ಶ್ರೀ ಮಹಾಲಸಾ ನಾರಾಯಣಿ ದೇವಾಲಯ ಕುಮಟಾ
Car Street near theen Katta,
Kumta .
581343.
Ph: 08386 222119.
ಕುಮಟಾ ನಗರದ ಹಲವಾರು ಪುರಾತನ ಮಂದಿರಗಳಲ್ಲಿ ಶ್ರೀ ಮಹಾಲಸಾ ನಾರಾಯಣೀ ಮಂದಿರವೂ ಸಹ ಸಮಾವೇಶಗಳುತ್ತದೆ. ಪೋರ್ಚುಗೀಸರ ದಬ್ಬಾಳಿಕೆಯಿಂದ ಪಲಾಯನ ಮಾಡಿ ಕುಮಟಾಕ್ಕೆ ಬಂದ ಭಕ್ತರು 1565 ರಲ್ಲಿ ದೇವಸ್ಥಾನ ನಿರ್ಮಾಣ ಮಾಡಿದರು. ದೇವಾಲಯದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ತುಂಬಾ ಮೋಹಕವಾದ ಪಂಚಲೋಹದ ವಿಗ್ರಹವು ಹಿಂದೂಧರ್ಮದ ಪ್ರಾಚೀನ ವೈಭವವನ್ನು ಜ್ಞಾಪಕಕ್ಕೆ ತಂದುಕೊಡುತ್ತದೆ. ಶ್ರೀ ಮಹಾಲಸಾ ನಾರಾಯಣಿಯ ಸಂಪೂರ್ಣವಾದ ರೂಪದರ್ಶನವನ್ನು ನೋಡಿದಾಗ ಭಾವಿಕರು ಮೈಮರೆತು ಅಲ್ಲಿಯೇ ಕೆಲಕಾಲ ಧ್ಯಾನಸ್ಥರಾಗುವಂತಿದೆ. ಶ್ರೀದೇವಿಯ ಉತ್ಸವ ಕವಚವು ಸುಮನೋಹರವಾಗಿದೆ.ಭಕ್ತರಿಗೆ ತನ್ನ ಕೃಪಾಹಸ್ತವನ್ನು ಚಾಚಿ ಅಭಯ ನೀಡುತ್ತಲೂ,ಅಭಿಷ್ಟ ನೆರವೇರಿಸುತ್ತಲೂ ಹಾಗೂ ಜೀವನದಲ್ಲಿ ನೊಂದವರಿಗೆ ಆಶ್ರಯವನ್ನು ನೀಡುತ್ತಲೂ ಪರಿಪಾಲಿಸುತ್ತಿರುವಳು.
ಶ್ರೀ ಮಹಾಲಸಾ ದೇವಿಯ ಸಂಪುಟ :
ಶ್ರೀಯ ಪಂಚಲೋಹದ ಉತ್ಸವ ಮೂರ್ತಿ,ಶ್ರೀ ವೆಂಕಟೇಶ್ವರ ದೇವರ ಪ್ರತಿಮೆ,ಸುದರ್ಶನ ಚಕ್ರ, ಶ್ರೀ ಮಹಾಲಕ್ಷ್ಮಿ ಚತುಷಷ್ಠಿ ಚಕ್ರ ,ರತ್ನಗರ್ಭ ಸಾಲಿಗ್ರಾಮ,ವರಾಹ ಸಾಲಿಗ್ರಾಮ,ಕೂರ್ಮ ಸಾಲಿಗ್ರಾಮ,ವಿಷ್ಣುಚಕ್ರ ಹಾಗೂ ಶ್ರೀ ಪರ್ತಗಾಳಿ ಮಠಾಧೀಶರು ಭಕ್ತರನ್ನು ಆಶೀರ್ವದಿಸಿ ಶ್ರೀ ಸಂಸ್ಥಾನಕ್ಕೆ ನೀಡಿರುವ ನಾರಸಿಂಹ ಸಾಲಿಗ್ರಾಮ, ವಾಸುದೇವ ಸಾಲಿಗ್ರಾಮ ಮತ್ತು ಅನಂತ ಸಾಲಿಗ್ರಾಮ.
ಕೌಲ ಪ್ರಸಾದ
ಕೌಲ ಪ್ರಸಾದವನ್ನು ಮುಂಜಾನೆ 5 ರಿಂದ 5.30 ಕ್ಕೆ ಹಚ್ಚಿ ಮುಂಜಾನೆ 8 ಗಂಟೆಯೊಳಗೆ ತೆಗೆದುಕೊಳ್ಳುವುದು ಇರುತ್ತದೆ. ಪ್ರತಿ ರವಿವಾರ,ಮಂಗಳವಾರ, ಶುಕ್ರವಾರ,ದ್ವಾದಶಿ ಮತ್ತು ಇತರ ಉತ್ಸವದ ದಿನಗಳಲ್ಲಿ ಪ್ರಸಾದ ಹಚ್ಚಲಾಗುವುದಿಲ್ಲ.
ಪಲ್ಲಕ್ಕಿ ಉತ್ಸವ
ಪ್ರತಿ ತಿಂಗಳು ಅಮಾವಾಸ್ಯೆಯ ನಂತರ ಬರುವ ಪ್ರಥಮ ರವಿವಾರದಂದು ಪಲ್ಲಕ್ಕಿ ಉತ್ಸವ ನಡೆಯುತ್ತದೆ.ಆದರೆ ಚಾತುರ್ಮಾಸದ ಅವಧಿಯಲ್ಲಿ ಈ ಉತ್ಸವವು ಇರುವುದಿಲ್ಲ. ಪ್ರತಿ ರವಿವಾರ ಪರ ಊರಿನಿಂದ ಬರುವ ಭಕ್ತರಿಗೆ ಮಧ್ಯಾಹ್ನ ಅನ್ನಸಂತರ್ಪಣೆ ವ್ಯವಸ್ಥೆ ಇರುತ್ತದೆ.
*********
ಶ್ರೀ ಮಹಾಲಸ ಸಿದ್ಧಿವಿನಾಯಕ ಮಂದಿರ ಮಾದನಗೇರಿ
ಗೋಕರ್ಣಕ್ಕೆ ಹತ್ತಿರುವಿರುವ ಮಾದನಗೇರಿಯಲ್ಲಿ 1850 ರಲ್ಲಿ (ಅಂದಾಜು) ಸಿದ್ಧಿವಿನಾಯಕ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಮೊದಲಿನಿಂದಲೂ ಈ ವಿಗ್ರಹಕ್ಕೆ ಶ್ರೀ ಮಹಾಲಸ ಸಿದ್ಧಿವಿನಾಯಕ ದೇವರೆಂದು ಆರಾಧಿಸಲಾಗುತ್ತದೆ.
1984-85 ರಿಂದ ಶ್ರೀ ಮಹಾಲಸಾ ಸಿದ್ಧಿವಿನಯಕನ ಖ್ಯಾತಿಯು ದಿನದಿಂದ ದಿನಕ್ಕೆ ವೃದ್ಧಿಗೊಳ್ಳುತ್ತಾ ಹತ್ತಿತು. 1992 ರಲ್ಲಿ ನೂತನವಾದ ದೇವಾಲಯವನ್ನು ನಿರ್ಮಿಸಿ ಶ್ರೀ ಸಿದ್ಧಿವಿನಾಯಕ ಹಾಗೂ ಶ್ರೀ ಮಹಾಲಸೇ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಯಿತು. ದೇವರ ಎದುರಿಗೆ 27 ಅಡಿ ಎತ್ತರದ ಏಕಶಿಲಾ ಧ್ವಜಸ್ತಂಭ ಮತ್ತು ಎಂಟು ಅಡಿಯ ದೀಪಸ್ತಂಭವನ್ನು ಕೂಡಾ ಸ್ಥಾಪಿಸಲಾಗಿದೆ.ಮಹಾಲಸೆಯ ನೂತನ ಶಿಲಾಮಯ ವಿಗ್ರಹವನ್ನು ಫಾಲ್ಗುಣ ವಧ್ಯ ಪಂಚಮಿಯಂದು 2000 ರಲ್ಲಿಸ್ಥಾಪಿಸಿ ಪ್ರಾಂಗಣವನ್ನು ನವೀಕರಿಸಲಾಗಿದೆ.
ವರ್ಧಂತಿ ಉತ್ಸವ ಪ್ರತಿವರ್ಷ ಫಾಲ್ಗುಣ ವದ್ಯ ಪಂಚಮಿಯಂದು ನಡೆಯುತ್ತದೆ.
********
ಶ್ರೀ ಮಹಾಲಸಾ ನಾರಾಯಣಿ ಪಾದುಕಾ ಮಂದಿರ ಅಂಕೋಲಾ
ಅಂಕೋಲಾ ಗ್ರಾಮದ ಮಧ್ಯಭಾಗದಲ್ಲಿ ಪುರಾತನವಾದ ಶ್ರೀ ಶಾಂತಾದುರ್ಗಾ ದೇವಿಯ ಒಂದು ದೇವಾಲಯ ಇರುತ್ತದೆ. ಒಮ್ಮೆ ದೇವಿಯ ಕುಲಾವಿ ಭಕ್ತನು,ದರ್ಶನ ಪಡೆಯಲು ಮಾರ್ಡೋಳ ಗ್ರಾಮಕ್ಕೆ ಬಂದು ದರ್ಶನ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಶಾಂತಾದುರ್ಗಾ ದೇವಿಯ ಮಂದಿರದ ಹತ್ತಿರ ದೇವಿಯ ಹೆಸರಲ್ಲಿ ಸೇವೆ ಮಾಡುವುದಾಗಿ ಸಂಕಲ್ಪ ಮಾಡಿದನು. ಆತನು ಮಾರ್ಡೋಳಕ್ಕೆ ಹೋದಾಗ ಪ್ರಸನ್ನಳಾಗಿ ದೇವಿಯು ಸೂಚನೆ ನೀಡಿದಳು,”ನನ್ನ ಪಾದುಕೆಯನ್ನು ಇಲ್ಲಿಂದ ಒಯ್ದು ಅಂಕೋಲಾದಲ್ಲಿರಿಸಿ ಅದರ ಸೇವೆ ಮಾಡಿ ಕೃತಾರ್ಥನಾಗು ಎಂದು ಅನುಗ್ರಹಿಸಿದಳು. ದೇವಿಯ ಸೂಚನೆಯಂತೆ ಶ್ರೀ ಮಹಾಲಸಾ ನಾರಾಯಣಿ ಪಾದುಕೆಯನ್ನು ಮಾರ್ಡೋಳದಿಂದ ಒಯ್ದು ಅಂಕೋಲದಲ್ಲಿರುವ ಶ್ರೀ ಶಾಂತಾದುರ್ಗಾ ದೇವಿಯ ಮಂದಿರದ ಬಲಭಾಗದಲ್ಲಿ ಸ್ಥಾನ ಕಲ್ಪಿಸಿ ಸೇವೆಯನ್ನು ಪ್ರಾರಂಭಿಸಿದನು. ಕೆಲಸಮಯದ ನಂತರ ಭಕ್ತರು ಚಿಕ್ಕದಾದ ಮಂದಿರವನ್ನು ಕಟ್ಟಿ ಕಟ್ಟಿ ಪಾದುಕೆಯನ್ನು ಪ್ರತಿಷ್ಠಾಪಿಸಿದರು. ಕ್ರಿಸ್ತಶಕ 2001ರಲ್ಲಿ ಗೋಪುರದ ಕಳಸ ಪ್ರತಿಷ್ಠಾಪನೆ ಮಾಡಲಾಗಿದೆ.
ಉತ್ಸವದ ದಿನಗಳು
ಮಹಾಲಯ ಪಕ್ಷದಲ್ಲಿ ಪುಷ್ಪ ಪೂಜೆ,
ಮಾರ್ಗಶಿರ ಷಷ್ಠಿ ಉತ್ಸವ, ಫಾಲ್ಗುಣ ಬಹುಳ ತದಿಗೆಯಂದು ವರ್ಧಂತಿ ಉತ್ಸವ.
********
ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಇತರ ಮಹಾಲಸಾ ಮಂದಿರಗಳು
ಮುಡಗೇರಿ (ಕಾರವಾರ)ಯಲ್ಲಿರುವ ಶ್ರೀ ಶಾಂತೇರಿ ಮಹಾಲಸಾ ನಾರಾಯಣೀ ಗಣಪತಿ ಸಂಸ್ಥಾನ ,ಶ್ರೀ ಮಹಾಲಸಾ ದೇವಾಲಯ ಬಿಣಗಾ (ಕಾರವಾರ), ಶ್ರೀ ಮಹಾಲಸೆಯ ಮಂದಿರ ಕಾಜುಭಾಗ (ಕಾರವಾರ),ಶ್ರೀ ಮಹಾಲಸಾ ನಾರಾಯಣಿ ದೇವಸ್ಥಾನ ಹಣಕೋಣ ಸದಾಶಿವಗಡ (ಕಾರವಾರ).
ಸಂಗ್ರಹ:ಶ್ರೀಪಾದ
1/04/2020
Terms & Condition || Privacy Policy || Sitemap || Contact Us
© 2023-24 MyKVS. All rights reserved. || Powered by Onestop Website Solution
Terms & Condition
Privacy Policy
Sitemap
Contact Us
© 2023-24 MyKVS. All rights reserved. || Powered by Onestop Website Solution