ಶ್ರೀ ಮದ್ದಲೇಶ್ವರ ಮತ್ತು ಶ್ರೀ ಮಹಾಮಾಯೆಕನ್ಯಮ್ಮ ದೇವಾಲಯ.ಕೇಣಿ

ಈ ದೇವಾಲಯವು ಅಂಕೋಲಾ ಭಾವಿಕೇರಿ ರಸ್ತೆಯ ಪಕ್ಕದಲ್ಲಿ ಕೇಣಿಯ ನದಿಯ ದಂಡೆಯ ಸ್ವಲ್ಪದೂರದಲ್ಲಿ ಪ್ರಶಾಂತ ವಾತಾವರಣದಲ್ಲಿ ಇರುತ್ತದೆ.ಇಲ್ಲಿರುವ ದೇವತೆಗಳು ಮಾನವ ನಿರ್ಮಿತ ಮೂರ್ತಿಗಳಾಗಿರದೇ ಉದ್ಭವ ಮೂರ್ತಿಗಳಾಗಿರುತ್ತವೆ. ಗರ್ಭಗುಡಿಯಲ್ಲಿ 5 ದೇವರ ಮೂರ್ತಿಗಳನ್ನು ಕಾಣಬಹುದು.

ಈ ದೇವಾಲಯವು ಕೇಣಿಯ ಬಂಟ ಸಮಾಜದವರ ಆಡಳಿತಕಕ್ಕೆ ಒಳಪಟ್ಟಿದ್ದು, ದೇವರ ಪೂಜಾರಿಗಳು ಸಹ ಅವರೇ ಆಗಿರುತ್ತಾರೆ.ಪ್ರತಿ ಸೋಮವಾರ ಮತ್ತು ಶುಕ್ರವಾರ ಮಧ್ಯಾಹ್ನ ಪೂಜೆ ನಡೆಯುತ್ತದೆ. ಆ ಸಮಯದಲ್ಲಿ ದೇವರಿಗೆ ಪ್ರಸಾದ ಹಚ್ಚಿ ಪ್ರಶ್ನೆ ಕೇಳುವ ಸಂಪ್ರದಾಯವಿರುತ್ತದೆ.

ಕೆಲವು ವರ್ಷಗಳ ಹಿಂದೆ ಇಲ್ಲಿರುವ ದೇವತೆಗಳನ್ನು ಹಿನಿ ದೇವರು,ಮದ್ರಾಸ್ ದೇವರು ಎಂದು ಕರೆಯುತ್ತಿದ್ದರು.ಇತ್ತೀಚಿಗೆ ಪುನರ್ನಾಮಕರಣ ಮಾಡಿ ಶ್ರೀ ಮದ್ದಲೇಶ್ವರ ಮತ್ತು ಮಹಾಮಾಯೆಕನ್ಯಮ್ಮ ಎಂದು ಕರೆಯುತ್ತಾರೆ.

ಪ್ರತಿವರ್ಷ ಮಾರ್ಚ್ ತಿಂಗಳಿನಲ್ಲಿ ವರ್ಧಂತಿ ಉತ್ಸವ ಮಾಡಿ ಯಜ್ಞ-ಯಾಗಾದಿಗಳನ್ನು, ಅನ್ನಸಂತರ್ಪಣೆಯನ್ನು ನಡೆಸಲಾಗುತ್ತದೆ.ಮಾರ್ಗಶಿರ ಮಾಸದಲ್ಲಿ ಭಜನೆ ಸಪ್ತಾಹ ಮಾಡಿ ದೇವರ ರಥವು ನಮ್ಮ ಕುಟುಂಬದ ಕಟ್ಟೆಯ ಮೇಲೆ ಕುಳಿತು ಸಾರ್ವಜನಿಕರ ಪೂಜೆಯನ್ನು ಸ್ವೀಕರಿಸಿ ಸಾಗುತ್ತದೆ.ಮೇ ತಿಂಗಳಿನಲ್ಲಿ ಗಡಿಹಬ್ಬ ಮಾಡಿ ಪರಿವಾರ ದೇವತೆಗಳಿಗೆ ಕೋಳಿ ಬಲಿ ಕೊಡುತ್ತಾರೆ.

ನಮ್ಮ ಕುಟುಂಬಕ್ಕೆ ಮತ್ತು ಈ ದೇವಾಲಯಕ್ಕೆ ನೇರ ಸಂಬಂಧ ಇಲ್ಲ ಎಂದು ಭಾವಿಸಲಾಗಿತ್ತು. ಆದರೆ ಇತ್ತೀಚಿಗೆ ದೇವಾಲಯದ ಪೂಜಾರಿಗಳ ಹೇಳಿಕೆಯಂತೆ ಸುಮಾರು 200 ವರ್ಷಗಳ ಹಿಂದೆ ಈ ದೇವರ ಆರಾಧನೆಯನ್ನು ನಮ್ಮ ಕುಟುಂಬದವರು ಮಾಡುತ್ತಿದ್ದರು.ಆ ಕಾಲದಲ್ಲಿ ನಮ್ಮ ಕುಟುಂಬದವರೇ ಆದ ಕೇಣಿಯ ಕರಡಿ ಮನೆಯವರು ದೇವರಿಗೆ ವರ್ಷಕ್ಕೊಮ್ಮೆ ಪೂಜೆ ಸಲ್ಲಿಸುತ್ತಿದ್ದರು.ಆದರೆ ಆರ್ಥಿಕ ಮುಗ್ಗಟ್ಟಿನಿಂದಾಗಿ ಕರಡಿ ಮನೆಯವರು ಅನೇಕ ವರ್ಷಗಳಿಂದ ಪೂಜೆ ಸಲ್ಲಿಸುವುದನ್ನು ನಿಲ್ಲಿಸಿದ್ದು, ನಮ್ಮ ಕುಟುಂಬದವರು ಪೂಜೆ ಸಲ್ಲಿಸುವಂತೆ ಆಗ್ರಹಪಡಿಸಿದ್ದಾರೆ.

ಅವರ ಈ ಮಾತಿಗೆ ಪುಷ್ಟಿ ಕೊಡುವಂತೆ ನಮ್ಮ ಕುಟುಂಬದ ಸದಸ್ಯರು ಹೊನ್ನಾವರ ದೈವದಲ್ಲಿ ಪ್ರಶ್ನಿಸಲಾಗಿ,ನಮ್ಮ ಕುಟುಂಬದವರು ಬಹಳ ಹಿಂದೆ ನದಿ ದಂಡೆಯ ಮೇಲಿನ ದೇವರನ್ನು ಆರಾಧಿಸುತ್ತಿದ್ದರು ಎಂದು ಉತ್ತರಿಸಿರುತ್ತಾರೆ ಎಂಬುದಾಗಿ ತಿಳಿದುಬಂದಿರುತ್ತದೆ.

ಈ ದೇವರು ಪ್ರತಿವರ್ಷ ಹೆಚ್ಚೆಚ್ಚು ಭಕ್ತರನ್ನು ಸೆಳೆಯುತ್ತಿದ್ದು,ನಮ್ಮ ಕುಟುಂಬದವರ ಮೇಲೆ ಶ್ರೀ ದೇವರ ಕೃಪೆ ಇರಲಿ ಎಂದು ಆಶಿಸುತ್ತೇನೆ.

ಶ್ರೀಪಾದ.
7/02/2021.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles