ಅಕ್ಷಯ ತೃತೀಯ ಅಥವಾ ಹರಿದಿನ – ಶ್ರೀಪಾದ.

ಸುಮಾರು 1000 ವರ್ಷಗಳ ಹಿಂದೆ ವೈಷ್ಣವರೂ ಹಾಗೂ ಆದಿಶೇಷನ ಅವತಾರವಾದ ಶ್ರೀರಾಮಾನುಜಾಚಾರ್ಯರು ವಿಷ್ಣು ಸ್ವರೂಪಿಯಾದ ತಿರುಪತಿ ವೆಂಕಟರಮಣ ದೇವರ ಪ್ರತಿಮೆಯನ್ನು ಮನೆಯ ತುಳಸಿಯಲ್ಲಿ ಪ್ರತಿಷ್ಠಾಪಿಸಿ ಹರಿದಿನ ಮಾಡುವ ಆಚರಣೆಯನ್ನು ಜನಪ್ರಿಯಗೊಳಿಸಿದರು.(ಶೈವರು ತಿರುಪತಿ ವೆಂಕಟರಮಣನನ್ನು ಶಿವನ ಮೂರ್ತಿಯೆಂದು ವಾದಿಸುತ್ತಾರೆ)
ನಮ್ಮ ಸಮಾಜದಲ್ಲಿ ಅನೇಕ ಕುಟುಂಬಗಳಲ್ಲಿ ಹರಿದಿನ ಆಚರಿಸುವಂತೆ ನಮ್ಮ ಕುಟುಂಬದಲ್ಲಿ ನೂರಾರು ವರ್ಷಗಳಿಂದ ವೈಶಾಖ ಶುದ್ಧ ತದಿಗೆ (ಅಕ್ಷಯ ತೃತೀಯಾ)  ದಿನದಂದು ಹರಿದಿನವನ್ನು  ಆಚರಿಸುತ್ತಿದ್ದಾರೆ.
ನಮ್ಮ ಹಿರಿಯರು ತಿರುಪತಿಗೆ ಕಾಲ್ನಡಿಗೆಯಲ್ಲಿ ಹೋಗಿ ಶ್ರೀ ವೆಂಕಟರಮಣ ಮತ್ತು ಪದ್ಮಾವತಿಯ ಕಾಷ್ಟ ಪ್ರತಿಮೆಯನ್ನು ತಂದು ಪೂಜಿಸಿದರು.ಅಲ್ಲಿಂದ ತಂದವರು ಯಾರು ಯಾವ ಕಾಲದಲ್ಲಿ ಎಂಬುದಕ್ಕೆ ದಾಖಲೆ ಲಭ್ಯವಿಲ್ಲ. ಅವಿಭಕ್ತ ಕುಟುಂಬದಲ್ಲಿ ಇದ್ದ ದೇವರ ಪ್ರತಿಮೆಯನ್ನು ಕ್ರಿಸ್ತಶಕ 1888 ರಲ್ಲಿ ಕೃಷ್ಣ ನಾಗಪ್ಪ ಶೆಟ್ಟಿಯವರ ಮನೆಯಲ್ಲಿ ಇಟ್ಟು ಪೂಜಿಸಿ ಹರಿದಿನ ಮಾಡಲಾಯಿತು.ಐದು ಮನೆಯವರಿಗೆ ಸರತಿಯಂತೆ ಹರಿದಿನದ ಜವಾಬ್ದಾರಿಯನ್ನು ಕೊಡಲಾಯಿತು.
ಕ್ರಿಸ್ತಶಕ 1949 ರ ಮೊದಲು ಹರಿದಿನವು ಮೂರು ದಿನಗಳ ಕಾರ್ಯಕ್ರಮವಾಗಿತ್ತು. ಅಕ್ಷಯ ತೃತೀಯ ಮೊದಲ ದಿನದಂದು ಬ್ರಾಹ್ಮಣರಿಂದ ಶುದ್ಧಿಹವನ ಮಾಡಿ ಕುಲದೇವರನ್ನು ಸ್ಮರಿಸಿ ದೇವರೂಟ ಮಾಡಿ ಚಿಕ್ಕ ಮಕ್ಕಳ ಪಾದ ತೊಳೆದು ಹಾಲು-ಹಣ್ಣು ನೀಡಿ ಸತ್ಕರಿಸಿ ನಂತರ ಅನ್ನಸಂತರ್ಪಣೆ ಮಾಡಲಾಗುತ್ತಿತ್ತು.ಅಕ್ಷಯ ತೃತೀಯ ದಿನದಂದು ತುಳಸಿಯ ಮುಂದೆ ತೋರಣ ಕಟ್ಟಿ,ತುಳಸಿಗೆ ಸೀರೆ ಉಡಿಸಿ ಮೇಲೆ ಉಪವಸ್ತ್ರ  ಕಟ್ಟಲಾಗುತ್ತಿತ್ತು. ದೇವರ ಮೂರ್ತಿ ಮತ್ತು ಕಳಶವನ್ನು ಪುರೋಹಿತರ ಮಂತ್ರ ಸಹಿತ ತುಳಸಿ ಹತ್ತಿರ ತಂದು ಪಂಚಾಮೃತ ಅಭಿಷೇಕ ಮಾಡಲಾಗುತ್ತಿತ್ತು.ಪೂಜಾ ಕಾರ್ಯಕ್ರಮ ನಡೆದ ನಂತರ ಭಕ್ತರಿಗೆ ಅನ್ನಸಂತರ್ಪಣೆ ಮಾಡಲಾಗುತ್ತಿತ್ತು.ಆಗಮಿಸಿದ ಮಹನೀಯರಿಗೆ ಸುಗಂಧ ದ್ರವ್ಯಗಳನ್ನು ನೀಡಿ ಮಾಲೆ ಹಾಕಿ ತಾಂಬೂಲ ನೀಡಿ ಅವರಿಂದ ಅಕ್ಷತೆ ರೂಪದಲ್ಲಿ ಆಶೀರ್ವಾದ ಪಡೆಯಲಾಗುತ್ತಿತ್ತು.ನಂತರ ಭಜನೆ ಕಾರ್ಯಕ್ರಮ ಇರುತ್ತಿತ್ತು.ಮರುದಿನ ಕಿರು ಹರಿದಿನ‌.ಪೂಜೆ ಮಾಡಿ ದೇವರ ಮೂರ್ತಿಯನ್ನು ಒಳಗಿಟ್ಟು ಕಳಸದ ಅಕ್ಕಿಯಿಂದ ಪಾಯಸ ಮಾಡಿ (ಗಿಂಡಕ್ಕಿ‌ ಪಾಯಸ) ಅನ್ನಸಂತರ್ಪಣೆ ನಡೆಸಲಾಗುತ್ತಿತ್ತು.
ಈ ರೀತಿ ಮೂರು ದಿನಗಳ ಕಾಲ ನಡೆಯುತ್ತಿದ್ದ ಕಾರ್ಯಕ್ರಮವು ಕ್ರಿ.ಶ 1949 ರಲ್ಲಿ ಶ್ರೀ ಸಾಂತಪ್ಪ ಮಾಳಪ್ಪ ಶೆಟ್ಟಿಯವರ ಸರತಿ ಬಂದಾಗ ಅವರು ವೃತ್ತಿ ನಿಮಿತ್ತ ದೂರದ ಊರಿನಲ್ಲಿ ನೆಲೆಸಿದ್ದರು.ಮೂರು ದಿನದ ಕಾರ್ಯಕ್ರಮಕ್ಕೆ ಬರಲು ಆಗದೇ ಇದ್ದುದರಿಂದ ತರಾತುರಿಯಿಂದ  ಎಲ್ಲಾ ಕಾರ್ಯಕ್ರಮಗಳನ್ನು ಅಕ್ಷಯ ತೃತೀಯ ದಿನದಂದು ನಡೆಸಿ ಹೊರಟರು.ಅಂದಿನಿಂದ ಹರಿದಿನ ಒಂದು ದಿನಕ್ಕೆ ಸೀಮಿತವಾಯಿತು.
ದೇವರ ಪೂಜೆಯನ್ನು ಹಿಂದಿನಿಂದಲೂ ಕುಟುಂಬದ ಯಜಮಾನರು ನಡೆಸುತ್ತಿರುವುದು ಸಂಪ್ರದಾಯವಾಗಿದೆ.
ಇಲ್ಲಿ ಕೆಲವು ಆಚರಣೆಗಳು ಸರಳವಾಗಿ ಕಂಡರೂ ಅದರಲ್ಲಿ ಗೂಢಾರ್ಥ ಇರುತ್ತದೆ. ಉದಾಹರಣೆಗೆ ದೇವರೂಟ  ಮಾಡಿ ಮಕ್ಕಳಿಗೆ ಪಾದ ತೊಳೆದು ಹಣ್ಣು-ಹಾಲು  ಕೊಡುವುದು.ನಮ್ಮ ಕುಟುಂಬದಲ್ಲಿ ಕೆಲವು ಮಕ್ಕಳು ತಮ್ಮ ಬಾಲ್ಯಾವಸ್ಥೆ ಹಾಗೂ ತಾರುಣ್ಯಾವಸ್ಥೆಯಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗಿ ಸ್ವರ್ಗವಾಸಿಗಳಾಗಿದ್ದಾರೆ.ಅವರ‌ ಅತೃಪ್ತ ಆತ್ಮಗಳು ಸ್ಥಳಕ್ಕೆ ಆಗಮಿಸಿ ಮಕ್ಕಳಿಗೆ ನೀಡಿದ ಸತ್ಕಾರದಿಂದ ಸಂತುಷ್ಟಗೊಳ್ಳುತ್ತವೆ. ಅದರಂತೆ ಸಮಾರಂಭಕ್ಕೆ ಆಗಮಿಸಿದ ಮಹನೀಯರಿಗೆ ಸನ್ಮಾನ ಮಾಡುವ ಉದ್ದೇಶವೂ ಅದೇ ಆಗಿರುತ್ತದೆ.ಗತಿಸಿಹೋದ ನಮ್ಮ ಹಿರಿಯರು ಸಮಾರಂಭಕ್ಕೆ ಸೂಕ್ಷ್ಮ ರೂಪದಲ್ಲಿ ಆಗಮಿಸಿ ಸಂತೋಷಗೊಂಡು ಗೌರವ ಪಡೆದ ಮಹನೀಯರ ಮೂಲಕ ನಮಗೆ ಆಶೀರ್ವಾದ ನೀಡುತ್ತಾರೆ.
ನಮ್ಮ ಹಾಗೂ ಮುಂದಿನ ಜನಾಂಗದ ಶ್ರೇಯೋಭಿವೃದ್ಧಿಗಾಗಿ ನಮ್ಮ ಹಿರಿಯರು ಸಾಗಿದ ದಾರಿಯಲ್ಲಿ ನಡೆಯುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.
ಶ್ರೀಪಾದ.
26/04/2020.

Related Articles

Stay Connected

22,037FansLike
2,507FollowersFollow
0SubscribersSubscribe
- Advertisement -spot_img

Latest Articles