ಶ್ರೀ ಶ್ರೀ ಶ್ರೀ ಭಾರತಿತೀರ್ಥ ಜಗದ್ಗುರುಗಳು

ಆದಿ ಶಂಕರಾಚಾರ್ಯರು ಸನಾತನ ಧರ್ಮದ ರಕ್ಷಣೆಗಾಗಿ ದಕ್ಷಿಣದಲ್ಲಿ ಶೃಂಗೇರಿ, ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪುರಿ ,
ಪಶ್ಚಿಮದಲ್ಲಿ ದ್ವಾರಕೆಯಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದರು.ದಕ್ಷಿಣಾಮ್ನಾಯ ಶೃಂಗೇರಿ ಪೀಠದ ಅವಿಚ್ಛಿನ್ನ ಪರಂಪರೆಯಲ್ಲಿ ಶ್ರೀ ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ವಿರಾಜಮಾನರಾಗಿದ್ದಾರೆ.
ಶ್ರೀಗಳು ಖರನಾಮ ಸಂವತ್ಸರದ ಚೈತ್ರ ಶುಕ್ಲ ಷಷ್ಠಿ ತಿಥಿ (11/4/1951) ಮೃಗಶಿರ ನಕ್ಷತ್ರದಲ್ಲಿ ಆಂಧ್ರಪ್ರದೇಶದ ಮಛಲೀಪಟ್ಟಣದಲ್ಲಿ ಶ್ರೀ ತಂಗಿರಾಲ ವೆಂಕಟೇಶ್ವರ ಅವಧಾನಿ ಮತ್ತು ಸೌ|| ಅನಂತ ಲಕ್ಷ್ಮಮ್ಮನವರ ಪುತ್ರನಾಗಿ ಜನಿಸಿದರು.ಇವರು ರಾಮನವಮಿ ಉತ್ಸವ ಸಂದರ್ಭದಲ್ಲಿ ಜನಿಸಿದ್ದರಿಂದ ‘ಸೀತಾರಾಮಾಂಜನೇಯ’ ಎಂದು ನಾಮಕರಣ ಮಾಡಿದರು.

ಸಹೋದರಿ ಶ್ರೀಲಕ್ಷ್ಮಿ ಇವರ ಮೊದಲ ಸಂಸ್ಕೃತ ಗುರು. ಅಕ್ಕನೊಡನೆ ದಿನವಿಡೀ ಸಂಸ್ಕೃತ ಸಂಭಾಷಣೆಗೈಯ್ಯುತ್ತಿದ್ದರು. ಆಕಾಶವಾಣಿಯ ವಿಜಯವಾಡ ಕೇಂದ್ರದವರು ಆಗಾಗ ಸಂಸ್ಕೃತ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದರು.ಸಂಸ್ಕೃತ ಸ್ಪರ್ಧೆಗಳಲ್ಲಿ ಅವರು ಗಳಿಸಿದ ಬಹುಮಾನಗಳಿಗೆ ಲೆಕ್ಕವೇ ಇಲ್ಲ. ಏಳನೇ ವಯಸ್ಸಿನಲ್ಲಿ ಉಪನಯನ ಸಂಸ್ಕಾರ ಮಾಡಲಾಯಿತು.ಇವರ ಶಿಕ್ಷಣವು ತೆಲುಗು ಮಾಧ್ಯಮದಲ್ಲಿಯೇ ನಡೆಯಿತು.ಗಣಿತದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದು,ಇಂಗ್ಲಿಷ್ನಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದರು.
ಶೃಂಗೇರಿ ಶಾರದಾ ಪೀಠದಲ್ಲಿ 35ನೇ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ವಿಜಯವಾಡಕ್ಕೆ ಆಗಮಿಸಿದ್ದಾಗ ಸಂಸ್ಕೃತದಲ್ಲಿ ಸಂಭಾಷಣೆ ಮಾಡಿದರು.ಇದರಿಂದ ಶ್ರೀಗಳು ಅಮಿತಾನಂದ ಹೊಂದಿ ರೇಷ್ಮೆ ವಸ್ತ್ರವನ್ನು ಅನುಗ್ರಹಿಸಿದರು. ಆಗ ಅವರಿಗೆ ಕೇವಲ 10 ವರ್ಷ ಮಾತ್ರ.ಕೆಲವು ವರ್ಷದ ನಂತರ ಶ್ರೀ ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು ಉಜ್ಜಯಿನಿಯಲ್ಲಿ ಚಾತುರ್ಮಾಸ ದೀಕ್ಷೆ ಕೈಗೊಂಡಾಗ ಇನ್ನೊಮ್ಮೆ ಭೇಟಿಯಾಗಿ “ನಾನು ತಮ್ಮ ಚರಣ ಸನ್ನಿಧಿಯಲ್ಲಿ ಶಾಸ್ತ್ರಾಧ್ಯಯನವನ್ನು ಮಾಡಬೇಕೆಂಬ ಕೋರಿಕೆಯಿಂದ ಬಂದೆ” ಎಂದು ಹೇಳಲು ಜಗದ್ಗುರುಗಳು ಪ್ರಸನ್ನರಾಗಿ ತಾವೇ ಸ್ವತಹ ತರ್ಕಶಾಸ್ತ್ರ ಪಾಠವನ್ನು ಮಾಡಿದರು.

ಜಗದ್ಗುರುಗಳು ಮೆಚ್ಚಿನ ಶಿಷ್ಯ ಶ್ರೀ ಸೀತಾರಾಮಾಂಜನೇಯನ ಅಸಾಧಾರಣ ಪಾಂಡಿತ್ಯ,ಜ್ಞಾನ, ತಪೋ,ವೈರಾಗ್ಯಗಳನ್ನು ಗಮನಿಸಿ ಸಂತ್ರಪ್ತ ಭಾವನೆ ತಳೆದು ಶ್ರೀ ಶಾರದಾ ಪೀಠದ ವ್ಯಾಖ್ಯಾನಪೀಠಕ್ಕೆ ತಮ್ಮ ಉತ್ತರಾಧಿಕಾರಿಗಳನ್ನಾಗಿ ಸ್ವೀಕರಿಸಲು ಜಗನ್ಮಾತೆ ಶಾರದೆಯ ಪ್ರೇರಣೆಯಂತೆ ಸಂಕಲ್ಪಿಸಿದರು. ಆನಂದ ಸಂವತ್ಸರದ ಆಶ್ವಯುಜ ಕೃಷ್ಣ ಏಕಾದಶಿಯ ರವಿವಾರ ಸನ್ಯಾಸ ದೀಕ್ಷೆಯ ಪೂರ್ವಭಾವಿ ವಿಧಿವಿಧಾನಗಳನ್ನು ನೆರವೇರಿಸಿ ಮರುದಿನ 11 ನವೆಂಬರ್ 1974ರ ಶುಭಗಳಿಗೆಯಲ್ಲಿ ತಮ್ಮ ಉತ್ತರಾಧಿಕಾರಿ ಶಿಷ್ಯರನ್ನಾಗಿ ಸ್ವೀಕರಿಸಿದರು. ಶ್ರೀ ಶಾರದಾಂಬ ಸನ್ನಿಧಿಯಲ್ಲಿ ವ್ಯಾಖ್ಯಾನಸಿಂಹಾಸನಾಧೀಶ್ವರನನ್ನಾಗಿ ಕುಳ್ಳಿರಿಸಿ ‘ಭಾರತಿ ತೀರ್ಥ’ ಎಂಬ ಯೋಗಪಟ್ಟವನ್ನು ಅನುಗ್ರಹಿಸಿದರು.

ಶ್ರೀ ಶ್ರೀ ಭಾರತಿ ತೀರ್ಥರು ತಮ್ಮ ಗುರುವರೇಣ್ಯರೊಂದಿಗೆ ಧರ್ಮಯಾತ್ರೆಯನ್ನು ಮುಗಿಸಿ ಬಂದರು.ಕೆಲವು ವರ್ಷಗಳ ನಂತರ ಕರ್ನಾಟಕ,ಆಂಧ್ರ, ತಮಿಳುನಾಡು,ಕೇರಳ, ಮಹಾರಾಷ್ಟ್ರಗಳಲ್ಲಿ ಸಂಚಾರ ಮಾಡಿ ಪೂಣಾದಲ್ಲಿ ಚಾತುರ್ಮಾಸವನ್ನು ಮುಗಿಸಿ 1989ರಲ್ಲಿ ನವರಾತ್ರಿ ಉತ್ಸವವನ್ನು ಶ್ರೀ ಮಹಾಲಕ್ಷ್ಮಿ ಕ್ಷೇತ್ರವಾದ ಕೊಲ್ಲಾಪುರದಲ್ಲಿ ನೆರವೇರಿಸಬೇಕೆಂದು ಸಂಕಲ್ಪಿಸಿದರು.ಆದರೆ ಭಾದ್ರಪದ ಬಹುಳ ಸಪ್ತಮಿ ಗುರುವಾರದಂದು (21 ಸಪ್ಟೆಂಬರ್ 1989) ಮಹಾಸನ್ನಿದಾನಂಗಳವರು ಬ್ರಹ್ಮೈಕ್ಯರಾದ ವಿಚಾರ ತಿಳಿದು ಕೂಡಲೇ ಶೃಂಗೇರಿಗೆ ಧಾವಿಸಿ ಬಂದರು.
ಅದೇ ವರ್ಷ ಅಶ್ವಯುಜ ಕೃಷ್ಣ ಪಂಚಮಿ (19 ಅಕ್ಟೋಬರ್ 1989) ಶ್ರೀಮಠದ ಶಿಷ್ಯಸ್ತೋಮದ ಸಮ್ಮುಖದಲ್ಲಿ ಶೃಂಗೇರಿ ಶ್ರೀ ಶಾರದಾ ಪೀಠದ ವ್ಯಾಖ್ಯಾನಸಿಂಹಾಸನದಲ್ಲಿ 36ನೇ ಪೀಠಾಧಿಪತಿಗಳಾಗಿ ಪಟ್ಟಾಭಿಷಿಕ್ತರಾದರು.
ಬಹುಭಾಷೆ ಬಲ್ಲವರಾದ ಶ್ರೀಗಳು ದಕ್ಷಿಣ ಭಾರತದ ಧರ್ಮಯಾತ್ರೆಯ ಸಂದರ್ಭದಲ್ಲಿ ಅಲ್ಲಿಯ ಮಾತೃಭಾಷೆಯಲ್ಲಿಯೇ ಆಶೀರ್ವಚನ ನೀಡುತ್ತಾರೆ‌. ಅವರ ಅನುಗ್ರಹ ಹಾಗೂ ಮಾರ್ಗದರ್ಶನದಿಂದ 1997 ಆಗಸ್ಟ್ 22 ರಿಂದ ಸೆಪ್ಟೆಂಬರ್ 1ರ ವರೆಗೆ ಅಮೆರಿಕಾದ ಸ್ಟ್ರೌಟ್ಸಬರ್ಗ್ ಎಂಬಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಅತಿರುದ್ರ ಮಹಾಯಾಗ ಶ್ರೀ ಶ್ರೀಗಳವರ ಸಾಧನೆಗಳ ಶ್ರೇಣಿಯಲ್ಲಿ ಅವಿಸ್ಮರಣೀಯವಾದದ್ದು. ಇದು ವಿದೇಶದಲ್ಲಿ ನಡೆದ ಮೊದಲ ಯಜ್ಞ.ಸ್ವತಃ ಕವಿಗಳಾದ ಇವರು ಅನೇಕ ದೇವತಾ ಶ್ಲೋಕಗಳನ್ನು ರಚಿಸಿದ್ದಾರೆ.

ದಿನಕ್ಕೆರಡು ಬಾರಿ ಭಕ್ತಾದಿಗಳಿಗೆ ಸಂದರ್ಶನ ನೀಡುವುದು ಶ್ರೀಶ್ರೀಗಳವರ ದಿನಚರಿಯ ಒಂದು ಅವಿಭಾಜ್ಯ ಅಂಗ. ಗುರುವರೇಣ್ಯರು ಭಕ್ತರ ಅಹವಾಲುಗಳನ್ನು ಕೇಳಿ ಸಾಂತ್ವನ ಹೇಳುವ ಪರಿ ಅನನ್ಯವಾದುದು.ಗುರುಗಳ ಕಾರುಣ್ಯವಾರಿಧಿಯಲ್ಲಿ ಮಿಂದು ಕೃತಾರ್ಥಭಾವನೆಯಿಂದ ತೆರಳುವ ಭಕ್ತಾದಿಗಳ ಮುಖದಲ್ಲಿ ಮಿಂಚುವ ತೃಪ್ತಿಯೇ ಇವರು ‘ಕೇವಲ ಗುರುವಲ್ಲ ದೇವರು’ ಎಂಬುದನ್ನು ತಿಳಿಸುವಂತಿದೆ.
ಶ್ರೀಪಾದ
30/03/2020

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles