ಹೊಸ್ತಿಲು ತೊಳೆದ ನೀರು (ಸುನಂದಾ ಕಡಮೆ ಕಥೆ)

ಹೊಸ್ತಿಲು ತೊಳೆದ ನೀರು (ಸುನಂದಾ ಕಡಮೆ ಕಥೆ)

ಆ ಮುಂಜಾನೆಯ ಇಡ್ಲಿ ಸಾಂಬಾರಿನ ಸರಬರಾಜು ಮುಗಿದ ನಂತರ ತನ್ನ ಗಂಡನ ಬಳಿ ತಿರುಗಿ ಕೂತ; ಮೂನ್ನೂರೈವತ್ತು ದಿನವೂ ಹದವಾಗಿ ಮಂಡಿ ನೋವಿರುವ ಶ್ರೀಮತಿ ತೆಳ್ಳಾರೆಯವರು ‘ಇವತ್ತೇನೂ ನಿಮ್ ಹಟಾ ತಕ್ಕೊಂಡು ಕೂಡಬ್ಯಾಡ್ರಿ, ವಾದಾ ವಿವಾದಾ ಮಾಡಾಕ ಹೋಗಬ್ಯಾಡ್ರೀ, ನೀವ್ ಜೀವನ ಪರ್ಯಂತ ನೆಗಡೀ ಜ್ವರಾ ಬಂದೋರಿಗೆ ಗುಳಗೀ ಇಂಜೆಕ್ಷನ್ ಕೊಟಕೋತ ಕೂತೋರು, ನಿಮಗೇನ್ ಗೊತ್ತಾಕ್ಕೇತಿ ಆ ಎಂಜಿನಿಯರ್ ಕೆಲಸದ ವಿಷ್ಯಾ ಅಂತೇನಿ ? ಅಂವಾ ಈ ಕಾಲನಿಯೊಳಗ ಹನ್ನೊಂದ್ ಮನೀ ಕಟ್ಸಾö್ಯನಂತ, ಎಲ್ಲ ಅವರವರ ಮನಿಯೊಳಗ ಅವರು ಆರಾಮ ಇಲ್ಲೆನು? ನಮ್ಮದ್ ಕಟ್ಟೂ ಮುಂದನ ಬಡಕೊಂಡೆ, ವಾಸ್ತು ರ‍್ಲಿ ವಾಸ್ತು ಅಂತ, ನನ್ ಮಾತ್ ಕೇಳಿದ್ರೇನ ನೀವ್? ಈಗ ಬಾಯ್ ಮುಚ್ಕೊಂಡ್ ಕೂಡ್ರಿ, ಎಲ್ಲಾ ನಾ ಹೇಳಿ ಸರೀ ಮಾಡಸ್ತೇನಿ, ತಿಳೀತಿಲ್ಲೊ ?’ ಅನ್ನುತ್ತ ಗಂಡನನ್ನು ಜಬರಿಸಿದವರೇ; ಇಡ್ಲಿ ತಿಂದು ಮುಗಿಸಿದ ಪ್ಲೇಟನ್ನೆತ್ತಿಕೊಂಡು ಒಳಗೆದ್ದು ನಡೆದರು.
ಹತ್ತು ವರ್ಷಗಳ ಹಿಂದೆ ಇಡೀ ಕಾಲನಿಯಲ್ಲಿ ಒಂದೂ ಮನೆ ಏಳದ ಸಂದರ್ಭದಲ್ಲಿ ಕಟ್ಟಿಸಿದ ಮನೆ ಇವರದು. ಎದುರು ಹಾದು ಹೋಗುವವರು ಇನ್ನೊಮ್ಮೆ ಓದುವಂತಿರುವ ಈ ಮನೆಯ ಹೆಸರು ‘ಹಿತ’. ಈ ಮನೆಯನ್ನು ಕಟ್ಟಿಸಿಕೊಟ್ಟವರು ಹುಬ್ಬಳ್ಳಿಯ ಪ್ರಸಿದ್ಧ ಗುತ್ತಿಗೆದಾರ ಕಂ ಎಂಜಿನಿಯರ್ ಸಿ.ಡಿ ಹಿರೇಮಠರು. ಮನೆಯ ಯಜಮಾನರಾದ ಡಾ. ತೆಳ್ಳಾರೆಯವರು, ಆರೋಗ್ಯಾಧಿಕಾರಿಯಾಗಿ ಈಗ ನಿವೃತ್ತರಾಗಿದ್ದಾರೆ. ಇವರು ಮೂಲದಲ್ಲಿ ರಾಮದುರ್ಗದ ಕಡೆಯವರು. ಅವರ ಯಜಮಾನತಿ ಶ್ರೀಮತಿ ತೆಳ್ಳಾರೆಯವರು ತಮ್ಮ ಸಾಫ್ಟವೇರ್ ಗುಂಗಿನ ಮಗ ಕುಮಾರ ನ ಹತ್ತಿರ ಅಂದು ಬೆಳಿಗ್ಗೆಯೇ ಎಂಜಿನಿಯರ್ ಸಿ.ಡಿ ಹಿರೇಮಠರಿಗೆ ಫೋನು ಮಾಡಿಸಿ, ಆದಷ್ಟು ಬೇಗ ಅಂದರೆ ಹತ್ತು ಗಂಟೆಗೆಲ್ಲ ತಮ್ಮ ಮನೆ ‘ಹಿತ’ ಕ್ಕೆ ಬಂದು ಭೇಟಿಯಾಗಲು ಹೇಳಿಸಿದ ಕಾರಣ ಮಾತ್ರ ಅಂದು ಡಾ. ತೆಳ್ಳಾರೆಯವರಿಗೆ ಸ್ವಲ್ಪ ಕಸಿವಿಸಿ ತರುವಂಥದ್ದು.
ಹೆAಡತಿಯ ಮಾತಿಗಿಂತ ಹೆಚ್ಚಿನ ತೂಕದ ಮೌನದಿಂದ ಎದ್ದು ನಡೆದು, ಹೊರ ಕಟ್ಟೆಯಲ್ಲಿ ಹಾಕಿದ ಬೆತ್ತದ ಜೋಕಾಲಿಯಲ್ಲಿ ಇಂಗ್ಲೀಷ್ ಪತ್ರಿಕೆಯೊಂದನ್ನು ಹಿಡಿದುಕೊಂಡು ಮೂರನೇ ಬಾರಿ ತಿರುಗಿಸಿ ಹಾಕುತ್ತ ಕಾಲಾಡಿಸುತ್ತ ಕೂತರು ಡಾ. ತೆಳ್ಳಾರೆ. ಅವರು ಲೇಔಟಿನವರಿಗೆಲ್ಲ ಹೇಗೋ ಮನೆಯಲ್ಲೂ ಹಾಗೇ ಮಿತಭಾಷಿ. ನೋಡಲು ಅಡ್ಡೆಸರಿಗೆ ತಕ್ಕ ಹಾಗೆ ತೆಳ್ಳಗೆ ಎತ್ತರಕ್ಕಿದ್ದರು. ಸದಾ ಕನ್ನಡಕ ತೊಡುತ್ತಿದ್ದರು. ಅಲ್ಲೊಂದು ಇಲ್ಲೊಂದು ಬೆಳ್ಳಗಾದ ಕಪ್ಪು ತಲೆಗೂದಲನ್ನು ಎಣ್ಣೆ ಹಾಕಿ ಕ್ರಾಪ್ ತೆಗೆದು ಬಾಚಿಕೊಳ್ಳುತ್ತಿದ್ದರು. ದಿನವೂ ನೀಟಾಗಿ ಮೀಸೆಯನ್ನೂ ಬಿಡದೇ ಶೇವ್ ಮಾಡಿಕೊಳ್ಳುತ್ತಿದ್ದರು. ಯಾವಾಗಲೂ ಶುಭ್ರ ಅಂಗಿ ಬಿಳಿಯ ಲುಂಗಿ ತೊಡುತ್ತಿದ್ದರು. ಮನೆಯೊಳಗೂ ನೀಲಿ ಬೆಲ್ಟಿನ ಬಿಳಿಯ ಹವಾಯಿ ಚಪ್ಪಲಿ ತೊಡುತ್ತಿದ್ದರು. ಬೆಳಗಿನ ಐದೂವರೆಗೆಲ್ಲ ಎದ್ದು ಹಲ್ಲು ಗಿಲ್ಲು ತಿಕ್ಕಿ ಶುಚಿಗೊಂಡು, ಒಂದು ತಂಬಿಗೆ ಬೆಚ್ಚಗೆ ನೀರು ಕಾಸಿ ಕುಡಿದು, ಮನೆಯ ಹಿಂಭಾಗದಲ್ಲಿ ಈಗಷ್ಟೇ ಬೆಳೆಯುತ್ತಿರುವ ಹೊಸ ಲೇಔಟಿನ ತನಕ ನಡೆದು ಅಲ್ಲಲ್ಲೇ ಸುತ್ತು ಹಾಕಿ ಬರೋಬ್ಬರಿ ಒಂದು ತಾಸು ವಾಕಿಂಗ್ ಮುಗಿಸಿ ಬಂದು, ತಾವೇ ಗ್ರೀನ್ ಟೀ ಮಾಡಿಕೊಂಡು ಎರಡು ಬ್ರಿಟಾನಿಯಾ ಮಾರಿ ಬಿಸ್ಕೀಟಿನ ಜೊತೆ ಹೊರಬರುವಷ್ಟರಲ್ಲಿ ಅಂದಿನ ಪತ್ರಿಕೆ ಬಂದು ಬಾಗಿಲಲ್ಲಿ ಬಿದ್ದಿರುತ್ತಿತ್ತು. ನಂತರ ಹೆಂಡತಿ ನಿಧಾನ ಮೈಕೈ ಮುರಿಯುತ್ತ ‘ಅಯ್ಯೋ ಅಮ್ಮಾ’ ಎನ್ನುತ್ತ ತಮ್ಮ ಸ್ಥೂಲ ಕಾಯದೊಡನೆ ಎದ್ದು ಇಡ್ಲಿ ದೋಸೆಯೋ ಅವಲಕ್ಕಿ ಉಪ್ಪಿಟ್ಟೋ ಅಥವಾ ಥಾಲಿಪಟ್ಟೋ ಹೀಗೆ ದಿನಕ್ಕೊಂದು ತರಹದ ತಿಂಡಿ ತಯಾರು ಮಾಡುವತನಕ ಹೊರಕಟ್ಟೆಯಲ್ಲಿ ಆರಾಮಾಗಿ ಕೂತು ಪತ್ರಿಕೆ ತಿರುವಿ ಹಾಕುತ್ತಿದ್ದರು.
ಆಗಲೇ ಅಲ್ಲಿ ಒಂದು ತಮಾಷೆ ನಡೆಯುತ್ತಿತ್ತು. ತಿಂಡಿ ಮಾಡಲು ಅಡಿಗೆ ಖೋಲಿಗೆ ಹೋಗುವ ಶ್ರೀಮತಿ ತೆಳ್ಳಾರೆ ಅಂದಿನ ಭವಿಷ್ಯ ಕಾರ್ಯಕ್ರಮವನ್ನು ಕೇಳುವ ತವಕದಿಂದ ಟೀವಿ ಹಚ್ಚಿ ಆ ಲೈನಿನ ಎಲ್ಲ ಮನೆಗೂ ಕೇಳುವಂತೆ ದೊಡ್ಡ
ವಾಲ್ಯೂಮ್ ಇಟ್ಟು ಒಳಹೋಗುತ್ತಿದ್ದರು. ಅದು ರಸ್ತೆಯಲ್ಲಿ ಶಾಲೆ ಕಾಲೇಜುಗಳಿಗೋ ಅಂಗಡಿಮುAಗಟ್ಟುಗಳಿಗೋ ಹೋಗುತ್ತಿರುವ ಜನರಿಗೆಲ್ಲ ತಮಾಷೆ ಎನ್ನಿಸುತ್ತಿತ್ತು. ಅವರೆಲ್ಲ ಹೊರ ಕೂತ ಈ ತೆಳ್ಳಾರೆಯವರನ್ನೇ ಒಬ್ಬ ವಿದೂಷಕನೆಂಬAತೆ ನೋಡಿ ಮುಸಿ ಮುಸಿ ನಗುತ್ತ ಹಾದು ಹೋಗುತ್ತಿದ್ದರು. ಅದು ಅವಮಾನವೆನ್ನಿಸಿದ ತೆಳ್ಳಾರೆಯವರು ನಿಧಾನ ಎದ್ದು ಒಳಹೋಗಿ ಟೀವಿ ವಾಲ್ಯೂಮ್ ಕಡಿಮೆ ಮಾಡಿ ಮುಂಬಾಗಿಲು ಎಳೆದುಕೊಂಡು ಪುನಃ ಜೋಕಾಲಿಯಲ್ಲಿ ಕೂಡುತ್ತಿದ್ದರು. ತನ್ನ ಅಡಿಗೆ ಖೋಲಿಯ ತನಕ ಭವಿಷ್ಯವಾಣಿ ಕೇಳುವುದಿಲ್ಲವೆಂಬ ಅಸಮಾಧಾನದಲ್ಲಿ ಗೊಣಗುತ್ತ ಕಾಲೆಳೆಯುತ್ತ ಹೊರಬಂದ ಶ್ರೀಮತಿ ತೆಳ್ಳಾರೆ ಟೀವಿ ವಾಲ್ಯೂಮ್ ಹೆಚ್ಚು ಮಾಡಿಟ್ಟು ಹೋಗುತ್ತಿದ್ದರು. ತೆಳ್ಳಾರೆಯವರು ದಡಕ್ಕನೆ ಎದ್ದು ಒಳಹೋಗಿ ಪುನಃ ಸಣ್ಣ ಮಾಡಿ ಬರುತ್ತಿದ್ದರು. ಆಗ ಶ್ರೀಮತಿಯವರು ಮತ್ತೆ ಬಂದು ದೊಡ್ಡ ಮಾಡುತ್ತಿದ್ದರು. ಈ ರಗಳೆಯಲ್ಲೇ ಟಿವಿಯಲ್ಲಿ ಬರುತ್ತಿರುವ ಆ ಅರ್ಧ ಗಂಟೆಯ ಭವಿಷ್ಯ ಕಾರ್ಯಕ್ರಮ ಮುಗಿದೇ ಹೋಗಿರುತ್ತಿತ್ತು.
ಈಗ ತಿಂಡಿ ತಿನ್ನುವ ಸಮಯ. ಟೀವಿಯಲ್ಲಿ ಇದೇ ಹೊತ್ತಿಗೆ ಮನೆ ಕಟ್ಟಿಸುವವರಿಗೆ ಹಾಗೂ ಅಲ್ಲಿ ಸಾಮಾನು ಹೊಂದಿಸುವವರಿಗೆ ವಾಸ್ತು ಹೇಳುವ ಹೊತ್ತು. ಟೀವಿ ವಾಲ್ಯೂಮ್ ಚೂರು ಕಮ್ಮಿ. ಯಾಕೆಂದರೆ ಶ್ರೀಮತಿ ತೆಳ್ಳಾರೆಯವರ ತಿಂಡಿಯ ಪ್ರೊಡಕ್ಷನ್ ಸಮಯ ಮುಗಿದು ಈಗ ಸರಬರಾಜಿನ ಅವಸರ. ಅದು ಹಾಲಿನಲ್ಲೇ ನಡೆಯುವ ಕಾರಣಕ್ಕೆ ವಾಲ್ಯೂಮು ಬೀದಿ ವರೆಗೂ ಕೇಳಬೇಕಾಗಿಲ್ಲ. ಅಪ್ಪಿ ತಪ್ಪಿ ನಮ್ಮ ಡಾ. ತೆಳ್ಳಾರೆ ರಿಮೂಟ್ ತೆಕ್ಕೊಂಡು ತಮಗಿಷ್ಟದ ಎಂಡಿ ಗಿಂಡಿ ಅಂತ ಚಾನಲ್ ಬದಲಾಯಿಸಿದರೋ ಅಂದು ಮನೆ ರಣರಂಗ. ಬೆಂಗಳೂರಿನ ಪ್ರತಿಷ್ಠಿತ ಕಂಪನಿಯೊAದರಲ್ಲಿ ಎಂಬತ್ತು ಸಾವಿರ ಸಂಬಳದಲ್ಲಿದ್ದ ತನ್ನ ಮಗ ಕುಮಾರ ತೆಳ್ಳಾರೆ, ಅಲ್ಲಿಂದ ಇದ್ದಕ್ಕಿದ್ದಂತೆ ಒಂದು ದಿನ ನೌಕರಿ ಬಿಟ್ಟು ಓಡಿ ಮನೆಗೆ ಬಂದು, ಇಲ್ಲಿಯ ಐಟಿ ಪಾರ್ಕಿನಲ್ಲಿ ಹೊಸದಾಗಿ ಶುರುವಾದ ಕಂಪನಿಯಲ್ಲಿ ಜುಜುಬಿ ಮೂವತ್ತು ಸಾವಿರ ಸಂಬಳಕ್ಕೆ ಸೇರಿಕೊಂಡ ಕಾರಣ ತಮ್ಮ ಮನೆಯ ವಾಸ್ತು ಸರಿಯಿಲ್ಲದಿರುವುದೇ, ಅಂತ ಶ್ರೀಮತಿ ತೆಳ್ಳಾರೆ ನಂಬಿಕೊAಡುಬಿಟ್ಟಿದ್ದೇ ಗಂಡ ಹೆಂಡತಿಯರ ನಡುವಿನ ಇತ್ತೀಚೆಯ ಸಣ್ಣ ವಿರಸಕ್ಕೆ ಕಾರಣವಾಗಿತ್ತು.
‘ಅಂವಗ ನೀ ಮಾಡೂ ಇಡ್ಲಿ ಜೊತಿಗಿನ ಅದ್ಭುತ ಸಾಂಬಾರ ಸರ‍್ತೆತಿ, ಟೊಮೇಟೊ ರಸಂ ಸರ‍್ತೇತಿ, ಉದ್ದಿನ ಸಂಡಗಿ, ಗುರೆಳ್ಳು ತುಂಬಿದ ಬದನೀ ಎಣಗಾಯಿ, ನಿನ್ನ ತೆಳುತೆಳು ಮಿದುಮಿದು ವಿಜಾಪುರ ಜೋಳದ ಭಕ್ರಿ ಬೇಕಾಕ್ಕಾವು, ಅವೆಲ್ಲ ಅವನಿಗೆಲ್ ಸಿಗಬೇಕಲ್ಲಿ? ಅದಕ್ಕಂತನ ಆ ಊರ್ ಬಿಟ್ಟು ನಿನ್ನ ಮಡಿಲಿನ್ಯಾಗ ಬಂದಾನ, ಮೊದಲು ಅವನನ್ ಅಕ್ಕರೀ ತೋರಿ ಸ್ವೀಕರಸು’ ಅಂತ ಡಾ. ತೆಳ್ಳಾರೆಯವರು ತಮ್ಮ ಕುಮಾರ ಬೆಂಗಳೂರು ಬಿಟ್ಟು ಬಂದ ಒಂದನೇ ವಾರದಲ್ಲೇ ಹೆಂಡತಿಯನ್ನು ಕೂಡಿಸಿ ಬುದ್ಧಿ ಹೇಳಲು ನೋಡಿದ್ದರು. ಜಪ್ಪಯ್ಯ ಅಂದರೂ ಶ್ರೀಮತಿ ತೆಳ್ಳಾರೆ ಆ ವಾಸ್ತವವನ್ನು ಒಪ್ಪಿಕೊಳ್ಳಲು ತಯಾರಾಗಲಿಲ್ಲ. ‘ಏನ್ ಹೇಳ್ತಿರಿ ನೀವು? ಅದು ಎಂಥಾ ಚೊಲೋ ಕಂಪನಿ, ಮುಂದ ಒಂದ ವರ್ಷದಾಗ ಫಾರಿನ್ ಹೋಗೂ ಚಾನ್ಸ ಕಳ್ಕೊಂಡ್ ಬಂದ್ ಕುಂತಾನ ಮುಖೇಡಿ, ಅದ ಕಂಪನೀ ಒಳಗಿದ್ ನಮ್ ಅಕ್ಕನ್ ಮಗಾ ಚಂದ್ರು ಲಂಡನ್ನಾಗ ಮೂರ್ ವರ್ಷಾ ಇದ್ದ್ ಬರಲಿಲ್ಲೆನ ? ಈಗ ಮೂರ ಲಕ್ಷಾ ಸಂಬಳಾ ಅಂತ ಅಂವಗ, ಇಂವಗ ಏನ್ ಆಗಿತ್ ಧಾಡಿ? ಸಾಂಬಾರAತ, ಸುಡಗಾಡ ಭಕ್ರೀ ಅಂತ, ಹುಣಸೀ ಬೀಜಾ ಅಂತ, ನೀವಂತೂ ಉದ್ದಾರ ಆಗಲಿಲ್ಲ, ಅಂವಗರ ಉದ್ದಾರ್ ಆಗಕ ಬಿಡ್ರಿ, ನನಗ ಬುದ್ಧೀ ಹೇಳೂದ್ ಬಿಟ್ಟು ನೀವ್ ಗಂಡಸರಾದ್ರ, ನಿಮ್ ಮಗಗ ಚೂರು ಬುದ್ಧೀ ಹೇಳಿ ಕಳಸ್ರೀ ನೋಡೂಣು ಅತ್ಲಾಗ’ ಎನ್ನುತ್ತ ಶ್ರೀಮತಿ ತೆಳ್ಳಾರೆ ಗಂಡನ ಮಾತನ್ನು ಕಿಂಚಿತ್ತೂ ಒಳಗೆ ತೊಗೊಳ್ಳದೇ, ಮೂವತ್ತೆöÊದು ವರ್ಷ ಪ್ರಾಮಾಣಿಕರಾಗಿ ಜಿಲ್ಲೆಯ ಅನೇಕ ಹಳ್ಳಿಗಳ ಆರೋಗ್ಯ ಕೇಂದ್ರಗಳಲ್ಲಿ, ಬಡವರು ಅಂತ ಕಂಡವರ ಹತ್ತಿರ ಹಣ ತೊಗೊಳ್ಳದೇ ಉಚಿತ ಸೇವೆ ನೀಡಿ ಬಡರೋಗಿಗಳ ದೇವರಾಗಿದ್ದ ನಮ್ಮ ಡಾ. ತೆಳ್ಳಾರೆಯವರನ್ನು ಬೆಂಡೆತ್ತಿದ್ದರು.
ಅಷ್ಟೇ ಹೊತ್ತಿಗೆ, ಕಪ್ಪು ಗಾಗಲ್ ಕಣ್ಣಿಗೆ ತೊಟ್ಟ, ಶರಟಿನ ಬಟನ್ ಗಳು ತಮ್ಮ ಹೊಟ್ಟೆಯ ಭಾಗದಲ್ಲಷ್ಟೇ ಬಿಗಿಯಾಗಿ ಕೂತು ಬಿರಿದಂತೆ ಕಾಣುವ, ಎಂಜಿನಿಯರ್ ಸಿ.ಡಿ ಹಿರೇಮಠರು ತಮ್ಮ ಡಗ್‌ಡಗ್‌ಡಗ್ ಹಳೇ ಮೋಟಾರ್ ಬೈಕ್ ಮನೆಯೆದುರಿನ ಮರದ ನೆರಳಲ್ಲಿ ಸ್ಟಾö್ಯಂಡು ಹಚ್ಚುತ್ತಿರುವಾಗಲೇ ಕಿಟಕಿಯಿಂದ ನೋಡಿದ ಶ್ರೀಮತಿ ತೆಳ್ಳಾರೆ ‘ಬಂದ್ರು ಬಂದ್ರು’ ಅಂತ ಟೀಪಾಯ್ ಮೇಲಿನ ಹಳೆಯ ಪೇಪರನ್ನು ಜೋಡಿಸುತ್ತ ಉತ್ಸಾಹ ತುಂಬಿಕೊAಡರು. ಜೋಕಾಲಿಯಲ್ಲಿ ಕೂತ ಡಾ. ತೆಳ್ಳಾರೆಯವರು ಪತ್ರಿಕೆ ಹಿಡಿದೇ ಎದ್ದು ನಿಂತು ‘ನಮಸ್ಕರ‍್ರೀ ಹಿರೇಮಠರ’ ಅಂದದ್ದು ಕೇಳಿ ಶ್ರೀಮತಿ ತೆಳ್ಳಾರೆ ‘ನೀವ್ ಒಳಗ ರ‍್ರಿ ಮೊದ್ಲ, ಅಲ್ಲೇ ನಿಂತ ನಮಸ್ಕಾರ ಹೇಳೂದು ನೋಡ್ರೀ ಅವರು? ರ‍್ರಿ ರ‍್ರಿ’ ಅನ್ನುತ್ತ ಹಿರೇಮಠರನ್ನು ಶ್ರೀಮತಿ ತೆಳ್ಳಾರೆಯವರು ಸಂಭ್ರಮದಿAದ ತಾವೇ ಒಳಕರೆದು ಕೂಡಿಸಿದರು. ಹಿರೇಮಠರು ‘ಅಕ್ಕಾರ, ನಿಮ್ ಮಗಾ ಫೋನ್ ಮಾಡ್ದಾಗ ನಾನ್ ಈ ಕಡೀನ ಹೊಂಟಿದ್ದೆ, ಇಲ್ಲೇ ಹಳ್ಳದ ಕಡೀ ಒಂದ್ ಮನೀ ಫಿನಿಶಿಂಗ್ ಹಂತದಾಗ ಐತ್ರಿ, ಚೊಲೋನ ಆತು, ಏನ್ ಕೆಲ್ಸಾ ಅಂತ ಕೇಳಿದರ, ನಿಮ್ ಮಗಾ ಅದೇನೋ ಸರೀ ಹೇಳ್ಳೇ ಇಲ್ಲ ನೋಡ್ರಿ, ಯಾಕ ? ಈ ಮನೀ ಮ್ಯಾಗ್ ಫಸ್ಟ್ ಫ್ಲೋರ್ ಏನರ ಕಟ್ಟೂ ವಿಚಾರ ಐತನ ಸರ?’ ಅನ್ನುತ್ತ ಸಿ.ಡಿ ಹಿರೇಮಠರು ಡಾ. ತೆಳ್ಳಾರೆಯವರ ಮುಖ ನೋಡುತ್ತಿದ್ದಾಗ, ಅವರು ತನಗೆ ಇದ್ಯಾವುದೂ ಸಂಬAಧವೇ ಇಲ್ಲವೆಂಬAತೆ ತಮ್ಮ ಕನ್ನಡಕದ ಕಣ್ಣನ್ನು ಪತ್ರಿಕೆಯಲ್ಲಿ ನೆಟ್ಟು ನಾಲ್ಕನೇ ಬಾರಿ ಅದನ್ನು ತಿರುವಿ ಹಾಕುತ್ತಿದ್ದರು.
ಆಗ ಶ್ರೀಮತಿ ತೆಳ್ಳಾರೆಯವರೇ ‘ನೋಡ್ರೀ ಹಿರೇಮಠರ, ಹೀಂಗ ಕುಂದರತಾರ, ಮನೀಯೊಳಗ ಸುಖಾ ಇಲ್ಲಾ ಶಾಂತಿ ಇಲ್ಲಾ, ಮಗಾ ನೋಡೀದ್ರ, ಬೆಂಗಳೂರ್‌ನಾಗ್ ಸಿಕ್ಕಿದ ಚೊಲೋ ನೌಕರಿ ಬಿಟ್ ಮನೀಗ್ ಬಂದ್ ಕುಂತಾನ, ನನಗಂತೂ ರಾತ್ರಿಯೆಲ್ಲಾ ಕೆಟ್ ಕೆಟ್ ಕನಸ ಬೀಳ್ತಾವು, ನಿನ್ನೆ ಟೀವಿವೊಳಗ, ಮಗಾ ನೌಕರೀ ಬಿಡಾಕ ಕಾರಣಾನ ಮನೀ ವಾಸ್ತು ಸರಿ ಇಲ್ಲದ್ದು ಅಂದ್ರು, ಮನೀ ಚಚ್ಚೌಕ ಶೇಪ್‌ನಾಗ ಇರಬೇಕಂತ್ರಿ, ನಮದು ಅಲ್ಲೊಂದಿಷ್ಟ ಒಳಗ ಬಂದAಗ ಇಲ್ಲೊಂದಿಷ್ಟ ಹೊರಕ್ಕ ಹೋದಂಗ ಅನಸ್ತು, ಹೀಂಗ ಬಾರಾ ಭಾನಗಡೀ ಮಾಡಿ ನೀವ ಕಟ್ ಕೊಟ್ಟೋರು, ನಿಮ್ನ ಕರದು ಕೇಳಾಣ ಅಂತ ಈಗ ಕರಸಿದ್ದು’ ಅನ್ನುತ್ತಿದ್ದ ಶ್ರೀಮತಿ ತೆಳ್ಳಾರೆಯವರ ಮಾತು ಕಿವಿಯ ಮೇಲೆ ಬೀಳುತ್ತಿದ್ದಂತೆ ಸಿ.ಡಿ ಹಿರೇಮಠರು ಸ್ವಲ್ಪ ರ‍್ಯಾಶ್ ಆಗಿಯೇ ‘ಹೌದ್ ಬಿಡರೀ ಅಕ್ಕಾರ, ನಂದೇನ್ ತಪ್ಪಿಲ್ರಿ ಮತ್ತ, ವಾಸ್ತು ಗೀಸ್ತು ಮಾಡಾಕ ಹೋಗಬ್ಯಾಡ್ರೀ ನನಗ ನಂಬಕೀ ಇಲ್ಲಾ ಅಂತ ನಿಮ್ ರ‍್ರ ಹೇಳಿದ್ರು, ಕೇಳ್ರೀ ಇಲ್ಲೇ ಅದಾರ, ನಾನ್ ಆವತ್ತ ಹೇಳೇನ್ರಿ ಅಕ್ಕಾರ, ಫೌಂಡೇಷನ್ ಚೌಕ ತೊಗೋಳೂಣ್ರಿ ಅಂತ, ಬ್ಯಾಡಾ ಗೇಟಿನ ಮುಂದ ಒಂದಿಷ್ಟು ಒಳಗ ತೊಗೋರಿ, ನನ್ನ ಮಗಾ ಕಾರ್ ತೊಗೊಂಡ್ರ ರಸ್ತೀ ಮ್ಯಾಗ್ ನಿಂದರಸಬೇಕಾಕ್ಕೇತಿ, ಅಂದೋರು ನೀವ ಹೌದಿಲ್ರೀ ಸರ? ’ ಎನ್ನುತ್ತ ದೊಡ್ಡದಾಗಿ ಅತ್ತಿತ್ತ ಕೈ ಆಡಿಸುತ್ತ ದೊಡ್ಡ ದನಿಯಲ್ಲಿ ಹೇಳಿಬಿಟ್ಟರು. ಆಗ ಶ್ರೀಮತಿ ತೆಳ್ಳಾರೆಯವರೇ ‘ಆಗಿದ್ ಆಗ್ ಹೋತು ಹಿರೇಮಠರ, ಈಗ್ ಏನರ ಮಾಡಿ ಆ ಜಗಾ ಒಳಗ ತೊಗೊಂಡು ನಮಗ ಚೌಕ ಮನೀ ಮಾಡಿಕೊಡ್ರಿ ಸಾಕ್’ ಅನ್ನುತ್ತ ದುಂಬಾಲು ಬಿದ್ದರು.
ಸಿ.ಡಿ ಹಿರೇಮಠರು ತಮ್ಮ ಪ್ಯಾಂಟಿನ ಕಿಸೆಯಲ್ಲಿ ಎರಡೂ ಕಡೆ ಎರಡು ಕೈ ಹಾಕಿಕೊಂಡು, ನಿಧಾನ ಎದ್ದು ಹೊರಹೋಗಿ ನಿಂತು ಅಲ್ಲಿ ಇಲ್ಲಿ ಮನೆ ಎದುರಿನ ಕಟ್ಟೆ ಫೌಂಡೇಷನ್ನು ಕಿಟಕಿ ಮೆಟ್ಟಲು ನೋಡುತ್ತ ಯೋಚಿಸುತ್ತ, ‘ಈ ಕಡೆ ಬಿಟ್ಟಿಟ್ಟ ಆರೂ ಬಾಯ್ ಆರು ಅಡಿ ಜಗಾನ ಒಳಗ ಮಾಡಿ ಮನೀಗ ಹತ್ಯೆ ಫೌಂಡೇಷನ್ ಎಬ್ಬಿಸಿಬಿಡೂಣ್ರಿ, ಗೇಟಿನತನಾ ಕಟ್ಟೀನ ಹೋಗ್ಬಿಡ್ತೇತಿ, ಅಲ್ಲೇ ಮೂರ್ ಮೆಟ್ಲಾನೂ ಹಾಕೂಣು, ನೋಡಾಕ ಒಂಚೂರು ಅಸಹ್ಯ ಕಾಣ್ತೆತ್ರೀ ಮತ್ತ, ಅದ ಬೇಕಂದ್ರ ಇದು, ಇದು ಬೇಕಂದ್ರ ಅದು ಬಿಡ ಬೇಕ್ ನೋಡ್ರೀ’ ಅನ್ನುತ್ತ ತನ್ನ ವಾಸ್ತು ಸಿದ್ಧಾಂತವನ್ನು ಒಪ್ಪಿಸಿದ್ರು. ಅಷ್ಟೇ ಹೊತ್ತಿಗೆ ಭಾನುವಾರವಾದದ್ದರಿಂದ ಮನೆಯಲ್ಲೇ ಬಾಗಿಲು ಹಾಕಿಕೊಂಡು ಕೋಣೆಯಲ್ಲೇ ಲ್ಯಾಪ್ ಟಾಪಿನಲ್ಲಿ ಕೆಲಸ ಮಾಡುತ್ತಿದ್ದ ತೆಳ್ಳಾರೆಯವರ ಮಗ ಕುಮಾರ, ಕುಡಿಯುವ ನೀರಿನ ತಂಬಿಗೆ ಖಾಲಿಯಾಗಿದ್ದಕ್ಕೆ ಅದನ್ನು ತುಂಬಿಸಿಕೊAಡು ಹೋಗಲು ಹೊರಬಂದವ, ಇವರ ಮಾತುಗಳನ್ನು ಆಲಿಸಿ ತನ್ನ ತಾಯಿಯ ಜೊತೆ ಹಿರೇಮಠರನ್ನೂ ಸೇರಿಸಿಯೇ ಬೈದು ‘ಅವೆಲ್ಲಾ ಬ್ಯಾಡ ಈಗ ಸುಮ್ಮನರ‍್ರೀ, ಯಾರರ ಗೇಟ್‌ನಾಗ
ಮೆಟ್ಲಾ ಇಡ್ತಾರೆನ? ಚಂದ್ ಇದ್ದ್ ಮನೀ ಕೆಡ್ಸಕೊಂಡ್ ಕೂಡಾಕ ಮಾಡೀರನ? ಮುಂದಿನ ತಿಂಗ್ಳು ನಾ ಒಂದ್ ಕಾರ್ ತೊಗೋಳಾಕ್ ಮಾಡೇನಿ, ಗೇಟ್ ನೊಳಗ ಕಾರ್ ನಿಂದ್ರಾಕ ಜಗಾ ಇಲ್ಲಿಕ್ರ, ಲಕ್ಷದ ಹತ್ ಕಾರು, ಏನ್ ರಸ್ತೀ ಮ್ಯಾಗ ನಿಂದ್ರಸ್ಲೆನ?’ ಅನ್ನುತ್ತ ಸಣ್ಣ ಸ್ವರದ ಗುಣು ಗುಣು ಧಾಟಿಯಲ್ಲೇ ರಗಳೆ ತೆಗೆದುಬಿಟ್ಟ. ಎಲ್ಲ ಇದ್ದಲ್ಲೇ ಥಂಡು ಹೊಡೆದು ಹೋದರು. ಶ್ರೀಮತಿ ತೆಳ್ಳಾರೆಯವರು ಯಾತಕ್ಕೆ ಹೆದರದಿದ್ದರೂ ಮಗನ ಸಿಡುಕಿಗೆ ಮಾತ್ರ ಏನೂ ಉತ್ತರಿಸದೇ ಮೌನವಹಿಸಿಬಿಡುತ್ತಿದ್ದರು. ತಮ್ಮ ಗೆಳತಿಯರಿಬ್ಬರು ಹೀಗೇ ತಮ್ಮ ಸಾಫ್ಟ್ವೇರ್ ಮಗನಿಗೆ ಎದುರು ಹಾಕಿಕೊಂಡು, ಒಂದೂ ಮತ್ತೊಂದು ಮಾತಾಡಿ ಮಗನ ಜೊತೆ ವೈರತ್ವ ಕಟ್ಟಿಕೊಂಡು, ಒಂದೇ ಊರಲ್ಲಿ ಬೇರೆ ಬೇರೆ ಮನೆ ಮಾಡಿಕೊಂಡಿರುವ ಪ್ರಸಂಗವನ್ನು ಅವರು ಕಣ್ಣಾರೆ ನೋಡಿದ್ದರು.
ಕುಮಾರ ಇಷ್ಟು ಹೇಳಿ ಒಳ ಹೋದ ನಂತರ ಸಿ.ಡಿ ಹಿರೇಮಠರೇ ಬಾಯಿಬಿಟ್ಟು ‘ಮಗಾ ಹತ್ ಲಕ್ಷದ ಕಾರ್ ತೊಗೋತಾನಂತ, ಏನ್ರೀ ಅಕ್ಕಾರ, ನೀವ್ ನೋಡೀದ್ರ ಮಗನ್ ನೌಕ್ರೀನ ಸರೀ ಇಲ್ಲಂತಿರಿ?’ ಅನ್ನುತ್ತ ಸುಮ್ಮನೆ ಎದ್ದು ನಗುತ್ತ ‘ಮಗಾ ಇನ್ನೊಂದ್ ಹೊಸಾ ಮನೀ ಕಟ್ಟಸ್ತಾನಲ್ಲ, ಆವಾಗ ಎಲ್ಲಾ ವಾಸ್ತು ಪ್ರಕಾರ ನ ಪ್ಲಾನ್ ಹಾಕ್ ಕೊಡ್ತೇನ್ ತೊಗೊಳ್ರೀ’ ಎನ್ನುತ್ತ ಎದ್ದು ಹೊರನಡೆಯಲು ನೋಡಿದರು. ಆಗ ಡಾ. ತೆಳ್ಳಾರೆಯವರಿಗೆ ತಾನು ಏನೂ ಮಾತನಾಡಿಲ್ಲ ಅನ್ನಿಸಿ ‘ಹಿರೇಮಠರ, ಸಿಂಗಲ್ ಚಾ ಕುಡದ ಹೋಗ್ರೀ’ ಅನ್ನುತ್ತ ತಾವೂ ಎದ್ದು ನಿಂತರು. ಅದಕ್ಕೆ ಹಿರೇಮಠರು ‘ಬ್ಯಾಡ್ರೀ ಸರ, ಈಗರ ಮುಗಸೇ ಬಂದೇನಿ’ ಎನ್ನುತ್ತ ಇಷ್ಟೊತ್ತು ಸಮಯ ವ್ಯರ್ಥ ಮಾಡಿದ ಮುಖಭಾವ ಹೊತ್ತು ತಮ್ಮ ಬೈಕ್ ಏರಿದ್ದರು.
ಡಾ. ತೆಳ್ಳಾರೆ ತಮ್ಮ ಹೆಂಡತಿಗಷ್ಟೇ ಕೇಳುವಂತೆ ‘ಮಗಾ ಕಾರ್ ತೊಗೊಳೊ ವಿಷ್ಯಾ ನಿಂಕಡೀ ಏನರ ಹೇಳಿದ್ನೆನ?’ ಅಂತ ಸಣ್ಣ ದನಿಯಲ್ಲಿ ಕೇಳಿದ್ದರು. ‘ಇಲ್ಲರೀಪಾ, ನಾನೂ ಈಗ ಕೇಳಿದ್ದು ಅವನ್ ಬಾಯಾಗ’ ಅನ್ನುತ್ತ ಪಿಸುಗುಟ್ಟಿದ್ದರು. ‘ಹೋಗ್ಲಿ ಬಿಡ, ನಮ್ ಮಕ್ಳು ಏನಾರ ಕೆಟ್ಟದ್ ಮಾಡಾಕ್ ನಿಂತ್ರ, ನಮಗ ಮೊದ್ಲ ಗೊತ್ತಾತಂದ್ರ ನಾವ್ ತಡೀಬಹುದು, ಚೊಲೋದ ಮಾಡಾಕ್ ಯಾಕ್ ಅವ್ರು ನಮ್ ಕಡೀ ಕೇಳ್ಬೇಕು? ಹೌದಿಲ್ಲೋ?’ ಅಂತ ಸೋಫಾದ ಮೇಲೆ ಕೂತಲ್ಲೇ ಡಾ. ತೆಳ್ಳಾರೆ ಎರಡೂ ಮಂಡಿ ಹಸ್ತದಲ್ಲಿ ಹಿಡಿದು ಅಲ್ಲಾಡಿಸುತ್ತ ಖುಷಿಗೊಂಡರು. ಶ್ರೀಮತಿ ತೆಳ್ಳಾರೆಯವರಿಗೆ ಈ ಹೊಸ ವಿಷಯವೊಂದು ಸಿಕ್ಕಂತೆ ಹಳೆಯ ವಾಸ್ತು ವಿಚಾರ ಮರೆತು ಹೋಗಿತ್ತು. ಆದರೂ ಮಂಡಿನೋವು ಜಾಸ್ತಿಯಾದ ಭಾವ ಉಂಟಾಗಿ, ಕೂತವರಿಗೆ ಒಮ್ಮೆಲೇ ಏಳಲಿಕ್ಕಾಗದೇ ‘ಅಯ್ಯೋ ಶಿವನೇ’ ಅನ್ನುತ್ತ ನರಳುವಂತಾಯಿತು. ‘ಅಂವಾ ಕಂಪ್ಯೂಟರನಾಗ ಏನೋ ಕೆಲ್ಸ ಮಾಡ್ಕೋತ ಕುಂತಿರತಾನ, ಟಿವಿ ವಾಲ್ಯೂಮ ಚೂರ ಸಣ್ ಇಟ್ಗೊ’ ಅನ್ನುತ್ತ ಅವತ್ತು ಎದುರಿನ ಹಳೆಯ ಕಾಲನಿಯೊಳಗೆ ಸಂತೆ ದಿನ ಇದ್ದುದರಿಂದ ‘ಹಸರ ತರಕಾರೀ ಏನರ ತರತೇನಿ’ ಎನ್ನುತ್ತ ಡಾ. ತೆಳ್ಳಾರೆ ಹೊರಹೊರಟರು.
ಒಬ್ಬರೆ ಕೂತ ಶ್ರೀಮತಿ ತೆಳ್ಳಾರೆಯವರಿಗೆ ‘ಕಾರ್ ತೊಗೊಂಡ್ ಮ್ಯಾಗ ಒಂದ್ ಮದವೀನ ಮಾಡ್ ಬಿಡಬೇಕ್ ಇಂವಗ, ನಂಗೂ ಮಂಡೀ ನೋವು ಏಸ್ ದಿನ ಅಂತ ಈ ಅಪ್ಪಾ ಮಗನ ಸಲ್ವಾಗಿ ದುಡಿಯೋದು’ ಅಂತ ಮನಸ್ಸಿನಲ್ಲೆ ಅಂದುಕೊಳ್ಳುತ್ತ ಅವರು ತಮ್ಮದೇ ಅನೇಕ ಸಂಬAಧಿಕರಲ್ಲಿ ತಮ್ಮ ಕುಮಾರನಿಗೆ ಜೋಡಿಯಾಗುವ ಕನ್ಯೆಯರನ್ನು ಮನಸ್ಸಿನಲ್ಲೇ ಒಟ್ಟುಹಾಕತೊಡಗಿದ್ದರು. ಆ ನಂತರ ಒಂದು ತಿಂಗಳು ಹ್ಯಾಗೆ ಕಳೀತೋ ಒಂದಿನ ಮನೀ ಎದುರು ಕೆಂಪು ರಿಬ್ಬನ್ ಹಚ್ಚಿದ ಬೆಳ್ಳಗಿನ ಐ ಟ್ವೆಂಟಿ ಡಿಲೈಟ್ ಕಾರು ಸುಂಯನೆ ಬಂದು ನಿಂತು, ಡಾ. ತೆಳ್ಳಾರೆಯವರ ಮನೆ ‘ಹಿತ’ ಕ್ಕೆ ಹೊಸದೇ ಆದೊಂದು ಕಳೆ ತಂದಿತ್ತು. ಆದರೆ ನಮ್ಮ ಶ್ರೀಮತಿ ತೆಳ್ಳಾರೆಯವರ ವಾಸ್ತು ಹುಚ್ಚು ಮಾತ್ರ ಬಿಟ್ಟು ಹೊರಡಲೇ ಇಲ್ಲ. ಇದ್ದಕ್ಕಿದ್ದಂತೆ ‘ಈವತ್ ವಾಸ್ತುದಾಗ ಕೆಂಪನ್ನ ಕಾರು ಗಂಡುಮಕ್ಕಳೀಗೆ, ಬಿಳೇ ಕಾರು ಹೆಣ್ಮಕ್ಕಳೀಗೆ ಲಾಘೂ ಬೀಳ್ತೇತಿ ಅಂತ ಹೇಳಾಕ್ ಹತ್ತಿದ್ರು ಟೀವಿ ಒಳಗ, ಈ ಕಾರ್ ಏನರ ಬಣ್ಣ ಬದ್ಲ ಮಾಡಕ ರ‍್ತೇತೇನ್ರೀ?’ ಅನ್ನುವ ಯೋಚನೆಗೆ ಬಿದ್ದು ನೆಮ್ಮದಿ ಕೆಡೆಸಿಕೊಂಡು ಕೂತಿದ್ದರು ಶ್ರೀಮತಿ ತೆಳ್ಳಾರೆ.
‘ಏನ್ ನಿಂದ್ ರಗಳಿ ಅಂತೇನಿ, ಅಂವನ ಕಡೆ ಹೀಂಗ ಹೇಳಿ ಇನ್ನೊಮ್ ಬೈಸ್ಕೋ, ಸುಮ್ನ ಇದ್ದಿದ್ದನ್ನ ಖುಷಿಯಿಂದ ಅನಭವಸೋ ನಶೀಬು ನಿನಗ ಇಲ್ಲೇ ಇಲ್ಲ ಅಂದ್ರ ನಾವೇನ್ ಮಾಡಾಕ್ ಆಕ್ಕೇತಿ?’ ಅನ್ನುತ್ತ ಡಾ. ತೆಳ್ಳಾರೆ ತಮ್ಮ ಕೋಣೆಗೆ ತೆರಳಿ ಕನ್ನಡಕ ತೆಗೆದು ಬದಿಯ ಟೇಬಲ್ಲಿನಲ್ಲಿಟ್ಟು ಕಾಲು ನಿಡಿದಾಗಿ ಬಿಟ್ಟು ಎದೆಯ ಮೇಲೆ ಕೈ ಕಟ್ಟಿ ಮಲಗಿ ಸಣ್ಣ ನಿದ್ದೆ ಮಾಡಿದರು. ಆ ವಿಷಯಕ್ಕೇ ಎಂಬAತೆ ಶ್ರೀಮತಿ ತೆಳ್ಳಾರೆ ಹಲವು ದಿವಸ ನಿದ್ದೆಗೆಟ್ಟರು. ಮಂಡಿ ನೋವಿನಿಂದ ನರಳುತ್ತ ಗಂಡ ಹೇಳಿದ ಕ್ಯಾಲ್ಸಿಯಂ ಗುಳಿಗೆಗಳು ತನಗೆ ಗುಣವನ್ನೇ ನೀಡುತ್ತಿಲ್ಲ ಅಂತ ಮಗನ ಬಳಿ ಗುಟ್ಟಾಗಿ ಹೇಳಿ, ಅವನ ಕಾರಿನಲ್ಲಿಯೇ ಆಸ್ಪತ್ರೆ ಮನೆ ತಿರುಗಿದರು. ಕಾರಿನಲ್ಲಿ ಹತ್ತಿ ಕೂಡಲೂ ಆಗದಿದ್ದಷ್ಟು ತ್ರಾಸಾದಾಗ ಡಾಕ್ರ‍್ರು ಮೂರು ತರಹದ ಗುಳಿಗೆ ಬರೆದುಕೊಟ್ಟರು. ‘ಪೇನ್ ಕಿಲ್ಲಿಂಗ್ ಗುಳಿಗೆ ತೊಗೋಬ್ಯಾಡ’ ಅಂತ ಮಗ ಕುಮಾರ ಒಂದೇ ಮಾತಾಡಿ, ಒಂದಿನ ಅವರ ಎಲ್ಲ ಗುಳಿಗೆಗಳನ್ನೂ ಸಿಟ್ಟಿನಿಂದ ಕಸದ ಬುಟ್ಟಿಗೆ ಎಸೆದುಬಿಟ್ಟ. ಆ ನೋವಿನಲ್ಲೂ ಶ್ರೀಮತಿ ತೆಳ್ಳಾರೆ ಟೀವಿ ವಾಸ್ತು ನೋಡುವುದನ್ನು ಮಾತ್ರ ತಪ್ಪಿಸಿಕೊಳ್ಳುತ್ತಿರಲಿಲ್ಲ.
ಇದೇ ಹೊತ್ತಿನಲ್ಲಿ ಇನ್ನೊಂದು ಚಾನೆಲ್ಲಿನ ಹೊಸ ವಾಸ್ತು ಕಾರ್ಯಕ್ರಮದಲ್ಲಿ ವಿನಾಕಾರಣ ಶ್ರೀಮತಿ ತೆಳ್ಳಾರೆಯವರಿಗೆ ಅಗತ್ಯವಾದ ಒಂದು ಮಾಹಿತಿ ಸಿಕ್ಕುಬಿಟ್ಟಿತ್ತು. ತುಂಬ ವರ್ಷಗಳಿಂದ ಅವರನ್ನು ಅಂಟಿಕೊAಡಿದ್ದ ಮಂಡಿನೋವಿಗೆ ಸುಲಭದ ಪರಿಹಾರೋಪಾಯಗಳನ್ನು ವಾಸ್ತು ಕಾರ್ಯಕ್ರಮ ಅರುಹಿಬಿಟ್ಟಿ ಖುಷಿಯಲ್ಲಿಯೇ ಅವರು ತಮ್ಮ ಮಗ ಕುಮಾರನ ಮೇಲೆ ಮತ್ತೆ ಹಿರೇಮಠರನ್ನು ಕರೆಸುವ ಜವಾಬ್ದಾರಿ ಹೊರಿಸಿದರು. ಈ ಸಲ ‘ಅಡಗಿ ಮನಿ ಕಟ್ಟೀ ಸೊರಾಕ ಹತ್ತೇತಿ, ಸಿಂಕ್ ಬದ್ಲ ಮಾಡ್ಬೇಕೋ ಏನೋ’ ಅಂತೇನೋ ಸುಳ್ಳು ಹೇಳಿ ಮಗನಿಂದ ತಮ್ಮ ವಾಸ್ತು ವಿಚಾರವನ್ನು ಮುಚ್ಚಿಡುತ್ತ ಮಸ್ಕಾ ಹೊಡೆದರು. ಬರೀ ‘ಹ್ಞು ಹ್ಞ’ ಅಷ್ಟೇ ಹಾಕುತ್ತ, ಉಳಿದೆಲ್ಲ ತನ್ನ ಸಾಫ್ಟ್ ವೇರ್ ಕೆಲಸದ ಗುಂಗಿನಲ್ಲೇ ಇರುವ ಕುಮಾರ, ಆಚೀಚೆ ಯೋಚನೆ ಮಾಡದೇ ‘ಆಯ್ತು’ ಅಂದವನೇ ತಟ್ಟನೆ ಫೋನ್ ಮಾಡಿ ತನ್ನ ಜವಾಬ್ದಾರಿ ಮುಗಿಸಿಬಿಟ್ಟ. ಮುಂದಿನ ಹದಿನೈದೇ ನಿಮಿಷದಲ್ಲಿ ಸಿ.ಡಿ ಹಿರೇಮಠರ ಢಗ್‌ಢಗ್‌ಢಗ್ ಮೋಟರ್‌ಬೈಕು ಡಾ. ತೆಳ್ಳಾರೆಯವರ ‘ಹಿತ’ ದ ಎದುರಿಗೆ ನಿಂತಿತ್ತು. ಇದೇ ಸಮಯಕ್ಕೆ ನಮ್ಮ ಡಾ. ತೆಳ್ಳಾರೆ ಟೆಲಿಫೋನ್, ನೀರು ಹಾಗೂ ವಿದ್ಯುತ್ ಬಿಲ್ಲುಗಳನ್ನು ಸೇರಿಸಿ, ದುಡ್ಡು ಎಣಿಸಿ, ಅದರ ಚಿಲ್ಲರೆ ಗಿಲ್ಲರೆ ಅಂತ ರೂಪಾಯಿ ಎರಡು ರೂಪಾಯಿಗಳನ್ನೂ ಜೋಡಿಸಿಕೊಂಡು ಎಚ್ ಡೀ ಒನ್ ನಲ್ಲಿ ಕ್ಯೂ ನಿಂತು ಸುಸ್ತಾಗಿ ಬಸ್ಸಿನಲ್ಲಿ ಮನೆಗೆ ಬಂದಿದ್ದರು. ಮೆಟ್ಟಿಲೇರುತ್ತಿದ್ದಂತೆ ಹಿರೇಮಠರನ್ನು ಕಂಡು ಸ್ವಲ್ಪ ಕಸಿವಿಸಿಯಾದರೂ ಸುಮ್ಮನೇ ‘ಹ್ಞಾ, ನಮಸ್ಕಾರ, ಭಾಳ ದಿನ ಆತು ನಿಮ್ಮನ್ ನೋಡಿ’ ಅಂತ ಹೇಳಿ ಒಳಹೋಗಿ, ಆಗಲೇ ತುಂಬಿ ಬಂದ ಬಿಲ್ಲು ರಶೀದಿಗಳನ್ನು ಡ್ರಾವರಿನಲ್ಲಿ ನೀಟಾಗಿ ಜೋಡಿಸಿಟ್ಟು ಹೊರಬಂದು ಕೂತರು.
‘ಮನೀ ಹೊಸಲಾ ತೊಳದ್ ನೀರು ಸುಂಯ್ಯAತ ರಸ್ತೇಕ್ ಹೋದ್ರ ಮನೀ ಹೆಂಗಸರೀಗೆ ಮಂಡೀ ನೋವು ತಪ್ಪಿದ್ದಲ್ಲಂತÀ, ಹೊಸಲಾ ತೊಳದ ನೀರು ಮನೀ ಬಾಗಲದ ಬಲಭಾಗಕ್ಕ ಹಚ್ಚಕೊಂಡ ಗಿಡಗಂಟಿಗಳಿಗ ಹೋಗಬೇಕಂತ, ಹಂಗೇನರ ಮಾಡಾಕಾಕ್ಕೇತನ ನೋಡ್ರಿ ಸ್ವಲ್ಪ’ ಅಂತ ತಮ್ಮ ಹೆಂಡತಿ ಹೊಸರಾಗ ತೆಗೆದು ಕೂತದ್ದು ಡಾ.ತೆಳ್ಳಾರೆಯವರಿಗೆ ‘ಅಯ್ಯೋ ಶಿವನ!’ ಅಂತ ಅಚ್ಚರಿಪಡುವಂತಾಗಿತ್ತು. ಆದರೆ ಹಿಂದಿನ ಪ್ರಸಂಗವನ್ನು ಮರೆತ ಹಿರೇಮಠರು ಶ್ರೀಮತಿ ತೆಳ್ಳಾರೆಯವರ ಕಂಪ್ಲೆAಟು ಕೇಳಿದ್ದೇ ತಡ ‘ಹೌದೇನ್ರೀ’ ಅನ್ನುತ್ತ ಎದ್ದು ಬಾಗಿಲ ಕಡೆ ಹೋಗಿ ನಿಂತು ‘ಮಾಡ ಕೋಡೂಣ ತೊಗೋಳ್ರಿ ಅಕ್ಕಾರ, ಅದಕ್ಯಾಕ್ ಚಿಂತೀ ಮಾಡ್ತಿರಿ, ಆದ್ರ ಸ್ವಲ್ಪ ಇಟ್ಟಂಗೀ ಸ್ವಲ್ಪ ಸಿಮೆಂಟು ಉಸುಕು ಬೇಕಾಕ್ಕತಿ, ಅದೇನ್ ಸಮಸ್ಯಾ ಇಲ್ಲ ಬಿಡ್ರೀ, ಇಲ್ಲೇ ಪಕ್ಕದ್ ಶೆಟ್ಟರ್ ಕಾಲನಿ ಮನೀ ಮುಗಿಯಾಕ್ ಬಂದೇತಿ, ಅದ ಮನೀ ಕಡೀಯಿಂದ ಉಳ್ದ ಸಾಮಾನೆಲ್ಲಾ ನಾಳೇನ ತಂದ ಇಲ್ ಒಗಸ್ತೇನಿ’ ಅಂದಿದ್ದರು.
ಇಷ್ಟು ದಿನ ಸಹನೆಯಿಂದಲೇ ತಡಕೊಂಡು ಕೂತಿದ್ದ ಡಾ. ತೆಳ್ಳಾರೆಯವರು ಈಗ ಒಮ್ಮೆಲೇ ಸಿಟ್ಟು ಒತ್ತರಿಸಿ ಬಂದAತೆ ಎದ್ದುನಿಂತು ‘ಏನ್ ತಲಿ ಗಿಲೀ ನೆಟ್ಟಗ ಅದಾವೆನ ನಿಮಗ? ಇಳಿಜಾರ ಎಲ್ ರ‍್ತೇತೋ ಆ ಕಡೀ ಹೊಕ್ಕಾವು ನೀರು, ನಮ್ ಮನೀ ಎತ್ತರ ಮ್ಯಾಗ ಐತಿ, ಅದ್ಯಾಂಗ ಕಾಲನೀ ರಸ್ತೀನ ನಮ್ ಮನೀಗಿಂತ ಎತ್ತರ ಮಾಡತೀರಿ ನೀವು?’ ಅಂತ ಕೇಳುತ್ತ ಎಂದೂ ತೆಗೆಯದ ತಮ್ಮ ದೊಡ್ಡ ದನಿ ತೆಗೆದುಬಿಟ್ಟರು. ಒಮ್ಮೆಲೇ ಕಂಗಾಲಾದ ಹಿರೇಮಠರು ಗೇಟಿಗೆ ಹೋದವರು ಸೀದಾ ತಮ್ಮ ಬೈಕಿನ ಬಳಿಯೇ ನಡೆದು ಅದರ ಮೇಲೆ ಹತ್ತಿಕೂತೇ ‘ಸರ್ ಹೇಳಿದ್ ಖರೇ ಐತ್ರಿ ಅಕ್ಕಾರ, ಹೊಸಲೀಗೆ ನೀರ್ ಹಾಕಿ ತೊಳಿಯಾಕ ಹೋಗ್ ಬ್ಯಾಡ್ರೀ ಇನ್ ಮ್ಯಾಲೆ, ಒಂದ್ ಹಸೇ ಅರಬೀ ತೊಗೊಂಡು ವರಸ್ ಬಿಡ್ರೀ’ ಅನ್ನುತ್ತ ಬೈಕಿನ ಕೀ ತಿರುಗಿಸಿ ಮುಂದಕ್ಕೆ ನಡೆದುಬಿಟ್ಟರು. ಅವರನ್ನು ಈ ನಮನಿ ಅಟ್ಟಿ ಒಳಬಂದ ನಮ್ಮ ಡಾ.ತೆಳ್ಳಾರೆ ಹೆಂಡತಿಯನ್ನು ರಮಿಸುವ ಧಾಟಿಯಲ್ಲಿ ‘ಹೊಸಲಾ ತೊಳದಿದ್ ನೀರು ರಸ್ತೇಕ ಹೋದ್ರ ಚೊಲೋದ ಬಿಡು, ಧೂಳೂ ಪಾಳೂ ಕ್ರಿಮೀ ಕೀಟಾ ಎಲ್ಲಾ ರಸ್ತೆ ಬಿಸಲಾಗ ಒಣಗಿ ಸತ್ ಹೊಕ್ಕಾವು’ ಅನ್ನುತ್ತ ಹಿರೇಮಠರಿಗೆ ಕೊಡಲು ತಯಾರು ಮಾಡಿಕೊಂಡ ಉಪದೇಶವನ್ನು ತಮ್ಮ ಶ್ರೀಮತಿಯ ಬಳಿಯಲ್ಲೇ ಶುರುವಿಟ್ಟುಕೊಂಡರು.
‘ಹೊಸಲಾ ತೊಳ್ದ ನೀರು, ಹೊಸಲಾ ತೊಳ್ದ ನೀರು, ಅಂತ ನರ‍್ನ ಹಂಗ ಮನೀ ಬಾಜೂಕ ಯಾರರ ನಿಂದ್ರಸಕೊಳ್ತಾರನ? ಹುಚ್ಚಿ, ಸೊಳ್ಳಿಪಳ್ಳಿ ನುಸಾಪಸಾ ಹುಟ್ಕೊಳ್ತಾವು, ಇನ್ನೊಮ್ ಕರೀಬ್ಯಾಡ್ ನೋಡ್ ಆ ಹಿರೇಮಠಗ, ಸಿಟ್ ಬಂತದ್ರ ಟೀವಿ ಕೇಬಲ್ ಕಿತ್ತ ಒಗೀತೇನಿ’ ಎನ್ನುವ ತಮ್ಮ ಸಾತ್ವಿಕ ಸಿಟ್ಟು ಹೊರಹಾಕಿ ಸಿಡಿಮಿಡಿಗೊಂಡಿದ್ದೇ ಶ್ರೀಮತಿ ತೆಳ್ಳಾರೆ ‘ಏನರ ಮಾಡ್ಕೋರಿ’ ಅನ್ನುತ್ತ ತಮ್ಮ ನೋವಿನ ಮಂಡಿ ಹಿಡಿದುಕೊಂಡು ಎತ್ತಲೋ ಶೂನ್ಯ ದೃಷ್ಟಿ ನೆಟ್ಟು ಕೂತುಬಿಟ್ಟರು.
ಆಗಲೇ ಒಂದೆರಡು ದಿನಗಳ ಹಿಂದುಮುAದಿನ ಸಮಯದಲ್ಲಿ, ವಾಸ್ತು ಪ್ರಕಾರವೋ ಅಥವಾ ಡಾ. ತೆಳ್ಳಾರೆಯವರ ಅಪರೂಪದ ಸಿಟ್ಟಿಗೋ ಎಂಬAತೆ ಹಚ್ಚಿಟ್ಟ ಟೀವಿಯೇ ಒಮ್ಮೆ ಚಟ್ ಚಟ್ ಅಂತ ಸದ್ದಾಗಿ ‘ಪರದೀ ತುಂಬಾ ಬರೇ ಗೆರೀ ಗೆರೀ ಗೆರೀ ಬರಾಕ ಶುರು ಆಗೇತಲ್ಲೋ’ ಅಂತ ಶ್ರೀಮತಿ ತೆಳ್ಳಾರೆಯವರು, ಚಿತ್ರವೂ ಕ್ಲಿಯರ್ ಕಾಣದೇ ದನಿಯೂ ಸರೀ ಕೇಳದೇ ದಿಗಿಲಿಗೆ ಬೀಳುವಂತಾಗಿತ್ತು. ತೆಳ್ಳಾರೆಯವರು ಅನುದಿನದಂತೆ ಇನ್ನೊಂದು ಸಲ ಪತ್ರಿಕೆಯನ್ನು ಹೊರಳಿಸಿ ಹಾಕುತ್ತ, ಮನಸ್ಸಿನಲ್ಲೇ ನಗುತ್ತ ಹೊರಗೆ ಜೋಕಾಲಿಯಲ್ಲೇ ಸಣ್ಣಗೆ ಜೀಕಿಕೊಳ್ಳುತ್ತ ಕೂತಿದ್ದರು. ಕೆಟ್ಟು ಕೂತ ತಮ್ಮ ಮನೆಯ ಟೀವಿಯನ್ನು ‘ಏ ತಮ್ಯಾ, ಚೂರ್ ರಿಪೇರಿ ಮಾಡ್ಸೋ’ ಅಂತ ತಾಯಿಯೂ ‘ಇನ್ನೂ ಸ್ವಲ್ಪ ದಿನಾ ಹೋಗ್ಲಿ, ರಿಪೇರಿಯಂವಗ ಹೇಳೇನಿ, ಅವ್ನ ರ‍್ಲಿಲ್ಲ ಅಂತ ಸುಳ್ಳ್ ಹೇಳೋ’ ಎಂದು ಗುಟ್ಟಾಗಿ ತಂದೆಯೂ ಹೇಳಿದ್ದರಿಂದ ಮಗ ಕುಮಾರ, ಆಗುಹೋಗುಗಳನ್ನು ಸಾರಾಸಾರ ಯೋಚಿಸಿ, ತಂದೆಯ ಮಾತನ್ನೇ ಸಿರಸಾವಹಿಸಿ ಪಾಲಿಸಿದ.
ಸ್ವಲ್ಪ ದಿವಸ ಟೀವಿಯಲ್ಲಿಯ ಭವಿಷ್ಯವಾಣಿ ಹಾಗೂ ವಾಸ್ತು ವಿಚಾರಗಳನ್ನು ಕೇಳದೇ ಅನುದಿನ ಕೊರಗಿದರು ಶ್ರೀಮತಿ ತೆಳ್ಳಾರೆ. ರಾತ್ರಿಯೆಲ್ಲ ಕೈ ಕಾಲು ನೋವಿನಿಂದ ಒದ್ದಾಡುತ್ತ, ಕೆಟ್ಟ ಕನಸು ಕಂಡೆನೆAದು ಎದ್ದೆದ್ದು ಕೂಡುವ ಹೆಂಡತಿಯನ್ನು ಒಂದು ದಿನ ನಯವಾಗಿ ಮಾತಾಡಿ, ಪುಟ್ಟ ಮಕ್ಕಳಿಗೆ ತಿಳಿಹೇಳಿದಂತೆ ಮನವೊಲಿಸಿ ಡಾ. ತೆಳ್ಳಾರೆ ಬೆಳಿಗ್ಗೆ ತಾವು ವಾಕಿಂಗ್ ಹೋಗುವಾಗ ಅವರನ್ನೂ ಎಬ್ಬಿಸಿ, ತಮ್ಮಂತೆಯೇ ಕುಡಿಯಲು ಬೆಚ್ಚಗಿನ ನೀರು ಕಾಸಿ ಕೊಟ್ಟು, ಒಂದು ಗಂಟೆಯ ವಾಕಿಂಗಿನಲ್ಲಿ ಪಾಲ್ಗೊಳ್ಳಲು ಹುರಿದುಂಬಿಸಿದರು. ಆ ನಂತರ ಡಾ. ತೆಳ್ಳಾರೆಯವರಿಗೆ ವಾಕಿಂಗ್ ಸ್ನೇಹಿತರೆಲ್ಲ ದೂರವಾಗಿ ಮಾತಾಡಲು ಹಿಂದೆ ಮುಂದೆ ಬರಿ ಶ್ರೀಮತಿ ತೆಳ್ಳಾರೆಯೇ ಸಿಕ್ಕು, ವಾಸ್ತು ಹಾಗೂ ಭವಿಷ್ಯದ ಸುತ್ತ ಇರುವ ಅನೇಕ ರಾಜಕೀಯವನ್ನೂ ವಿಡಂಬನಾತ್ಮಕವಾಗಿ ಹೆಂಡತಿಯ ತಲೆಯಲ್ಲಿ ತುಂಬಲು ಸಮಯವೂ ಸಾಕಷ್ಟು ಸಿಗತೊಡಗಿತ್ತು. ಅದು ಹ್ಯಾಗೆ ಯಾವ ಮಾತಿನಲ್ಲಿ ಯಾವ ಉದಾಹರಣೆಯಲ್ಲಿ ಯಾವ ಅನುಭವದಲ್ಲಿ ವಿವರಿಸುತ್ತ, ತಮ್ಮ ಶ್ರೀಮತಿಯವರ ಬ್ರೇನ್‌ವಾಶ್ ಮಾಡಿದರೋ ಡಾ. ತೆಳ್ಳಾರೆಯವರಿಗೇ ಗೊತ್ತು.
ಮುಂದೆ ಒಂದೇ ತಿಂಗಳಲ್ಲಿ ಶ್ರೀಮತಿ ತೆಳ್ಳಾರೆಯವರು ತಮ್ಮ ಜನ್ಮಕ್ಕಂಟಿದ ಪ್ರಳಯಾಂತಕ ಮಂಡಿ ನೋವು ಇದ್ದಕ್ಕಿದ್ದಂತೆ ಮಾಯವಾದದ್ದು ಅನುಭವಕ್ಕೆ ಬರುತ್ತಿದ್ದಂತೆಯೇ, ನಂತರದ ದಿನಗಳಲ್ಲಿ ಗಂಡನನ್ನು ತಾವೇ ಎಬ್ಬಿಸಿಕೊಂಡು ವಾಕಿಂಗ್ ಹೋದ ಶೈಲಿಯಲ್ಲಿ ನಿಷ್ಠೆಯ ಆಸಕ್ತಿ ತೋರಿಸತೊಡಗಿದರು. ಮುಂದೆ ಟೀವಿಯೂ ರಿಪೇರಿಯಾಗಿ ಬಂತೆನ್ನಿ. ಆದರೆ ಈಗ ನಮ್ಮ ಶ್ರೀಮತಿ ತೆಳ್ಳಾರೆಯವರು ‘ಏನ್ ಬಿಡ್ರೀ, ಸುಳ್ಳ ಪಳ್ಳ ಹೇಳ್ತಾವು, ಹೆಣಮಕ್ಕಳ ತಲೀಕೆಡ್ಸಾಕ’ ಅನ್ನುತ್ತ ಭವಿಷ್ಯ ಮತ್ತು ವಾಸ್ತು ಕಾರ್ಯಕ್ರಮಗಳಲ್ಲಿ ಕುತೂಹಲ ಮತ್ತು ಆಸ್ಥೆ ಎರಡನ್ನೂ ಕಳಕೊಂಡು, ಈಗ ಸಂಜೆಯ ಒಂದೆರಡು ಧಾರಾವಾಹಿಗಳನ್ನು ನೋಡುವ ರೂಢಿ ಮಾತ್ರ ಹಾಗೇ ಇರಿಸಿಕೊಂಡಿದ್ದಾರೆ. ಆಗಲೂ ‘ಎಸಿಡಿಟಿ ಅನ್ಸಾಕ ಹತ್ತೇತಿ, ಹೊಲಸ್ ಹುಳಿ ಹುಳಿ ತೇಕು, ಏನ್ ತಿಂದೇನ್ರೀ ಸುಡುಗಾಡು?’ ಎನ್ನುತ್ತ ಗಂಡನನ್ನೇ ಕೇಳುತ್ತ, ದೊಡ್ಡದಾಗಿ ತೇಕುತ್ತ, ಸೋಪಾದಲ್ಲಿ ಕಾಲಾಡಿಸುತ್ತಲೇ ಚಡಪಡಿಸುತ್ತ ಕೂತಿರುತ್ತಾರೆ.
ಅದನ್ನು ಕಂಡ ಡಾ. ತೆಳ್ಳಾರೆ ಇತ್ತೀಚೆಗೆ ‘ಏ, ಏನ? ಸಂಜೀ ವಾಕಿಂಗಿಗೆ ರ‍್ತೀಯನ?’ ಅನ್ನುವ ಹೊಸ ರಾಗ ಶುರುವಿಟ್ಟುಕೊಂಡಿದ್ದಾರೆ. ಕಾದು ನೋಡುವಾ. ಶ್ರೀಮತಿ ತೆಳ್ಳಾರೆಯವರು ಈ ಧಾರಾವಾಹಿ ಮೋಹ ತೊರೆದು ಗಂಡನೊAದಿಗೆ ಸಂಜೆಯ ವಾಕಿಂಗ್ ಆರಂಭಿಸಿದ ದಿನ ಅವರ ಎಸಿಡಿಟಿ ಸಮಸ್ಯೆಯೂ ಬಗೆಹರಿಯುವ ಸಾಧ್ಯತೆಯಿದೆ.
(ಮಯೂರ ವiಹಿಳಾ ವಿಶೇಷ -೨೦೧೫)
ಕಾಯದೊಳಗಣ ಆತ್ಮ (ಸುನಂದಾ ಕಡಮೆ ಕಥೆ)
ವಿಶಾಲ ವರಾಂಡದ ಮಧ್ಯ ಇರುವ ಒಂದು ಖಾಲಿ ಟೀಪಾಯ್. ಬರೆಯಬೇಕೆಂದರೆ ಏನೊಂದೂ ಹೊಳೆಯುತ್ತಿಲ್ಲ. ದೇವರಿಗೆ ಪ್ರದಕ್ಷಿಣೆ ಹಾಕುವ ಹಾಗೆ ಟೀಪಾಯಿಯನ್ನು ಗಿರಿಗಿರಿಗಿರಿ ಬರಿದೇ ಸುತ್ತು ಹಾಕುತ್ತಿದ್ದೆ. ಅಳು ಒತ್ತರಿಸಿ ಬಂತು. ಈ ವಿಚಿತ್ರ ಸಂತೋಷದ ಅಲೆಗಳಲ್ಲೇ ಯಾವ್ಯಾವುದೋ ಪಾತ್ರಗಳು ಒಮ್ಮೆಲೇ ಮೈಮೇಲೆಯೇ ಏರಿಬಂದವು. ಅಳುವಿಗೆ ಸಂತೋಷದ ಅಲೆಗಳು ಎಂದು ಹೇಳಿದ್ದೇಕೆಂದರೆ, ಹೊಸದೊಂದು ಕತೆ ಹುಟ್ಟುವ ಹೊತ್ತಿದು. ಟೀಪಾಯಿ ಸುತ್ತ ಇರಿಸಿದ್ದ ಸೋಫಾ ಕುರ್ಚಿಗಳ ಮೇಲೆ ಆ ಪಾತ್ರಗಳೆಲ್ಲ ಹಾಗೇ ಆಸೀನರಾದವು. ಅಲ್ಲಿ ನನಗೇ ಕೂಡಲು ಈಗ ಜಾಗವಿಲ್ಲ.
ಎಲ್ಲ ಪಾತ್ರಗಳೂ ತಂತಮ್ಮ ಕತೆಗಳನ್ನು ಒಟ್ಟಿಗೇ ಹೇಳತೊಡಗಿದವು. ನನಗೋ ಇದು ಯಾರದ್ದೋ ಇದು ಅಸಂಭವ ಇದು ಸುಳ್ಳು ಇದು ಅಪ್ರಾಮಾಣಿಕತೆ ಅಂತೆಲ್ಲ ಅನಿಸುತ್ತ ಹೋಯಿತು. ನಾನು ಇನ್ನಷ್ಟು ಗೊಂದಲಗೊAಡೆ. ಯಾವ ಎಲೆಯನ್ನೂ ಸಹ ಅವು ಬಿಟ್ಟುಕೊಡುತ್ತಿಲ್ಲ. ಸಿಕ್ಕೇಬಿಟ್ಟರೆ ಅದು ನನ್ನ ಅದೃಷ್ಟ. ಅದೊಂದೇ ಎಳೆ ಹಿಡಿದು ಜಗ್ಗಿ ನನ್ನದಾಗಿಸಿಕೊಳ್ಳಬಹುದಿತ್ತು. ಇಲ್ಲಿ ಬರೀ ಗದ್ದಲ ಪೂರಾ ಅರ್ಥವೇ ಆಗದಿರುವುದನ್ನು ನಾನು ಹೇಗಾದರೂ ಎಳಕೊಳ್ಳಲಿ?
‘ನೀವೆಂಥ ಹೇಳುವುದೂ ಬೇಡ, ಈ ಕ್ಷಣವೇ ನಿಮ್ಮ ನಿಮ್ಮ ಮನೆಗೆ ತೊಲಗಿ. ನಾನು ನಿಮ್ಮ ಬಗ್ಗೆ ಹಚ್ಚಿಕೊಂಡಿದ್ದೇನೆAದು ನೀವೇನೂ ನಿಮ್ಮ ನಿತ್ಯ ವ್ಯವಹಾರವನ್ನು ಬಿಟ್ಟು ನನ್ನೆಡೆಗೆ ಬರಬೇಕಾಗಿಲ್ಲ, ಆತ್ಮಶೋಧನೆ ಮಾಡಬೇಕಾಗಿ ಬಂದಾಗ ಸ್ವತಃ ನಿಮ್ಮನ್ನೇ ಬರಹೇಳುವೆ. ಈಗ ನನ್ನನ್ನು ಒಂಟಿಯಾಗಿರಲು
ಬಿಡಿ ದಯಮಾಡಿ’ ಎನ್ನುತ್ತ ಕಿವಿಮುಚ್ಚಿಕೊಂಡು ಮೊಣಕೈ ತೊಡೆಯ ಮೇಲೂರಿ ನೆಲದಲ್ಲಿ ಕುಸಿದು ಕೂತು ನಾಟಕದ ನಾಯಕಿಯ ಥರ ಕಿರುಚಿಕೊಂಡೆ.
ಅವೆಲ್ಲ ಈಗ ಒಮ್ಮೆಲೇ ಎದ್ದು ನಿಂತು ಸಪ್ಪೆ ಮುಖ ಹಾಕಿ ಬಾಗಿಲೆಡೆ ತಿರುಗಿದವು, ಆ ಪಾತ್ರಗಳ ಈಗಿನ ಆ ಮುಖ ಚಹರೆ ಮಾತ್ರ ನನಗೆ ತೀರ ಸಹಜವೆನ್ನಿಸಿತು. ಹೀಗೆ ಕೃತಕತೆಯಿಂದ ಹೊರಬಂದು ಜೀವಿಸಲು ಈ ಪಾತ್ರಗಳಿಗೆ ಹೀಗೆಂಥಾದರೂ ಒಂದು ಸಣ್ಣ ಅವಮಾನ ಎದುರುಗೊಳ್ಳಬೇಕೇನೋ. ನನ್ನ ಆಜ್ಞೆ ಪಾಲಿಸುತ್ತ ಅವುಗಳೆಲ್ಲ ಹೊರಟಾಯ್ತು. ಪಾತ್ರಗಳ ಭ್ರಮೆ ಕಳಚಿತೋ ಅಥವಾ ನನ್ನದೋ.
ಈಗ ಆಸನ, ಮನೆ ಮನಸ್ಸು ಬುದ್ದಿ ಎಲ್ಲ ಬಿಕೋ ಅನ್ನಿಸತೊಡಗಿತು. ಏನೂ ಹೊಳೆಯುತ್ತಿಲ್ಲ. ಆ ಪಾತ್ರೆಗಳೆಲ್ಲ ನನ್ನೆದುರು ಕೂತಿದ್ದರೇ ಚೆನ್ನಾಗಿತ್ತೇ? ಅನಾಯಾಸ ಬಂದವುಗಳನ್ನು ಹಾಗೆ ಯಾವುದೇ ಹಂಗಿಲ್ಲದೇ ಹೊರತಳ್ಳಿದೆನಲ್ಲಾ, ಒಬ್ಬೊಬ್ಬರೇ ಮಾತಾಡಿ ಅಂತ ಸಮಾಧಾನದಿಂದ ಹೇಳಬೇಕಾಗಿತ್ತು. ಕೂಡಿಸಿ ಪ್ರಶ್ನಿಸಿ ಅವರು ಹೇಳಿದ್ದನ್ನು ಬರೆದುಕೊಂಡಿದ್ದರೂ ಸಾಕಾಗಿತ್ತೇ? ಗದರಿ ಅವುಗಳನ್ನು ಅಟ್ಟಿದ್ದೇ ಒಮದು ದೊಡ್ಡ ಹಾನಿಯಾಯ್ತೇ ನನಗೆ? ಅಂತಲೂ ಅನ್ನಿಸುತ್ತ ಹೋಗಿ ಬೇಸರವಾಯ್ತು. ಸ್ವಲ್ಪ ಹೊತ್ತಿಗೆಲ್ಲ ಪ್ರಶಾಂತತೆ ಆವರಿಸಿಕೊಂಡಿತು.
ಮಧ್ಯಾಹ್ನವಾಯಿತು.
ನನ್ನ ಮಗ ಪಲ್ಸರ್ ಮೇಲೆ ಹಾರಿಕೊಂಡೇ ಕಾಲೇಜಿಂದ ತೆರಳುತ್ತಿದ್ದವ ಸಣ್ಣಗೆ ಸಿಳ್ಳು ಎಲ್ಲೋ ಕೇಳಿದ್ದೇನಲ್ಲಾ ಅನ್ನಿಸಿತು. ಆತ ತನ್ನ ಖೋಲಿಗೆ ಪ್ರವೇಶಿಸುತ್ತಿದ್ದಂತೆಯೇ ಅವನ ಬ್ಯಾಗಿನೊಳಗಿನ ಮೊಬೈಲ್ ಹಾಡತೊಡಗಿತು. ಮಗ ಬಾಗಿಲು ಮುಚ್ಚಿಕೊಂಡ. ನಾನು ದುರುಳ ತಾಯಿಯ ಸಂಶಯ ಹೊತ್ತು ಬಾಗಿಲಿಗೆ ಕಿವಿ ಹಚ್ಚಿ ಮೆಲ್ಲಗೆ ಬಡಿದೆ. ‘ಒಂದ್ನಿಮಿಷ ಮ್ಯಾಮ್, ಊಟ ಅಲ್ಲೇ ಇಡು.. ನನ್ನ ಫ್ರೆಂಡ್ ಫೋನು..’ ಅಂದದ್ದು ಯಾವುದೋ ದೂರದ ಲೋಕದಲ್ಲಿ ಹೇಳಿದಂತೆ ಕೇಳಿತು. ಬಾಗಿಲ ಅಗಳಿ ಹಾಕಿತ್ತು. ಬರೋಬ್ಬರಿ ಒಂದು ತಾಸು ಅಬ್ಬಾ! ಅಷ್ಟೊಂದು ದೂರದ ಸ್ನೇಹಿತನೇ? ಸಮೀಪದವನೇ ? ಇಷ್ಟೊಂದು ಮಾತು ಅಷ್ಟು ಬೇಗ ಎಲ್ಲಿಂದ ಹೇಗೆ ಸ್ಟಾಕ್ ಆದದ್ದು? ಒಂದೂ ತಿಳಿಯಲಿಲ್ಲ.
ನನ್ನ ಅಡುಗೆ ಅರ್ಧಂಬರ್ಧ ಮುಗಿದಿತ್ತು. ಬೆಳಿಗ್ಗೆ ಒಮ್ಮೆಲೇ ಪ್ರತ್ಯಕ್ಷವಾಗಿ ಕುತ್ತಿಗೆ ಏರಿ ಕೂತಂತೆ ಹೆದರಿಸಿ ಹೋದ ಪಾತ್ರಗಳೆಲ್ಲ ಮಗನ ಮೊಬೈಲಿನಲ್ಲೇ ಬಂದು ಕೂತಂತೆ ಕಸಿವಿಸಿಯಾಯಿತು. ಮಗ ಬಾಗಿಲು ತೆರೆದ. ‘ಊಟ ಬೇಡ, ಬೆಳಗಿನ ತಿಂಡಿಯೇ ಉಳಿದಿದ್ದರೆ ಕೊಡು ಮಾಮ್’ ಅಂದ. ಅವನ ಕಣ್ಣುಗಳಲ್ಲಿ ಎಂಥದೋ ಮಿಂಚು. ಆ ಅಂಥದೇ ಒಂದು ಮಿಂಚನ್ನು ಬೆಳಿಗ್ಗೆ ಎಲ್ಲೋ ನೋಡಿದ್ದೇನಲ್ಲಾ ಅನ್ನಿಸಿತು.
ಈಗ ಸರಿಯಾಗಿ ಎರಡು ಗಂಟೆ.
ಬ್ಯಾAಕ್ ನೌಕರನಾದ ನನ್ನ ಗಂಡ ಊಟಕ್ಕೆ ಬರುವ ಹೊತ್ತು. ಬೇಗನೇ ಒಂದು ಅನ್ನ ಒಂದು ತೋವೆ ಎರಡೇ ಮಾಡಿದೆ. ಹಪ್ಪಳ ಕರಿದೆ. ಉಪ್ಪಿನಕಾಯಿ ಮುಂದಿಟ್ಟರೆ ಹರಿಹಾಯುತ್ತಾನೆ. ನಲವತ್ತರ ನಂತರ ಉಪ್ಪಿನಕಾಯಿ ಬಹಳ ತಿನ್ನಬಾರದು ಅಂತ ಯಾವುದೋ ದಡ್ಡ ವೈದ್ಯ ಹೇಳಿದ್ದಂತೆ. ದಾಳಿಗೆ ಕರಿಬೇವಿನ ಒಗ್ಗರಣೆ ಹಾಕುವಾಗ ತೊಳೆದ ಎಲೆಗಿರುವ ನೀರಿನಿಂದ ಅದು ಚಟಪಟ ಸದ್ದು ಮಾಡುತ್ತ ನನ್ನ ಗಂಡನ ಆಗಮನಕ್ಕೆ ಸ್ವಾಗತ ಕೋರಿದವು.
ಆತನ ಕಾರು ಇವತ್ತು ನಾನು ಹಿಂದೆAದೂ ಕೇಳದೇ ಇದ್ದ ಬೇರೆಯದೇ ಸಂಗೀತದ ಅಲೆಯ ಹಾರ್ನ ಹಾಕಿಸಿಕೊಂಡಿತ್ತು. ನಾನು ಅಚ್ಚರಿಯಿಂದ ಅಡುಗೆ ಮನೆಯ ಕಿಟಕಿಯಲ್ಲೇ ನಿಂತು ಆಲಿಸಿದೆ. ಆತ ಒಳಬಂದು ಕುರ್ಚಿಯಲ್ಲಿ ಕೂತು ಬೂಟಿನ ಲೇಸು ಬಿಚ್ಚುವಾಗಲೇ ಕೇಳಿದ ‘ಕಥೆ ಬರೆದಾಯ್ತೋ ಏನು ? ಇವತ್ತು ಕೊನೇ ತಾರೀಖು’ ಅದರ ಹಿಂದೆಯೇ ಮತ್ತೊಂದು ಸ್ವರ ‘ನನ್ನ ಶರ್ಟಿನ ಗುಂಡಿ ಕಿತ್ತು ನಿಂತಿತ್ತು, ಅದು ರಿಪೇರಿಯಾಗಿ ಇಸ್ತಿçಗೆ ಹೋಗಿದೆಯೋ ?’ ನಾನು ‘ಇಲ್ಲ’ ಮತ್ತು ‘ಹೌದು’ ಎರಡೂ ಪದಗಳನ್ನೂ ಜೊತೆಯಲ್ಲೇ ಉತ್ತರಿಸಿ ಮುಖ ಸೊಟ್ಟ ಮಾಡಿದೆ.
ಬೆಳಿಗ್ಗೆ ಯಾರೂ ಇಲ್ಲದಾಗ ಬಂದು ನುಗ್ಗಿದ ಕಥಾಪಾತ್ರಗಳಂತೆ ನನ್ನ ಕಷ್ಟಗಳನ್ನು ಅಥವಾ ಸಂವೇದನೆಗಳನ್ನು ಚೀರಿಕೊಳ್ಳುವುದು ನನಗೆ ಬೇಡವೆನಿಸಿತ್ತು. ಅಷ್ಟಾದರೂ ವಿಚಾರಿಸಿಕೊಳ್ಳುವ ಸಂಬAಧದ ಬಿಗಿ ತೋರುವನಲ್ಲಾ ಎಂದೂ ಒಂದೆಡೆ ಸಮಾಧಾನವಾಯಿತು. ಮಾತು ಮುಗಿದು ಹೋದದ್ದರಿಂದ ನಾನು ಈ ಮುಂದಿನ ಮಾತು ತೆಗೆದದ್ದು ‘ಕಾರಿನ ಮ್ಯೂಸಿಕ್ ಬದಲಾಗಿದೆ..?’ ‘ಹ್ಞು, ಸನ್ಮತಿ ಹೇಳಿದಳೆಂದು ಈ ಮ್ಯೂಸಿಕ್ ಅಳವಡಿಸಿದ್ದು..ಕೇಳಿತೇನು ನಿನಗೆ? ಎಷ್ಟು ಮೆಲೋಡಿ ಆಗಿದೆಯಲ್ಲ ? ಅವಳಿಗಿಷ್ಟದ ರಾಗವಂತೆ ಅದು..’ ನಾನು ‘ಹ್ಞು’ ಅಂದೆ.
ಈ ಸನ್ಮತಿ ಯಾರು ? ಅಂತ ತಕ್ಷಣ ಕೇಳುವ ಗೋಜಿಗೆ ನಾನು ಬೀಳಲಿಲ್ಲ, ಬೆಳಿಗ್ಗೆ ಬಂದು ಹೋದ ಪಾತ್ರಗಳಲ್ಲಿ ಈ ರಾಗವೂ ಇತ್ತೇ ? ಆತ ಮೌನವಾಗಿ ತೋವೆಯಲ್ಲಿ ಅನ್ನ ಕಲಸುತ್ತ ಹಪ್ಪಳ ಎಡಗೈಯಲ್ಲಿ ಮುರಿದ.
ನನ್ನ ಗಂಡ ಬ್ಯಾಂಕಿನ ಆ ಹುಡುಗಿ ರೇಖಾ ಗೊತ್ತು. ಅವಳ ಮಗುವಿನ ಹುಟ್ಟುಹಬ್ಬಕ್ಕೆ ಹೋಗಿ ನಾನು ಅವಳೊಂದಿಗೆ ಮಾತಾಡದೇ ಹಿಂತಿರುಗಿದ್ದಕ್ಕಾಗಿ ನಂತರದ ಮೂರು ದಿನ ನನ್ನ ಗಂಡ ನನ್ನೊಂದಿಗೆ ಮಾತು ಬಿಟ್ಟಿದ್ದ. ಇಲ್ಲ. ಅವನು ನನ್ನೊಂದಿಗೆ ಮಾತು ಬಿಟ್ಟಿದ್ದರ ಸರಿಯಾದ ಕಾರಣದ ಬಗ್ಗೆ ಇನ್ನೂ ಅನುಮಾನವಿದೆ. ಅಂದು ಅವನು ರೇಖಾಳೊಂದಿಗೆ ತಮಾಷೆ ಮಾಡುತ್ತಿದ್ದಾಗ ನಾನು ಅವಳ ಸುಂದರ ಗಂಡನೊAದಿಗೆ ಗಂಭೀರವಾಗಿ ಮಾತಾಡುತ್ತ ನಿಂತಿದ್ದೆ.
ನAತರ ರೇಖಾ , ಮನೆಯಲ್ಲಿ ನೈಟಿ ಬದಲು ಚೂಡಿಯನ್ನೇ ತೊಡುತ್ತಾಳೆಂಬ ವಿಷಯ ನನ್ನ ಗಂಡನ ಬಾಯಲ್ಲಿ ಒಂದಕ್ಕಿAತ ಹೆಚ್ಚು ಬಾರಿ ಕೇಳಿದಂತೆನಿಸಿತು. ನಾನೂ ಸಹ ನೈಟಿ ತ್ಯಜಿಸಿ ಚೂಡಿ ತೊಟ್ಟೆ. ಅವಳು ಮೀನು ತಿನ್ನುವುದಿಲ್ಲ ಅಂತಲೂ ತುಂಬ ಸಲ ಹೇಳಿದಂತೆನಿಸಿತು. ನಾನೂ ಮೀನು ತಿನ್ನುವುದನ್ನು ಬಿಟ್ಟೆ. ಅವಳು ಚಹ ಕುಡಿಯುವದಿಲ್ಲ ಅಂತ ಎಲ್ಲೋ ಒಂದು ಬಾರಿ ಹೇಳಿದಂತೆನ್ನಿಸಿತು. ನಾನೂ ಚಹ ಕುಡಿಯುವದನ್ನು ನಿಲ್ಲಿಸಿದೆ.
ಆದರೆ ಇವಳ್ಯಾವ ಸನ್ಮತಿ ? ಯಾವ ಗಂಡನ ಶ್ರೀಮತಿ ? ಅವಳ ಗಂಡನನ್ನೊಮ್ಮೆ ಭೇಟಿಯಾಗಬೇಕೆನ್ನಿಸಿತು. ಅವಳಿಗಿಷ್ಟದ ರಾಗ ಕಲಿಯಬೇಕೆನ್ನಿಸಿತು. ಒಳಗೆಲ್ಲೋ ಸಣ್ಣ ಅಸೂಯೆ ಕಾಡಿತು. ಈಗ ಕೈಬಿಟ್ಟರೆ ಮತ್ತೆ ಮುಂದೆAದೂ ಸಿಕ್ಕದ ಪಾತ್ರ ಪ್ರಪಂಚಗಳಿವು. ಇವೆಲ್ಲ ಈಗಲೇ ಈ ಕ್ಷಣದಲ್ಲೇ ನನ್ನದಾಗಿಸಿಕೊಳ್ಳಬೇಕು.
ಇಸ್ತಿçà ಹುಡುಗ ಬಂದ.
ಅವನಿಗೆ ಚಿಲ್ಲರೆ ಕೊಡುವ ಉದ್ದೇಶದಿಂದ ನನ್ನ ಗಂಡನ ಜೇಬು ತಡಕಿದೆ. ಅಷ್ಟರಲ್ಲಿ ಅಲ್ಲಿದ್ದ ಮೊಬೈಲ್ ರಿಂಗಣಿಸಿತು. ಈ ಸುಮಧುರ ಸ್ವರ ಆ ಕಾರ್ ಹಾರ್ನಿನ ಮುಂದಿನ ಪಿಚ್ಚಿನಲ್ಲಿದೆಯೇ ? ಅಥವಾ ಇಲ್ಲವೇ ?
ಹಾಗೇ ಹೂವಂತೆ ಎತ್ತೊಯ್ದು ಗಂಡನ ಕೈಗೆ ತಲುಪಿಸಿದೆ. ಅಂಥ ಸ್ವರಗಳೇ ನನ್ನ ಪರಿಸರದ ಆಸ್ತಿಯಲ್ಲವೇ ? ಆತ ನಂಬರು ನೋಡಿ ಡಿಸ್ಕನೆಕ್ಟ್ ಮಾಡುತ್ತ ಮುಗುಳು ನಕ್ಕ. ಪತ್ನಿಯರೇ ಆ ಮುಗುಳು ನಗೆಗೆ ಅರ್ಥ ಹುಡುಕಲು ಹೋಗಬೇಡಿ. ಬೆಳಿಗ್ಗೆ ನನ್ನ ಬೆನ್ನು ಹತ್ತಿದ ಆ ಪಾತ್ರಗಳಲ್ಲಿ ಒಂದು ಪಾತ್ರಕ್ಕೆ ಇಂಥದೇ ಮುಗುಳು ನಗು ಇತ್ತು.
ಗಂಡ ಉಂಡು ಡ್ರೆಸ್ ಮಾಡಿಕೊಂಡು ನನ್ನ ನಯವಾದ ಕೆನ್ನೆಯನ್ನೊಮ್ಮೆ ನಯವಾಗಿ ಸವರಿ , ಮಗನ ಬದಿ ಅರ್ಧ ತಿರುಗಿ ‘ಎಷ್ಟು ಘಂಟೆಗೆ ಟ್ಯೂಷನ್ನೋ?’ ಕೇಳುತ್ತಾ ಹೊರಹೋದ. ಇಲ್ಲಿ ನಯವಾದ ಕೆನ್ನೆಯ ಪಾತ್ರ ದೊಡ್ಡದು. ಕಾರು ಸ್ಟಾರ್ಟಾಗಿತ್ತು.
ಮಗ ಆಗಷ್ಟೇ ಎಚ್ಚರವಾದವನಂತೆ ಮೊಬೈಲ್ ಕಿಸೆಗಿಳಿಸುತ್ತಲೇ ಟ್ಯೂಷನ್ನಿಗೆ ನಡೆದ.
ನಾನೇ ಮುಂದೆ ಹೋಗಿ ‘ಏ, ಸೆಲ್ ಮನೆಯಲ್ಲೇ ಇಟ್ಟು ಹೋಗೋ’ ಅಂತ ಗದರಿದೆ. ‘ನನ್ನ ಫ್ರೆಂಡ್ಸ್ ಜೊತೆ ಸ್ಟಡೀ ಡಿಸ್ಕಸ್ ಗೆ ಬೇಕದು, ದೊಡ್ಡದಾಗಿ ಕಥೇ ಬರಿಯುವವಳಂತೆ, ಅಷ್ಟೂ ಅರ್ಥ ಆಗೊಲ್ವೇ ?’ ಕೇಳಿದ. ‘ಅದು ನನ್ನ ಕಥಾ ಪಾತ್ರಕ್ಕೆ ಸರಿಹೊಂದೊಲ್ವೇನೋ ಅಂತ ಹಾಗೆ ಹೇಳಿದೆ ಪುಟ್ಟಾ’ ಅಂದೆ. ನನ್ನ ಮಗನಿಗೆ ಅರ್ಥವಾಗಲಿಲ್ಲ.
ನಾನು ಬಡಿಸಿಕೊಂಡು ಉಣ್ಣುತ್ತ ಹೊರಬಂದೆ.
ಪೋಸ್ಟ್ ಮನ್ ನ ಸೈಕಲ್ ಬೆಲ್ ಕೇಳಿತು. ಆ ಬೆಲ್ಲಿನ ಸದ್ದು ಅನೇಕ ಸ್ಪೂರ್ತಿಗಳನ್ನು ಹೊತ್ತು ತರುವ ನನ್ನ ಅನುದಿನದ ಆತ್ಮಸಂಗಾತಿ. ತಾಟನ್ನು ಅಲ್ಲೇ ಇಟ್ಟು ಹೊರ ಓಡಿ ಬಂದೆ. ಹಸ್ತಾಕ್ಷರದ ಕಾರ್ಡುಗಳಿಗೆ ಮಾಂತ್ರಿಕ ಚೈತನ್ಯ. ಅಂತರ್ದೇಶಿ ಪತ್ರ, ಯಾರೋ ಬರೆದ ಕಥಾ ಸಂಕಲನಗಳು, ಯಾವುದೋ ಪತ್ರಿಕೆಯ ವಿಶೇಷಾಂಕಕ್ಕಾಗಿ ಹೊಸ ಕತೆ ಬರೆಯಬೇಕಾಗಿರುವ ಬೇಡಿಕೆ ಪತ್ರ, ವಾರ್ಷಿಕ ಚಂದಾ ನೀಡಿ ತರಿಸುವ ಆಪ್ತ ಪತ್ರಿಕೆಗಳು.. ಎಲ್ಲವನ್ನೂ ಎದೆಗಪ್ಪಿಕೊಂಡು ಒಳಬಂದೆ.
ಉಣ್ಣುವ ತಾಟು ಅಲ್ಲೇ ಉಳಿಯಿತು.
ಅಂಚೆ ಪತ್ರಗಳ ಜೊತೆ ಒಳಗೆ.. ಒಳಗೆ… ಒಳಗೆ…. ಇಳಿದು ಹೋದೆ. ಇನ್ನೊಂದು ಮುಚ್ಚಿದ ಪತ್ರವನ್ನು ಮೆಲ್ಲಗೆ ಬಿಡಿಸಿದೆ… ಅಲ್ಲಿ ಮೊದಲ ಸಾಲು ಹೀಗಿತ್ತು.. ಸಹಜ ಸ್ಪಂದನಕ್ಕೆ ಅಚ್ಚರಿಯ ಸ್ಪರ್ಶ ಕೊಡಬಲ್ಲ ಮುದ್ದಿನ ಕಥೆಗಾರ್ತಿಗೆ… ಪತ್ರಕ್ಕೊಂದು ಮುತ್ತು ಕೊಟ್ಟು ಎದೆಗೊತ್ತಿಕೊಂಡೆ. ಇಲ್ಲಿ ಸಿಹಿ ಮುತ್ತಿನದೂ ಒಂದು ಪ್ರಮುಖ ಪಾತ್ರ.
ಬೆಳಿಗ್ಗೆ ಚಿಲಕ ಸರಿಸಿ ಒಳಬಂದು ನನ್ನ ತಲೆತಿಂದುನನ್ನಿAದ ಬೆದರಿಸಿಕೊಂಡು ಸಪ್ಪೆ ಮುಖಹೊತ್ತು ಹೋದ ಪಾತ್ರಗಳಲ್ಲಿ ಈ ಅಪರಿಚಿತ ಸರದಾರನ ಕೋಮಲ ಕಥಾನಕವೂ ಇತ್ತೇ ? ಸಂಶಯ ಕಾಡಿತು. ಇಲ್ಲಿ ಮುದ್ದಾಗಿರುವುದು ಕತೆಯೋ ? ಕಥೆಗಾರ್ತಿಯೋ? ಇದು ನನ್ನ ಕತೆಯ ಕಾಯ. ಈ ಪತ್ರವನ್ನು ನನ್ನ ಗಂಡನಿಗೆ ತೋರಿಸಬೇಕೋ? ಬೇಡವೋ? ಎಂಬುದು ನನ್ನ ಕತೆಯ ಆತ್ಮ.
ನಾನು ಹಚ್ಚಿಕೊಂಡಿದ್ದ ಪಾತ್ರಗಳು ಕಾಯದೊಳಗಣ ಆತ್ಮವಾಗಿ ಹೊರಬಂದವು. ಅಲ್ಲಿ ರೇಖಾ ಮತ್ತು ಸನ್ಮತಿಯ ಮೋಹಕ ಗಂಡAದಿರ ನೋಟಗಳಿದ್ದವು.
(ಉಳುಮೆ ಪತ್ರಿಕೆ -೨೦೦೭)

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles