ ಬಿಟ್ಟಿದ್ದಳಂತೆ.
ನನ್ನ ಬಾವನ ಹೆಂಡತಿ ಕಲ್ಯಾಣಕ್ಕನಿಗೆ, ಅವಳ ಮಗಸೊಸೆಯಿಬ್ಬರೂ ಈ ಕಾರಣಕ್ಕಾಗೇ ತರಾಟೆಗೆ ತೆಗೆದುಕೊಂಡು, ‘ಸುಮ್ಮನೇ ನೀರು ಹುಯ್ದರೆ ಆಗಲಿಲ್ಲ, ತೂತಿನಲ್ಲಿ ಹೋಗಿ ನಿಂತರ‍್ತದೆ ಅದು, ತಂಬಿಗೆ ಎತ್ತಿ ಮೇಲಿಂದ ಆ ತೂತಿನಲ್ಲೂ ನೀರು ಸುರಿಯಬೇಕು, ಇಲ್ಲದಿದ್ರೆ ಮನೆಯೆಲ್ಲ ನಾತ ರ‍್ತದೆ, ಇಷ್ಟು ಸಣ್ಣ ಮನೆ ಇಷ್ಟು ಸಣ್ಣ ಜಾಗೆ, ಕ್ರಿಮಿ ಕೀಟ ಉತ್ಪನ್ನವಾಗಲು ದಾರಿ, ಹೇಗೆ ಬದುಕಿರಬೇಕು ನಾವೆಲ್ಲ?’ ಅಂತ ರಂಪಾಟ ಮಾಡಿದ್ದಕ್ಕೆ ಅವಳು ಸ್ವಲ್ಪೇ ದಿನಕ್ಕೆ ಊರಿಗೆ ವಾಪಸ್ಸು ಓಡಿಬಂದು ಬಿಟ್ಟಿದ್ದಳು. ಅತ್ತೆಯಂದಿರು ಜೊತೆಯಿರುವುದು ಭಾರವೆನಿಸಿದರೆ, ಇದೆಲ್ಲ ಒಂದು ರೀತಿಯ ನೆಪ ಅಷ್ಟೇ. ಈ ಪಟ್ಟಣದ ಹಂಗು ಇಷ್ಟೇ. ಛೆ, ಈ ಸಮಯದಲ್ಯಾಕೆ ಸಾಲು ಸಾಲಾಗಿ ನನಗೆ ಇಂಥವರದೇ ನೆನಪಾಗುತ್ತಿದೆ ಛೆಛೆ, ಅನ್ನಿಸಿತು ಸುಭದ್ರಕ್ಕನಿಗೆ.
ಅವರೆಲ್ಲರಂತೆ ಇದೀಗ ನನ್ನ ಸತ್ವ ಪರೀಕ್ಷೆ ಎದುರಾಗಿದೆ ಅಂದುಕೊAಡಳು ಸುಭದ್ರಕ್ಕ. ಇತ್ತೀಚೆಗೆ ಕೆಲ ತಿಂಗಳುಗಳ ಹಿಂದೆ ಸುಭದ್ರಕ್ಕನಿಗೂ ಮಲಬದ್ಧತೆಯಂತಹದೇನೋ ಅನಾನುಕೂಲ ಶುರುವಾಗಿ, ಎರಡು ಮೂರು ಸಲವಾದರೂ ಪಾಯಿಖಾನೆಗೆ ಹೋಗಬೇಕೆನಿಸುತ್ತಿತ್ತು. ಮಲವೆಲ್ಲ ಕಪ್ಪಾಗಿ ಅಂಟು ಅಂಟಿನAತೆ ಪಾಯಿಖಾನೆಯ ಆ ಬಿಳಿಯ ಸೀಟಿಗೇ ಅಂಟಿಕೊAಡಿರುತ್ತಿತ್ತು. ಎಷ್ಟು ನೀರು ಹಾಕಿದರೂ ಹೋಗುತ್ತಿರಲಿಲ್ಲ. ಪಕ್ಕದಲ್ಲಿದ್ದ ಬ್ರೆಶ್ಶಿನಲ್ಲಿ ತಿಕ್ಕಿದರೆ ಮಾತ್ರ ಸ್ವಚ್ಛವಾಗುತ್ತಿತ್ತು. ಸುಭದ್ರಕ್ಕ ದಿನವೂ ಅದರಲ್ಲೇ ತಿಕ್ಕುತ್ತ ಸ್ವಚ್ಛ ಮಾಡಿಟ್ಟು ಬರುತ್ತಿದ್ದರೆ, ಒಂದಿನ ಈ ಮಗ ವೆಂಕಟೇಶನೇ ಹೆಂಡತಿಯನ್ನು ಕುರಿತು, ‘ಪಾಯಿಖಾನೆ ತಿಕ್ಕಿದ ಬ್ರೆಶ್ಶನ್ನು ಯಾಕೆ ಸ್ವಚ್ಛವಾಗಿ ತೊಳೆದಿಡುವುದಿಲ್ಲ ನೀನು’ ಅಂತ ಗದರಿಬಿಟ್ಟಿದ್ದ. ‘ಹೌದೇ? ಹಲ್ಲಿಗಿಲ್ಲಿ ಜಿರಲೆಗಿರಲೆ ಗಲೀಜು ಮಾಡಿರಬೇಕು’ ಎಂದು ಹೇಳಿ ಸೊಸೆ ಮೈತ್ರಿ ಆ ಮಾತನ್ನು ಇದ್ದಲ್ಲೇ ಹಾರಿಸಿಹಾಕಿದ್ದಳು. ಅಂಥ ಗಲೀಜೊಂದು ನಾನು ಬ್ರೆಶ್ಶು ಮಾಡಿದಾಗಲೇ ಅಂಟಿಕೊAಡಿತ್ತೊ ಏನೊ ಅಂದುಕೊಳ್ಳುವ ಹಾಗಾಯಿತು ಸುಭದ್ರಕ್ಕನಿಗೆ.
ಆ ನಂತರ ಆ ಬ್ರೆಶ್ಶನ್ನೂ ಸಹ ಕಾಳಜಿಯಿಂದ ತೊಳೆದಿಡತೊಡಗಿದಳು. ಆದರೆ ಸೊಸೆ ಮೈತ್ರಿ, ಆ ದಿನವೋ ಮರುದಿನವೋ ನೆನಪಿಲ್ಲ, ‘ನಿಮಗೇನು ಆರಾಮಿಲ್ಲವೇ, ಉಷ್ಣವಾಗಿದೆಯೇ, ತಂಪಿನದೇನಾದರೂ ತೆಗೆದುಕೊಳ್ಳಿ’ ಅಂತ ನಾಜೂಕಾಗಿ ಹೇಳಿ, ಅಂದಿನಿAದಲೇ ಆಫೀಸು ಮುಗಿಸಿ ಬರುವಾಗಲೇ ಆಗಾಗ ಎಳನೀರು ತಂದು ಕೊಡಲು ಶುರು ಮಾಡಿದ್ದಳು. ಅವರೆಲ್ಲರ ಸೊಸೆಯಂದಿರ ಹಾಗೆ ಮಾಡಲಿಕ್ಕಿಲ್ಲ ಇವಳು. ನೋಡುವಾ, ಯಾರ ಹೊಟ್ಟೆಯಲ್ಲಿ ಯಾರು ಹೊಕ್ಕಿ ನೋಡಿರುತ್ತಾರೆ?
ಮತ್ತೆ ಹೊರಗೆ ಸದ್ದಾದಂತಾಯಿತು, ಬಂದರು ಅನಿಸುತ್ತಿದೆ. ಸುಭದ್ರಕ್ಕನದಿನ್ನೂ ಪೂರಾ ಕೆಲಸ ಮುಗಿದೇ ಇರಲಿಲ್ಲ. ಎಷ್ಟೋ ಹೊತ್ತು ಬಗ್ಗಿ ನಿಂತು ಸೊಂಟ ಮುರಿದು ಬಂತು. ಒಮ್ಮೆಲೇ ನೆಟ್ಟಗೆ ನಿಲ್ಲಲಾಗಲಿಲ್ಲ. ಹೋಗಿ ಬಾಗಿಲು ತೆರೆಯಲೇ ಬೇಕಲ್ಲ, ಆಗಿನ ಖಡಕ್ಕು ವಾಸನೆ ಈಗ ತುಸು ಕಮ್ಮಿಯಾಗಿರಬೇಕು, ಗೊತ್ತಾಗದೇ ಇದ್ದರೂ ಇದ್ದೀತು, ಎಂದು ತನಗೆ ತಾನೇ ಧೈರ್ಯ ತಂದುಕೊAಡಳು. ಪಾಯಿಖಾನೆಯ ಹಾಗೂ ಅದರ ಪಕ್ಕದಲ್ಲೇ ನಿಂತಿದ್ದ ಬಾತ್ರೂಮಿನ ಬಾಗಿಲನ್ನೂ ಸಹ ಎಳೆದುಕೊಂಡು ಹೊರ ನಡೆದಳು. ಅರೆ, ಮೈತ್ರಿ! ಅಷ್ಟರಲ್ಲೇ ಒಳಕೋಣೆಗೇ ಬಂದಾಗಿತ್ತು ಅವಳು. ಅರೆ, ಆಗ ನಾನು ಸರಸ್ವತಿಗಾಗಿ ಬಾಗಿಲು ತೆರೆದವಳು, ಮತ್ತೆ ಚಿಲಕ ಹಾಕಿರಲೇ ಇಲ್ಲವೆ?. ಹೀಗೆ ಒಮ್ಮೆಲೇ ಒಳಕೋಣೆಯಲ್ಲೇ ತನ್ನ ಸೊಸೆಯನ್ನು ಕಂಡು ತಡಬಡಾಯಿಸುವಂತಾಯಿತು ಸುಭದ್ರಕ್ಕನಿಗೆ.
‘ಇವತ್ತೇನು ಮಲಗಿಲ್ಲವೇ?’ ಅಂತ ಅವಳೇನೋ ಕೇಳಿದಂತೆನಿಸಿದರೂ ಸುಭದ್ರಕ್ಕನಿಗೆ ಉತ್ತರ ಕೊಡಲಾಗಲಿಲ್ಲ. ‘ಬಾಗಿಲು ನಾನು ಹಾಕಿರಲಿಲ್ಲವೇ,’ ಎಂಬುದೊAದು ದೀನ ಸ್ವರ ಸುಭದ್ರಕ್ಕನ ಬಾಯಿಂದ ಅವಳಿಗರಿವಿಲ್ಲದಂತೆ ಉರುಳಿತು. ಕೂಡಬೇಕೋ, ಹೋಗಿ ಮಲಗಬೇಕೋ, ಅಥವಾ ಬಾತ್ರೂಮಿನಲ್ಲಿ ಬಿಟ್ಟು ಬಂದ ಸೀರೆ ಲಂಗಗಳನ್ನು ಒಗೆಯಲು ಹೋಗಬೇಕೋ, ಏನೊಂದೂ ತಿಳಿಯದೇ ಸುಭದ್ರಕ್ಕ ಸೊಸೆಯ ಎದುರು
ಪುಟ್ಟ ಮಕ್ಕಳಂತೆ ಬಾಯ್ಬಾಯ್ ಬಿಡುತ್ತ ಕಂಗಾಲಾಗಿ ನಿಂತು ಬಿಟ್ಟಿದ್ದಳು.
ಒಮ್ಮೆ ಆ ಕಡೆ ಈ ಕಡೆ ದೃಷ್ಟಿ ಹಾಯಿಸಿದ ಮೈತ್ರಿಗೆ ಎಲ್ಲ ತಿಳಿದು ಹೋಯಿತು. ವಾಸನೆಗೆ ಮೂಗು ಮುಚ್ಚಿಕೊಂಡರೆಲ್ಲಿ ಅತ್ತೆಗೆ ಬೇಸರವಾಗುತ್ತೋ ಅಂತ ಹ್ಯಾಗೋ ಸಹಿಸಿಕೊಳ್ಳುತ್ತ, ಉಸಿರು ಕಟ್ಟಿ ಹಿಡಿದು ಬಿಡುತ್ತ, ಅದೇ ಅದೇ ಗಾಳಿಯನ್ನು ಉಸಿರಾಡಿಸುತ್ತ, ‘ಯಾಕೆ ಹೊಟ್ಟೆ ನೋವೇ?’ ಅಂತ ಸೊಸೆ ಕೇಳಿದ ಪ್ರಶ್ನೆಗೆ ಸುಭದ್ರಕ್ಕನಿಗೆ ಎಲ್ಲಿತ್ತೋ ಅದು ಇಷ್ಟು ದಿನ ಅನ್ನುವಂತೆ ದುಃಖ ಉಕ್ಕುಕ್ಕಿ ಬಂದು ‘ಅದು ಅದು ನನಗೆ ಸಾಯ್ಲಿ ಅದು ನನಗೆ ಗೊತ್ತೇ ಆಗಲಿಲ್ಲ, ಹ್ಯಾಗೆ ಬಂತೋ ಗೊತ್ತೇ ಆಗಲಿಲ್ಲ, ಸಾಯ್ಲಿ ಅದು’ ಎನ್ನುತ್ತ ಸುಭದ್ರಕ್ಕ ಸೊಸೆಯಿಂದ ದೃಷ್ಟಿ ತಪ್ಪಿಸುತ್ತಲೇ ಒಳಗೆ ಬಾತ್ರೂಮಿನ ಬದಿಗೆ ಓಡಿದಳು.
ಎಂದೂ ಕಣ್ಣೀರು ಹಾಕದ ಈ ಗಟ್ಟಿಗಿತ್ತಿ ಅತ್ತೆಯನ್ನು ಈ ಅವತಾರದಲ್ಲಿ ಕಂಡದ್ದೇ ಮೈತ್ರಿಗೂ ಕರುಳು ಚುರುಕ್ ಅಂತು. ಕೈಯೊಳಗಿನ ಬ್ಯಾಗನ್ನ ಅಲ್ಲೇ ಮೇಜಿನ ಮೇಲಿಟ್ಟ ಮೈತ್ರಿ, ತಾನೂ ಸುಭದ್ರಕ್ಕನ ಹಿಂದೆ ಹಿಂದೆಯೇ ಹೋಗಿ, ‘ನೀವು ತುಸು ಮಲಗಿಕೊಳ್ಳಿ, ಆ ಮೇಲೆ ಆಸ್ಪತ್ರೆಗೆ ಹೋಗುವಾ’ ಅಂದರೂ ಕೇಳದೇ ‘ಇದೊಂದು ಒಣಹಾಕಿಯೇ ಹೋಗುತ್ತೇನೆ’ ಅನ್ನುತ್ತ ತನ್ನ ವಸ್ತçವನ್ನು ಆವೇಶದಿಂದ ಕುಸುಬುತ್ತಿದ್ದ ಅತ್ತೆಯನ್ನು ಹಿಡಿದು ‘ಇಷ್ಟಕ್ಕೆಲ್ಲ ಅಷ್ಟು ತ್ರಾಸು ಯಾಕೆ ಮಾಡಿಕೊಳ್ಳುತ್ತೀರಿ? ನಡೆಯಿರಿ ನಡೆಯಿರಿ’ ಎಂದು ಹೊರಗೆ ಹೊರಡಿಸಿಕೊಂಡು ಬರುವಾಗಲೇ ಸುಭದ್ರಕ್ಕನ ಮಗ ಹಾಗೂ ಮೊಮ್ಮಗಳಿಬ್ಬರ ಹಾಜರಿಯಾಗಿತ್ತು.
ಮೊಮ್ಮಗಳು ನವಮಿ ಒಳಬರುತ್ತಲೇ ‘ಎಂಥದೋ ವಾಸನೆಯಲ್ಲ ಮಮ್ಮೀ’ ಎಂದು ಕೇಳುತ್ತಿದ್ದವಳ ಬಾಯನ್ನು ಸೊಸೆ ಮೈತ್ರಿ ಸನ್ನೆಯಲ್ಲೇ ಮುಚ್ಚಿಸಿದ್ದನ್ನು ಸುಭದ್ರಕ್ಕ ವಾರೆಗಣ್ಣಲ್ಲೇ ನೋಡಿದ್ದಳು. ಈ ಅತ್ತೆಗಿನ್ನೂ ಅಳು ಉಕ್ಕುಕ್ಕಿ ಬರುತ್ತಿದ್ದುದನ್ನು ನೋಡಿದ ಮೈತ್ರಿ, ಗಂಡನನ್ನು ನೋಡಿ ‘ಸುಮ್ಮನೇ ತ್ರಾಸು ಮಾಡಿಕೊಳ್ಳುತ್ತಾರೆ ನೋಡಿ ನೀವಾದರೂ ಸ್ವಲ್ಪ ಹೇಳಿ’ ಅನ್ನತ್ತ, ಸುಭದ್ರಕ್ಕನ ಹಾಸಿಗೆಯನ್ನೆಲ್ಲ ಝಾಡಿಸಿ ಪುನಃ ಹಾಸಿಕೊಡಲೆಂದು ಹೋದವಳಿಗೆ, ಹಾಸಿಗೆಯೆಲ್ಲ ಗಲೀಜಾಗಿದ್ದು ಕಂಡು ಕ್ಷಣ ಬೆಸ್ತು ಬಿದ್ದು, ಅತ್ತೆ ಹಾಸಿಗೆ ಮೇಲೆ ಕೂಡುವುದಕ್ಕೆ ಮೊದಲೇ ಅಲ್ಲಿದ್ದ ಚಾದರ ಬೆಡ್‌ಸೀಟನ್ನೆಲ್ಲ ಮುದ್ದೆ ಮಾಡಿ ಒಂದು ಮೂಲೆಗೆ ಎಸೆದು, ಕಪಾಟಿನಿಂದ ಹೊಸ ಚಾದರವನ್ನು ತೆಗೆದು ಹಾಸಿ ಕೊಟ್ಟಳು.
‘ಅಯ್ಯೋ ಹಾಸಿಗೆಗೂ ತಾಗಿದೆಯೇ? ಹೇಗಾಯ್ತಿದು ಅಂತಲೇ ಗೊತ್ತಾಗ್ಲಿಲ್ಲ, ಕನಸು, ಕನಸು ಬಿದ್ದ ಹಾಗಾಯ್ತು..’ ಎಂಥೇನೋ ತಡವರಿಸುತ್ತಿದ್ದವಳನ್ನು ಮಲಗಿಸುತ್ತ ಮೈತ್ರಿ ‘ಅಮ್ಮನನ್ನು ಆಸ್ಪತ್ರೆಗೆ ನೀವು ರ‍್ಕೊಂಡು ಹೋಗ್ತೀರೋ ಅಥವಾ ನಾನು ಹೋಗಲೋ?’ ಅಂತ ಗಂಡನ ಬದಿಗೆ ತಿರುಗಿ ಕೇಳುತ್ತ, ಅಲ್ಲೇ ಕೆಳ ಬಿಸಾಕಿದ ಬೆಡ್‌ಸೀಟು ಚಾದರವನ್ನು ಬಾತ್ರೂಮಿಗೆ ಹೋಗಿ ತೊಳೆಯಲೆಂದು ನೀರುಬಿಟ್ಟು ನಿಂತಳು.
ಇತ್ತ ಕಂಬನಿ ತುಂಬಿ ಮಲಗಿದ್ದ ಸುಭದ್ರಕ್ಕನಿಗೆ ಎಂಥ ಆನೆ ಬಲ ಬಂತೋ, ಎದ್ದು ¨ಚ್ಚಲಿಗೆ ಓಡಿ ಬಾಗಿಲು ದೂಡಿ ಸೊಸೆಯ ಕೈಯಿಂದ, ತನ್ನದೇ ಗಲೀಜು ಮೆತ್ತಿದ ಚಾದರ ಕಸಿದು ತಾನೇ ಸ್ವಚ್ಛಗೊಳಿಸಬೇಕೆಂದು ಹೋಗಿದ್ದವಳು ನೋಡಿದ್ದು, ಸೊಸೆ ಮೈತ್ರಿ ನೀರು ಹಾಕಿ ಹಾಕಿ ಕೈಯಲ್ಲಿ ತೊಳೆಯುತ್ತಿರುವ ದೃಶ್ಯ. ಅವಳಿಗೆ ಏನನಿಸಿತೋ ‘ನೀನು ಮುಟ್ಟ ಬೇಡ, ತಾ ನಾನು ಶೆಳಿಯುವೆ ತಾ ನೀನು ಮುಟ್ಟುವುದು ಬೇಡ ತಾ’ ಎನ್ನುತ್ತ ವೀರಾವೇಶದಿಂದ ಚಾದರ ಹಿಡಿದು ಜಗ್ಗಾಡಿ ಬಿಟ್ಟಳು. ಅಮ್ಮನ ಈ ಗಾಬರಿ ಈ ಅವಮಾನ, ಈ ಸಂಕೋಚವನ್ನು ಗಮನಿಸಿದ ವೆಂಕಟೇಶನಿಗೆ ಒಮ್ಮೆಲೇ ಅಂತಃಕರಣ ಕಲಕಿದಂತಾಯಿತು. ಹೀಗೆ ರೌದ್ರಾವತಾರ ತಾಳಿದ ಅತ್ತೆಯನ್ನು ಅನುಕರಿಸಿ ಮೈತ್ರಿ ಮೆಲ್ಲಗೆ ಒಂದೇ ಒಂದು ಮಾತು ಹೇಳಿದಳು. ‘ಬಿಡಿ ನೀವು, ನನ್ನ ಅಮ್ಮನಿಗೇ ಹೀಗಾಗಿದ್ದರೆ, ನಾನು ಸುಮ್ಮನೇ ನೋಡುತ್ತ ಕೂತಿರುತ್ತಿದ್ದೆನೇ?’
ಅಷ್ಟೇ ಹೊತ್ತಿಗೆ ಸುಭದ್ರಕ್ಕನ ಮಗ ವೆಂಕಟೇಶ ಅಲ್ಲಿಗೇ ಬಂದು ಅಮ್ಮನನ್ನು ಗದರುತ್ತ ‘ಏನಮ್ಮಾ ತಲೆ ಗಿಲೆ ಕೆಟ್ಟಿದೆಯೇನು ನಿಂಗೆ? ಇಷ್ಟು ಸಣ್ಣ ವಿಷಯಕ್ಕೆಲ್ಲ ಅತ್ತು ಕರೆಯುವಂತಹದ್ದು ಏನಾಗಿದೆ ಈಗ? ನವಮಿ ಚಿಕ್ಕವಳಿರುವಾಗ ಅವಳದೆಲ್ಲ ತೊಳೆದು ಬಳಿದು ಮಾಡಿಲ್ಲವೇ, ಹೋಗಲಿ ಬಿಡು, ಅವಳನ್ನು ಬಿಡಿಸಿ ನಾನೇ ತೊಳೆಯುತ್ತೇನೆ ಆಯಿತೇ?’ ಎನ್ನುತ್ತ ಬಕೇಟಿಗೆ ಸಾಬೂನು ಪುಡಿ ಬೆರೆಸುತ್ತ ಹೆಂಡತಿಯ ಕಿವಿಯಲ್ಲಿ, ‘ಮೊದಲು ಈ ವಾಸನೆಗೆ ಏನಾದರೂ ಮಾಡು, ಬಟ್ಟೆಗೆ ಡೆಟಾಲ್ ಹಾಕಬಹುದು, ಹೊರಗೆ ಒಳಗೆ ಎಲ್ಲೆಡೆ ಧೂಪ ಅಗರಬತ್ತಿ ಏನನ್ನಾದರೂ ಹಚ್ಚು ಹೋಗು’ ಅಂತ ಹೊರಗಟ್ಟಿದ.
ಮಗಳು ನವಮಿ ಎಂಥದೋ ಆಗಬಾರದ್ದು ನಮ್ಮ ಮನೆಯಲ್ಲಿ ಈವತ್ತು ಸಂಭವಿಸಿದೆಯೆAಬAತೆ ಬಾಯಿ ಮುಚ್ಚಿಕೊಂಡು ಯೂನಿಫಾರಂ ಬಿಚ್ಚಿ ಮನೆಯಂಗಿ ತೊಟ್ಟುಕೊಂಡು ಟೇಬಲ್ಲಿನ ಮೇಲೆ ಮುಖವಿರಿಸಿ ಹೋಂವರ್ಕನ್ನು ಚಾಲೂ ಮಾಡಿದ್ದಳು. ಏನೋ ಭಯಂಕರ ಟೆನ್ಶನ್‌ನಲ್ಲಿರುವಂತೆ ಕಂಡ ತನ್ನ ಅಜ್ಜಿಯ ಮುಖವನ್ನು ನೋಡಿ ಅವಳಿಗೂ ಪಾಪ ಅನ್ನಿಸಿ ಒಮ್ಮೆಲೇ ಮಾತಾಡಿಸಲು ಮನಸ್ಸು ಬರಲಿಲ್ಲ.
ಸುಭದ್ರಕ್ಕನೇ ಹಗೂರಕ್ಕೆ ಮೊಮ್ಮಗಳ ಬಳಿ ಬಂದು ನಿಂತು ‘ಕೆಟ್ಟ ವಾಸನೆಯಲ್ಲವೇನೆ ಮರೀ?’ ಅಂತ ಕೇಳಿದ್ದಕ್ಕೆ ಹ್ಞು ಅನ್ನಬೇಕೋ ಉಹ್ಞು ಅನ್ನಬೇಕೋ ತಿಳಿಯದೇ, ಅಪ್ಪ ಅಮ್ಮನ ಹಾಗೇ ಎಲ್ಲ ಬಲ್ಲವಳಂತೆ ‘ಎಲ್ಲಜ್ಜಿ? ಎಂಥದು? ಏನೂ ಇಲ್ಲಲ್ಲ’ ಅಂತ ಸುಳ್ಳು ಸುಳ್ಳೇ ಬಡಬಡಿಸಿದ್ದು ಕೇಳಿ, ಸುಭದ್ರಕ್ಕನಿಗೆ ಎಲ್ಲಿತ್ತೋ ತುಂಟ ನಗುವೊಂದು ಉಕ್ಕಿ ಬಂತು.
ಧೂಪದ ತಟ್ಟೆ ಹಿಡಿದು ಎಲ್ಲ ಕೋಣೆಯಲ್ಲೂ ಹೊಕ್ಕಿ ಹೊರಬರುತ್ತಿದ್ದ ಸೊಸೆಯ ಕಡೆ ತಿರುಗಿ ‘ಆಸ್ಪತ್ರೆ ಗೀಸ್ಪತ್ರೆ ಏನೂ ಬೇಡವೇ, ಈಗ ಆರಾಮಾಗಿದೆ’ ಎಂದಳು. ವೆಂಕಟೇಶ ಬೆಡ್‌ಸೀಟು ಚಾದರವನ್ನೆಲ್ಲ ಹೊರ ಒಯ್ದು ನುರಿಯಾಗಿ ಹಿಂಡಿ ಹಿಂಡಿ ಗ್ಯಾಲರಿಯ ಮೇಲೆ ಒಣಗಿಸುತ್ತಿದ್ದವ, ಒಮ್ಮೆಲೇ ಮೈತ್ರಿಯನ್ನು ದೊಡ್ಡ ಧ್ವನಿಯಲ್ಲಿ ಕರೆದು ‘ಚಹ ನೀನು ಮಾಡುತ್ತಿಯೋ ಅಥವಾ ನಾನೇ ಮಾಡಲೋ’ ಅಂತ ಕೀಟಲೆ ಮಾಡಿದ. ಅದನ್ನು ಕೇಳಿದ ನವಮಿ ಒಮ್ಮೆಲೇ ತಲೆಯೆತ್ತಿ ‘ಚಹವನ್ನು ನೀನೇ ಮಾಡು ಪಪ್ಪ, ಯಾಲಕ್ಕಿ ಹಾಕಿ ಹಾಲಿನಲ್ಲೇ ರುಚಿಯಾಗಿ ಮಾಡುತ್ತಿ’ ಅಂದಳು.
ಇಷ್ಟು ಹೊತ್ತಿನ ಆತಂಕ ಅಸಹನೆ ತಲ್ಲಣಗಳೆಲ್ಲ ಕರಗಿ ಸೊಸೆಯ ಕೈಯಿಂದ ಸೂಸುತ್ತಿದ್ದ ಪರಿಮಳದ ಧೂಪದೊಂದಿಗೆ ಸೇರಿ ಎಲ್ಲೆಡೆ ಹರಡಿ, ತನ್ನ ಒಳ ಮನಸ್ಸನ್ನೂ ಸಹ ಶುದ್ಧಿಗೊಳಿಸಿಕೊಳ್ಳುತ್ತ ಇದ್ದಲ್ಲೇ ಉಲ್ಲಸಿತಳಾದಳು ಸುಭದ್ರಕ್ಕ. ಸಂಜೆಯ ನಸುಗತ್ತಲಲ್ಲಿ ಮೈತ್ರಿ ಹಚ್ಚಿದ ವಿದ್ಯುದ್ದೀಪ ಸಂಭ್ರಮದಲ್ಲೇ ಬೆಳಗತೊಡಗಿತು. ಆ ಬೆಳಕಿನ ಪ್ರಕಾಶದಲ್ಲೇ ಸುಭದ್ರಕ್ಕ, ಸಂಬAಧಗಳ ಬೆಳಕನ್ನು ಎಂದಿಲ್ಲದ ಮೌನದಿಂದ ಆಸ್ವಾಧಿಸತೊಡಗಿದಳು.
(ತಿಂಗಳು ಮಾಸಿಕ- ಮೊದಲ ಸಂಚಿಕೆ)

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles