ರಾಮು ಸುಬ್ಬು ಕುಟುಂಬ (ಬಡಗೇರಿ)

*~*ನಮ್ಮ ಕುಟುಂಬ : ರಾಮು ಸುಬ್ಬು*~*
ಬೃಹತ್ ವೃಕ್ಷದ ಕೊಂಬೆಗಳು ವಿಶಾಲವಾಗಿ ಎಲ್ಲಾ ದಿಕ್ಕುಗಳಲ್ಲಿ ಹರಡಿಕೊಂಡಿದ್ದರೂ ಅದರ ಬೇರು ಮಾತ್ರ ಒಂದೇ ಆಗಿರುತ್ತದೆ.ಅದೇ ರೀತಿ ನಮ್ಮ ಕುಟುಂಬದ ಸದಸ್ಯರು ಜಗತ್ತಿನಾದ್ಯಂತ ನೆಲೆಸಿದ್ದರೂ ಅವರ ಮೂಲವು ಬಡಗೇರಿಯೇ ಆಗಿರುತ್ತದೆ.
ಅಂಕೋಲಾ- ಭಾವಿಕೇರಿ ರಸ್ತೆಯ ನಡುವೆ ಇರುವ ಬಡಗೇರಿ ನಮ್ಮ ವಾಸಸ್ಥಳ. ಇದು ಮುಖ್ಯ ರಸ್ತೆಯಿಂದ ಸ್ವಲ್ಪ ದೂರದಲ್ಲಿದ್ದು, ತೆಂಗು, ಅಡಿಕೆ, ಮಾವು, ಹಲಸು ಇತ್ಯಾದಿ ಹಸಿರು ವೃಕ್ಷಗಳಿಂದ ಕಂಗೊಳಿಸುತ್ತಾ, ಗಿಳಿ, ಕೋಗಿಲೆ, ಗುಬ್ಬಚ್ಚಿ ಇತ್ಯಾದಿ ಪಕ್ಷಿಗಳಿಂದ ಕೂಡಿರುವ ರಮ್ಯವಾದ ಸ್ಥಳ. ಶುದ್ಧ ಗಾಳಿ,ಬೆಳಕು,ನೀರಿನಿಂದ ಸಮೃದ್ಧವಾಗಿದ್ದು ಗೌಜು- ಗದ್ದಲಗಳಿಲ್ಲದ ಪ್ರಶಾಂತವಾದ ಸ್ಥಳ.ಸುತ್ತಲೂ ಭತ್ತದ ಗದ್ದೆಗಳಿದ್ದು ಮಳೆಗಾಲದಲ್ಲಿ ಒಂದು ದ್ವೀಪದಂತಿರುವ ರಮಣೀಯ ಸ್ಥಳ.ಪೂರ್ವ ಪಶ್ಚಿಮಗಳಲ್ಲಿ ಒಂದೇ ಸರಳರೇಖೆಯಲ್ಲಿ ನೆಲೆಸಿರುವ ನಾಗದೇವತೆಗಳಿಂದ ರಕ್ಷಿಸಲ್ಪಡುವ ಪುಣ್ಯಭೂಮಿ.
ನಾವು ಸಾವಿರಾರು ವರ್ಷಗಳ ಹಿಂದೆ ಆಂಧ್ರಪ್ರದೇಶದಿಂದ ಗೋವಾಕ್ಕೆ ವಲಸೆ ಬಂದವರಾಗಿರುತ್ತೇವೆ.ಆದ್ದರಿಂದ ಶ್ರೀ ಮಹಾಲಸಾ ನಾರಾಯಣಿ ನಮ್ಮ ಕುಲದೇವರಾಗಿರುತ್ತದೆ. ಸುಮಾರು 500 ವರ್ಷಗಳ ಹಿಂದೆ ಪೋರ್ಚುಗೀಸರ ದಬ್ಬಾಳಿಕೆಯಿಂದ ಬೇಸತ್ತು ಸಮುದ್ರಮಾರ್ಗವಾಗಿ ಅಮದಳ್ಳಿಗೆ ಬಂದರು.ಅಲ್ಲಿರುವ ಬಂಟದೇವರು ನಮ್ಮ ಗ್ರಾಮ ದೇವರು ಆಯಿತು.
ಸುಮಾರು 180 ವರ್ಷಗಳ ಹಿಂದೆ ನಮ್ಮ ಕುಟುಂಬ ಇನ್ನೂ ವಿಶಾಲವಾಗಿದ್ದು,ನಾವು ಕಪಿಲ ಗೋತ್ರದವರು. ಶೇಷನ ಮನೆ, ಕಾಳೆ ಶೆಟ್ಟಿ ಮನೆ,ಕೇಣಿಯ ಕರಡಿ ಮನೆ ಇತ್ಯಾದಿ ಮನೆತನಗಳನ್ನು ಒಳಗೊಂಡಿತ್ತು.ರಾಮನ ಸುಬ್ಬ ಶೆಟ್ಟಿ ಕಾಲದಲ್ಲಿ ನಮ್ಮ ಕುಟುಂಬವು ಪ್ರತ್ಯೇಕವಾಯಿತು. ಆದ್ದರಿಂದ ಸುಬ್ಬ ಶೆಟ್ಟಿ ನಮ್ಮ ಕುಟುಂಬದ ಮೂಲಪುರುಷನೆನಿಸಿಕೊಳ್ಳುತ್ತಾನೆ.
ರಾಮನ ಸುಬ್ಬಶೆಟ್ಟಿಗೆ ಆರು ಜನ ಗಂಡುಮಕ್ಕಳು,ಒಬ್ಬಳು ಮಗಳು.ಅವರ ಹೆಸರು ಈ ಕೆಳಗಿನಂತಿರುತ್ತದೆ:-1)ಬಂಟು ಸುಬ್ಬ ಶೆಟ್ಟಿ 2)ನಾಗಪ್ಪ ಶೆಟ್ಟಿ 3) ನಾರಾಯಣ ಶೆಟ್ಟಿ 4)ರಾಮಯ್ಯ ಶೆಟ್ಟಿ 5)ಸಾಂತಪ್ಪ ಶೆಟ್ಟಿ 6)ದುರ್ಗಿ(ಮಗಳು) 7)ಪುಂಡಲೀಕ ಶೆಟ್ಟಿ
1888 ಇಸ್ವಿಯ ಪೂರ್ವದಲ್ಲಿ ಇವರೆಲ್ಲರೂ ಒಟ್ಟಿಗೇ ಈಗ ಪುಂಡಲಿಕ ಬಡಗೇರಿ ಮನೆ ಇದ್ದ ಜಾಗದಲ್ಲಿದ್ದ ಹಳೆಮನೆಯಲ್ಲಿದ್ದರು. ಮೊದಲ ನಾಲ್ಕು ಮಕ್ಕಳ ಮರಣದ ನಂತರ ಅಂದರೆ 17ನೇ ಡಿಸೆಂಬರ್ 1888 ರಲ್ಲಿ ಪ್ರತ್ಯೇಕವಾದರು. ಸಬ್ ರಿಜಿಸ್ಟರ್ ಕಾರವಾರದಲ್ಲಿ ದೊರೆತ ದಾಖಲೆಯಂತೆ ಆಸ್ತಿ ಹಂಚಿಕೆ ವಿವರವನ್ನು ಯಥಾಪ್ರಕಾರವಾಗಿ ಇಲ್ಲಿ ವಿವರಿಸಲಾಗಿದೆ.
ದಸ್ತಾವೇಜಿನ ನಕಲು
ಕಸ್ಬಾ ಬಡಗೇರಿ ರಾಯಾ ಬಂಟ ಶೆಟ್ಟಿ ಅಂಕೋಲಾ ತಾರೀಕು 17ನೆ ಡಿಸೆಂಬರ್ 1888ನೇ ಇಸ್ವಿ
ಸ್ಥಾವರ ಆಸ್ತಿ ಕಟ್ಟೋಣಗಳು ಎಲ್ಲಾ ಕೂಡಿ ವಾಸ್ತವ ಕಿಮ್ಮತ್ತು ರೂಪಾಯಿ 800.
ಸನ್ 1888ನೇ ಇಸ್ವಿಯ ಡಿಸೆಂಬರ್ ತಾರೀಕು 17ನೇ ಗೆ ಸರಿಯಾದ ಸರ್ವಧಾರಿ ಸಂವತ್ಸರ ಮಾರ್ಗಶಿರ ಶುಕ್ಲ 15ನೇ ಯಲ್ಲು ಕಾನಡಾ ಜಿಲ್ಹಾ ಅಂಕೋಲಾ ತಾಲೂಕು- ಅಂಕೋಲೆಯಲ್ಲಿರುವ ರಾಮನ ಸುಬ್ಬು ಶೆಟ್ಟಿ ಮಗಂದಿರು-ಬಂಟ ಶೆಟ್ಟಿ ಮಗ ರಾಯ ಶೆಟ್ಟಿ,ನಾಗಪ್ಪ ಶೆಟ್ಟಿ ಹಿರೇ ಹೆಂಡತಿಯ ಎರಡನೆ ಮಗ ಕೃಷ್ಣ ಶೆಟ್ಟಿ,ಕಿರಿ ಹೆಂಡತಿ ಮಗಂದಿರು 1)ವೆಂಕಟರಮಣ 2) ಏಕನಾಥ ಎರಡು ಜನ ಅಪ್ರಾಪ್ತರು.ಇವರ ರಕ್ಷಾ ಕರ್ತರಾದ ತಾಯಿ ಶಿವಮ್ಮ ಕೋಂ ನಾಗಪ್ಪ ಶೆಟ್ಟಿ, ಸದ್ರಿ ಸುಬ್ಬ ಶೆಟ್ಟಿಯ ಐದನೇ ಮಗ ಸಾಂತಪ್ಪ ಶೆಟ್ಟಿ,ಆರನೇ ಮಗ ಪುಂಡ್ಲೀಕ ಶೆಟ್ಟಿ ಸಹಾಜನರು ಮಾಡಿಕೊಂಡ ದಸ್ತಾವೇಜ ವಿಭಾಗ.
ಸದ್ರಿ ರಾಮನ ಸುಬ್ಬು ಶೆಟ್ಟಿ ಎರಡನೇ ಮಗ ನಾಗಪ್ಪ ಶೆಟ್ಟಿ ಇರುವ ತನಕ ನಾವೆಲ್ಲರೂ ಒಂದೇ ಗೃಹಕೃತ್ಯದಲ್ಲಿ ಇರುತ್ತಿದ್ದೆವು. ಅವರು ತೀರಿಕೊಂಡ ಮೇಲೆ ನಮ್ಮೊಳಗೆ ಒಂದು ಕಡೆ ಇರಲಿಕ್ಕೆ ಸೇರಿ ಬರದೇ ಇರುವುದರಿಂದ ಈ ಮೊದಲು ಚರಾಸ್ತಿಯನ್ನು ಮೊದಲೇ ಗೃಹಸ್ಥರ ಮುಂದೆ ಆಪಸನಲ್ಲಿ ಹಂಚಿಕೊಂಡು ಪ್ರತ್ಯೇಕ ಇರುವುದರಿಂದ ಈಗ ಸ್ಥಾವರ ಆಸ್ತಿ ಮತ್ತು ಕಟ್ಟೋಣ ಗಳು ಸಹ ವಾಂಟಣಿಯಾಗದೇ ಉಳಿದ್ದರ ಬಗ್ಗೆ ಪೂರ್ತಿ ಗೃಹಸ್ಥರ ಮುಂದೆ ಮಾಡಿಕೊಂಡ ವಿಭಾಗದ ತಪಶೀಲು.
ಬಂಟ ಶೆಟ್ಟಿ ಮಗ ರಾಯ ಶೆಟ್ಟಿಗೆ ಹಾಕಿದ ಆಸ್ತಿ ತಪಶೀಲು- ಗ್ರಾಮ ಅಂಕೋಲಾ,ಭಾವಿಕೇರಿ, ಅಲಗೇರಿಯಲ್ಲಿರುವ ಜಮೀನು ಹಾಗೂ ಅಂಕೋಲಾ ತಾಲೂಕು ಭಾಗದಲ್ಲಿರುವ ದುಕಾನ ಆಸ್ತಿ ಸಹಿತ.
ನಾಗಪ್ಪ ಶೆಟ್ಟಿ ಹಿರಿ ಹೆಂಡತಿಯ ಎರಡನೇ ಮಗ ಕೃಷ್ಣ ಶೆಟ್ಟಿ ಹಿಸೆಗೆ ಹಾಕಿದ ಆಸ್ತಿ ತಪಶೀಲು- ಗ್ರಾಮ ಅಂಕೋಲಾ,ಅಲಗೇರಿ ಭಾವಿಕೇರಿ,ಸುಂಕಸಾಳದಲ್ಲಿ ಜಮೀನು ಮತ್ತು ಸುಂಕಸಾಳದಲ್ಲಿ ಕಿಮ್ಮತ್ತು 25 ರ ಬಾಬ್ತು ಅಂಗಡಿ ಬಿಡಾರ ಕೂಡಿ ಉತ್ತರ ದಿಕ್ಕಿನ ಬಾಬ್ತು.
ನಾಗಪ್ಪ ಶೆಟ್ಟಿ ಕಿರಿ ಹೆಂಡತಿಯ ಮಗಂದಿರಾದ ವೆಂಕಟರಮಣ, ಏಕನಾಥ ಪಾಲಿನ ಬಾಬ್ತು ರಕ್ಷಾಕರ್ತಳಾದ ಇವರ ತಾಯಿ ಶಿವಮ್ಮ ತಾಬೆ ಇಟ್ಟ ಆಸ್ತಿ ವಿವರ- ಗ್ರಾಮ ಅಂಕೋಲಾ, ಭಾವಿಕೇರಿ,ಅಲಗೇರಿಯಲ್ಲಿ ಜಮೀನು.
ಸಾಂತಪ್ಪ ಸುಬ್ಬ ಶೆಟ್ಟಿ ಹಿಶೆಗೆ ಹಾಕಿದ ಆಸ್ತಿಯ ತಪಶೀಲು- ಗ್ರಾಮ ಅಂಕೋಲಾ,ಭಾವಿಕೇರಿ, ಅಲಗೇರಿಯಲ್ಲಿ ಜಮೀನು ಮತ್ತು ಸುಂಕಸಾಳದಲ್ಲಿರುವ ಕಿಮ್ಮತ್ತು ಇಪ್ಪತ್ತೈದು ರೂಪಾಯಿಗಳ ಬಾಬ್ತು ಅಂಗಡಿ ಬಿಡಾರ ಕೂಡಿ ದಕ್ಷಿಣ ದಿಕ್ಕಿನ ಬಾಬ್ತು ಸಮೇತ.
ಪುಂಡ್ಲೀಕ ಸುಬ್ಬ ಶೆಟ್ಟಿ ಹಿಶೆಗೆ ಹಾಕಿದ ಆಸ್ತಿಯ ತಪಶೀಲು-ಗ್ರಾಮ ಅಂಕೋಲಾ,ಭಾವಿಕೇರಿ, ಅಲಗೇರಿಯಲ್ಲಿ ಜಮೀನು ಮತ್ತು ಅಂಕೋಲದಲ್ಲಿ ರೂಪಾಯಿ ಐವತ್ತರ ಬಾಬ್ತು ದುಕಾನ್ ಸಮೇತ.
ಹಿರೇತನದ ಮತ್ತು ದೇವತಾ ಕಾರ್ಯದ ಬಗ್ಗೆ ಇಟ್ಟ ಜಮೀನ ತಪಶೀಲು- ಅಲಗೇರಿ ಗ್ರಾಮದಲ್ಲಿ ಜಮೀನು.
ಮೇಲೆ ಬರೆದಂತೆ ನಾವು ಮಾಡಿಕೊಂಡ ಆಸ್ತಿಯ ಹಂಚಿಕೆ ನಮ್ಮ ಹಿಶೆ ಹಿಶೆಗಳು ಸರಿ ಕಾಣದಿದ್ದಾಗ್ಯೂ ನಮ್ಮ ನಮ್ಮ ಕಡೆಯಲಿದ್ದ ಚರಸೊತ್ತಿನ ಹಾಗೂ ಲೇವಾದೇವಿಯಿಂದಲ್ಲು ಲಾಭ ಲುಕ್ಸಾನ ಹಕಿಕತ ಆಲೋಚನೆಯಿಂದ ಮತ್ತು ಆಯಾಯ ಭೂಮಿ ಸ್ಥಿತಿ ಮೇಲಿಂದ ಅನುಕೂಲತೆ ಪ್ರಕಾರ ಗೃಹಸ್ಥರ ಮುಂದೆ ಇಟ್ಟು ಹಂಚಿಕೊಂಡಿರುತ್ತೇವೆ.
ರಾಮನ ಸುಬ್ಬ ಶೆಟ್ಟಿ ಕುಟುಂಬ ವಾರಸುದಾರರು ಮಾಡಿಕೊಂಡ ಆಸ್ತಿಯ ವಿಭಾಗ-
ಹಿರೇರದು ಮತ್ತು ದೇವತಾ ಕಾರ್ಯದ ಬಗ್ಗೆರತ ಶೇಜನಂಬರ್ 51 ನೇ ಭೂಮಿ ವಾಂಟ್ನಿಯಲ್ಲಿ ಬೇರೆ ತೆಗೆದಿಟ್ಟಿದ್ದ ಅಂದರೆ ಶ್ರೀವೆಂಕಟರಮಣದೇವರ ಹೆಸರಲ್ಲಿ ವೈಶಾಖ ಮಾಸದಲ್ಲಿ ನಮ್ಮಲ್ಲಿ ಆಗತಕ್ಕ ಸಮಾರಾಧನೆ ವ ಪ್ರತಿ ಭಾದ್ರಪದದಲ್ಲಿ ಆಗುವ ಮಹಾಲಯ ಈ ಎರಡು ಕೆಲಸದ ಬಗ್ಗೆ ಮತ್ತು ಅಮದಳ್ಳಿ ಗ್ರಾಮ ದೇವರಲ್ಲಿ ಒಂದು ಖಂಡಗ ಅಕ್ಕಿ ಪ್ರಕಾರ ವರ್ಷ ಸಹ ಸಲ್ಲಿಸುತ ಬರುವ ಸಂಬಂಧ ಕೂಡ ಈಗ ನಮ್ಮ ಪೈಕಿ ಸದ್ರಿ ಕಾರ್ಯಗಳು ನಡೆಸಲಿಕ್ಕೆ ಯೋಗ್ಯನಾದ ಸಾಂತಪ್ಪ ಸುಬ್ಬ ಶೆಟ್ಟಿ ಸ್ವಾಧೀನದಲ್ಲಿ ಸದ್ರಿ ಭೂಮಿ ಅಮಾನತ ಇಟ್ಟಿರುತ್ತದೆ.
ಇವರು ಸದ್ರಿ ಕೆಲಸ ನಡೆಸೋ ತನಕ ಸದ್ರಿ ಭೂಮಿ ಇವರ ಕಡೆಗೆ ಉಳಿಯತಕ್ಕದ್ದು.ಇವರ ತರುವಾಯ ಸದ್ರಿ ಕೆಲಸ ನಡೆಸಲಿಕ್ಕೆ ಯಾವನು ಯೋಗ್ಯನಾದಾನು ಅವರ ಕಡೆ ಸದ್ರಿ ಭೂಮಿ ಇರತಕ್ಕದ್ದು.
ಸುಂಕಸಾಳ ಅಂಗಡಿ ಸಾಂತಪ್ಪ ಶೆಟ್ಟಿ ಮತ್ತು ಕೃಷ್ಣ ಶೆಟ್ಟಿ ಇವರ ಕಡೆಗೆ ಇರುವಂತದ್ದು. ಅದರ ದಾಗದೂತಿ ಕೆಲಸ ಉಭಯತರೂ ಮಾಡಿ ಅನುಭವಿಸತಕ್ಕದ್ದು.ಸದ್ರಿ ದುಕಾನ್ ಹಳೆತಾದ್ದರಿಂದ ಮುರಿದ ನಂತರ ಅದರ ಸಾಮಾನು ಸದ್ರಿ ಎರಡು ಜನರ ಸಮ ಪ್ರಕಾರ ಹಂಚಿಕೊಳ್ಳ ತಕ್ಕದ್ದು.ಇದೇ ಅಂಗಡಿ ಇರುವ ಹಿತ್ತಲಲ್ಲಿ ಸಾಂತಪ್ಪನ ಪಾಲಿನಲ್ಲಿರುವ ಹಲಸಿನ ಮರ ಒಂದು ಮಧ್ಯದ್ದು,ಮಾವಿನಮರ ಒಂದು ಮಧ್ಯದ್ದು ಸಹಾ ಎರಡೂ ಮರಗಳು ಇರೋತನಕ ಕೃಷ್ಣನೇ ಅನುಭವಿಸುವುದಕ್ಕೆ ಸಾಂತಪ್ಪನ ಅಡ್ಡಿ ಮಾಡಬಾರದು.
ಸುಂಕಸಾಳ ಅಂಗಡಿ ಸಾಂತಪ್ಪ ಶೆಟ್ಟಿ ಮತ್ತು ಕೃಷ್ಣ ಶೆಟ್ಟಿ ಇವರ ಕಡೆಗೆ ಇರುವಂತದ್ದು. ಅದರ ದಾಗದೂತಿ ಕೆಲಸ ಉಭಯತರೂ ಮಾಡಿ ಅನುಭವಿಸತಕ್ಕದ್ದು.ಸದ್ರಿ ದುಕಾನ್ ಹಳೆತಾದ್ದರಿಂದ ಮುರಿದ ನಂತರ ಅದರ ಸಾಮಾನು ಸದ್ರಿ ಎರಡು ಜನರ ಸಮ ಪ್ರಕಾರ ಹಂಚಿಕೊಳ್ಳ ತಕ್ಕದ್ದು.ಇದೇ ಅಂಗಡಿ ಇರುವ ಹಿತ್ತಲಲ್ಲಿ ಸಾಂತಪ್ಪನ ಪಾಲಿನಲ್ಲಿರುವ ಹಲಸಿನ ಮರ ಒಂದು ಮಧ್ಯದ್ದು,ಮಾವಿನಮರ ಒಂದು ಮಧ್ಯದ್ದು ಸಹಾ ಎರಡೂ ಮರಗಳು ಇರೋತನಕ ಕೃಷ್ಣನೇ ಅನುಭವಿಸುವುದಕ್ಕೆ ಸಾಂತಪ್ಪನ ಅಡ್ಡಿ ಮಾಡಬಾರದು.
ಪುಂಡ್ಲೀಕ ಶೆಟ್ಟಿಗೆ ಹಿಂಗೆಲ್ಲಾ 9 ಮರಗಳು ಅವರವರಿಗೆ ಅನುಭವಿಸುವುದಕ್ಕೆ ಸಾಂತಪ್ಪನು ಅಡ್ಡಿ ಮಾಡಬಾರದು ಮತ್ತು ಶೇಜ ನಂಬರ್ 7 ಕೃಷ್ಣನ ಪಾಲಿನ ಹಿತ್ತಲಲ್ಲಿರುವ ದೊಡ್ಡ ಯೀಷಾಡ ಯಾನೆ ಕಲ್ಮಿ ಮಾವಿನಮರ ಒಂದು ಇರುವ ತನಕ ಇದರ ಫಲ ಎಲ್ಲರೂ ಕೂಡಿ ಅನುಭವಿಸತಕ್ಕದ್ದಿರುತ್ತದೆ. ಇದಕ್ಕೆ ಕೃಷ್ಣನು ಅಡ್ಡಿ ಮಾಡಬಾರದು ಹಾಗೂ ಶೇಜ್ ನಂಬರ್ 2 ರಾಯ ಬಂಟ ಶೆಟ್ಟಿ ಪಾಲಿನ ಹಿತ್ಲಲ್ಲಿ ಉತ್ತರ ಬದಿಗೆ ಇರುವ ತೆಂಗಿನ ಮರಗಳಲ್ಲಿ ಪೂರ್ವದಿಕ್ಕಿನ ಒಂದು ಮರ ಬಿಟ್ಟು ಎರಡನೇ ಮರ ಒಂದು, ಮೂರನೇ ಮರ ಒಂದು ಕೂಡ ಎರಡು ಸಾಂತಪ್ಪ ಸುಬ್ಬ ಶೆಟ್ಟಿಗೆ ಹಾಗೂ ನಾಲ್ಕನೇ ತೆಂಗಿನ ಮರ ಒಂದು ನಾಗಪ್ಪನ ಮಗಳು ಕಾಮಾಕ್ಷಿಗೆ,ಹೀಗೆ ಮೂರು ತೆಂಗಿನ ಮರಗಳು ಇರುವ ತನಕ ಅವರವರಿಗೆ ಅನುಭವಿಸುವುದಕ್ಕೆ ಸದ್ರಿ ರಾಯ ಬಂಟ ಶೆಟ್ಟಿಯು ಅಡ್ಡಿ ಮಾಡಬಾರದು ಮತ್ತು ಶೇಜ್ ನಂಬರ್ 25 ನೇ ಪುಂಡಲೀಕ ಸುಬ್ಬ ಶೆಟ್ಟಿ ಜಾಗದಲ್ಲಿ ಉತ್ತರ ದಿಕ್ಕಿನಲ್ಲಿರುವ ತೆಂಗಿನ ಮರ ಒಂದನೇ ಮರ ಬಿಟ್ಟು ಎರಡನೇ ಮರ ಒಂದು ಸಾಂತಪ್ಪ ಸುಬ್ಬ ಶೆಟ್ಟಿಗೆ ಮತ್ತು ಪೂರ್ವ ದಿಕ್ಕಿನಲ್ಲಿ ದಕ್ಷಿಣಕ್ಕೆ ಇರುವ ತೆಂಗಿನ ಮರ ಒಂದು ಸದ್ರಿ ಪುಂಡಲೀಕನ ಅಕ್ಕ ದುರ್ಗಿಗೆ ಸಹ ಎರಡು ತೆಂಗಿನ ಮರಗಳು ಇರುವ ತನಕ ಅವರಿಗೆ ಅನುಭವಿಸುವುದಕ್ಕೆ ಸದ್ರಿ ಪುಂಡಲಿಕ್ ಶೆಟ್ಟಿಯು ಆತಂಕ ಮಾಡಬಾರದು.
ಶೇಜ ನಂಬರ್ 18ನೇ ಸಾಂತಪ್ಪ ಸುಬ್ಬ ಶೆಟ್ಟಿ ಹಿಶೇದ ಭಾಗದಲ್ಲಿರುವ ಬಾವಿ ನೀರು ಇವರಿಗೆ ಉಪಯೋಗಿಸುತ್ತಾ ಬಂದ ಪ್ರಕಾರ ಎಲ್ಲವರಿಗೂ ಉಪಯೋಗಿಸುವುದಕ್ಕೆ ಸದ್ರಿ ಸಾಂತಪ್ಪ ಶೆಟ್ಟಿಯು ಅಡ್ಡಿ ಮಾಡಬಾರದು.
ಶೇಜ್ ನಂಬರ್ 25 ಪುಂಡಲೀಕ ಸುಬ್ಬ ಶೆಟ್ಟಿ ಜಾಗದಲ್ಲಿರುವ ಕಿಮ್ಮತ್ತು ರೂ.ಎರಡುನೂರು ಮನೆಯಲ್ಲಿ ಖುಷಿ ಇರುವಷ್ಟು ದಿವಸ ಎಲ್ಲವರು ಇರತಕ್ಕದ್ದು. ಇದನ್ನು ಮುರಿಯಬೇಕಾದಾಗ ಎಲ್ಲರೂ ಕೂಡಿ ಮುರಿದು ಐದನೇ ಒಂದು ಅಂಶ ಪ್ರಕಾರ ಇದರ ಸಾಮಾನು ಹಂಚಿಕೊಳ್ಳಬೇಕು. ಇರಲಿಕ್ಕೆ ಖುಷಿ ಇಲ್ಲದವರು ಬೇರೆ ಉಳಿದ ಪಕ್ಷಕ್ಕೆ ಮನೆಯಲ್ಲಿದ್ದ ಜನರು ಅದರ ದಾಗದೋಜಿ ನೋಡಿ ಉಳಿಯತಕ್ಕದ್ದು.ಇದರ ಮುಂದೆ ಇರುವ ಕೊಟ್ಟಿಗೆ ಕಿಮ್ಮತ್ತು ರೂಪಾಯಿ 15ರ ಬಾಬ್ತು ಎಲ್ಲರೂ ಕೂಡಿ ಮುರಿದುಕೊಂಡು ಅದರ ಸಾಮಾನು ಎಲ್ಲರೂ ಹಂಚಿಕೊಳ್ಳತಕ್ಕದ್ದಾಗಿರುತ್ತದೆ.
ಈ ವಿಭಾಗ ಪತ್ರದಲ್ಲಿ ವೆಂಕಟರಮಣ ಮತ್ತು ಏಕನಾಥ ಈ ಎರಡು ಹುಡುಗರ ಹಿಶೆ ಒಂದೇ ಆದ್ರಿಂದ ಚತುರ್ಗಡಿ ಮರಗಳ ವ್ಯವಸ್ಥೆ ಮುಂತಾದ್ದು ಬರೆಯುವುದರಲ್ಲಿ ವೆಂಕಟರಮಣನ ಹೆಸರು ಪೂರ ಬಹಳ ಮಾಡಿ ಉಪಯೋಗಿಸಿದೆ. ಅಲ್ಲಲ್ಲಿ ಸದ್ರಿ ಏಕನಾಥನ ಹೆಸರು ನಮೂದ ಆಗದೇ ಇದ್ದಾಗ್ಯೂ ಈ ಲೇಖನ ಮೂಲಕ ಅವನ ಹೆಸರು ಕೂಡಿದೆ ಎಂದು ನಾವೆಲ್ಲರೂ ಗ್ರಹಿಸಿಕೊಂಡಿರುತ್ತೇವೆ.
ಈ ಪ್ರಕಾರ ನಾವು ನಮ್ಮ ಸ್ವಸಂತೋಷದಿಂದ ಆಸ್ತಿ ವಿಭಾಗಿಸಿಕೊಂಡಿರುತ್ತೇವೆ.
ಈ ಮೇಲಿನಂತೆ ನಮ್ಮ ನಮ್ಮೊಳಗೆ ನಿಸ್ವಾರ್ಥದ ವಿನಹ ಅರ್ಥಾ ಅರ್ಥಿ ಸಂಬಂಧ ಇರುವುದಿಲ್ಲವೆಂದು ಸಹಾ ಮಾಡಿಕೊಂಡ ಆಸ್ತಿ ವಿಭಾಗ ಪತ್ರವು ಸರಿ.
ನಮ್ಮ ಕುಟುಂಬದಲ್ಲಿ ಇದ್ದ ನಮ್ಮ ಪೈಕಿ ವಿಧವೆಯರ ಪೈಕಿ ರಾಮಯ್ಯ ಶೆಟ್ಟಿ ಹೆಂಡತಿ ಸೀತೆ,ನಾರಾಯಣ ಶೆಟ್ಟಿ ಹೆಂಡತಿ ಕಾವೇರಿಸಹ ಎರಡು ಜನರಿಗೆ ನಮ್ಮಿಂದ ಭುಕ್ತಿಂಶ ಸಲ್ಲತಕ್ಕದ್ದು.ಈಗ ಗೊತ್ತು ಮಾಡಿಕೊಂಡಿರುವಂತೆ ಪ್ರತಿಯೊಬ್ಬರಿಗೆ ಪ್ರತಿವರ್ಷದ ಮಾಘ ಬ 30ರ ಒಳಗೆ ಪ್ರತಿಯೊಬ್ಬರೂ ದರ ಮೂರು ರೂಪಾಯಿ ಪ್ರಕಾರ ಸದ್ರಿ ಐದು ಜನರು ಕೂಡಿ 15 ರೂಪಾಯಿಗಳಂತೆ ಗೊತ್ತುಮಾಡಿ ₹30 ನಂತೆ ಈ ಸರ್ವಧಾರಿ ಸಂವತ್ಸರ ಲಾಗಾಯ್ತು ಅವರವರ ಜೀವಮಾನದವರೆಗೆ ಪಾವ್ತಿ ಕೊಳ್ಳುತ್ತಾ ಬರಬೇಕು
ಈ ಪ್ರಕಾರ ನಾವು ಆಸ್ತಿ ವಿಭಾಗ ಮಾಡಿಕೊಂಡಿದ್ದೇವೆ ಅಂತ ಸಹಾ ಬರೆಸಿಕೊಂಡ ಆಸ್ತಿ ವಿಭಾಗದದ ಪತ್ರ ಸರಿ.
ಸಹಿ-ರಾಯ ಬಂಟ ಶೆಟ್ಟಿ ರುಜು (ಸಹಿ),ಕೃಷ್ಣ ನಾಗಪ್ಪ ಶೆಟ್ಟಿ (ಸಹಿ), ಶಿವಮ್ಮ ಕೋಂ ನಾಗಪ್ಪ ಶೆಟ್ಟಿ (ಸಹಿ),ಸಾಂತಪ್ಪ ಸುಬ್ಬ ಶೆಟ್ಟಿ ರುಜು(ಸಹಿ), ಪುಂಡ್ಲೀಕ ಸುಬ್ಬ ಶೆಟ್ಟಿ ರುಜು (ಸಹಿ).ಈ ಬಗ್ಗೆ ಸಾಕ್ಷಿಗಣೇಶ ವಿಠೋಬ ಶೆಟ್ಟಿ ಅಂಕೋಲಾ(ಸಹಿ)
ದಸ್ತೂಲ ರಾಯಾಜಿ ನೀಲಕಂಠ ಅಂಕೋಲಾ ಕಸ್ಬಾ ಶಾನುಭೋಗ(ಸಹಿ)
(ಸುಬ್ಬಶೆಟ್ಟಿ ಯ ಮೂರು ಮತ್ತು ನಾಲ್ಕನೇ ಮಕ್ಕಳಾದ ನಾರಾಯಣ ಮತ್ತು ರಾಮಯ್ಯ ಆಗಲೇ ಮರಣ ಹೊಂದಿದರು ಮತ್ತು ಅವರಿಗೆ ಗಂಡು ಮಕ್ಕಳು ಇಲ್ಲದೆ ಇರುವುದರಿಂದ ಅವರ ಪಾಲಿನ ಆಸ್ತಿ ವಿಭಾಗ ಮಾಡಿರುವುದಿಲ್ಲ)
ಈ ಮೇಲಿನ ಅಧಿಕೃತ ಲಿಖಿತ ದಾಖಲೆಗಳನ್ನು ಗಮನಿಸಿದಾಗ ನಮ್ಮ ಕುಟುಂಬದ ಹೆಸರು “ರಾಮನ ಸುಬ್ಬು” ಕುಟುಂಬವೇ ಹೊರತು ರಾಮು-ಸುಬ್ಬು ಕುಟುಂಬ ಅಲ್ಲವೆಂದು ಅನಿಸುತ್ತದೆ .ರಾಮು ಸುಬ್ಬು ಅಣ್ಣತಮ್ಮಂದಿರು ಎಂಬುದು ಹಾಗೂ ಈಗಿನ ಸದಸ್ಯರಾದ ರೋಹಿದಾಸ್ ಗಣಪತಿ ಶೆಟ್ಟಿಯ ಪೂರ್ವಜರು ರಾಮುವಿನ ವಂಶಸ್ಥರು ಆಗಿದ್ದರು ಎಂಬುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಅನಿಸುತ್ತದೆ. ಈ ಕುರಿತು ಮೇಲಿನ ಲಿಖಿತ ದಾಖಲೆಗಳನ್ನು ಕೂಲಂಕುಶವಾಗಿ ಗಮನಿಸಿ ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದು ವಿನಂತಿ.
ನಮ್ಮ ವಿಠಲಣ್ಣ.
ಕಳೆದ ಶತಮಾನದಲ್ಲಿ ಬದುಕಿ ಬಾಳಿದ ನಮ್ಮ ಕುಟುಂಬದ ಹಿರಿಯ ಸದಸ್ಯ ಈತ. ಆದರೆ ಇವನು ಒಬ್ಬ ದುರದೃಷ್ಟಶಾಲಿ ವ್ಯಕ್ತಿ.ಈತನ ಬಗ್ಗೆ ಅನೇಕರಿಗೆ ಗೊತ್ತಿರುವುದಿಲ್ಲ.ಈತನ ಬಗ್ಗೆ ಕಿರುಪರಿಚಯ ಇಲ್ಲಿ ಮಾಡಿಕೊಡಲಾಗಿದೆ.
ಈತನು ದಿವಂಗತ ಏಕನಾಥ ಮತ್ತು ಚಂದ್ರಭಾಗಿ ದಂಪತಿಗಳ ಹಿರಿಯ ಮಗ.ಈತನಿಗೆ ದಾಮೋಧರ,ಶ್ರೀಪಾದ,ದತ್ತ ಎಂಬ ಸಹೋದರರು ಕಲ್ಯಾಣಿ ಮತ್ತು ಮಂಕಾಳಿ ಎಂಬ ಸಹೋದರಿಯರು ಇದ್ದರು. ಚಿಕ್ಕಂದಿನಲ್ಲಿ ಧಾರ್ಮಿಕ ಪ್ರವೃತ್ತಿ ಉಳ್ಳವರಾಗಿದ್ದ ವಿಠಲಣ್ಣನು ಕುಟುಂಬದಲ್ಲಿ ನಡೆಯುವ ಹರಿದಿನ ಮುಂತಾದ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತಿದ್ದನು. ಅಲಗೇರಿ, ಭಾವಿಕೇರಿ ಕೇಣಿಯ ಸಮಾಜ ಬಾಂಧವರಿಗೆ ಹಾಗೂ ಕೇಣಿಯ ಸಮುದ್ರದ ಬದಿಯಿಂದ ನಡೆಯುತ್ತಾ ಅಮದಳ್ಳಿಗೆ ಹೋಗಿ ಅಲ್ಲಿಯ ಬಂಧುಗಳಿಗೆ ಹರಿದಿನಕ್ಕೆ ಅಹ್ವಾನಿಸಿ ಅದೇ ಸಮುದ್ರ ಮಾರ್ಗವಾಗಿ ನಡೆದು ವಾಪಸ್ ಬರುತ್ತಿದ್ದನು.ಆ ಕಾಲದಲ್ಲಿ ಮೂರು ದಿನಗಳವರೆಗೆ ನಡೆವ ಹರಿದಿನದ ಭಜನೆಯ ಕಾರ್ಯಕ್ರಮದಲ್ಲಿ ಇವನ ಹಾಡುಗಾರಿಕೆ ಇರುತ್ತಿತ್ತು.
ತಾರುಣ್ಯದಲ್ಲಿ ಇವನು ಮದುವೆಯಾಗಿ ಸಂಸಾರ ಆರಂಭಿಸುತ್ತಾನೆ. ಇವನ ಪತ್ನಿ ರುಕ್ಮಿಣಿ.ಈ ದಂಪತಿಗಳಿಗೆ ಒಬ್ಬ ಮಗ ಮತ್ತು ನಾಲ್ಕು ಜನ ಪುತ್ರಿಯರು ಇದ್ದರು. ಆ ಕಾಲದಲ್ಲಿ ಮದುವೆ, ಮುಂಜಿ ಇತ್ಯಾದಿ ಶುಭ ಸಮಾರಂಭಗಳಲ್ಲಿ ಹೆಚ್ಚಾಗಿ ಬತ್ತಾಸು,ಲಾಡು ಇತ್ಯಾದಿಗಳನ್ನು ಮಾಡುತ್ತಿದ್ದರು. ಈತನು ಇಂತಹ ಸಿಹಿತಿಂಡಿಗಳನ್ನು ಮಾಡುವುದರಲ್ಲಿ ನಿಪುಣನಾಗಿದ್ದನು. ಶುಭ ಸಮಾರಂಭಗಳಲ್ಲಿ,ಬಂಡಿಹಬ್ಬ, ಜಾತ್ರೆ ಸಮಯದಲ್ಲಿ ಈತನ ಸಿಹಿತಿಂಡಿಗಳಿಗೆ ಬಹಳ ಬೇಡಿಕೆ ಇರುತ್ತಿತ್ತು. ತೆಳ್ಳನೆಯ ಬಟ್ಟೆಯ ಮೇಲೆ ಸಕ್ಕರೆ ಪಾಕ ಹಾಕಿ ಬತ್ತಾಸು ಮಾಡುವುದು ಕುತೂಹಲವನ್ನು ಉಂಟು ಮಾಡುತ್ತಿತ್ತು.
ಹೀಗೆ ಸುಖವಾಗಿ ಸಂಸಾರ ನಡೆಸುತ್ತಿರುವ ಒಂದು ದಿನ ನಡೆದ ದುರ್ಘಟನೆ ಇವನ ಜೀವನದ ದಿಕ್ಕನ್ನೇ ಬದಲಾಯಿಸಿತು. ಇದ್ದ ಒಬ್ಬನೇ ಮಗ ಬಾಲ್ಯವಸ್ಥೆಯಲ್ಲಿ ಅಕಾಲ ಮರಣಕ್ಕೆ ತುತ್ತಾದನು. ಇದರಿಂದ ಪುತ್ರಶೋಕಕ್ಕೊಳಗಾದ ಈತನು ಮತಿಭ್ರಮಣೆ ಹೊಂದುತ್ತಾನೆ. ಋಣಾನುಬಂಧೇನ ಸತಿಸುತಾಲಯ ಎನ್ನುವಂತೆ ಸಂಸಾರದಿಂದ ಋಣಮುಕ್ತನಾದನು.ಈತನ ಪತ್ನಿ ತ್ಯಜಿಸಿಹೋಗುತ್ತಾಳೆ.ಸಂಸಾರ ಛಿದ್ರವಾಗುತ್ತದೆ.ಮತಿಭ್ರಮಣಗೊಂಡ ವಿಠಲಣ್ಣನು ಎಲ್ಲಿಯಾದರೂ ಉಣ್ಣುವುದು, ಮಲಗುವುದು ಮಾಡಿ ದಿನ ದೂಡುತ್ತಾನೆ.ಹುಟ್ಟಿಸಿದ ದೇವರು ಹುಲ್ಲು ಮೇಯಿಸದಿರುತ್ತಾನೆಯೇ ಎನ್ನುವಂತೆ ಹೇಗೋ ಹೊಟ್ಟೆ ತುಂಬಿಸಿಕೊಳ್ಳುತ್ತಾನೆ. ಸದಾಕಾಲ ಕಾರಣವಿಲ್ಲದೆ ಇತರರಿಗೆ ಬೈಯುವುದು ಈತನ ಹವ್ಯಾಸ.ಆದರೆ ಬೈಸಿಕೊಂಡವರು ಯಾರು ಈತನ ಮೇಲೆ ಸಿಟ್ಟು ಮಾಡುತ್ತಿರಲಿಲ್ಲ.ಸಿಹಿತಿಂಡಿ ಮಾಡಲು ಆಗಲೂ ಅವನನ್ನು ಕರೆಯುತ್ತಿದ್ದರು.ಅವರು ಕೊಟ್ಟಷ್ಟು ಹಣವನ್ನು ಮಾತ್ರ ತೆಗೆದುಕೊಳ್ಳುತ್ತಿದ್ದನು. ಒಂದು ಧೋತ್ರ,ಅಂಗಿ ತೊಟ್ಟುಕೊಳ್ಳುತ್ತಿದ್ದನು.ಸ್ನಾನ ಮಾಡಿ ಬಸ್ಮಧಾರಣೆ ಮಾಡಿಕೊಳ್ಳುತ್ತಿದ್ದನು. ಒಂದು ನಶ್ಯದ ಡಬ್ಬಿ ಈತನ ಜೀವನಸಂಗಾತಿ ಆಗಿತ್ತು.ತನ್ನ ಎಲ್ಲಾ ಸಾಮಾನುಗಳನ್ನು ಕಟ್ಟಿಗೆಯ ಪೆಟ್ಟಿಗೆಯಲ್ಲಿ ಭದ್ರವಾಗಿ ಇಟ್ಟಿರುತ್ತಿದ್ದನು.
ಹೋಳಿ ಹಬ್ಬದ ಸಮಯದಲ್ಲಿ ಕಾವಿ ಬಟ್ಟೆ ಧರಿಸಿ ಮೈಗಲ್ಲಾ ಭಸ್ಮ ಬಳಿದು ತಾಳ‌ ಬಾರಿಸುತ್ತಾ ಭಾಗ್ಯದ ಲಕ್ಷ್ಮಿ ಬಾರಮ್ಮ ಎಂದು ಹಾಡುತ್ತಾ ಮಧ್ಯರಾತ್ರಿ 12 ರ ನಂತರ ಬಂದರೆ ಥೇಟ್ ಮಠದ ಸ್ವಾಮಿಯಂತೆಯೇ ಕಾಣುತ್ತಿದ್ದನು.ನಮ್ಮ ಬಾಲ್ಯದಲ್ಲಿ ಅವನ ಬರುವಿಕೆಗಾಗಿ ನಾವೆಲ್ಲಾ ನಿದ್ರೆ ಬಿಟ್ಟು ಕಾಯುತ್ತಾ ಇರುತ್ತಿದ್ದೆವು.ಕೊಟ್ಟಷ್ಟು ಹಣ ಪಡೆದು ಮುಂದಿನ ಮನೆಗೆ ಹೋಗುತ್ತಿದ್ದನು.
ಕೆಲವೊಮ್ಮೆ ನಮ್ಮ ಮನೆಯ ಹೊರಗೆ ಮಲಗಿಕೊಳ್ಳುತ್ತಿದ್ದನು. ಆತನು ಬೆನ್ನು ಹಾಗೂ ಕಾಲುಗಳ ಒಡೆತದಿಂದ ಬಳಲುತ್ತಿದ್ದನು.ಅದನ್ನು ಕಡಿಮೆ ಮಾಡಲು ತನ್ನ ಬೆನ್ನ ಮೇಲೆ ನಿಲ್ಲಲು ಹೇಳುತ್ತಿದ್ದನು. ಹತ್ತು-ಹದಿನೈದು ನಿಮಿಷಗಳ ಕಾಲ ಬೆನ್ನಿನ ಹಾಗೂ ಕಾಲಿನ ಮೇಲೆ ಕಾಲು ಆಡಿಸಿದ ಮೇಲೆ ಇನ್ನು ಸಾಕು ತಮ್ಮ,ದೇವರು ನಿನಗೆ ಒಳ್ಳೆಯದು ಮಾಡಲಿ ಎಂದು ಹಾರೈಸಿ ನಿದ್ದೆ ಹೋಗುತ್ತಿದ್ದನು. ಇಷ್ಟು ಕಷ್ಟತರವಾದ ಬದುಕಿನಲ್ಲಿಯೂ ಇನ್ನು ಹೆಚ್ಚು ಕಾಲ ಬದುಕಬೇಕು ಎಂಬ ಜೀವನೋತ್ಸಾಹ ಅವನಲ್ಲಿತ್ತು ವಿಠಲಣ್ಣ ನೀನು ಇನ್ನೆಷ್ಟು ದಿನ ಬದುಕಿರುತ್ತಿ ಎಂದು ಕೇಳಿದರೆ ಮನುಷ್ಯನ ವಯಸ್ಸು ನೂರು ವರ್ಷ ಅಲ್ಲವೇ ನಾನು ಅಲ್ಲಿಯವರೆಗೆ ಬದುಕುತ್ತೇನೆ ಎಂದು ಉತ್ತರಿಸುತ್ತಿದ್ದನು.
ವಿಠಲಣ್ಣ ತನ್ನ ಇಳಿಯ ವಯಸ್ಸಿನಲ್ಲಿಯೂ ತನ್ನ ಕೊನೆಗಾಲದವರೆಗೂ ಬಹಳ ಹಿಂದೆ ಗತಿಸಿದ ಪುತ್ರ ವಿಯೋಗದ ಶೋಕದಿಂದ ಕಣ್ಣೀರಿಡುತ್ತಾ,ಮಗನ ಸಮಾಧಿ ಎಲ್ಲಿದೆ ತೋರಿಸಿ, ಕೈಮುಗಿದು ಬರುತ್ತೇನೆ ಎಂದು ಬೇಡಿಕೊಳ್ಳುವ ದೃಶ್ಯ ಮನಕಲುಕುವಂತಿತ್ತು. ಸುಮಾರು 75 ವರ್ಷ ಬದುಕಿದ ವಿಠಲಣ್ಣನು ತನ್ನ ವಯೋಸಹಜ ಕಾಯಿಲೆಯಿಂದಾಗಿ 1982 ರಲ್ಲಿ ವಿಧಿವಶನಾಗುತ್ತಾನೆ.ಈಗಲೂ ಪ್ರತಿವರ್ಷ ಮಹಾಲಯದಲ್ಲಿ ಕುಟುಂಬದವರು ಅವನನ್ನು ಅನ್ನವನ್ನು ನೀಡಿ ಸ್ಮರಿಸುತ್ತಾರೆ.
ಶ್ರೀಪಾದ.
26/03/2020.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles