ಸ್ವಾಮಿನಿ ಸಂಪನ್ನಾನಂದರು, ಚಿನ್ಮಯ ಮಿಶನ್‌ರವರ ಕಿರುಪರಿಚಯ – ಶ್ರೀಮತಿ ಕುಸುಮಾಬಾಯಿ ದಿನಕರ ಶೆಟ್ಟಿ

ಶ್ರೀ ಗುರುಭ್ಯೋ ನಮಃ
ನಮ್ಮ ಸಮಾಜದವರಾದ ಸ್ವಾಮಿನಿ ಸಂಪನ್ನಾನಂದರು ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಲ್ಲಿ ೧೫ ಸೆಪ್ಟೆಂಬರ್ ೧೯೪೭ರಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ಮುಕ್ತಾ ದಾಮೋದರ ಶೆಟ್ಟಿ. ಅವರ ತಂದೆ ದಾಮೋದರ ಶಿವಶೆಟ್ಟಿ ಮತ್ತು ತಾಯಿ ಲಕ್ಷ್ಮೀಬಾಯಿ ದೈವ ಭಕ್ತರು. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ಅವರು ದೇವರ ಪೂಜೆ, ಭಜನೆ, ಆಧ್ಯಾತ್ಮಿಕತೆಯಲ್ಲಿ ಚಿಕ್ಕಂದಿನಿಂದಲೇ ಒಲವು ತೋರಿದ್ದರು. ಮುಂದಾಳತ್ವತೆಯೂ ಅವರಲ್ಲಿತ್ತು. ಸಭೆ, ಸಮಾರಂಭಗಳಲ್ಲಿ ಶಿಸ್ತು ಕಾಪಾಡುವಲ್ಲಿ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದರು.
Swami-Sampadananda
ಅಂಕೋಲೆಯಲ್ಲಿ ಮಾಧ್ಯಮಿಕ ಶಿಕ್ಷಣ ಪೂರ್ಣ ಗೊಳಿಸಿದ ನಂತರ ಅವರು ೧೯೬೬ರಲ್ಲಿ ಬೆಂಗಳೂರಿನಲ್ಲಿ ಕೇಂದ್ರ ಸರ್ಕಾರದ ಮುಖ್ಯ ಲೆಕ್ಕ ಪರಿಶೋಧಕರ ಕಚೇರಿಯಲ್ಲಿ ಕೆಲಸಕ್ಕೆ ಸೇರಿದರು. ಬೆಂಗಳೂರಿನಲ್ಲಿ ಅವರಿಗೆ ಆಗಾಗ ಸ್ವಾಮೀಜಿ ಚಿನ್ಮಯಾನಂದರ ಪ್ರವಚನ ಕೇಳುವ ಅವಕಾಶ ಸಿಗುತ್ತಿತ್ತು. ಮೊದಲೇ ಆಧ್ಯಾತ್ಮಿಕ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದ ಅವರು ಸ್ವಾಮೀಜಿ ಚಿನ್ಮಯಾನಂದರ ಭಾಷಣಗಳಿಂದ ಪ್ರಭಾವಿತರಾದರು ಮತ್ತು ೧೯೮೬ರಲ್ಲಿ ಚಿನ್ಮಯ ಮಿಶನ್ ಸಂಸ್ಥೆಯನ್ನು ಸೇರಿದರು. ಎರಡು ವರುಷಗಳ ಕಾಲ ಮುಂಬೈ ಸಾಂದೀಪನಿಯಲ್ಲಿ ಸೇವಕರಾಗಿ ಶಿಕ್ಷಣ ಪಡೆದು “ಮುಕ್ತಿ ಚೈತನ್ಯ” ಎಂಬುದಾಗಿ ಗುರುತಿಸಿಕೊಂಡರು. ಸರ್ಕಾರೀ ಕೆಲಸದಲ್ಲಿದ್ದಾಗಲೇ ಹೆಚ್ಚಿನ ವಿದಭ್ಯಾಸ ಮಾಡಿ ಪದವಿಯನ್ನು ಪಡೆದುಕೊಂಡಿದ್ದರು.
ನಂತರದ ತಮ್ಮ ಜೀವನವನ್ನು ಚಿನ್ಮಯ ಮಿಷನ್ ಕಾರ್ಯರಂಗದಲ್ಲಿಯೇ ತೊಡಗಿಸಿಕೊಂಡರು. ಜನರಲ್ಲಿ ಆಧ್ಯಾತ್ಮಿಕ ಭಾವನೆಗಳಲ್ಲಿ ಆಸಕ್ತಿಯನ್ನುಂಟುಮಾಡಿ, ನರ-ನಾರಾಯಣರ ಸಂಬಂಧವನ್ನೂ ಧೃಡಪಡಿಸುತ್ತ, ಜೀವನದಲ್ಲಿ ಸುಖ-ಶಾಂತಿ-ಸಮಾಧಾನ ಹೊಂದುವಲ್ಲಿ ಜನತೆಗೆ ಸಕಾರಾತ್ಮಕ, ಪ್ರಭಾವೀ ಬೋಧನೆಗಳನ್ನು ನೀಡಿ ಜನರ ವಿಶ್ವಾಸ-ಪ್ರೀತಿ ಗಳಿಸಿಕೊಂಡರು. ಸಹಜನರ ಕುಂದು ಕೊರತೆ ಗಳನ್ನೂ ಪರಿಹರಿಸುವಂತವರಾಗಿ ಸೂಕ್ತ ಸಲಹೆಗಳನ್ನು ನೀಡುತ್ತಿದ್ದರು. ಈಗಲೂ ಈ ಕಾರ್ಯದಲ್ಲಿ ನಿರತರಾಗಿದ್ದಾರೆ.
೧೯೯೬ರಲ್ಲಿ ಅವರಿಗೆ ಸಂನ್ಯಾಸ ದೀಕ್ಷೆಯು ಲಭ್ಯವಾಯ್ತು ಮತ್ತು ‘ಸ್ವಾಮಿನಿ ಸಂಪನ್ನಾನಂದ’ ಎಂದು ಅಭಿದಾನವಾಯ್ತು.
ಲೋಕ ಕಲ್ಯಾಣವನ್ನೇ ತಮ್ಮ ಗುರಿಯನ್ನಾಗಿಟ್ಟು ಕೊಂಡಿರುವ ಅವರು ಮೈಸೂರು, ಮಂಡ್ಯ, ತುಮಕೂರು, ಬೆಂಗಳೂರು ಮತ್ತು ಸಾಗರದಲ್ಲಿ ಮುಖ್ಯ ಆಚಾರ್ಯರಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಮತ್ತು ನಿರ್ವಹಿಸುತ್ತಿದ್ದಾರೆ. ಈ ಎಲ್ಲ ಕಡೆಯಲ್ಲೂ ಸಾವಿರಾರು ಜನರಿಗೆ ದಾರಿ ದೀಪವಾಗಿ ದುಡಿದಿದ್ದಾರೆ. ಹೀಗಾಗಿ ಅವರಿಗೆ ಕರ್ನಾಟಕದಾದ್ಯಂತ ಮತ್ತು ಹೊರ ರಾಜ್ಯಗಳಲ್ಲೂ ಅನೇಕ ಭಕ್ತರು, ಶಿಷ್ಯರು ಇದ್ದಾರೆ.
೧೯೭೧ರಲ್ಲಿ ನಮ್ಮ ಬೆಂಗಳೂರು ಕನ್ನಡ ವೈಶ್ಯ ಸಂಘ ಸ್ಥಾಪನೆಯಾದಾಗ ಇವರು ಉತ್ಸಾಹೀ ಸಕ್ರಿಯ ಕಾರ್ಯಕರ್ತರಾಗಿದ್ದರು. ಅಲ್ಲದೆ ಸಂಘದ ಪದಾಧಿಕಾರಿಗಳೂ ಆಗಿದ್ದರು. ನಮ್ಮ ಬೆಂಗಳೂರು ಸಮಾಜದ ಮಹಿಳಾ ಮಂಡಳವನ್ನು ಸ್ಥಾಪಿಸಿ ಅದಕ್ಕೆ “ಮೈತ್ರೇಯಿ ವನಿತಾ ಸಮಾಜ” ಎಂದು ಹೆಸರಿಸಿ ಅದರ ಕಾರ್ಯ ಕಲಾಪಗಳಲ್ಲಿ ಭಾಗಿಯಾಗಿರುತ್ತಿದ್ದರು. ಮೈತ್ರೇಯಿ ಮಹಿಳಾ ಮಂಡಲವು ಈಗಲೂ ತನ್ನ ಕಾರ್ಯ ಚಟುವಟಿಕೆಗಳನ್ನು ಮುಂದುವರೆಸಿದೆಯಲ್ಲದೆ ಮೂವತ್ತೈದು ವರ್ಷಗಳನ್ನು ಪೂರೈಸಿದ ನಿಮಿತ್ತ “ಪಂಚ ತ್ರಿಂಶತ್” ಮಹೋತ್ಸವವನ್ನು ಅಂದರೆ ದಶಮಾನೋತ್ಸವ ಮತ್ತು ರಜತೋತ್ಸವಗಳ ಜಂಟಿ ಉತ್ಸವವನ್ನು ಬಹಳೇ ಉತ್ಸಾಹ-ಸಂತಸದಿಂದ ಆಚರಿಸುತ್ತಿದೆ. ಚಿನ್ಮಯ ಮಿಷನ್ ಸೇರಿದ ನಂತರವೂ ಸ್ವಾಮಿನಿಯವರು ನಮ್ಮ ಸಮಾಜದ ಸಂಪರ್ಕವನ್ನಿಟ್ಟುಕೊಂಡಿದ್ದಾರಲ್ಲದೆ ಆಗಾಗ ನಮ್ಮ ಧಾರ್ಮಿಕ ಕಾರ್ಯಕ್ರಮಗಳಿಗೆ ಆಗಮಿಸಿ ಹಿತ ವಚನಗಳನ್ನು ನೀಡುತ್ತಿರುತ್ತಾರೆ. ನಮ್ಮ ‘ಶಂಕರ ಸನ್ನಿಧಿ’ ಕಟ್ಟಡವನ್ನು ಕಟ್ಟುವಲ್ಲಿ ಸಹ ಅವರ ಪ್ರೇರಣೆಯೇ ಮೂಲ ಕಾರಣವಾಗಿದ್ದು ಕಟ್ಟಡವನ್ನು ಕಟ್ಟಲು ಎಲ್ಲ ರೀತಿಯ ಸಹಾಯ ಮತ್ತು ಸಹಕಾರವನ್ನೂ ನೀಡಿದ್ದಾರೆ.
ಚಿನ್ಮಯ ಮಿಷನ್ನಿನ ಆಶ್ರಮದ ಕಟ್ಟಡಗಳು ಮಂಡ್ಯ, ತುಮಕೂರು, ಶ್ರೀಪಾದಕ್ಷೇತ್ರ ಬೆಂಗಳೂರು, ಸಾಗರದಲ್ಲಿ ಸುಂದರವಾಗಿ ತಲೆ ಎತ್ತಿ ನಿಂತಿರುವುದು ಇವರ ನೇತೃತ್ವ ಮತ್ತು ಪರಿಶ್ರಮದಿಂದಲೇ ಎಂದರೆ ತಪ್ಪಿಲ್ಲ. ಈ ಎಲ್ಲ ಕಡೆ ಕಟ್ಟಡ ನಿರ್ಮಾಣದ ಜವಾಬ್ದಾರಿ ತಾವೇ ವಹಿಸಿಕೊಂಡು, ತಮ್ಮ ಚಾಣಾಕ್ಷತೆಯಿಂದ ಕಾರ್ಯ ನಿರ್ವಹಿಸಿ ಸಫಲ ರಾಗಿದ್ದಾರೆ.
ಆಧ್ಯಾತ್ಮಿಕ ಸಾಧನಾ ಶಿಬಿರಗಳನ್ನು ಆಯೋಜಿಸು ವುದರಲ್ಲೂ ಇವರದೇ ಮೇಲುಗೈ. ನೂರಾರು ಭಕ್ತ ಶಿಷ್ಯ-ವೃಂದದವರನ್ನು ಉತ್ತರಾಂಚಲ ಮತ್ತು ಹಿಮಾಚಲ ಪ್ರದೇಶಗಳವರೆಗೂ ಸುಖರೂಪವಾಗಿ ಕರೆದೊಯ್ದು ಕರೆತರುವಲ್ಲಿ ಸಿದ್ಧ ಹಸ್ತರು. ಶಿಬಿರವನ್ನು ಏರ್ಪಡಿಸುವ ಮುನ್ನ ಮತ್ತು ಕೊನೆಯವರೆಗೆ ಪ್ರತಿಯೊಂದು ಕಾರ್ಯಕ್ರಮವನ್ನು ಯೋಜನಾಬದ್ಧವಾಗಿ ರಚಿಸಿ, ಶಿಬಿರಾರ್ಥಿಗಳು ಶಿಸ್ತು, ಸಂಯಮದಿಂದ ವರ್ತಿಸುವ ಬಗ್ಗೆ ನಿಗಾ ವಹಿಸುವುದಲ್ಲದೆ, ಪ್ರತಿಯೊಬ್ಬರೂ ಸಂತೋಷ-ಆನಂದದಿಂದ ಭಾಗಿಯಾಗು ವಂತೆ ಮಾಡುವುದೇ ಅವರ ವೈಶಿಷ್ಟ್ಯ.
ಆಗಾಗ ಜ್ಞಾನಯಜ್ಞಗಳನ್ನು ಪ್ರಾಯೋಜಿಸಿ ಕರ್ನಾಟಕದಾದ್ಯಂತ ಮತ್ತು ಬೆಂಗಳೂರಿನ ಬೇರೆ ಬೇರೆ ಬಡಾವಣೆಗಳಲ್ಲಿ ಗೋವಾ, ಮುಂಬೈ ಮತ್ತು ಅಂಕೋಲಾ, ಸಿರ್ಸಿಯಂತ ಸಣ್ಣ ಊರುಗಳಲ್ಲೂ ಸಹ ಜನರಿಗೆ ಜ್ಞಾನ ಸುಧೆಯನ್ನು ನೀಡಿ ಬದುಕಿನ ದಾರಿ ತೋರುವಲ್ಲಿ ಸಫಲರಾಗಿದ್ದಾರೆ. ಭಗವದ್ಗೀತೆ, ಉಪನಿಷತ್ತುಗಳು, ಶಂಕರರ ಬೇರೆ ಬೇರೆ ಕೃತಿಗಳು, ಭಾಗವತ ಇವೇ ಮುಂತಾದ ಆಧ್ಯಾತ್ಮಿಕ, ವೇದಾಂತದ ವಿಷಯಗಳನ್ನು ಮನದಟ್ಟಾಗಿ ವಿವರಿಸುವಲ್ಲಿ ಬಲ್ಲವರಾಗಿದ್ದಾರೆ.
ಇಂತಹ ಜ್ಞಾನಿಗಳ ಸತ್ಸಂಗವನ್ನು ಹೊಂದಿದ ನಮ್ಮ ಸಮಾಜ ಮತ್ತು ಇತರೇ ಬಾಂಧವರೆಲ್ಲರೂ ಭಾಗ್ಯಶಾಲಿಗಳು. ಅವರ ಅಮೃತವಚನಗಳನ್ನೂ ಸದಾ ಅಪೇಕ್ಷಿಸುವ ನಾವೆಲ್ಲರೂ ಅವರ ಸಾಂಗತ್ಯವನ್ನು ಸದಾ ಬಯಸೋಣ.
-ಶ್ರೀಮತಿ ಕುಸುಮಾಬಾಯಿ ದಿನಕರ ಶೆಟ್ಟಿ
ಬೆಂಗಳೂರು

Related Articles

1 COMMENT

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles