ಮುಗಿಲ ನೆಲಕೆ ತಂದವಳು – -ಕಾವ್ಯಾ ಕಡಮೆ (ನಾಗರಕಟ್ಟೆ)

ಬಂದಳು ಭುವಿಗೆ ಆಗಸದ ಚೆಲುವೆ
ಬೆಳ್ಳಿಲೇಪಿತ ನೆಲವಿದೀಗ
ಅವಳ ಸ್ವಂತ ತವರುಮನೆ
ಶಿಶಿರದ ನೆಪವೊಡ್ಡಿ ಹಸಿರುದುರಿಸಿದ
ರೆಂಬೆ ಅವಳ ಅಂಗೈ ರೇಖೆ
ಕೊಂಬೆಗಳು ಕೂದಲೆಳೆಗಳು
ಬಿಸಿಲಿಗೆ ಹರವಿದ ಇರುಳು
ಕೊರೆ ಕೊರೆವ ಮಂಜುಗಡ್ಡೆ ನೆಲ
ಸಿಡಿಯಲೂ ಆಗದೇ ಕೂತಿತು
ಅವಳ ಮೂಗುತಿಯಲಿ ಹಿಮ ಮಣಿ
ಹಸಿವೂ ಎಂದು ನಭಕ್ಕೆ ಕೈಚಾಚಿದ ಬಳ್ಳಿ
ಅವಳು ಹಾಲುಣಿಸಿದ ನಂತರ
ಬಿಟ್ಟಿತು ಇಬ್ಬನಿಯ ಮಲ್ಲಿಗೆಯ
ಮಗುವಾಗಿ ನಿದ್ರಿಸಿತು ಅವಳುದುರಿಸಿದ
ತಂಪು ತೇವದ ತುಣುಕುಗಳಲ್ಲಿ
ಒಂದರೊಳಗೊಂದು ಕರಗಿ ಬೆರೆತು
ಬೆಸೆದ ಕಣಕಣಕೂ ಮೌನ ಮಾತು
ಅದ್ಯಾವನೋ ಶಿವ ತಪಕ್ಕೆ ಬಂದವನು
ಮರೆತು ನಡೆದೇ ಬಿಟ್ಟಿದ್ದಾನೆ
ತಳ್ಳಿ ತನ್ನ ಚಾಪೆಯ
ಹಿಡಿದಿರಿಸಲು ಹರೆಯ
ಆಗಸದ ಚೆಲುವೆ ಹಾಸುವಳು
ಚಾಪೆಯೋ ಸೆರಗೋ ಅದು
ಅವಳ ಖುಷಿ
ದಿನವೂ ರಾತ್ರಿಯೂ ಮತ್ತೂ ಬೆಳಗುವಳು
ಆವರ್ತಿ ಅರಳುವಳು
ಕೊನೆಗೊಂದು ದಿನ
ಸುತ್ತಲ ಬಿಳೀ ಧೂಳ ಜಾಡಿಸಿ ಎದ್ದಳು
ಅವನಿಯ ತಾಪಕೆ ಎದೆಯುಬ್ಬಿಸಿ
ನೀಳ ಉಸಿರೆಳೆದು ಚಿಗುರಿದಳು
ಬೀದಿಗೆ ಬಿದ್ದ ಅಂಗಳ ಅವಳು
ನೆಲದ ಗುಣ ಬದಲಿಸಿದಳು
ಮುಗಿಲ ನೆಲಕೆ ತಂದವಳು.
-ಕಾವ್ಯಾ ಕಡಮೆ (ನಾಗರಕಟ್ಟೆ)

Related Articles

1 COMMENT

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles